ದುಷ್ಟರನ್ನು ಕಾನೂನಿನ ಪರಿಧಿಯಲ್ಲೇ ಶಿಕ್ಷಿಸಬೇಕು ಎನ್ನುವ ಒಬ್ಬ ಪೊಲೀಸ್ ಅಧಿಕಾರಿ. ಅದೇ ದುಷ್ಟರ ಜೀವವನ್ನು ಹೆಚ್ಚು ಹೊತ್ತು ಉಳಿಸದೇ ಸಿಕ್ಕಸಿಕ್ಕಂತೇ ಎನ್‍ಕೌಂಟರ್ ಮಾಡಿ ಸದೆಬಡೆಯಬೇಕು ಅನ್ನೋದು ಮತ್ತೊಬ್ಬ ಅಧಿಕಾರಿಯ ರೀತಿ. ಆದರೆ ಖಾಸಗಿಯಾಗಿ ಇಬ್ಬರೂ ಪರಮ ಸ್ನೇಹಿತರು. ಹಾಗೆ ಕಾನೂನು ಪಾಲಿಸುವ ಖಾಕಿ ತೊಟ್ಟ ಅಧಿಕಾರಿಯಾಗಿ ವಿವೇಕ್ ಒಬೆರಾಯ್ ಮತ್ತು ಆ್ಯಂಗ್ರಿ ಆಫೀಸರ್ ಆಗಿ ಶಿವರಾಜ್ ಕುಮಾರ್ ನಟಿಸಿದ್ದಾರೆ.

ಕರ್ನಾಟಕದಿಂದ ಬಿಹಾರದ ತನಕಾ ಹರಡಿಕೊಂಡ ಕತೆ, ಐಎಎಸ್ ಅಧಿಕಾರಿಯ ಕಣ್ಮರೆ, ರಾಜಕಾರಣಿಗಳ ಅರಾಜಕತೆ, ಅಕ್ರಮಗಳು ಮತ್ತು ಫ್ಯಾಮಿಲಿ, ಸೆಂಟಿಮೆಂಟು… ಹೀಗೆ ಒಂದು ಕಮರ್ಷಿಯಲ್ ಸಿನಿಮಾ ಅನ್ನಿಸಿಕೊಳ್ಳಲು ಬೇಕಾದ ಎಲ್ಲ ಬಗೆಯ ಎಲಿಮೆಂಟುಗಳೂ ಸೇರಿಕೊಂಡಿರುವ ಸಿನಿಮಾ ರುಸ್ತುಂ. ಇತ್ತೀಚೆಗೆ ಹೊಸತನದ ಹೆಸರಲ್ಲಿ ಕಥೆಯನ್ನು ಹೇಳುವ ಧಾಟಿಯಲ್ಲೇ ಸಾಕಷ್ಟು ಗೊಂದಲ ಹುಟ್ಟಿಸುವ ಟ್ರೆಂಡ್ ಚಾಲ್ತಿಯಲ್ಲಿದೆ. ಆದರಿಲ್ಲಿ ಯಾವ ಗೋಜಲುಗಳೂ ಏರ್ಪಡದಂತೆ ಅಚ್ಚುಕಟ್ಟಾಗಿ, ನೇರವಾಗಿ ಕಥೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಈವರೆಗಿನ ಸಿನಿಮಾಗಳಿಗಿಂತ ಭಿನ್ನ ಎನ್ನಿಸುವ ಬಾಡಿ ಲಾಂಗ್ವೇಜು, ಡೈಲಾಗ್ ಡೆಲಿವರಿಗಳಿಂದ ಹ್ಯಾಟ್ರಿಕ್ ಹೀರೋ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತರಾಗಿದ್ದಾರೆ.

ದೊಡ್ಡ ತಾರಾಗಣದ, ಅದ್ಭುತ ತಾಂತ್ರಿಕತೆಯನ್ನು ಒಳಗೊಂಡಿರುವ ಸಿನಿಮಾ ರುಸ್ತುಂ. ಮಹೇಂದ್ರ ಸಿಂಹ ಅವರ ಕ್ಯಾಮೆರಾ ಕೆಲಸ ಪ್ರತೀ ದೃಶ್ಯಗಳನ್ನೂ ಕಣ್ಣೆದುರಿಗೆ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದೆ. ಹೇಳಿ ಕೇಳಿ ಸಾಹಸ ನಿರ್ದೇಶಕ ರವಿವರ್ಮಾ ನಿರ್ದೇಶನದ ಮೊದಲ ಚಿತ್ರ ಇದಾಗಿರುವುದರಿಂದ ಆ್ಯಕ್ಷನ್’ಗೆ ಹೆಚ್ಚು ಜಾಗ ಕೊಟ್ಟಿದ್ದಾರೆ. ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡುವುದರಲ್ಲಿ ಮಾತ್ರವಲ್ಲ ಭಾವುಕ ಕ್ಷಣಗಳನ್ನೂ ಪ್ರೇಕ್ಷಕರೆದೆಗೆ ಸರಾಗವಾಗಿ ದಾಟಿಸಬಲ್ಲೆ ಅನ್ನೋದನ್ನ ರವಿವರ್ಮಾ ನಿರೂಪಿಸಿದ್ದಾರೆ. ತಪ್ಪು ಮಾಡುವವರನ್ನು ಬೆನ್ನಟ್ಟಿ ಶಿಕ್ಷೆಗೊಳಪಡಿಸುವ ಪೊಲೀಸ್ ಸ್ಟೋರಿಗಳು ಕನ್ನಡದಲ್ಲಿ ಲಾಟು ಲಾಟು ಬಂದಿವೆಯಾದರೂ ರುಸ್ತುಂ ಅಂಥಾ ಸಿನಿಮಾಗಳಲ್ಲೇ ಭಿನ್ನ ಎನಿಸಿಕೊಳ್ಳುತ್ತದೆ. ಸಿನಿಮಾದ ಸಂಭಾಷಣೆ ಮತ್ತು ಸಂಗೀತ ಕೂಡಾ ಕಥೆಯಂತೆಯೇ ಖಡಕ್ಕಾಗಿದೆ. ರುಸ್ತುಂ ಸಿನಿಮಾದ ಮೂಲಕ ಶಿವಣ್ಣ ಐಪಿಎಸ್ ಅಭಿಷೇಕ್ ಭಾರ್ಗವ್ ಆಗಿ ಜನರ ಮನಸ್ಸಿನಲ್ಲುಳಿಯುತ್ತಾರೆ. ಒಟ್ಟಾರೆ ಸಿನಿಮಾವನ್ನು ನೋಡಿದಾಗ ನಿರ್ದೇಶಕ ರವಿವರ್ಮಾ ಕಮರ್ಷಿಯಲ್ ಫಾರ್ಮುಲಾ ಸಿನಿಮಾಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಅನ್ನಿಸುತ್ತಾರೆ. ಮೊದಲಾರ್ಧ ಒಂದಿಷ್ಟು ಎಳೆದಂತೆ ಕಂಡರೂ ದ್ವಿತೀಯಾರ್ಧ ಶಿವಣ್ಣನ ಅಭಿಮಾನಿಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ರೂಪಿಸಿದಂತಿದೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕರುಳ್ ಚುರುಕ್ ಎನಿಸುವ ಚರ್ಮದ ದಂಧೆಯ ಸುತ್ತಾ…

Previous article

ಹಸೆಮಣೆ ಏರಿದ ಆರ್ತಿ ಛಾಬ್ರಿಯಾ!

Next article

You may also like

Comments

Leave a reply

Your email address will not be published. Required fields are marked *