“ಹೆಂಗಸಿನ ಮಾತನ್ನು ಸೀರಿಯಸ್ಸಾಗಿ ಯಾವತ್ತೂ ತೆಗೆದುಕೊಳ್ಳಬೇಡಿ, ಹೆಣ್ಣೊಬ್ಬಳಿಗೆ ಗಂಡಸಾದವನು ಪ್ರೂವ್ ಮಾಡುವುದು ಏನೂ ಇರುವುದಿಲ್ಲ” ಎಂದೆಲ್ಲಾ ಬರೆದುಕೊಂಡಿರುವ ಇವನೆಂತ ಮಾನಸಿಕ ರೋಗಿ ಎಂದು ತೋರಿಸಿಕೊಂಡಿದ್ದಾನೆ. ಇವನು ಯೂಟ್ಯೂಬಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವ ಮಾತುಗಳೇ ಹೆಣ್ಣು ಮಕ್ಕಳ ಬಗ್ಗೆ ಎಂತಹ ಕೀಳು ಮನಸ್ಥಿತಿ ಇವನಿಗಿದೆ ಎಂದು ತೋರಿಸುತ್ತವೆ…. ಇವನಿಗೆ ಜನ್ಮ ನೀಡಿದ್ದು ಒಬ್ಬ ಹೆಣ್ಣು ಎನ್ನುವ ಕನಿಷ್ಠ ಗೌರವವೂ ಇಲ್ಲದಂತೆ ಹೆಣ್ಣು ಎಂದರೇನೇ ಅನಿಷ್ಟ ಎಂಬ ಕರ್ಮಠ ಮನಸ್ಥಿತಿ ಈ ರೋಗಿಷ್ಟನದು.
ವರ್ಷಕ್ಕೆ ಮುಂಚೆ ಟ್ರಂಕ್ ಎನ್ನುವ ಸಿನಿಮಾವೊಂದು ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ಅದನ್ನು ನಿರ್ದೇಶಿಸಿದ್ದು ರಿಶಿಕಾ ಶರ್ಮಾ ಎನ್ನುವ ಹೆಣ್ಣುಮಗಳು. ನಿರ್ದೇಶಿಸಿದ ಮೊದಲ ಚಿತ್ರದಲ್ಲೇ ಪ್ರತಿಭಾವಂತೆ ಎನಿಸಿಕೊಂಡವರು.
ರಿಶಿಕಾ ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ಮುಂದುವರೆಯುವ ಸಾವಿರ ಕನಸಿಟ್ಟುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಒಂದಷ್ಟು ಸಂಶೋಧನೆ, ಸ್ಕ್ರಿಪ್ಟು ಅಂತೆಲ್ಲಾ ಮಾಡುತ್ತಿದ್ದಾರೆ. ಈ ಕಾರಣಕ್ಕೇ ಬೆಂಗಳೂರಿನ ಕುಮಾರ ಪಾರ್ಕ್ ಬಳಿ ಮನೆಯೊಂದನ್ನು ಬಾಡಿಗೆಗೆ ಪಡೆದು ಅದನ್ನೇ ಕಛೇರಿಯನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ವಾರಕ್ಕೆ ಮುಂಚೆ ಮಲ್ಲೇಶ್ವರದಿಂದ ಬೌನ್ಸರ್ ವಾಹನವನ್ನು ಪಡೆದು ತಮ್ಮ ಕಛೇರಿಗೆ ಬಂದಿದ್ದಾರೆ. ಬಂದವರೇ ಆ ಗಾಡಿಯನ್ನು ತಮ್ಮ ಆಫೀಸಿರುವ ಬಿಲ್ಡಿಂಗಿನ ಪಕ್ಕದಲ್ಲೆಲ್ಲೋ ನಿಲ್ಲಿಸಿದ್ದಾರೆ. ಒಂದು ಕಡೆ ಬಿಡಿಎ ಕಛೇರಿ, ಮತ್ತೊಂದು ಕಡೆ ಟುಲಿಪ್ಸ್ ಹೊಟೇಲುಗಳಿರುವುದರಿಂದ ಸದಾ ಅಲ್ಲಿ ಪಾರ್ಕಿಂಗ್ ಕಿರಿಕಿರಿ ಇದ್ದೇ ಇರುತ್ತದೆ. ಹೀಗಿರುವಾಗ ತಾವು ಬಂದ ಬಾಡಿಗೆ ವಾಹನವನ್ನು ನಿಲ್ಲಿಸುತ್ತಿದ್ದಂತೇ ಸ್ಕೋಡಾ ಕಾರಿನಲ್ಲಿ ಬಂದವನೊಬ್ಬ ಏಕಾಏಕಿ ‘ಏಯ್ ಏನೇ ಎಲ್ಲೇ ನಿಲ್ಲಿಸ್ತಿದ್ದೀಯಾ? ಎಲ್ಲೆಂಲ್ಲಿಂದ ಬರ್ತಿರೇಲೇ?’ ಅಂತಾ ಏಕವಚನದಲ್ಲಿ ಮಾತಾಡಿದ್ದಾನೆ. ಅದಕ್ಕೆ ರಿಶಿಕಾ ಏನೂ ಪ್ರತಿಕ್ರಿಯಿಸದಿದ್ದಾಗ ‘ಏಯ್ ಬಿಚ್, ಫಕ್ ಯೂ’ ಅಂತೆಲ್ಲಾ ಇಂಗ್ಲಿಷಲ್ಲಿ ಹೊಲಸಲಸು ಮಾತಾಡಿದ್ದಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಮುರಳೀಧರ ಎನ್ನುವ ಹಿರಿಯ ವ್ಯಕ್ತಿಯ ಮುಂದೆಯೇ ಈ ಹುಡುಗಿಗೆ ಅನ್ನಬಾರದ್ದನ್ನು ಅಂದಿದ್ದಾನೆ. ನಡುರಸ್ತೆಯಲ್ಲಿ ನಿಂತು  ಈ ಹೆಣ್ಣುಮಗಳಿಗೆ ‘ನಿನ್ನ ಬೆತ್ತಲೆ ಮಾಡಿ ನಿಲ್ಲಿಸ್ತೀನಿ’ ಅನ್ನೋ ನೀಚ ಮಾತಾಡಿಬಿಟ್ಟಿದ್ದಾನೆ ಆ ವ್ಯಕ್ತಿ.
ಒಂಟಿ ಹೆಣ್ಣೊಬ್ಬಳ ಮೇಲೆ ಸಾರ್ವಜನಿಕವಾಗಿ ಇಷ್ಟೆಲ್ಲಾ ರಗಳೆ ಮಾಡಿದವನ ಹೆಸರು ಹರ್ಷ ಸ್ವರೂಪ್. ಇವನ ಫೇಸ್ ಬುಕ್ ಪೇಜಲ್ಲಿ ಇಸ್ಕಾನ್ ಸಂಸ್ಥೆಯಲ್ಲಿ ಮಿಷನರಿಯಾಗಿದ್ದೆ, ಸಮಸ್ಯೆಯಲ್ಲಿದ್ದವರಿಗೆ ಕೌನ್ಸಿಲಿಂಗ್ ಮಾಡ್ತೀನಿ ಎಂಬಿತ್ಯಾದಿಯಾಗಿ ಬರೆದುಕೊಂಡಿದ್ದಾನೆ. ನ್ಯಾಯವನ್ನು ಕಲಿಸುವಲ್ಲಿ ಜಗತ್ತಿಗೇ ಹೆಸರಾಗಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಮಕ್ಕಳ ಹಕ್ಕು ಸುರಕ್ಷತೆಯ ಬಗ್ಗೆ ಓದುತ್ತಿರುವುದಾಗಿಯೂ, ದಯಾನಂದ ಸಾಗರ್ ಕಾಲೇಜನಲ್ಲಿ ಎಂಜಿನಿಯರಿಂಗ್ ಓದಿರುವುದಾಗಿಯೂ ನಮೂದಿಸಿದ್ದಾನೆ.
ಈತನ ಫೇಸ್ ಬುಕ್ ಪೋಸ್ಟುಗಳು, ಯೂ ಟ್ಯೂಬಿನಲ್ಲಿ ಈತನೇ ಮಾತಾಡಿರುವ ಕೆಲವು ತುಣುಕುಗಳನ್ನು ನೋಡಿದರೆ ಈತ ಅಕ್ಷರಶಃ ಮಹಿಳಾವಿರೋಧಿ ಅನ್ನೋದು ಖಚಿತವಾಗುತ್ತದೆ. ಸ್ತ್ರೀವಾದವೆನ್ನುವುದು ಬೂಟಾಟಿಕೆ, ಮಹಿಳೆಯರ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸಬೇಡಿ, ತಾಯಿಯಂತೆ ಮಗಳು… ಹೀಗೆ ಅವ್ಯಾಹತವಾಗಿ ಹೆಣ್ಣಿನ ವಿರುದ್ಧದ ಸಾಲುಗಳನ್ನೇ ಕಾರಿಕೊಂಡಿದ್ದಾನೆ. ಅದ್ಯಾವ ಹೆಣ್ಣಿನಿಂದ ಈತ ಏನೇನು ಸಮಸ್ಯೆ ಅನುಭವಿಸಿದ್ದಾನೋ ಗೊತ್ತಿಲ್ಲ. “ಹೆಂಗಸಿನ ಮಾತನ್ನು ಸೀರಿಯಸ್ಸಾಗಿ ಯಾವತ್ತೂ ತೆಗೆದುಕೊಳ್ಳಬೇಡಿ, ಹೆಣ್ಣೊಬ್ಬಳಿಗೆ ಗಂಡಸಾದವನು ಪ್ರೂವ್ ಮಾಡುವುದು ಏನೂ ಇರುವುದಿಲ್ಲ” ಎಂದೆಲ್ಲಾ ಬರೆದುಕೊಂಡಿರುವ ಇವನೆಂತ ಮಾನಸಿಕ ರೋಗಿ ಎಂದು ತೋರಿಸಿಕೊಂಡಿದ್ದಾನೆ. ಇವನು ಯೂಟ್ಯೂಬಿನಲ್ಲಿ ರೆಕಾರ್ಡ್ ಮಾಡಿ ಹಾಕಿರುವ ಮಾತುಗಳೇ ಹೆಣ್ಣು ಮಕ್ಕಳ ಬಗ್ಗೆ ಎಂತಹ ಕೀಳು ಮನಸ್ಥಿತಿ ಇವನಿಗಿದೆ ಎಂದು ತೋರಿಸುತ್ತವೆ…. ಇವನಿಗೆ ಜನ್ಮ ನೀಡಿದ್ದು ಒಬ್ಬ ಹೆಣ್ಣು ಎನ್ನುವ ಕನಿಷ್ಠ ಗೌರವವೂ ಇಲ್ಲದಂತೆ ಹೆಣ್ಣು ಎಂದರೇನೇ ಅನಿಷ್ಟ ಎಂಬ ಕರ್ಮಠ ಮನಸ್ಥಿತಿ ಈ ರೋಗಿಷ್ಟನದು.
ಹೆಣ್ಣಿನ ಬಗೆಗೆ ಕನಿಷ್ಟ ಮಟ್ಟದ ಗೌರವವೂ ಇಲ್ಲದ ಈತನಿಗೆ ನ್ಯಾಷನಲ್ ಲಾ ಸ್ಕೂಲ್’ನಂಥಾ ಪ್ರತಿಷ್ಟಿತ, ಜೀವಪರ ಜಾಗದಲ್ಲಿ ಯಾರು ಸೀಟು ಕೊಟ್ಟರೋ ಗೊತ್ತಿಲ್ಲ. ಮೇಲ್ನೋಟಕ್ಕೇ ಈತನ ಫೇಸ್‌ಬುಕ್ ಸ್ಟೇಟಸ್ಸುಗಳು, ಈತ ರಿಶಿಕಾ ಮೇಲೆ ನಡೆಸಿರುವ ದೌರ್ಜನ್ಯವನ್ನು ನೋಡಿದರೆ ‘ಈ ಹುಡುಗನಿಗೆ ಮಾನಸಿಕವಾಗಿ ಏನೋ ಸಮಸ್ಯೆ ಇರಬಹುದು’ ಅನ್ನೋ ಅನುಮಾನ ಮೂಡುತ್ತದೆ.
ಆ ದಿನ ನಡೆದಿದ್ದಿಷ್ಟು.
ಬೇಕಂತಾ ಕಾಲು ಕೆರೆದುಕೊಂಡು ಜಗಳಕ್ಕೆಳೆದು, ಕೆಟ್ಟಾಕೊಳಕ ಮಾತಾಡುತ್ತಲೇ ಇದ್ದ ಹರ್ಷ ಸ್ವರೂಪ್ ಮುಖಕ್ಕೆ ಈ ಹೆಣ್ಣುಮಗಳು ರಿಶಿಕಾ ಚಪ್ಪಲಿ ತೋರಿಸಿ, ಕಣ್ಣೀರಿಡುತ್ತಾ ಆಫೀಸಿನ ಒಳಗೆ ಹೋಗಿಬಿಟ್ಟಿದ್ದರು. ನಂತರ ರಿಷಿಕಾ ಸಹಪಾಠಿ ನಿಹಾಲ್ ಕಛೇರಿಗೆ ಬರುತ್ತಿದ್ದಂತೇ ನಡೆದದ್ದೆಲ್ಲಾ ಗೊತ್ತಾಗಿದೆ. ರಿಶಿಕಾಳ ಮೇಲೆ ಮನಬಂದಂತೆ ಬೈದು, ಮಾನಹಾನಿ ಮಾಡಿದ ವ್ಯಕ್ತಿ ಅಲ್ಲೇ ಹಿಂದುಗಡೆ ಬಿಲ್ಡಿಂಗಿನಲ್ಲಿರುವ ಹರ್ಷ ಸ್ವರೂಪ್ ಅನ್ನೋದು ಗೊತ್ತಾಗಿದೆ. ತಕ್ಷಣ ಅಸೋಸಿಯೇಷನ್ ಗ್ರೂಪಿಗೆ ಮೆಸೇಜು ಹಾಕಿದ ನಿಹಾಲ್ ಆತ ಯಾರೆಂದು ವಿಚಾರಿಸಿದ್ದಾರೆ. ಹರ್ಷ ಸ್ವರೂಪ್ ನಿಹಾಲ್ ಫೋನಿಗೆ ಕರೆ ಮಾಡಿ ಎಗರಾಡಿ, ‘೮.೩೦ಕ್ಕೆ ಅಲ್ಲೇ ಬರ್ತೀನಿರು’ ಎಂದಿದ್ದ. ಅಷ್ಟೊತ್ತಿಗೇ ನಿಹಾಲ್ ಮತ್ತು ರಿಶಿಕಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು. ಅವರು ಬರೋ ಹೊತ್ತಿಗೆ ೯.೧೫ರ ಸಮಯವಾಗಿತ್ತು. ಅಷ್ಟರಲ್ಲಿ ರಿಶಿಕಾ ಆಫೀಸಿಗೆ ಬಂದು ಮತ್ತದೇ ಕೊಳಕು ಪದಗಳನ್ನು ಬಳಸಿ, ಸಿನಿಮಾರಂಗದ ವಿರುದ್ಧವೂ ಕೆಟ್ಟದಾಗಿ ಮಾತಾಡಿದ್ದಾನೆ.
ಅಷ್ಟಕ್ಕೂ ಸುಮ್ಮನಾಗದೆ ನಿಹಾಲ್’ರನ್ನು ಥಳಿಸಿದ್ದಾನೆ. ಆತ ಅನ್ನಬಾರದ್ದನ್ನು ಅಂದು, ಕೈ ಮಾಡಲು ಮುಂದಾದಾಗ ನಿಹಾಲ್ ಸುಮ್ಮನೇ ಇರಲು ಸಾಧ್ಯವೇ? ತಮ್ಮ ಪ್ರಾಣರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹರ್ಷನಿಗೆ ಎರಡೇಟು ಕೊಟ್ಟಿದ್ದಾರೆ. ಅಷ್ಟರಲ್ಲಿ ಪೊಲೀಸರು ಬಂದು ಈತನನ್ನು ಕರೆದೊಯ್ದು ಎಲ್ಲರನ್ನೂ ಠಾಣೆಗೆ ಬರಲು ತಿಳಿಸಿದ್ದರು. ಇನ್ಸ್‌ಪೆಕ್ಟರ್ ಯೋಗೇಂದ್ರ ಕುಮಾರ್ `ಇದು ಪಾರ್ಕಿಂಗ್‌ಗಾಗಿ ನಡೆದ ವಿಚಾರ ದೊಡ್ಡದು ಮಾಡಿಕೊಳ್ಳಬೇಡಿ, ಇಲ್ಲೇ ಬಗೆಹರಿಸಿಕೊಳ್ಳಿ’ ಎಂದು ಸಹಜವಾಗೇ ಸಮಾಧಾನಿಸುವ ಪ್ರಯತ್ನ ಮಾಡಿದ್ದರು. ಆದರೆ ರಿಶಿಕಾ ಮತ್ತು ನಿಹಾಲ್ ‘ಹೆಣ್ಣುಮಗಳು ಅನ್ನೋದು ನೋಡದೆ ನಟ್ಟನಡುರಸ್ತೆಯಲ್ಲಿ ನಿಂತು ಅನ್ನಬಾರದ್ದನ್ನೆಲ್ಲಾ ಅಂದಿದ್ದಾನೆ. ಮೈಮೇಲೆರಗುವ ಪ್ರಯತ್ನ ಮಾಡಿದಾನೆ.
ಇವನ ವಿರುದ್ಧ ದೂರು ದಾಖಲಾಗಲೇಬೇಕು’ ಅಂತಾ ಪಟ್ಟು ಹಿಡಿದಿದ್ದಾರೆ. ‘ಇನ್ನು ನನ್ನ ಆಟ ನಡೆಯೋದಿಲ್ಲ’ ಅಂತಾ ಆಟ ಕಟ್ಟಲು ಶುರು ಮಾಡಿದ ಹರ್ಷ ಸ್ವರೂಪ ‘ ಇವರು ನನಗೆ ಹೊಡೆದಿದ್ದಾರೆ, ನನಗೆ ಹೊಟ್ಟೆ ನೋಯುತ್ತಿದೆ.’ ಅಂತಾ ಆಟ ಕಟ್ಟಿದ್ದಾನೆ. ಆಯ್ತು ನಡಿಯಪ್ಪ ಹೋಗಿ ಕೆ.ಸಿ. ಜನರಲ್ ಆಸ್ಪತ್ರೆಗೆ ಹೋಗಿ ಮೆಡಿಕಲ್ ಮಾಡಿಸಿಕೊಂಡು ಬಾ ಅಂತಾ ಪೇದೆಯೊಬ್ಬರನ್ನು ಜೊತೆ ಮಾಡಿ ಇನ್ಸ್‌ಪೆಕ್ಟರ್ ಸಾಹೇಬರು ಕಳಿಸಿಕೊಟ್ಟಿದ್ದಾರೆ. ಈಗ ಬರಬಹುದು ಆಗ ಬರಬಹುದು ಅಂತಾ ರಾತ್ರಿ ಹನ್ನೆರಡೂವರೆ ತನಕ ಕಾದರೆ ಪೇದೆ ಮಾತ್ರ ಬಂದಿದ್ದರು. ಅಷ್ಟರಲ್ಲಿ ಏನೇನು ಸ್ಕೆಚ್ಚು, ಸ್ಕೀಮುಗಳನ್ನು ಹಾಕಿದ್ದನೋ? ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಅಡ್ಮಿಟ್ ಆಗಿಬಿಟ್ಟಿದ್ದ. ಈತನ ಮೇಲೆ ಎಫ್ ಐ ಆರ್ ಕೂಡಾ ದಾಖಲಾಯಿತು. ‘ತಾನು ಹೆಣ್ಣುಮಗಳ ಮೇಲೆ ದೌಜರ್ನ ನಡೆಸಿದ್ದೇನೆ. ಹೊರಬಂದರೆ ಕೇಡುಗಾಲ ಕಾದಿರುತ್ತದೆ’ ಅಂತಾ ತಿಳಿದ ಹರ್ಷ ಆಸ್ಪತ್ರೆಯಲ್ಲೇ ದಿನಗಟ್ಟಲೆ ಠಿಕಾಣಿ ಹೂಡಿ, ಅಲ್ಲಿದ್ದುಕೊಂಡೇ ಪ್ಲಾನು ಮಾಡಿ ರಿಶಿಕಾ ಮತ್ತು ನಿಹಾಲ್ ಮೇಲೆ ಮೇಲೆ ಮರುದೂರು ದಾಖಲಿಸಿದ್ದಾನೆ. ‘ಮಾರಕಾಸ್ತ್ರ ಬಳಸಿ ಹೊಡೆದರು’ ಎಂಬ ರೀತಿಯಲ್ಲಿ ಬಿಂಬಿಸಿದ್ದಾನೆ. ಈ ವಿಚಾರ ಈಗ ಮೀಡಿಯಾದ ಗಮನಕ್ಕೂ ಬಂದಿದೆ. ಏನು ಎತ್ತ ಅಂತಾ ತಿಳಿಯದೆ ಒಬ್ಬೊಬ್ಬರೂ ಮನಬಂದಂತೆ ಸುದ್ದಿ ಮಾಡುತ್ತಿದ್ದಾರೆ.
ಒಂದೇ ಒಂದು ಸಲ ಹರ್ಷ ಸ್ವರೂಪ್ ಯಾರು? ಅವನ ಹಿನ್ನೆಲೆ ಏನು? ಯಾಕೆ ಆತ ಮಹಿಳೆಯರ ಹೆಸರೆತ್ತಿದರೆ ವಾಂತಿ ಮಾಡುತ್ತಾನೆ? ಫೇಸ್ ಬುಕ್ಕಿನಲ್ಲೇ ಈ ಪಾಟಿ ಹೆಣ್ಮಕ್ಕಳ ವಿರುದ್ಧ ಕಾರಿಕೊಳ್ಳುವ ಈತನ ಮನಸ್ಥಿತಿ ಎಂಥದ್ದು? ಈ ವ್ಯಕ್ತಿಗೆ ಮಾನಸಿಕವಾಗಿ ಏನಾದರೂ ಸಮಸ್ಯೆ ಇದೆಯಾ? ಇಸ್ಕಾನ್ ಸಂಸ್ಥೆಯಲ್ಲಿ ಮಿಷನರಿ ಆಗಿ ಕೆಲಸ ಮಾಡುತ್ತಿದ್ದ ಈತನ ಟ್ರ್ಯಾಕ್ ರೆಕಾರ್ಡ್ ಏನು? ಬೇರೆಲ್ಲಾದರೂ ಇದೇ ರೀತಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ್ದಾನಾ? ಕಾನೂನಿನ ಬಗ್ಗೆ ಮಾತಾಡುವ ಈ ಪ್ರಜೆ ಯಾಕೆ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾನೆ? ಅನ್ನೋದನ್ನೆಲ್ಲಾ ಆಮೂಲಾಗ್ರವಾಗಿ ತನಿಖೆ ಮಾಡಬೇಕಿದೆ. ಆ ಮೂಲಕ ಸಾಕಷ್ಟು ಕನಸಿಟ್ಟುಕೊಂಡು, ಸಿನಿಮಾ ನಿರ್ದೇಶಕಿಯಾಗಬೇಕು ಅಂತಾ ಶ್ರಮಿಸುತ್ತಿರುವ, ಮೇಲಾಗಿ ಮಹಿಳೆಯೊಬ್ಬಳಿಗೆ ಆಗಿರುವ ಅನ್ಯಾಯ, ಅವಮಾನಕ್ಕೆ ನ್ಯಾಯ ದಕ್ಕಿಸಿಕೊಡಬೇಕಿದೆ.
ಜಿ.ವಿ. ಅಯ್ಯರ್ ಮೊಮ್ಮಗಳು ರಿಶಿಕಾ!
ಮಹಿಳಾ ನಿರ್ದೇಶಕಿ ಎನಿಸಿಕೊಂಡಿರುವ ರಿಶಿಕಾ ಬೇರೆ ಯಾರೂ ಅಲ್ಲ. ಕನ್ನಡ ಚಿತ್ರರಂಗಕ್ಕೆ ಅಡಿಪಾಯ ಹಾಕಿಕೊಟ್ಟವರಲ್ಲಿ ಒಬ್ಬರಾದ ನಟ, ನಿರ್ದೇಶಕ, ದಿ. ಜಿ.ವಿ ಅಯ್ಯರ್ ಅವರ ಮೊಮ್ಮಗಳು. ರಿಶಿಕಾ ಬೆಳೆದದ್ದು ಅಪ್ಪಟ ಸಿನಿಮಾ ವಾತಾವರಣದಲ್ಲಿಯೇ. ಆದರೆ ಅವರು ನಟಿಯಾಗಬೇಕೆಂಬ ಆಸೆ ಹೊಂದಿರಲಿಲ್ಲ. ತಾಂತ್ರಿಕವಾಗಿ ನೈಪುಣ್ಯತೆ ಪಡೆದು ನಿರ್ದೇಶಕಿಯಾಗಿ ನೆ ಗೊಳ್ಳುವ ಆಸೆಯಿಂದಲೇ ರಿಶಿಕಾ ಬಣ್ಣದ ಜಗತ್ತಿನತ್ತ ಕಣ್ಣರಳಿಸಿದ್ದರು.
ವಿಶೇಷವೆಂದರೆ ನಿರ್ದೇಶಕಿಯಾಗೋ ಕನಸಿನೊಂದಿಗೇ ಪತ್ರಿಕೋದ್ಯಮದತ್ತಲೂ ತುಡಿತ ಹೊಂದಿದ್ದ ರಿಶಿಕಾ ಜರ್ನಲಿಸಂ ಪದವಿ ಪಡೆದುಕೊಂಡಿದ್ದಾರೆ. ಆ ನಂತರದಲ್ಲಿ ರಂಗಭೂಮಿಯತ್ತ ಆಕರ್ಷಿತರಾಗಿ ಬೇರೆ ಬೇರೆ ರೀತಿಯಲ್ಲಿ ರಂಗಶಂಕರದ ತರಬೇತಿ ತಂಡಗಳ ಮೂಲಕ ಪಳಗಿಕೊಂಡಿದ್ದಾರೆ. ಈ ನಡುವೆ ಅನಿರೀಕ್ಷಿತವಾಗಿಯೇ ನಟಿಸುವ ಅವಕಾಶಗಳನ್ನೂ ಪಡೆದುಕೊಂಡು ಕ್ರೈಂ ಫೈಲ್, ಚರಣದಾಸಿ, ಭಾರತಿ, ಸರಸ್ವತಿ ಮುಂತಾದ ಧಾರಾವಾಹಿಗಳಲ್ಲಿ ನಟಿಸೋ ಮೂಲಕ ರಿಶಿಕಾ ಕಿರುತೆರೆ ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ಇಷ್ಟೆಲ್ಲ ಆದ ನಂತರ ಸಿನಿಮಾದತ್ತ ಮುಖ ಮಾಡಿದ ರಿಷಿಕಾ ಅವರಿಗೆ ಅಲ್ಲಿಯೂ ನಟನೆಯ ಅವಕಾಶವೇ ಅರಸಿ ಬಂದಿತ್ತು. ವರ್ಷಾಂತರಗಳ ಹಿಂದೆ ವಾಸ್ಕೋಡಿಗಾಮ ಎಂಬೊಂದು ಚಿತ್ರ ಬಂದಿತ್ತಲ್ಲಾ? ಅದರಲ್ಲಿ ಕಿಶೋರ್ ಜೊತೆ ರಿಷಿಕಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.
ಇದಾದ ಬಳಿಕ ನಿರ್ದೇಶನವೇ ತನ್ನ ಗುರಿಯೆಂದು ನಿರ್ಧರಿಸಿದ ರಿಶಿಕಾ ಶುದ್ಧಿ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಈ ನಡುವೆಯೇ ಕಿರಗೂರಿನ ಗಯ್ಯಾಳಿಗಳು, ಸೈಕೋ ಶಂಕ್ರ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರೂ ಸ್ವತಂತ್ರ ನಿರ್ದೇಶಕಿಯಾಗೋ ಬಯಕೆ ಹೊತ್ತು ಕಾರ್ಯಾರಂಭ ಮಾಡಿದ್ದ ರಿಷೀಕಾಗೆ ೧೯೯೭ರಲ್ಲಿ ಗುಲ್ಬರ್ಗಾದ ಹಳ್ಳಿಯೊಂದರಲ್ಲಿ ನಡೆದಿದ್ದ ಹಾರರ್ ಕಥಾನಕವೊಂದರ ಸಾಲನ್ನು ಕಥೆಯನ್ನಾಗಿಸಿ ‘ಟ್ರಂಕ್’ ಸಿನಿಮಾವನ್ನು ನಿರ್ದೇಶಿಸಿದ್ದರು.
ಇಂಥ ರಿಶಿಕಾ ನಿಜಜೀವನದಲ್ಲಿ, ಪೈಶಾಚಿಕ ಮನಸ್ಥಿತಿ ಹೊಂದಿರುವ ವ್ಯಕ್ತಿಯೊಬ್ಬನಿಂದ ನೊಂದುಕೊಳ್ಳುವಂತಾಗಿದೆ. ಕರ್ನಾಟಕದಲ್ಲಿರುವ ಪ್ರಜ್ಞಾವಂತರು, ಮಹಿಳಾಪರ ಹೋರಾಟಗಾರರು, ಈ ಹೆಣ್ಣಿಗಾಗಿರುವ ಶೋಷಣೆಯ ವಿರುದ್ಧ ದನಿಯೆತ್ತಬೇಕು. ವಯಾಲಿಕಾವಲ್ ಠಾಣೆಯ ನಿಷ್ಟಾವಂತ ಅಧಿಕಾರಿ ಯೋಗೇಂದ್ರ ಕುಮಾರ್ ಅವರು ಹರ್ಷ ಸ್ವರೂಪ್ ಎಂಬಾತನನನ್ನು ಸರಿಯಾದ ವಿಚಾರಣೆಗೊಳಪಡಿಸಿ, ನ್ಯಾಯ ಒದಗಿಸಿದ್ದೇ ಆದಲ್ಲಿ ಬರೀ ರಿಶಿಕಾ ಮಾತ್ರವಲ್ಲ, ಅದೆಷ್ಟೋ ಹೆಣ್ಣುಜೀವಗಳ ಹಾರೈಕೆಗೆ ಪಾತ್ರರಾಗುತ್ತಾರೆ.
CG ARUN

ವಿಜಯ್ ಅಭಿಮಾನಿಗಳು ಕೊಟ್ಟ ಲಂಚ ಏನು ಗೊತ್ತಾ?

Previous article

ಆ ನಟ, ಈ ನಟನ ವಿಷಯವಲ್ಲ… ಇದು ಕನ್ನಡ ಚಿತ್ರರಂಗದ ಭವಿಷ್ಯ!

Next article

You may also like

Comments

Leave a reply

Your email address will not be published. Required fields are marked *