ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ. ಅವರೀಗ ಶಿವಣ್ಣ ಮುಖ್ಯ ಭೂಮಿಕೆಯಲ್ಲಿರೋ ರುಸ್ತುಂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ತಾರೆಯರ ದಂಡು ನೆರೆಯುವಂತೆಯೂ ಮಾಡುತ್ತಿದ್ದಾರೆ!
ಬಾಲಿವುಡ್ ನಟ ವಿವೇಕ್ ಒಬೇರಾಯ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರೋದು ಗೊತ್ತಿರೋ ವಿಚಾರವೇ. ಇದೀಗ ರುಸ್ತುಂ ಅಡ್ಡೆಗೆ ಮತ್ತೋರ್ವ ಬಾಲಿವುಡ್ ನಟಿಯ ಆಗಮನವಾಗಿದೆ. ಹಾಗೆ ಬಂದವಳು ಮಾದಕ ಚೆಲುವೆ ಸಾಕ್ಷಿ ಚೌಧರಿ!
ಸಾಕ್ಷಿ ಚೌಧರಿ ಬಂದಿರೋದು ಹಾಡೊಂದಕ್ಕೆ ಕುಣಿಯುವುದಕ್ಕಾಗಿ. ಎಪಿ ಅರ್ಜುನ್ ಬರೆದಿರೋ ‘ಕಬ್ಬಿನ ಹಾಲು ಮಾರೋಕಂತ ಮಂಡ್ಯದಿಂದ ಬಂದಿದ್ದೀನಿ’ ಎಂಬ ಹಾಡಿಗೆ ಈಕೆ ಕುಣಿಯಲಿದ್ದಾಳೆ. ಈ ಹಾಡು ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ಇದಕ್ಕೆ ರಾಜು ಸುಂದರಂ ನೃತ್ಯ ನಿರ್ದೇಶನ ಮಾಡಲಿದ್ದಾರೆ.
ರುಸ್ತುಂ ಚಿತ್ರದಲ್ಲಿ ಶಿವಣ್ಣನ ಪಾತ್ರ, ಅವರ ಲುಕ್ಕು ಸೇರಿದಂತೆ ಎಲ್ಲವೂ ಸಂಚಲನವನ್ನೇ ಸೃಷ್ಟಿಸಿವೆ. ಇದರಲ್ಲಿ ವಿವೇಕ್ ಒಬೇರಾಯ್ ನಟಿಸೋ ಮೂಲಕ ಮೊದಲ ಸಲ ಕನ್ನಡಕ್ಕೆ ಬಂದಿದ್ದಾರೆ. ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ಮುಂತಾದವರೂ ನಟಿಸಿದ್ದಾರೆ. ತಾರಾಗಣ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಕೂಡಾ ರುಸ್ತುಂ ಚಿತ್ರವನ್ನು ರವಿವರ್ಮಾ ರಿಚ್ ಆಗಿಯೇ ರೂಪಿಸೋ ಪಣ ತೊಟ್ಟಿದ್ದಾರೆ.
#
No Comment! Be the first one.