ನಿರ್ದೇಶಕನಾಗಿ ಸ್ಯಾಂಡಲ್ ವುಡ್ ನಲ್ಲಿ ಫಾರ್ಮ್ ಕ್ರಿಯೇಟ್ ಮಾಡಿಕೊಂಡಿದ್ದ ರಿಷಬ್ ಶೆಟ್ಟಿ ಬೆಲ್ ಬಾಟಂ ಮೂಲಕ ನಟನಾಗಿಯೂ ಸಕ್ಸಸ್ ಪಡೆದರು. ಸದ್ಯ ನಟನೆಯ ಜತೆಗೆ ನಿರ್ದೇಶನವನ್ನು ಮ್ಯಾನೇಜ್ ಮಾಡಲು ಪಣ ತೊಟ್ಟಿರುವ ರಿಷಬ್ ಶೆಟ್ಟಿ ರುದ್ರ ಪ್ರಯಾಗ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮಧ್ಯೆ ದಯವಿಟ್ಟು ಗಮನಿಸಿ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನದ ಮಹನೀಯರೇ ಮಹಿಳೆಯರೇ ಎಂಬ ಚಿತ್ರದಲ್ಲಿಯೂ ನಟಿಸುವ ಜವಾಬ್ದಾರಿಯನ್ನು ಒಮ್ಮೆಲೆ ಹೊತ್ತುಕೊಂಡಿದ್ದಾರೆ.
ದಯವಿಟ್ಟು ಗಮನಿಸಿ ಚಿತ್ರವನ್ನು ನಿರ್ಮಾಣ ಮಾಡಿದ್ದ ಕೃಷ್ಣ ಸಾರ್ಥಕ್ ಅವರೇ ಮಹನೀಯರೇ ಮಹಿಳೆಯರೇ ಚಿತ್ರಕ್ಕೂ ಬಂಡವಾಳ ಹೂಡಲಿದ್ದಾರೆ. ಈಗಾಗಲೇ ಚಿತ್ರದ ಒನ್ ಲೈನ್ ಕೇಳಿ ರಿಷಬ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ರುದ್ರಪ್ರಯಾಗ ಚಿತ್ರದ ಚಿತ್ರೀಕರಣ 2020ಕ್ಕೆ ಆರಂಭವಾಗಲಿದ್ದು ಅದಕ್ಕೂ ಮೊದಲೇ ಮಹನೀಯರೇ ಮಹಿಳೆಯರೇ ಚಿತ್ರವನ್ನು ಕಂಪ್ಲೀಟ್ ಮಾಡಲು ರಿಷಬ್ ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಉಳಿದಂತೆ ರಿಷಬ್ ಶೆಟ್ಟಿ ಕಥಾ ಸಂಗಮ, ನಾಥುರಾಮ್, ಆಂಟಿ ಗೋನಿ ಶೆಟ್ಟಿ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಸದ್ಯದಲ್ಲೇ ಕಥಾ ಸಂಗಮ ತೆರೆಕಾಣಲಿದೆ.