ಜೋಗಿ ಪ್ರೇಮ್ಸ್ ಮತ್ತೆ ಫಾರ್ಮಿಗೆ ಬರಲಿರುವ ಸೂಚನೆಯೊಂದು ರವಾನೆಯಾಗಿದೆ. ಪ್ರೇಮ್ ಮಡದಿ ರಕ್ಷಿತಾ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಪ್ರೇಮ್ ಬಾಮೈದ ಅಭಿಷೇಕ್ ರಾವ್ ನಟಿಸುತ್ತಿರೋ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಒಂದು ಬಿಡುಗಡೆಯಾಗಿದೆ. ದಿ ವಿಲನ್ ಚಿತ್ರ ತೆರೆಕಂಡ ನಂತರ ಪ್ರೇಮ್ಗೆ ಹಿಗ್ಗಾಮುಗ್ಗ ಝಾಡಿಸಿದ್ದವರೂ ಕೂಡಾ ಹೋಸಾ ಪೋಸ್ಟರ್ ಅನ್ನು ಕೊಂಡಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ಸದ್ದು ಮಾಡುತ್ತಿರೋ ಈ ಸಿನಿಮಾ ಹೆಸರು ಏಕ್ ಲವ್ ಯಾ.
ಏಕಲವ್ಯ ಎಂಬ ಪದವನ್ನೇ ಹೋಲುವಂತೆ ಟೈಟಲ್ಲಿನಲ್ಲಿಯೇ ಆಟವಾಡಿರೋ ಪ್ರೇಮ್, ಸಿನಿಮಾ ವಿಚಾರದಲ್ಲಿ ಎಲ್ಲ ಆಟಗಳನ್ನೂ ಬದಿಗೊತ್ತಿ ಅಖಾಡಕ್ಕಿಳಿದರೆ ಈ ಬಾರಿ ಮರ್ಯಾದೆ ಉಳಿಯಬಹುದು ಎಂಬಂಥಾ ಆಶಾವಾದದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರಕ್ಷಿತಾ ಸಹೋದರ ಅಭಿಷೇಕ್ ರಾವ್ ಗಾಗಿ ಒಂದು ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡಲಿದ್ದಾರೆಂಬ ಸುದ್ದಿ ಬಹು ಹಿಂದೆಯೇ ಹರಡಿತ್ತು. ಇದರ ಹಿಂದೆಯೇ ಪ್ರೇಮ್ ಮತ್ತೆ ಎಕ್ಸ್ಕ್ಯೂಸ್ ಮಿ ಹ್ಯಾಂಗೋವರಿಗೆ ಬಿದ್ದಿದ್ದಾರೆಂಬ ಸುಳಿವೂ ತೇಲಿ ಬಂದಿತ್ತು. ಆದರೆ ದಿ ವಿಲನ್ ಕೊಟ್ಟ ಮರ್ಮಾಘಾತದಿಂದ ಪ್ರೇಮ್ ಒಂದಷ್ಟು ಬದಲಾಗಿ ಹೊಸತನದೊಂದಿಗೇ ಮತ್ತೆ ಮರಳಿದಂತಿದೆ.
ಹೊಸಾ ಸುದ್ದಿಯೆಂದರೆ ಏಕ್ ಲವ್ ಯಾ ಚಿತ್ರಕ್ಕೆ ನಾಯಕಿಯಾಗಿ ಸಾಯಿ ಪಲ್ಲವಿ ಆಗಮಿಸುತ್ತಿದ್ದಾರಂತೆ. ಇತ್ತೀಚೆಗೆ ತೆರೆ ಕಂಡಿದ್ದ ತಮಿಳು ಚಿತ್ರ ಮಾರಿಯ ಮೂಲಕ ರೌಡಿ ಬೇಬಿಯಾಗಿ ಫೇಮಸ್ ಆಗಿರೋ ಸಾಯಿಪಲ್ಲವಿ ಈ ಸಿನಿಮಾ ನಾಯಕಿಯಾಗಿ ಕನ್ನಡಕ್ಕೆ ಬರೋದು ಹೆಚ್ಚೂ ಕಮ್ಮಿ ಪಕ್ಕಾ ಆಗಿದೆ.
ಇನ್ನು ರಕ್ಷಿತಾ ಸಹೋದರ ಅಭಿಷೇಕ್ ಭಾರೀ ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಇವರು ವಿಲನ್ ಚಿತ್ರದ ಚಿತ್ರೀಕರಣದಲ್ಲಿ ಪ್ರೇಮ್ಗೆ ಸಹಾಯಕನಾಗಿ ಅನುಭವ ಪಡೆದುಕೊಂಡಿದ್ದರು. ಸುದೀಪ್ ಮತ್ತು ಶಿವರಾಜ್ ಕುಮಾರ್ರಿಂದಲೂ ಸಲಹೆ ಸೂಚನೆ ಪಡೆದುಕೊಂಡಿದ್ದರು. ವಿದೇಶದಲ್ಲಿ ನಟನೆ, ಡ್ಯಾನ್ಸ್ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿಗಳನ್ನೂ ಅಭಿಷೇಕ್ ಪಡೆದಿದ್ದಾರಂತೆ. ಈ ಮೂಲಕವೇ ಜೋಗಿ ಪ್ರೇಮ್ ಮತ್ತೆ ಎದ್ದು ನಿಲ್ಲಲಿ. ಗಿಮಿಕ್ಕು ಮಾಡಿ ಪುಗಸಟ್ಟೆ ಪ್ರಚಾರ ಗಿಟ್ಟಿಸಲು ಮಾಡೋ ಸರ್ಕಸ್ಸಿನ ಎನರ್ಜಿಯನ್ನು ಕ್ರಿಯೇಟಿವಿಟಿಗೆ ಬಳಸಿಕೊಂಡು ಮತ್ತೆ ಗೆಲ್ಲಲೆಂದು ಹಾರೈಸೋಣ…