ಈ ಸಲದ ಬಿಗ್ ಬಾಸ್ ಶೋದಲ್ಲಿ ಕಡೇ ಘಳಿಗೆಯವರೆಗೂ ತೀವ್ರ ಸ್ಪರ್ಧೆ ಕೊಟ್ಟಿದ್ದವರು ರ್ಯಾಪಿಡ್ ರಶ್ಮಿ. ರೇಡಿಯೋ ಜಾಕಿಯಾಗಿದ್ದುಕೊಂಡು ಪಟ ಪಟನೆ ಮಾತಾಡುತ್ತಾ ತಮ್ಮದೇ ಶೈಲಿಯಲ್ಲಿ ಮನೆ ಮಾತಾಗಿರೋ ರಶ್ಮಿ ಇದೀಗ ಮತ್ತೊಂದು ಹೊಸಾ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಅವರು ರ್ಯಾಪ್ ಸಿಂಗರ್ ಆಗಿಯೂ ಸಂಚಲನ ಸೃಷ್ಟಿಸಲು ರೆಡಿಯಾಗಿದ್ದಾರೆ.
ಅವರೇ ಹಾಡಿರೋ ರ್ಯಾಪ್ ಸಾಂಗೊಂದು ರೆಡಿಯಾಗುತ್ತಿದೆ. ರ್ಯಾಪಿಡ್ ರಶ್ಮಿಯೇ ಬರೆದು ಹಾಡಿರೋ ಈ ಹಾಡಿಗೆ ಇಂಡಿಪೆಂಡೆಂಟು ಎಂಬ ಶೀರ್ಷಿಕೆಯನ್ನಿಡಲಾಗಿದೆ. ಅದಕ್ಕೆ ನುಗ್ಗಿ ನಡೆ ಎಂಬ ಅಡಿ ಬರಹವೂ ಇದೆಯಂತೆ. ಸದ್ಯಕ್ಕೆ ಈ ಹಾಡಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ತೊಡಗಿಕೊಂಡಿರುವ ರಶ್ಮಿ, ನಾಳೆ ಇದರ ಪೋಸ್ಟರ್ ಒಂದನ್ನು ರಿವೀಲ್ ಮಾಡಲಿದ್ದಾರೆ. ಈ ಬಗ್ಗೆ ರಶ್ಮಿ ಹೆಚ್ಚೇನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ನಾಳೆ ಬಿಡುಗಡೆಯಾಗಲಿರೋ ಪೋಸ್ಟರ್ ಒಂದಷ್ಟು ವಿಚಾರಗಳನ್ನ ಬಿಟ್ಟುಕೊಡಬಹುದು. ಆದರೆ ಇದು ಸಂಸಾರ, ಜಂಜಾಟ, ಸಾಮಾಜಿಕ ಸಂಕೋಲೆಗಳಲ್ಲಿ ಬಂಧಿಯಾಗೋ ಹೆಣ್ಣುಮಕ್ಕಳನ್ನು ತಮ್ಮ ಟ್ಯಾಲೆಂಟಿಗೆ ತಕ್ಕಂತೆ ಸಾಧನೆಗೆ ಉತ್ತೇಜಿಸುವ ರೀತಿಯಲ್ಲಿ ಮೂಡಿ ಬರಲಿದೆಯಂತೆ.
ಈ ಸಲದ ಬಿಗ್ ಬಾಸ್ ಶೋ ಮೂಲಕ ರಶ್ಮಿ ಹೊಸಾ ರೀತಿಯಲ್ಲಿಯೇ ಜನರಿಗೆ ಪರಿಚಯವಾಗಿದ್ದರು. ರ್ಯಾಪಿಡ್ ರಶ್ಮಿ ಅಂದ್ರೆ ಬಿಡುಬೀಸಾದ, ಯಾರಿಗೂ ಕೇರು ಮಾಡದ ಹುಡುಗಿ. ಆರ್ ಜೆಯಾಗಿದ್ದುಕೊಂಡು ವಿಭಿನ್ನವಾದ ಮಾತುಗಳ ಮೂಲಕ ಮನಸೂರೆಗೊಂಡವರು ಅನ್ನೋ ವಿಚಾರ ಮಾತ್ರವೇ ಜನರಿಗೆ ಗೊತ್ತಿತ್ತು. ಆದರೆ ಅವರೊಳಗೂ ಓರ್ವ ಅದ್ಭುತ ಗಾಯಕಿ ಇದ್ದಾರೆಂಬ ವಿಚಾರವನ್ನು ಬಿಗ್ ಬಾಸ್ ಶೋ ಅನಾವರಣಗೊಳಿಸಿತ್ತು. ಬೇಸರಕ್ಕೆ, ಖುಷಿಗೂ ಹಾಡಿಕೊಳ್ಳುತ್ತಿದ್ದ ರ್ಯಾಪಿಡ್ ಆಲಾಪಕ್ಕೆ ಬಿಗ್ ಬಾಸ್ ಪ್ರೇಕ್ಷಕರು ಮನಸೋತಿದ್ದರು. ಅದೆಷ್ಟೋ ಸಲ ಕಿಚ್ಚಾ ಸುದೀಪ್ ಅವರೆ ಈ ಬಗ್ಗೆ ಮೆಚ್ಚಿಕೊಂಡು ಮಾತಾಡಿದ್ದೂ ಇದೆ.ಇಂಥಾ ಉತ್ತೇಜನದಿಂದಲೋ, ಹಳೇ ಕನಸುಗಳ ಫಲವೋ ಅಂತೂ ರಶ್ಮಿ ಈ ಹಾಡಿನ ಮೂಲಕ ಗಾಯಕಿಯಾಗಿಯೂ ಅನಾವರಣಗೊಳ್ಳಲು ಮುಂದಾಗಿದ್ದಾರೆ. ಈ ಹಾಡು ಮಾರ್ಚ್ ಕೊನೇಯ ಹೊತ್ತಿಗೆ ಬಿಡುಗಡೆಯಾಗಲಿದೆಯಂತೆ.
No Comment! Be the first one.