ಇಡೀ ಜಗತ್ತು ಮೊನ್ನೆಮೊನ್ನೆಯಷ್ಟೇ ಮಹಿಳಾ ದಿನಾಚರಣೆಯನ್ನು ಹೆಮ್ಮೆಯಿಂದ ಆಚರಿಸಿದೆ. ಇದೇ ಹೊತ್ತಿನಲ್ಲಿ ಇಲ್ಲೊಬ್ಬ ಹೆಂಗಸು ಮಹಿಳೆಯರ ಕುಲಕ್ಕೇ ಅಪಮಾನ ಎಸಗುವ ಕೆಲಸ ಮಾಡಿ ಛೀಮಾರಿ ಹಾಕಿಸಿಕೊಂಡಿದ್ದಾಳೆ. ಆಕೆಯ ಹೆಸರು ಪ್ರಿಯದರ್ಶಿನಿ ವಿ.ಡಿ. ಈಕೆಯ ಸಹವಾಸ ಮಾಡಿ ಪಡಬಾರದ ಪಾಡು ಪಟ್ಟವರು ರೂಪೇಶ್ ಬಿ.ಎನ್.
ಬೆಂಗಳೂರು ಮೂಲದವರು ರೂಪೇಶ್. ಸರಿಸುಮಾರು 2005ರಿಂದ ಆಸ್ಟ್ರೇಲಿಯಾದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿ ತಮ್ಮದೇ ಆದ ವ್ಯವಹಾರ ಹೊಂದಿರುವ ರೂಪೇಶ್ ಅವರಿಗೆ ಮೊದಲಿನಿಂದಲೂ ಕನ್ನಡ ಚಿತ್ರಗಳೆಂದರೆ ಅಪಾರ ಒಲವು. ಕರ್ನಾಟಕದಲ್ಲಿ ಹೆಸರು ಮಾಡಿದ ಸಿನಿಮಾಗಳನ್ನು ಆಸ್ಟ್ರೇಲಿಯಾದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸುವುದು ಇವರ ಹವ್ಯಾಸವಾಗಿತ್ತು. ಕ್ರಮೇಣ ಈ ಹವ್ಯಾಸ ಪ್ರವೃತ್ತಿಯಾಗಿಯೂ ಮಾರ್ಪಟ್ಟಿತು. 2009ರಿಂದ ಕನ್ನಡ ಸೇರಿದಂತೆ ಭಾರತೀಯ ಸಿನಿಮಾಗಳ ವಿತರಣೆಯ ಹಕ್ಕು ಪಡೆಯುತ್ತಿದ್ದ ರೂಪೇಶ್ ಅಲ್ಲಿನ ಚಿತ್ರಮಂದಿರಗಳಲ್ಲಿ ಪ್ರದರ್ಶನ ಆಯೋಜಿಸುತ್ತಿದ್ದರು. ಇದು ಒಂದು ಮಟ್ಟಿಗೆ ಲಾಭವನ್ನೂ ತಂದುಕೊಡುತ್ತಿತ್ತು. ಬರಿಯ ಸಿನಿಮಾ ಪ್ರದರ್ಶನಗಳು ಮಾತ್ರವಲ್ಲದೆ, ಇಲ್ಲಿನ ಗಾಯಕರನ್ನು ಕರೆಸಿ ಸಂಗೀತ ರಸಸಂಜೆಗಳನ್ನೂ ಏರ್ಪಡಿಸುತ್ತಿದ್ದರು. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಕನ್ನಡಿಗರು ಈ ಕಾರ್ಯಕ್ರಮಗಳಲ್ಲಿ ಪ್ರೀತಿಯಿಂದ ಬಂದು ಭಾಗವಹಿಸುತ್ತಿದ್ದರು. ಇಂಥದ್ದೇ ಒಂದು ಪ್ರೋಗ್ರಾಮಿನಲ್ಲಿ ರೂಪೇಶ್ ಅವರಿಗೆ ಪರಿಚಯವಾದವಳು ಪ್ರಿಯದರ್ಶಿನಿ. ಈಕೆ ಕೂಡಾ ಮದುವೆಯಾಗಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವಾಕೆ. ರೂಪೇಶ್ ಮತ್ತು ಪ್ರಿಯದರ್ಶಿನಿ ಇಬ್ಬರ ಮಾವಂದಿರೂ ಬೆಂಗಳೂರಿನ ರಾಜಾಜಿನಗರ ಆರ್ ಟಿ ಓ ಕಛೇರಿಯಲ್ಲಿ ಒಟ್ಟಿಗೇ ಕೆಲಸ ಮಾಡುತ್ತಿದ್ದುದು ಇವರು ಬಹುಬೇಗ ಆತ್ಮೀಯರಾಗಲು ಕಾರಣವಾಗಿತ್ತು.
ಪರಿಚಯ ಕ್ರಮೇಣ ಆತ್ಮೀಯತೆಯ ಹಂತ ತಲುಪಿತ್ತು. ಈ ಸಂದರ್ಭದಲ್ಲಿ ರೂಪೇಶ್ ಅವರೊಂದಿಗೆ ವಿತರಣೆಯಲ್ಲಿ ಕೈಜೋಡಿಸುವ ಹುಮ್ಮಸ್ಸು ತೋರಿದ್ದಳು ಪ್ರಿಯದರ್ಶಿನಿ. ಅಲ್ಲಿಂದ ಇಬ್ಬರ ಜಂಟಿ ವ್ಯವಹಾರ ಕೂಡಾ ಶುರುವಾಯಿತು. ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಅದಾಗಲೇ ಕನ್ನಡದ ನೂರಕ್ಕೂ ಅಧಿಕ ಸಿನಿಮಾಗಳು ಮತ್ತು ಇತರೆ ಭಾಷೆಯ ಐವತ್ತು ಚಿತ್ರಗಳನ್ನು ವಿತರಿಸಿ ಯಶಸ್ವೀ ವಿತರಕ ಎನಿಸಿಕೊಂಡಿದ್ದ ರೂಪೇಶ್, ಪ್ರಿಯದರ್ಶಿನಿ ಪಾಲುದಾರಿಕೆಯಲ್ಲಿ ದಿ ವಿಲನ್, ಕಥೆಯೊಂದು ಶುರುವಾಗಿದೆ, ರಾಂಬೋ 2 , ಪ್ರೀಮಿಯರ್ ಪದ್ಮಿನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಮಲಯಾಳಂನ ಕಾಯಂಕುಲಂ ಕೊಚುನ್ನಿ, ತೊಂಡಿಮುತಲುಂ ದೃಕ್ಷಸಾಕ್ಷಿಯುಂ ಸಿನಿಮಾಗಳನ್ನು ವಿತರಿಸಿದರು. ಬಹುತೇಕ ಚಿತ್ರಗಳು ಯಶಸ್ವೀ ಪ್ರದರ್ಶನ ಕಂಡವು. ಆದರೆ ಮಲಯಾಳಂನ ʻಶುಭ ರಾತ್ರಿʼ ಎನ್ನುವ ಸಿನಿಮಾ ನಿರೀಕ್ಷಿಸಿದ ಲಾಭವನ್ನು ಮಾಡಲಿಲ್ಲ. ವ್ಯಾಪಾರ ಅಂದಮೇಲೆ ಲಾಭ ನಷ್ಟ ಸಹಜ. ಇಲ್ಲಿ ಆಗಿದ್ದೂ ಅದೇ. ʻಶುಭರಾತ್ರಿʼ ಚಿತ್ರದ ವಿತರಣೆಯಿಂದ ಪಾಲುದಾರರಿಗೆ ಪರಸ್ಪರ ನಾಲ್ಕು ಲಕ್ಷ ಲುಕ್ಸಾನಾಗಿತ್ತು. ಆದರೆ, ನಷ್ಟವನ್ನು ತುಂಬಿಕೊಡುವಂತೆ ಪ್ರಿಯದರ್ಶಿನಿ ರೂಪೇಶ್ ಅವರಿಗೆ ಪೀಡಿಸಲು ಶುರು ಮಾಡಿದಳು. ಅಲ್ಲಿಗೆ ಇಬ್ಬರ ನಡುವಿನ ಪಾಲುದಾರಿಕೆಯಲ್ಲಿ ಸಂಪೂರ್ಣ ಬಿರುಕು ಏರ್ಪಟ್ಟಿತ್ತು.
ಇದೇ ಹೊತ್ತಿನಲ್ಲಿ ರೂಪೇಶ್ ಮತ್ತು ಪ್ರಿಯದರ್ಶಿನಿ ಪ್ರತ್ಯೇಕವಾಗಿ ಬೆಂಗಳೂರಿಗೆ ಬಂದಿದ್ದರು. ಇದೇ ಹೊತ್ತಿನಲ್ಲಿ ವ್ಯವಹಾರದ ಕುರಿತು ಮಾತಾಡಲು 2020ರ ಮಾರ್ಚ್ 5ರಂದು ಮಲ್ಲೇಶ್ವರಂನ ಕೆಫೆ ಕಾಫಿ ಡೇಗೆ ಬರುವಂತೆ ಆಕೆ ಹೇಳಿದ್ದಳು. ರೂಪೇಶ್ ಕೂಡಾ ಸಹಜವಾಗಿಯೇ ಅಲ್ಲಿಗೆ ಹೋಗಿದ್ದರು. ಅಲ್ಲಿ ರೂಪೇಶ್ ಅವರಿಗೆ ನಿಜಕ್ಕೂ ಆಘಾತ ಅನುಭವಿಸುವಂತ ಘಟನೆಯೇ ನಡೆದುಹೋಯ್ತು. ನಂದಿನಿ ಲೇಔಟ್ ಠಾಣೆಯಲ್ಲಿ ರೂಪೇಶ್ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 384 ಮತ್ತು 506 ರ ಅಡಿ ಪ್ರಿಯದರ್ಶಿನಿ ದೂರು ದಾಖಲಿಸಿದ್ದಳು. ಒಬ್ಬ ಗೃಹರಕ್ಷಕ ದಳ ಮತ್ತು ಇಬ್ಬರು ಪೇದೆಗಳೊಂದಿಗೆ ಅಲ್ಲಿಗೆ ಆಗಮಿಸಿದ್ದ ಪ್ರಿಯದರ್ಶಿನಿ, ರೂಪೇಶ್ ಅವರನ್ನು ಬಂಧನಕ್ಕೆ ಒಳಪಡಿಸಿದಳು. ರೂಪೇಶ್ ವಿರುದ್ಧ ಎಫ್ ಐ ಆರ್ ಕೂಡಾ ದಾಖಲಾಯಿತು. ಸಹಜವಾಗಿಯೇ ಈ ವಿಚಾರ ಕನ್ನಡದ ಬಹುತೇಕ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಪ್ರಿಯದರ್ಶಿನಿ ಅದೆಂಥಾ ಚಾಲಾಕಿ ಹೆಂಗಸು ಗೊತ್ತಾ? ರೂಪೇಶ್ ಅವರ ಮಾನಹಾನಿ ಮಾಡಿ, ಅವರ ವ್ಯಕ್ತಿತ್ವಕ್ಕೆ ಸಂಚಕಾರ ತರುವ ಎಲ್ಲ ಷಡ್ಯಂತ್ರವನ್ನೂ ವ್ಯವಸ್ಥಿತವಾಗಿ ರೂಪಿಸಿದ್ದಳು. ರೂಪೇಶ್ ಅರೆಸ್ಟ್ ಆಗಿ, ಠಾಣೆಯ ಸೆಲ್ಲಿನಲ್ಲಿದ್ದ ಫೋಟೋವನ್ನು ಹೋಂ ಗಾರ್ಡ್ ರಾಜೇಶ್ ಮೂಲಕ ತೆಗೆಸಿಕೊಂಡಿದ್ದಳು. ಈ ಫೋಟೋವನ್ನೂ ಮಾಧ್ಯಮ ಮತ್ತು ರೂಪೇಶ್ ಸ್ನೇಹವಲಯಕ್ಕೆ ತಲುಪುವಂತೆ ಮಾಡಿದ್ದಳು.
ಇನ್ನು ತಾನು ದಾಖಲಿಸಿದ್ದ ದೂರಿನಲ್ಲಿ ಇಲ್ಲಸಲ್ಲದ, ಸತ್ಯಕ್ಕೆ ದೂರವಾದ ಕಲ್ಪಿತ ಕತೆಯನ್ನೇ ಬರೆದುಕೊಟ್ಟಿದ್ದಳು. ʻʻಕಾರ್ಯಕ್ರಮವೊಂದಕ್ಕೆ ಮೆಲ್ಬೋರ್ನ್ನ ಹೊಟೇಲಿನಲ್ಲಿ ರೂಪೇಶ್ ಅವರನ್ನು ಭೇಟಿಯಾಗಿದ್ದೆ. ಅಲ್ಲಿ ಮತ್ತು ಬರುವ ಔಷಧಿ ಬೆರೆಸಿದ್ದ ಪಾನೀಯ ಕುಡಿಸಿದ್ದರು. ಬಲವಂತವಾಗಿ ಹುಕ್ಕಾ ಸೇದಿಸಿದ್ದರು. ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು. ಅದರ ಫೋಟೋ ಮತ್ತು ವಿಡಿಯೋಗಳನ್ನು ಸಹಾ ತೆಗೆದುಕೊಂಡಿದ್ದರು. ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಹಾಗೂ ಹಣ ನೀಡುವಂತೆ ಪದೆ ಪದೇ ಒತ್ತಾಯಿಸುತಿದ್ದರು. ಒಂದು ವೇಳೆ ನನ್ನ ಬಯಕೆ ಈಡೇರಿಸದಿದ್ದರೆ ಫೋಟೋ ಹಾಗೂ ವಿಡಿಯೋವನ್ನು ಪತಿಗೆ ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು. ಇದರಿಂದ ಬೇಸತ್ತು, ಬೆಂಗಳೂರಿಗೆ ಬಂದು ಮಾವನ ಮನೆಯಲ್ಲಿ ಉಳಿದುಕೊಂಡಿದ್ದೆ. ಪುನಃ ಬೆಂಗಳೂರಿಗೂ ಬಂದು ಕಿರುಕುಳ ನೀಡಲಾರಂಭಿಸಿದ್ದರು. ʻಹಣ ಕೊಡು ಅಥವಾ ಲೈಂಗಿಕವಾಗಿ ಸಹಕರಿಸುʼ ಎಂದು ಪೀಡಿಸುತ್ತಿದ್ದರು…” ಎಂಬಿತ್ಯಾದಿಯಾಗಿ ಸುಳ್ಳು ಪ್ರಸಂಗಗಳನ್ನು ಸೃಷ್ಟಿಸಿ ರೂಪೇಶ್ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಳು. ಪ್ರಕರಣವನ್ನು ದಾಖಲಿಸಿಕೊಂಡು, ರೂಪೇಶ್ ಅವರನ್ನು ಬಂಧಿಸಿದ ಪೊಲೀಸರು ವಿಚಾರಣೆ ಮುಂದುವರೆಸಿದಾಗ ಇವೆಲ್ಲವೂ ಕಲ್ಪಿತ ಕತೆಗಳು ಅನ್ನೋದು ಸ್ವತಃ ಪೊಲೀಸರಿಗೆ ಮನವರಿಕೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ʻಇದು ಸುಳ್ಳು ಆರೋಪದಿಂದ ಕೂಡಿದ ದೂರುʼ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದರು.
ಇಷ್ಟೆಲ್ಲಾ ಆಗುವ ಹೊತ್ತಿಗೆ ರೂಪೇಶ್ ಮತ್ತು ಅವರ ಕುಟುಂಬ ಅನುಭವಿಸಿದ ಯಾತನೆ, ಸಂಕಷ್ಟಗಳು ಅಷ್ಟಿಷ್ಟಲ್ಲ. ತಮ್ಮ ಮಕ್ಕಳು ಕನ್ನಡ ಶಾಲೆಯಲ್ಲೇ ಓದಬೇಕು ಅಂತಾ ಆಸ್ಟ್ರೇಲಿಯಾದ ಶಾಲೆಯೊಂದಕ್ಕೆ ಸೇರಿಸಿದ್ದರು ರೂಪೇಶ್. ಸುಳ್ಳು ದೂರಿನ ಕಾರಣಕ್ಕೆ ಮಕ್ಕಳನ್ನು ಶಾಲೆ ಬಿಡಿಸಬೇಕಾದ ಪ್ರಸಂಗ ಎದುರಾಯಿತು. ಮಾಡದ ತಪ್ಪಿಗಾಗಿ ಸಾಮಾಜಿಕವಾಗಿ ಅವಮಾನ ಅನುಭವಿಸಬೇಕಾಯಿತು. ಸಹಜವಾಗೇ ಇದು ಅವರ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿತು. ಆರ್ಥಿಕ ನಷ್ಟಕ್ಕೆ ಒಳಗಾದರು. ಇಂಥದ್ದೊಂದು ಆರೋಪ ನೆತ್ತಿಯ ಮೇಲಿರುವಾಗ ಸಿನಿಮಾ ವಿತರಣೆ ಕೆಲಸವನ್ನೂ ಮಾಡಲು ಸಾಧ್ಯವಾಗಲಿಲ್ಲ. ಈಗ ನ್ಯಾಯಾಲಯದಲ್ಲಿ ರೂಪೇಶ್ ಬಿ.ಎನ್. ಅವರು ನಿರ್ದೋಶಿ ಅಂತಾ ಸಾಬೀತಾಗಿದೆ. ತಮಗಾದ ಮಾನಹಾನಿಗೆ ಒಂದು ಕೋಟಿ ರೂಪಾಯಿಗಳ ಮಾನನಷ್ಟ ಮೊಕ್ಕದ್ದಮೆಯನ್ನೂ ದಾಖಲಿಸಿದ್ದಾರೆ.
ನ್ಯಾಯವನ್ನು ಎತ್ತಿಹಿಡಿಯಲು ಬಳಸುವ ಕಾನೂನನ್ನು ತನ್ನ ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಂಡ ಮತ್ತು ಪ್ರಾಮಾಣಿಕ ವ್ಯಕ್ತಿಯ ಮೇಲೆ ಸುಳ್ಳು ದೂರು ದಾಖಲಿಸಿದ್ದ ಕಾರಣಕ್ಕೆ ಪ್ರಿಯದರ್ಶಿನಿಗೆ ನ್ಯಾಯಾಲಯ ಛೀಮಾರಿ ಹಾಕಿದೆ. ಇನ್ನಾದರೂ ಪ್ರಿಯದರ್ಶಿನಿಯಂಥಾ ಹೆಣ್ಣುಮಕ್ಕಳು ಇಂಥಾ ನೀಚತನದ ಬುದ್ಧಿಯನ್ನು ಬಿಡುವಂತಾಗಲಿ…!
No Comment! Be the first one.