ನನಗೆ ಡ್ಯಾನ್ಸು ಮಾಡೋಕೆ ಬರಲ್ಲ, ಡ್ಯಾನ್ಸೆಂದರೆ ನನಗೆ ಕಷ್ಟ ಅಂತೆಲ್ಲಾ ದಚ್ಚು ಇಷ್ಟು ದಿನ ಸುಳ್ಳು ಹೇಳುತ್ತಿದ್ದರು ಅನ್ನೋದಿಲ್ಲಿ ಅಕ್ಷರಶಃ ಸಾಬೀತಾಗಿದೆ. ಹದಿನೆಂಟರ ಹುಡುಗನಂತೆ ಸ್ಟೆಪ್ಪು ಹಾಕಿ ದರ್ಶನ್ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.
ದರ್ಶನ್ ಅವರ ಒಡೆಯ ಸಿನಿಮಾದ ಸಂದರ್ಭದಲ್ಲಿ ಕೆಲವರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ವಿರುದ್ಧ ಕೊಂಕು ಮಾತಾಡಿಬಿಟ್ಟಿದ್ದರು. ಬಹುಶಃ ರಾಬರ್ಟ್ ಸಿನಿಮಾದ ಹಾಡುಗಳನ್ನು ನೋಡಿದರೆ ಆವತ್ತು ಅಂದವರಿಗೆ ಉತ್ತರ ಕೊಡಲೆಂದೇ ರೊಚ್ಚಿಗೆದ್ದು ಎಲ್ಲ ಟ್ಯೂನುಗಳನ್ನು ಹೊಸೆದಂತೆ ಕಾಣುತ್ತಿದೆ.
ಈಗಾಗಲೇ ರಿಲೀಸಾಗಿರುವ ರಾಬರ್ಟ್ ಸಿನಿಮಾದ ಒಂದೊಂದು ಹಾಡು ಕೂಡಾ ಅದ್ಭುತ ರೆಸ್ಪಾನ್ಸ್ ಪಡೆಯುತ್ತಿವೆ. ಸಾಮಾನ್ಯಕ್ಕೆ ಸಿನಿಮಾವೊಂದರಲ್ಲಿ ಒಂದು ಅಥವಾ ಎರಡು ಹಾಡು ಗೆಲುವು ಕಾಣುತ್ತವೆ. ಆದರೆ, ರಾಬರ್ಟ್ ಚಿತ್ರದ ಪ್ರತಿಯೊಂದು ಹಾಡೂ ದಾಖಲೆ ಬರೆಯುತ್ತಿವೆ.
ಡಾ. ವಿ ನಾಗೇಂದ್ರ ಪ್ರಸಾದ್ ರಚನೆಯ ಬಾ ಬಾ ಬಾ ನಾ ರೆಡಿ ರಿಲೀಸಾಗಿ ಹಿಟ್ ಆಗಿ ವರ್ಷ ಕಳೆದಿದೆ. ಕಳೆದ ತಿಂಗಳು ಬಿಡುಗಡೆಯಾಗಿದ್ದ ಯೋಗರಾಜ ಭಟ್ಟರು ಕಣ್ಣು ಹೊಡೆಯಾಕ ಮೊನ್ನೆ ಕಲಿತೀನಿ, ನೀನೇ ಹೇಳಲೆ ಮಗನಾ ನಿನ್ನಾ ನೋಡಿ ಸುಮನೆಂಗಿರ್ಲಿ ಹಾಡು ಬಲು ಮಜವಾಗಿತ್ತು. ವಿಪಿ ಮತ್ತು ಹೇಮಂತ್ ಹಾಡಿರುವ ದೋಸ್ತಾ ಕಣೋ ಕೂಡಾ ಮಸ್ತಾಗಿತ್ತು. ಈಗ ಹೊರಬಂದಿದೆ ನೋಡಿ ಬೇಬಿ ಡಾನ್ಸ್ ಫ್ಲೋರ್ ರೆಡಿ ಹಾಡು… ಅಬ್ಬಬ್ಬಾ ಅದೆಷ್ಟು ಚೆಂದಗೆ ಕುಣಿದಿದ್ದಾರೆ ದರ್ಶನ್. ನನಗೆ ಡ್ಯಾನ್ಸು ಮಾಡೋಕೆ ಬರಲ್ಲ, ಡ್ಯಾನ್ಸೆಂದರೆ ನನಗೆ ಕಷ್ಟ ಅಂತೆಲ್ಲಾ ದಚ್ಚು ಇಷ್ಟು ದಿನ ಸುಳ್ಳು ಹೇಳುತ್ತಿದ್ದರು ಅನ್ನೋದಿಲ್ಲಿ ಅಕ್ಷರಶಃ ಸಾಬೀತಾಗಿದೆ.
ಇಷ್ಟು ಎತ್ತರದ ಮೈಕಟ್ಟು ಹೊಂದಿರುವ ದರ್ಶನ್ ಡ್ಯಾನ್ಸ್ ಮಾಡೋದು ಕಷ್ಟ ಅನ್ನೋದೇನೋ ನಿಜ. ಆದರೆ ಹದಿನೆಂಟರ ಹುಡುಗನಂತೆ ಸ್ಟೆಪ್ಪು ಹಾಕಿ ದರ್ಶನ್ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಗೊತ್ತಿಲ್ಲ ಅಂತಾ ಕೂರುವ ಜಾಯಮಾನ ಈ ಯಜಮಾನನದ್ದಲ್ಲ. ಲಾಂಗು-ಮಚ್ಚು ಹಿಡಿದು ಕಮರ್ಷಿಯಲ್ ಹೀರೋ ಅನ್ನಿಸಿಕೊಂಡಿದ್ದ ಕಾಲದಲ್ಲೇ ಕಣ್ಣನ್ನು ಮೇಲಕ್ಕೆ ಮಡಚಿ ʻನಮ್ಮ ಪ್ರೀತಿಯ ರಾಮುʼ ಪಾತ್ರವನ್ನು ನಿಭಾಯಿಸಿದ್ದವರು ಇವರು. ಐತಿಹಾಸಿಕ ಮತ್ತು ಪೌರಾಣಿಕ ಪಾತ್ರದಲ್ಲಿ ನಟಿಸಲು ದರ್ಶನ್ ಗೆ ಸಾಧ್ಯವಾ ಅಂತಾ ಕೆಲವರು ಒಳಗೊಳಗೇ ಕೊಸರುತ್ತಿದ್ದಾಗ ʻನೋಡೇ ಬಿಡಿʼ ಅಂತಾ ತೊಡೆ ತಟ್ಟಿದ ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರದಲ್ಲಿ ಆರ್ಭಟಿಸಿದ ದುರ್ಯೋಧನ ದರ್ಶನ್!
ನನಗೆ ಡ್ಯಾನ್ಸೆಂದರೆ ಅಲರ್ಜಿ ಅನ್ನುತ್ತಲೇ ಈಗ ಪಳಗಿದ ಡ್ಯಾನ್ಸರ್ ಥರಾ ಮೈ ಕೈ ಬಳುಕಿಸಿ, ಕಾಲುಗಳನ್ನು ತಿರುಗಿಸಿ ಸ್ಟೆಪ್ಪು ಹಾಕಿದ್ದಾರೆ ಡಿ ಬಾಸು. ದರ್ಶನ್ ಡ್ಯಾನ್ಸು ಈ ಮಟ್ಟಕ್ಕೆ ಎಲ್ಲರನ್ನೂ ಸೆಳೆಯುತ್ತಿರುವುದರ ಹಿಂದೆ ಚೇತನ್ ಕುಮಾರ್ ಬರೆದಿರೋ ಹಾಡಿನ ಮಜವಾದ ಫ್ಲೇವರು, ಅರ್ಜುನ್ ಜನ್ಯಾ ಮ್ಯೂಸಿಕ್ಕು ಮತ್ತು ಭೂಷಣ್ ಕೊರಿಯೋಗ್ರಫಿ ಕೂಡಾ ಪ್ರಮುಖ ಕಾರಣವಾಗಿದೆ ಅನ್ನೋದು ನಿಜ. ಬಂದಿರುವ ಟೀಸರ್, ಟ್ರೇಲರು, ಹಾಡುಗಳನ್ನೆಲ್ಲಾ ಗಮನಿಸಿದರೆ ನಿರ್ದೇಶಕ ತರುಣ್ ಸುಧೀರ್ ಪಾಲಿಗೆ ಗೆಲುವು ಕೈಗೆಟುಕುವುದು ಗ್ಯಾರೆಂಟಿಯೆನ್ನುವ ವಾತಾವರಣವಿದೆ.