ರಗಡ್‌ಗಾಗಿ ವಿನೋದ್ ಪ್ರಭಾಕರ್ ನಡೆಸಿದ್ದ ತಯಾರಿ ಹೀಗಿತ್ತು!

ವಿನೋದ್ ಪ್ರಭಾಕರ್ ಯಾವುದೇ ಸಿನಿಮಾಗಳಿಗಾದರೂ ಸಂಪೂರ್ಣ ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿಯುತ್ತಾರೆಂಬು ಗೊತ್ತಿರೋ ಸಂಗತಿ. ಆದರೆ ಇದೀಗ ಬಿಡುಗಡೆಗೆ ರೆಡಿಯಾಗಿರೋ ರಗಡ್ ಚಿತ್ರಕ್ಕಾಗಿ ಮಾತ್ರ ವಿನೋದ್ ಈ ಹಿಂದೆ ಎಂದೂ ಮಾಡಿರದಂಥಾ ಸಾಹಸಗಳನ್ನೆಲ್ಲ ಮಾಡಿ ಬಿಟ್ಟಿದ್ದಾರೆ. ಬಹುಶಃ ಅವರ ಎಯ್ಟ್ ಪ್ಯಾಕ್ ಮಾಡಿಕೊಂಡಿರೋ ವಿಚಾರವಷ್ಟೇ ಸದ್ದು ಮಾಡಿದೆ. ಆದರೆ ಸುದ್ದಿಯಾಗದ ಇನ್ನೊಂದಷ್ಟು ವಿಚಾರಗಳಿವೆ. ರಗಡ್ ಚಿತ್ರ ಕೊಂಚ ತಡವಾಗಿದ್ದಕ್ಕೂ ಆ ಇಂಟರೆಸ್ಟಿಂಗ್ ವಿಚಾರಗಳಿಗೂ ನೇರಾನೇರ ಸಂಬಂಧವಿದೆ.

ಅರುಣ್ ಕುಮಾರ್ ನಿರ್ಮಾಣ ಮಾಡಿರೋ ರಗಡ್ ಚಿತ್ರವನ್ನು ಮಹೇಶ್ ನಿರ್ದೇಶನ ಮಾಡಿದ್ದಾರೆ. ಇದರಲ್ಲಿನ ಪಾತ್ರಕ್ಕೆ ಸಮರ್ಪಣಾ ಮನೋಭಾವದಿಂದ, ಉತ್ಸಾಹದಿಂದ ಅಣಿಗೊಳ್ಳುವಂತ ನಾಯಕನೇ ಆಗಬೇಕಿತ್ತು. ಆದ್ದರಿಂದಲೇ ರಗಡ್ ಆಗಿರೋ ಈ ಕಥೆಗೆ ವಿನೋದ್ ಪ್ರಭಾಕರ್ ಫಿಕ್ಸ್ ಆಗಿದ್ದರು.

ಸಾಮಾನ್ಯವಾಗಿ ಕನ್ನಡದಲ್ಲಿ ಸಿಕ್ಸ್ ಪ್ಯಾಕ್ ಹೀರೋಗಳೇ ಕಡಿಮೆ. ಅಂಥಾದ್ದರಲ್ಲಿ ಈ ಚಿತ್ರಕ್ಕಾಗಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ವಿನೋದ್ ಎಯ್ಟ್ ಪ್ಯಾಕ್ ಮಾಡಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ. ಇನ್ನುಳಿದಂತೆ ಈ ಸಿನಿಮಾಕ್ಕಾಗಿ ಮತ್ತೊಂದು ಸಾಹಸವನ್ನೂ ವಿನೋದ್ ಪ್ರಭಾಕರ್ ಮಾಡಿದ್ದಾರೆ. ಇದರಲ್ಲಿ ನಾಯಕ ನೀರೊಳಗೇ ಇಪ್ಪತ್ತು ಸೆಕೆಂಡ್ ಯೋಗ ಮಾಡೋ ಸೀನೊಂದಿದೆ. ಅದಕ್ಕೆ ಗ್ರಾಫಿಕ್ಸ್ ಬಳಸೋದು ನಿರ್ಮಾಪಕರಿಗಾಗಲಿ ನಿರ್ದೇಶಕರಿಗಾಗಲಿ ಇಷ್ಟವಿರಲಿಲ್ಲ.

ಆದರೆ ವಿನೋದ್ ಪ್ರಭಾಕರ್ ಅವರಿಗೆ ಸ್ವಿಮ್ಮಿಂಗೇ ಬರುತ್ತಿರಲಿಲ್ಲ. ಆದರೂ ಅವರು ದೃಷ್ಯ ಸಹಜವಾಗಿ ಮೂಡಿ ಬರಲಿ ಅನ್ನೋ ಕಾರಣದಿಂದ ಮಾಡೋದಾಗಿ ಒಪ್ಪಿಕೊಂಡಿದ್ದರಂತೆ. ಚೆನೈಗೆ ತೆರಳಿ ಎರಡು ತಿಂಗಳ ಕಾಲ ತರಬೇತಿಯನ್ನೂ ಪಡೆದು ಬಂದಿದ್ದ ವಿನೋದ್ ಪ್ರಭಾಕರ್ ಆ ಅಂಡರ್ ವಾಟರ್ ಸೀನನ್ನು ಯಶಸ್ವಿಯಾಗಿ ಮಾಡಿದ್ದರಂತೆ.

ಹೀಗೆ ವರ್ಷಾಂತರಗಳ ಕಾಲ ನಾನಾ ಸವಾಲುಗಳಿಗೆ, ಹೊಸಾ ಕಲಿಕೆಗೆ ಒಡ್ಡಿಕೊಂಡೇ ವಿನೋದ್ ಈ ಚಿತ್ರವನ್ನು ಮುಗಿಸಿಕೊಂಡಿದ್ದಾರೆ. ಈಗ ಈ ಸಿನಿಮಾ ಮೇಲೆ ಹುಟ್ಟಿಕೊಂಡಿರೋ ಕ್ರೇಜ್ ನೋಡಿದರೆ, ಖಂಡಿತಾ ವಿನೋದ್ ಸೇರಿದಂತೆ ಇಡೀ ತಂಡದ ಪರಿಶ್ರಮ ಭರಪೂರ ಗೆಲುವೊಂದರ ಮೂಲಕ ಸಾರ್ಥಕವಾಗೋ ಸ್ಪಷ್ಟ ಸೂಚನೆಗಳಿವೆ.


Posted

in

by

Tags:

Comments

Leave a Reply