ಹೆಚ್ಚಿನ ಸಂದರ್ಭದಲ್ಲಿ ಬಿಡುಗಡೆಗೆ ಸಜ್ಜಾದ ಸಿನಿಮಾಗಳ ಹಿಂದೆ ಮತ್ತೊಂದು ಸಿನಿಮಾಕ್ಕಾಗುವಷ್ಟು ಕಥೆಗಳಿರುತ್ತವೆ. ಹುಡುಕಿದರೆ ತೆರೆ ಮರೆಯಲ್ಲಿ ನಿಂತು ಸಿನಿಮಾ ರೂಪಿಸಲು ಶ್ರಮಿಸಿದವರು ಸಾಗಿ ಬಂದ ಹಾದಿಯೇ ಎಂಥವರಿಗೂ ಸ್ಫೂರ್ತಿಯ ಕಣಜದಂತಿರುತ್ತೆ. ಆದರೆ ಕಣ್ಣು ಕೋರೈಸುವ ಝಗಮಗದಲ್ಲಿ ಮಿರುಗುವವರಷ್ಟೇ ಸುದ್ದಿ ಕೇಂದ್ರಕ್ಕೆ ಬರುತ್ತಾರೆ. ಉಳಿಕೆ ಕಥೆಗಳೆಲ್ಲ ಅದರಾಚೆಯ ಕತ್ತಲಲ್ಲಿಯೇ ಕಣ್ಮರೆಯಾಗಿ ಬಿಡುತ್ತವೆ. ಸದ್ಯ ವಿನೋದ್ ಪ್ರಭಾಕರ್ ಅಭಿನಯದ ರಗಡ್ ಚಿತ್ರ ತೆರೆ ಕಾಣಲು ರೆಡಿಯಾಗಿದೆ. ಈ ಚಿತ್ರದ ನಿರ್ಮಾಪಕರಾದ ಅರುಣ್ ಕುಮಾರ್ ಅವರ ಹಿನ್ನೆಲೆಯಲ್ಲಿಯೂ ಅಂಥಾದ್ದೇ ಒಂದು ರೋಚಕ ಕಥೆಯಿದೆ!
ಇದೇ ವಾರ ತೆರೆ ಕಾಣುತ್ತಿರೋ ರಗಡ್ ಚಿತ್ರ ಭರ್ಜರಿಯಾಗಿಯೇ ಸದ್ದು ಮಾಡುತ್ತಿದೆ. ನಿರ್ದೇಶಕ ಮಹೇಶ್ ಸೇರಿದಂತೆ ಇಡೀ ಚಿತ್ರತಂಡ ಅತ್ಯಂತ ಶ್ರದ್ಧೆಯಿಂದ ರೂಪಿಸಿದೆ. ವಿನೋದ್ ಪ್ರಭಾಕರ್ ಅವರಂತೂ ತುಂಬಾ ರಿಸ್ಕ್ ತೆಗೆದುಕೊಂಡು, ಪ್ರತಿಯೊಂದಕ್ಕೂ ತರಬೇತಿ ಪಡೆದೇ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರ ಇಂಥಾದ್ದೊಂದು ಕ್ರೇಜ್ ಹುಟ್ಟು ಹಾಕಿರೋದರ ಹಿಂದೆ ನಿರ್ಮಾಪಕ ಅರುಣ್ ಕುಮಾರ್ ಅವರ ಸಿನಿಮಾ ಧ್ಯಾನದ ಪಾತ್ರವೂ ನಿರ್ಣಾಯಕವಾಗಿದೆ. ಸಾಮಾನ್ಯವಾಗಿ ನಿರ್ದೇಶನ ಸೇರಿದಂತೆ ಕ್ರಿಯೇಟಿವ್ ವಿಭಾಗದವರು ಮಾತ್ರವೇ ಒಂದು ಚಿತ್ರಕ್ಕಾಗಿ ಪೂರ್ವ ತಯಾರಿ ಮಾಡಿಕೊಳ್ಳೋದು ಸುದ್ದಿಯಾಗುತ್ತೆ. ಆದರೆ ಅರುಣ್ ಕುಮಾರ್ ರಗಡ್ ಚಿತ್ರಕ್ಕಾಗಿ ಮಾಡಿಕೊಂಡಿರೋ ತಯಾರಿ ಎಂಥವರಿಗೂ ಮಾದರಿಯಂತಿದೆ.
ಆರಂಭ ಕಾಲದಿಂದಲೂ ಅರುಣ್ ಅವರ ಪಾಲಿಗೆ ಸಿನಿಮಾ ಎಂಬುದು ಎಡೆಬಿಡದೆ ಆವರಿಸಿಕೊಂಡಿದ್ದ ಮಾಯೆ. ಈ ಸಿನಿಮಾ ಆರಂಭಕ್ಕೂ ಮುಂಚಿತವಾಗಿ ಮೂರು ವರ್ಷದಿಂದಲೇ ಒಂದು ಸಿನಿಮಾ ನಿರ್ಮಾಣ ಮಾಡಬೇಕೆಂದು ಅರುಣ್ ನಿರ್ಧರಿಸಿದ್ದರಂತೆ. ಕಡುಕಷ್ಟದಿಂದಲೇ ಮೇಲೆದ್ದು ಬಂದು ಹಂತ ಹಂತವಾಗಿ ಬದುಕು ಕಟ್ಟಿಕೊಂಡಿರೋ ಅವರಿಗೆ ಶೋಕಿಗಾಗಿ ಸಿನಿಮಾ ಮಾಡೋದು ಬೇಕಿರಲಿಲ್ಲ. ಆದ್ದರಿಂದಲೇ ಅವರು ಬರೋಬ್ಬರಿ ಐವತ್ತಕ್ಕೂ ಹೆಚ್ಚು ಕಥೆಗಳನ್ನು ಕೇಳಿದ್ದರು. ವರ್ಷಗಟ್ಟಲೆ ನಡೆದ ಈ ಸತ್ವ ಪರೀಕ್ಷೆಯಲ್ಲಿ ಪಾಸ್ ಆದದ್ದು ನಿರ್ದೇಶಕ ಮಹೇಶ್ ಕುಮಾರ್ ಅವರ ಈ ರಗಡ್ ಸ್ಟೋರಿ!
ರಗಡ್ ಕಥೆ ಫೈನಲ್ ಆದ ಕಥೆ ಹೇಳೋದಕ್ಕಿಂತಲೂ ಮೊದಲು ನಿರ್ಮಾಪಕ ಅರುಣ್ ಕುಮಾರ್ ಸಾಗಿ ಬಂದ ದಾರಿಯನ್ನೊಮ್ಮೆ ಬಿಚ್ಚಿಡೋದೊಳಿತು. ಈವತ್ತಿಗೆ ಅರುಣ್ ಅವರು ಇರೋ ರೀತಿ ನೋಡಿದರೆ ಅವರು ಸ್ಥಿತಿವಂತ ಕುಟುಂಬದಲ್ಲಿಯೇ ಕಣ್ಬಿಟ್ಟವರೆಂಬ ಭಾವ ಕಾಡೋದು ಸಹಜವೇ. ಆದರೆ ಅವರು ಕಷ್ಟದ ದಿನಗಳನ್ನು ಕಾಣುತ್ತಾ, ಸಿಕ್ಕ ಸಿಕ್ಕ ದುಡಿಮೆ ಮಾಡುತ್ತಾ ಹಂತ ಹಂತವಾಗಿ ಮೇಲೇರಿ ಬಂದವರು. ೧೯೯೯ರವರೆಗೂ ಅರುಣ್ ಬೆಂಗಳೂರಿನ ರಾಜಾಜಿನಗರದ ಭಾಷ್ಯಂ ಸರ್ಕಲ್ ಏರಿಯಾದಲ್ಲಿ ಮನೆ ಮನೆಗೆ ಪೇಪರ್ ಹಾಕೋ ಕೆಲಸ ಮಾಡುತ್ತಿದ್ದರು ಅಂದರೆ ನಂಬಲೇ ಬೇಕು!
ಆ ನಂತರದಲ್ಲಿ ಟ್ರಾವೆಲ್ಸ್ ಕಂಪೆನಿಯೊಂದರಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡ ಅರುಣ್ ಅಲ್ಲೇ ಒಂದಷ್ಟು ವರ್ಷ ಕೆಲಸ ಮಾಡಿದ್ದರು. ಅಲ್ಲಿ ಅನುಭವ ಪಡೆದುಕೊಂಡು ೨೦೦೩ರಲ್ಲಿ ಸ್ವಂತದ ಟ್ರಾವೆಲ್ಸ್ ಬ್ಯುಸಿನೆಸ್ ಆರಂಭಿಸಿದ್ದರು. ಆರಂಭದಲ್ಲಿ ಈ ಕಂಪೆನಿ ಸಣ್ಣದಾಗಿಯೇ ಶುರುವಾಗಿತ್ತು. ಈವತ್ತಿಗೆ ಇವರ ಟ್ರಾವೆಲ್ಸ್ ಕಂಪೆನಿ ಲಕ್ಷರಿ ವಾಹನಗಳ ಮ್ಯೂಸಿಯಂನಂತಿದೆ. ಅದರಲ್ಲಿ ಆಡಿ, ಜಾಗ್ವಾರ್ ಸೇರಿದಂತೆ ಅರವತ್ತಾರು ಲಕ್ಷುರಿ ಕಾರುಗಳಿವೆ. ಹತ್ತು ಓಲ್ವೋ ವಾಹನಗಳಿವೆ!
ಹೀಗೆ ಟ್ರಾವೆಲ್ಸ್ ಕ್ಷೇತ್ರದಲ್ಲಿ ಯಶಸ್ವಿಯಾದ ನಂತರ ಫೈನಾನ್ಸ್ ಕಂಪೆನಿಯನ್ನೂ ಆರಂಭಿಸಿದ್ದ ಅರುಣ್ ಇಂದು ಎರಡು ಫೈನಾನ್ಸ್ ಕಂಪೆನಿಗಳ ಮಾಲೀಕರಾಗಿದ್ದಾರೆ. ಹೀಗೆ ಒಂದು ಹಂತ ತಲುಪುತ್ತಲೇ ಸಿನಿಮಾ ಮಾಡೋ ನಿರ್ಧಾರಕ್ಕೆ ಬಂದು ಬರೋಬ್ಬರಿ ಐವತ್ತು ಕಥೆ ಕೇಳಿದ್ದರಂತೆ. ಅದರಲ್ಲಿ ಮಹೇಶ್, ಸಂದೀಪ್, ಪ್ರಶಾಂತ್ ಅವರುಗಳ ಮೂರು ಕಥೆಯನ್ನು ಆರಿಸಿಕೊಂಡಿದ್ದರು. ತಾಯಿಯ ಮೇಲೆ ಅತೀವ ಮಮಕಾರ ಹೊಂದಿರೋ ಅರುಣ್ ಕುಮಾರ್ ಯಾವ ನಿರ್ಧಾರವನ್ನೇ ಆದರೂ ಅಮ್ಮನ ಸಮ್ಮುಖದಲ್ಲಿಯೇ ಕೈಗೊಳ್ಳುತ್ತಾ ಬಂದಿದ್ದಾರೆ. ಈ ಮೂರೂ ಕಥೆಗಳನ್ನು ಅವರು ಅಮ್ಮ ಅನಸೂಯ ಅವರಿಗೆ ಕೇಳಿಸಿದ್ದರು. ಅಮ್ಮನೇ ಮಹೇಶ್ ಅವರು ಹೇಳಿದ ಈ ರಗಡ್ ಕಥೆಯನ್ನು ಮೆಚ್ಚಿಕೊಂಡಿದ್ದರು. ಅದಾದಾಕ್ಷಣವೇ ರಗಡ್ ಚಿತ್ರಕ್ಕೆ ಚಾಲನೆ ಸಿಕ್ಕಿತ್ತು!
ಹಾಗೆ ಶುರುವಾದ ರಗಡ್ ಇದೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ತುಂಬಾ ಶ್ರದ್ಧೆಯಿಂದ ಒಳ್ಳೆ ಚಿತ್ರವನ್ನೇ ಮಾಡಿದ ಖುಷಿ ಮತ್ತು ಅದು ಜನರಿಗೆ ಇಷ್ಟವಾಗುತ್ತೆ, ಹಿಟ್ ಆಗುತ್ತೆ ಅನ್ನೋ ನಂಬಿಕೆ ಅರುಣ್ ಕುಮಾರ್ ಅವರಲ್ಲಿದೆ. ಕಷ್ಟದ ಹಿನ್ನೆಲೆ ಇದ್ದರೂ ಶ್ರದ್ಧೆಯಿಂದಲೇ ಗೆಲುವಿನ ಮೆಟ್ಟಿಲುಗಳನ್ನು ಏರಿ ನಿಂತಿರುವವರು ಅರುಣ್ ಕುಮಾರ್. ಅವರ ಬದುಕಿನ ಕಥೆಯೇ ಅವರ ಆಯ್ಕೆಗಳು ಸರಿಯಾಗಿರುತ್ತವೆಂಬುದಕ್ಕೆ ಉದಾಹರಣೆಯಂತಿದೆ. ಆದ್ದರಿಂದ ಅವರೇ ನಿರ್ಮಾಣ ಮಾಡಿರೋ ರಗಡ್ ಚಿತ್ರದ ಬಗ್ಗೆ ಭರವಸೆಯೂ ಹುಟ್ಟಿಕೊಳ್ಳುತ್ತದೆ. ಈ ಚಿತ್ರದ ಮೂಲಕವೇ ಅರುಣ್ ಕುಮಾರ್ ಅವರ ಸಿನಿಮಾ ಕನಸಿಗೆ ಭರ್ಜರಿ ಆರಂಭ ಸಿಗಲೆಂದು ಹಾರೈಸೋಣ…