ರಾಕ್ಲೈನ್ ವೆಂಕಟೇಶ್ ಮತ್ತೊಮ್ಮೆ ಪೂರ್ಣಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದಿಂದ ದೂರವಾಗದಿದ್ದರೂ, ನಿರ್ಮಾಣ ಕಡಿಮೆ ಮಾಡಿದ್ದ ರಾಕ್ಲೈನ್, ಈಗ ಮತ್ತೊಮ್ಮೆ ಫಾರ್ಮಿಗೆ ಬಂದಿದ್ದಾರೆ. ಸದ್ಯ ರಾಕ್ ಮೂರು ಸಿನಿಮಾಗಳನ್ನು ನಿರ್ಮಿಸುತ್ತಿದ್ದು, ಇನ್ನಷ್ಟು ಚಿತ್ರಗಳ ಕುರಿತಾಗಿ ಮಾತುಕತೆ ನಡೆಯುತ್ತಿದೆಯಂತೆ. ಆ ಪೈಕಿ ಯಾವುದು ಕಚ್ಚಿಕೊಳ್ಳುತ್ತದೋ ನೋಡಬೇಕಿದೆ.
ಅಂದಹಾಗೆ, ಈ ಮೂರು ಸಿನಿಮಾಗಳ ನಿರ್ಮಾಣಕ್ಕೆ ರಾಕ್ಲೈನ್ ವೆಂಕಟೇಶ್ ಎತ್ತಿಟ್ಟಿರುವ ಹಣವೆಷ್ಟು ಗೊತ್ತಾ? ಬರೋಬ್ಬರಿ 100 ಕೋಟಿ ರೂ ಎಂದು ಹೇಳಲಾಗುತ್ತದೆ. ಈ ಮೂರೂ ದೊಡ್ಡ ಚಿತ್ರಗಳಾಗಿದ್ದು, ಸ್ಟಾರ್ ನಟರೇ ನಟಿಸುತ್ತಿರುವುದು ವಿಶೇಷ.
ಈ ಪೈಕಿ ಮೊದಲನೆಯದು ಯೋಗರಾಜ್ ಭಟ್ ನಿರ್ದೇಶನದ, ಶಿವರಾಜ್ ಕುಮಾರ್ ಮತ್ತು ಪ್ರಭುದೇವ ಅಭಿನಯಿಸುತ್ತಿರುವ ಕರಟಕ ದಮನಕ. ಪ್ರಭುದೇವ ಇರುವುದರಿಂದ ಈ ಸಿನಿಮಾ ಕನ್ನಡವಲ್ಲದೆ ತಮಿಳು, ತೆಲುಗಿನಲ್ಲೂ ಬಿಡುಗಡೆಯಾಗೋದು ಗ್ಯಾರೆಂಟಿ. ಈ ಚಿತ್ರದ ಬಜೆಟ್ 20ರಿಂದ 30 ಕೋಟಿ ರೂ.ವರೆಗೂ ಆಗುತ್ತದಂತೆ.
ದರ್ಶನ್ ಅಭಿನಯದ ಡಿ56, ರಾಕ್ಲೈನ್ ನಿರ್ಮಾಣದ ಇನ್ನೊಂದು ಚಿತ್ರ. ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಸದ್ದಿಲ್ಲದೆ ನಡೆಯುತ್ತಿದ್ದು, ವರ್ಷದ ಕೊನೆಗೆ ಮುಗಿಯುವ ಸಾಧ್ಯತೆ ಇದೆ. ದರ್ಶನ್ ಚಿತ್ರ ಎಂದರೆ ಎಷ್ಟೇ ಕಡಿಮೆ ಎಂದರೂ ಮಿನಿಮ್ 30 ಕೋಟಿ ರೂ. ಬೇಕೇ ಬೇಕು ಎಂಬ ಮಾತಿದೆ. ಈ ಚಿತ್ರಕ್ಕೆ ಇನ್ನಷ್ಟು ಜಾಸ್ತಿ ಖರ್ಚಾಗಲಿದ್ದು, 40 ಕೋಟಿ ರೂ.ವರೆಗೂ ಬಜೆಟ್ ಆಗಬಹುದಂತೆ. ಈ ಸಿನಿಮಾಗಾಗಿ ವಿಶೇಷವಾದ ಸೆಟ್ ಗಳನ್ನು ನಿರ್ಮಿಸಲಾಗುತ್ತಿದ್ದು, ಅಲ್ಲಿ ಸತತವಾಗಿ ಚಿತ್ರೀಕರಣ ಮಾಡಲಾಗುತ್ತಿದೆ.
ಇನ್ನು, ಅಭಿಷೇಕ್ ಅಂಬರೀಷ್ ಅಭಿನಯದ ಎಎ04, ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಹೊಸ ಚಿತ್ರ. ಈ ಚಿತ್ರವನ್ನು ಅಯೋಗ್ಯ ಮಹೇಶ್ ನಿರ್ದೇಶಿಸುತ್ತಿದ್ದು, ಇದೊಂದು ಐತಿಹಾಸಿಕ ಚಿತ್ರವಾಗಿರಲಿದೆಯಂತೆ. 1000 ವರ್ಷಗಳ ಹಿಂದಿನ ಕಥೆ ಇರುವ ಈ ಚಿತ್ರಕ್ಕೆ 30 ಕೋಟಿ ರೂ. ಬಜೆಟ್ ಆಗುತ್ತದೆ ಎಂದು ರಾಕ್ಲೈನ್ ಈಗಾಗಲೇ ಹೇಳಿಕೊಂಡಿದ್ದಾರೆ. ಚಿತ್ರ ಇನ್ನೂ ಶುರುವಾಗಿಲ್ಲ. ಸಿನಿಮಾದ ಪ್ರಾರಂಭಕ್ಕೆ ಇನ್ನಷ್ಟು ಸಮಯ ಬೇಕು. ಬಹುಶಃ ಕೃಷ್ಣ ನಿರ್ದೇಶನದ ಕಾಳಿ ಚಿತ್ರ ಮುಗಿದ ನಂತರ ಅಭಿಷೇಕ್, ಈ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ಮುಗಿಯುವ ಹೊತ್ತಿಗೆ ಬಜೆಟ್ ಇನ್ನಷ್ಟು ಹೆಚ್ಚಾದರೆ ಆಶ್ಚರ್ಯವಿಲ್ಲ.
ಈ ಮೂರೂ ಸಿನಿಮಾಗಳಿಂದ ಒಟ್ಟು ಮಾಡಿದರೆ ಬಜೆಟ್ 100 ಕೋಟಿ ರೂ. ಆಗುತ್ತದೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಇಷ್ಟೊಂದು ಹಣವನ್ನು ಹೂಡಿಕೆ ಮಾಡಿರುವ ಮತ್ತೊಬ್ಬ ನಿರ್ಮಾಪಕರು ಸಿಗುವುದಿಲ್ಲ. ಹೊಂಬಾಳೆಯವರು ಒಂದಿಷ್ಟು ಚಿತ್ರಗಳನ್ನು ನಿರ್ಮಿಸುತ್ತಿದ್ದಾರಾದರೂ, ಅದಕ್ಕೆ ಇಷ್ಟು ದೊಡ್ಡ ಬಜೆಟ್ ಇಲ್ಲ. ಆದರೆ, ರಾಕ್ಲೈನ್ ಮೂರೇ ಮೂರು ಚಿತ್ರಗಳಿಗೆ 100 ಕೋಟಿ ರೂ. ತೆಗೆದಿಟ್ಟಿದ್ದಾರೆ. ಈ ಪೈಕಿ ಮೊದಲೆರೆಡು ಚಿತ್ರಗಳ ಬಗ್ಗೆ ಯಾರಿಗೂ ಸಂಶಯ, ಭಯ ಇಲ್ಲ. ಆದರೆ, ಅಭಿಷೇಕ್ ಚಿತ್ರಕ್ಕೆ 30 ಕೋಟಿ ರೂ. ಸ್ವಲ್ಪ ಜಾಸ್ತಿ ಆಗಲಿಲ್ಲವಾ ಎಂಬ ಪ್ರಶ್ನೆ ಸಹಜ. ಏಕೆಂದರೆ, ಅಭಿಷೇಕ್ ಇನ್ನೂ ಏನು ಪ್ರೂವ್ ಮಾಡಿಲ್ಲ. ಅವರ ಮಾರ್ಕೆಟ್ ಬಗ್ಗೆ ಯಾರಿಗೂ ಗೊತ್ತಿಲ್ಲ. ಹೀಗಿರುವಾಗ ರಿಸ್ಕ್ ಜಾಸ್ತಿ ಇದೆ. ಆದರೆ, ರಾಕ್ಲೈನ್ ಅಷ್ಟು ಸುಲಭಕ್ಕೆ ದುಡ್ಡು ಕಳೆದುಕೊಳ್ಳುವವರಲ್ಲ ಎಂದು ಇಡೀ ಚಿತ್ರರಂಗಕ್ಕೆ ಗೊತ್ತಿದೆ. ರಾಕ್ಲೈನ್ ನಿರ್ಮಾಣದ ಚಿತ್ರಗಳು ದೊಡ್ಡ ಲಾಭ ಮಾಡದಿರಬಹುದು. ಆದರೆ, ನಷ್ಟ ಮಾಡಿಕೊಳ್ಳುವ ಆಸಾಮಿಯಂತೂ ಅವರಲ್ಲ. ಹಾಗಾಗಿ, ಇದಕ್ಕೂ ಏನೋ ಒಂದು ಪ್ಲಾನ್ ಮಾಡಿಕೊಂಡಿರುತ್ತಾರೆ. ಅದೇನು ಎಂಬುದು ಚಿತ್ರ ಬಿಡುಗಡೆಯಾದ ಮೇಲೆ ಗೊತ್ತಾಗಬೇಕು.
No Comment! Be the first one.