ನೃತ್ಯ ಕಲಾವಿದೆಯಾಗಿ ಪ್ರತಿಭೆ ತೋರಿ, ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಹುಡುಗಿ ರೂಪಿಕಾ. ಎಸ್. ನಾರಾಯಣ್ ಮಗನ ಚೆಲುವಿನ ಚಿಲಿಪಿಲಿ ಸಿನಿಮಾದಲ್ಲಿ ಈಕೆ ನಾಯಕಿಯಾಗಿ ಅವಕಾಶ ಪಡೆದಾಗ ’ಕನ್ನಡಕ್ಕೆ ಪ್ರತಿಭಾವಂತ ಕಲಾವಿದೆ ಸಿಕ್ಕಳು’ ಅಂತಲೇ ಎಲ್ಲರೂ ಭಾವಿಸಿದ್ದರು. ಆರಂಭದ ಕೆಲವು ಸಿನಿಮಾಗಳು ಬಿಟ್ಟರೆ ಆನಂತರ ರೂಪಿಕಾ ಅಂದುಕೊಳ್ಳುವ ಮಟ್ಟಕ್ಕೆ ಮಿಂಚಲಿಲ್ಲ. ಈಕೆ ಆಯ್ಕೆ ಮಾಡಿಕೊಂಡ ಸಿನಿಮಾಗಳು ಸರಿಯಿರಲಿಲ್ಲವೋ ಅಥವಾ ರೂಪಿಕೆಯ ನಸೀಬೇ ನೆಟ್ಟಗಿರಲಿಲ್ಲವೋ ಗೊತ್ತಿಲ್ಲ. ಚಿನ್ನದಂಗಡಿ ಜಾಹೀರಾತಿನಲ್ಲಿ ಚಿಣಿಮಿಣಿ ಅಂದವಳು ಸಿನಿಮಾಗಳಲ್ಲಿ ಮಿಣಿಮಿಣಿಸಲೇ ಇಲ್ಲ!
ಈಗ ಥರ್ಡ್ ಕ್ಲಾಸ್ ಅನ್ನೋ ಸಿನಿಮಾದಲ್ಲಿ ರೂಪಿಕಾ ಹೀರೋಯಿನ್ನು. ಸಿನಿಮಾ ರಿಲೀಸಾಗಿ, ನೋಡಿದವರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಅನ್ನೋದು ಸ್ವತಃ ರೂಪಿಕಾ ನುಡಿ.
ನನಗೆ ಕನ್ನಡ ಇಂಡಸ್ಟ್ರಿಯಲ್ಲಿ ಅವಕಾಶ ಸಿಗುತ್ತಲೇ ಇದೆ. ಆದರೆ ನನ್ನ ಕೆಪ್ಯಾಸಿಟಿನೇ ಬೇರೆ. ನನ್ನ ಪ್ರತಿಭೆಗೆ ತಕ್ಕ ಪಾತ್ರಗಳು ಸಿಗುತ್ತಿಲ್ಲ. ನನಗೆ ಎಂಥದ್ದೇ ಪಾತ್ರ ಕೊಟ್ಟರೂ ನಿಭಾಯಿಸುವ ತಾಕತ್ತಿದೆ. ಭರತನಾಟ್ಯದಿಂದ ಹಿಡಿದು ಯಾವುದೇ ಬಗೆಯ ಡ್ಯಾನ್ಸು ಮಾಡಲು ಬರುತ್ತದೆ. ಆದರೆ ಎಷ್ಟೋ ಸಿನಿಮಾಗಳಲ್ಲಿ ನನ್ನ ಟ್ಯಾಲೆಂಟು ತೋರಿಸುವಂತಾ ಪಾತ್ರಗಳೇ ಸಿಗೋದಿಲ್ಲ. ಇರೋದರಲ್ಲಿ ಥರ್ಡ್ ಕ್ಲಾಸ್ ಸಿನಿಮಾದಲ್ಲಿ ಒಳ್ಳೇ ಕ್ಯಾರೆಕ್ಟರು ಸಿಕ್ಕಿದೆ. ದಯಮಾಡಿ ನಮ್ಮ ಇಂಡಸ್ಟ್ರಿಯವರು ನನಗೆ ಉತ್ತಮ ಅವಕಾಶ ನೀಡಲಿ ಅಂತಾ ರಿಕ್ವೆಸ್ಟು ಮಾಡುತ್ತಿದ್ದಾಳೆ.
ನಿಜ.. ಮುಖ ಮೋರೆ ನೆಟ್ಟಗಿರದ, ನಟನೆಯ ವಾಸನೆಯೇ ಗೊತ್ತಿಲ್ಲದ ಹುಡುಗಿಯರನ್ನು ಎಲ್ಲೆಲ್ಲಿಂದಲೋ ಕರೆದುಕೊಂಡು ಬಂದು ಛಾನ್ಸು ಕೊಡುತ್ತಾರೆ. ರೂಪಿಕಾ ಕನ್ನಡ ನೆಲದ ಅಪ್ಪಟ ಪ್ರತಿಭೆ. ಭಾಷೆಯ ಹಿಡಿತವಿರುವ, ತೀರಾ ಸಣ್ಣ ವಯಸ್ಸಿಂದಲೇ ನಟನೆಯನ್ನು ಕರಗತ ಮಾಡಿಕೊಂಡ ಹುಡುಗಿ. ಇದ್ದಕ್ಕಿಂದ್ದಂತೆ ಸ್ವಲ್ಪ ಗುಂಡುಗುಂಡಗಾಗಿದ್ದ ರೂಪಿಕಾ ಈಗ ಮತ್ತೆ ತೆಳ್ಳಗಾಗಿದ್ದಾಳೆ. ಸಾಕಷ್ಟು ಬಗೆಯ ಪಾತ್ರಗಳನ್ನು ನಿರ್ವಹಿಸಬಲ್ಲ ಕಲಾವಿದೆ. ಆಕೆಯ ವಿನಂತಿಯನ್ನು ನಮ್ಮವರು ಸ್ವೀಕರಿಸಲಿ. ಆ ಮೂಲಕ ರೂಪಿಕಾ ಮತ್ತೊಂದು ಸುತ್ತಿನ ಇನ್ನಿಂಗ್ಸ್ ಆರಂಭಿಸಲಿ…