ಕಾಡಂಚಿನಲ್ಲಿ ಬದುಕು ಸಾಗಿಸುವ ಜನರ ಮೇಲೆ ಸರ್ಕಾರದ ನೀತಿಗಳು, ಪೊಲೀಸರ ಕ್ರೌರ್ಯ, ಬದುಕು ಕಳೆದುಕೊಂಡವರನ್ನು ಆವರಿಸಿಕೊಳ್ಳುವ ಶೂನ್ಯತೆ, ನೊಂದವರ ಆಕ್ರೋಶ… ಇದೆಲ್ಲರ ಪರಿಣಾಮದಿಂದ ಏನೆಲ್ಲಾ ಘಟಿಸಬಹುದು ಅನ್ನೋದು ‘ರಗಡ್’ ಸಿನಿಮಾದ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬಡತನವೇನೇ ಇದ್ದರೂ ಆತ್ಮ ಶ್ರೀಮಂತಿಕೆಯಿಂದ ಬದುಕುವ ಕಾಡುವಾಸಿಗಳ ಮೇಲೆ ಅರಣ್ಯ ಇಲಾಖೆಯವರು ಕೊಡಬಾರದ ಕಷ್ಟ ಕೊಡುತ್ತಾರೆ. ಕಾಡು ಜನರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳನ್ನೆಸಗುತ್ತಾರೆ. ಹೀರೋ ಮತ್ತು ಆತನ ಸ್ನೇಹಿತರು ಫಾರೆಸ್ಟ್ ಪೊಲೀಸರ ದೌರ್ಜನ್ಯದ ವಿರುದ್ಧ ಬಂಡೆದ್ದು ನಿಲ್ಲುತ್ತಾರೆ. ಇದರ ಪರಿಣಾಮವಾಗಿ ಒಂದಿಡೀ ಸಮುದಾಯವನ್ನು ಸರ್ಕಾರ ಒಕ್ಕಲೆಬ್ಬಿಸಿ, ಅರಣ್ಯದಿಂದ ಹೊರಕ್ಕೆ ಬಿಸಾಕುತ್ತದೆ. ಅಲ್ಲಿಗೆ ಊರ ಜನರ ಬದುಕು ಬೀದಿಗೆ ಬಿದ್ದಂತಾಗುತ್ತದೆ. ಜೀವನವನ್ನರಸಿ ಒಬ್ಬೊಬ್ಬರೂ ಒಂದೊಂದು ಕಡೆ ನಡೆಯುತ್ತಾರೆ. ಹೀರೋ ಮತ್ತು ಆತಯನ ಗ್ಯಾಂಗು ಕೂಡಾ ದಿಕ್ಕಾಪಾಲಾಗಿ ಸಿಟಿ ಕಡೆ ವಲಸೆ ಬರುತ್ತಾರೆ. ಹಾಗೆ ಬಂದವರು ನಾಯಿ ಹಿಡಿಯೋ ಕೆಲಸದಿಂದ ತಲೆ ಹೊಡೆಯುವುದರ ತನಕದ ಕಸುಬು ಮಾಡಬೇಕಾಗುತ್ತದೆ. ತಮ್ಮದಲ್ಲದ ಕೆಲಸ ಮಾಡಿಸಿದ ರೌಡಿಪಡೆಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇದೆಲ್ಲದರಿಂದ ಬೇಸತ್ತ ರಗಡ್ ಗ್ಯಾಂಗು ಉಳ್ಳವರ ಲೂಟಿಗಿಳಿಯುತ್ತದೆ. ಈ ನಡುವೆ ದೇವಾಲಯವೊಂದರ ಅರ್ಚಕನ ಮಗಳಿಗೂ ನಯಕ ವಿನೋದ್ ಪ್ರಭಾಕರ್ಗೂ ನಡುವೆ ಪ್ರೀತಿ ಮೊಳೆಯುತ್ತದೆ. ಊರವರೆಲ್ಲಾ ಹಿಂದೆ ಬಿದ್ದು ಬೀಳಿಸಿಕೊಳ್ಳಲು ಹೊಂಚು ಹಾಕಿದರೂ, ಕ್ಯಾರೇ ಅನ್ನದವಳು ಮರಿಟೈಗರ್ಗೆ ಮನಸೋತು ಪ್ರೀತಿಯ ಹೊಂಡಕ್ಕೆ ಬೀಳುತ್ತಾಳೆ. ಕಾಯಿನ್ ಬೂತ್ ಫೋನಿಂದ ಶುರುವಾಗಿ ಮೊಬೈಲ್ ತನಕ ಪ್ರೀತಿ ಬೆಳೆಯುತ್ತಾ ಸಾಗುತ್ತದೆ.
ಇತ್ತ ತನ್ನೊಟ್ಟಿಗೆ ಗಂಟೆಗಟ್ಟಲೇ ಮಾತಾಡುತ್ತಾ, ದಿನಕ್ಕೊಂದು ಕಾರು ತಂದು ಪೇರಿ ಸುತ್ತಿಸುತ್ತಿರುವ ಹೀರೋ ಒಬ್ಬ ದರೋಡೆಕೋರ, ಕೊಲೆಗಾರ ಅನ್ನೋದು ಗೊತ್ತಾದರೆ ಇವರಿಬ್ಬರ ಪ್ರೀತಿಯಲ್ಲಿ ಏನೆಲ್ಲಾ ಘಟಿಸಬಹುದು? ಒಬ್ಬ ಕ್ರಿಮಿನಲ್ ಜೊತೆ ಸಂಪರ್ಕ ಹೊಂದಿರುವ ಕಾರಣಕ್ಕೆ ಆಕೆ ಬದುಕಿನಲ್ಲಿ ಏನೇನು ಸಮಸ್ಯೆಗಳು ಉದ್ಭವಿಸಬಹುದು? ಇವೆಲ್ಲದರ ನಡುವೆ ಪ್ರೀತಿ ಬದುಕುಳಿಯುತ್ತದಾ? ಇಂತಾ ಹತ್ತು ಹಲವು ಪ್ರಶ್ನೆಗಳಿಗೆ ‘ರಗಡ್’ ಉತ್ತರ ನೀಡುತ್ತದೆ.
ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ಶ್ರೀಮಹೇಶ್ ಗೌಡರಿಗೆ ಎಂಥದ್ದೇ ಕತೆ ಕೊಟ್ಟರೂ ಅದನ್ನು ಕಮರ್ಷಿಯಲ್ ಫಾರ್ಮುಲಾಗೆ ಒಗ್ಗಿಸಿ ಸಿನಿಮಾ ರೂಪದಲ್ಲಿ ಕಟ್ಟಿಕೊಡುವ ವಿಧ್ಯೆ ಸಿದ್ಧಿಸಿದಂತಿದೆ. ಈ ವರೆಗೂ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿದ್ದರಿಂದಲೋ ಏನೋ ಮಹೇಶ್ ಗೌಡ್ರು ಪ್ರತಿಯೊಂದು ದೃಶ್ಯವನ್ನೂ ವ್ಯಾಪಾರೀ ದೃಷ್ಟಿಯಿಂದಲೇ ರೂಪಿಸಿದಂತಿದೆ. ಸಾಕಷ್ಟು ಕಡೆ ಸಂಭಾಷಣೆ ಅತಿರಂಜಕ ಅನಿಸಿದರೂ ಅದು ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳಿಗಾಗಿ ಅನ್ನೋದು ಸ್ಪಷ್ಟವಾಗುತ್ತದೆ.
ಸಾಮಾನ್ಯವಾಗಿ ಆಕ್ಷನ್ ಹೀರೋಗಳ ಸಿನಿಮಾಗಳಲ್ಲಿ ಹೀಗೆ ಬಂದು ಹಾಗೆ ಕುಣಿದಾಡುತ್ತಾ ಹೋಗೋದು ಬಿಟ್ಟರೆ ನಾಯಕಿಯರಿಗೆ ಹೆಚ್ಚಿನ ಕೆಲಸ ಇರುವುದಿಲ್ಲ. ಆದರೆ ರಗಡ್ ನಲ್ಲಿ ಹೀರೋಗೆ ಎಷ್ಟು ಪ್ರಾಮುಖ್ಯತೆ ಇದೆಯೋ ಅದಕ್ಕೆ ಸರಿಸಮವಾಗಿ ನಾಯಕಿಗೂ ಇಂಪಾರ್ಟೆನ್ಸ್ ನೀಡಿದ್ದಾರೆ. ಸಾಹಸಪ್ರಧಾನ ಸಿನಿಮಾವಾದರೂ ಪ್ರೀತಿಯೇ ಇಲ್ಲಿ ಮೇಲಗೈ ಸಾಧಿಸುತ್ತದೆ. ಇದು ೨೦೦೭ನೇ ಇಸವಿಯಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಮಾಡಿರುವ ಸಿನಿಮಾ. ಹೀಗಾಗಿ ಎಲ್ಲವನ್ನೂ ಅಂದಿನ ದಿನಕ್ಕೆ ಒಗ್ಗುವಂತೆಯೇ ದೃಶ್ಯ ರೂಪಿಸುವಲ್ಲಿ ಛಾಯಾಗ್ರಾಹಕ ಜೈ ಆನಂದ್ ಗೆದ್ದಿದ್ದಾರೆ. ಸಂಗೀತ ನಿರ್ದೇಶಕ ಅಭಿಮನ್ ರಾಯ್ ನೀಡಿರುವ ಹಾಡುಗಳು ಕರ್ಣಾನಂದಗೊಳಿಸುತ್ತವೆ. ಆ ಮೂಲಕಜ ಅಭಿಮನ್ ರಾಯ್ ರಗಡ್ ಮೂಲಕ ಮತ್ತೊಂದು ಇನ್ನಿಂಗ್ಸ್ ಆರಂಭಿಸುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಎಬಿಸಿಡಿ ಹೊಡಿ ಬಡಿ ಕಡಿ ಅನ್ನೋ ಹಾಡನ್ನು ಈ ಮೊದಲೇ ನೋಡಿದ್ದವರ ಮನಸ್ಸಿನಲ್ಲಿ ಉದ್ಭವವಾದ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ನೀಡಲಾಗಿದೆ.
ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರೂ ಧಾರಾಳವಾಗಿ ಹೋಗಿ ನೋಡಬಹುದಾದ ಸಿನಿಮಾದ ಹೆಸರು ರಗಡ್!
No Comment! Be the first one.