ಇಲ್ಲಿ ತಿರುವುಗಳೇ ತಿರುಳು!

ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಕೆಲಸಕ್ಕೆ ಸೇರಿದ ಹೆಣ್ಣುಮಗಳು. ಮನೆಯವರ ವಿರೋಧದ ನಡುವೆ ಅನ್ಯ ಜಾತಿ ಹುಡುಗನನ್ನು ಮದುವೆಯಾಗುತ್ತಾಳೆ. ನವಜೋಡಿ ಅದೊಮ್ಮೆ ಇದ್ದಕ್ಕಿದ್ದಂತೆ ಮಾಯವಾಗುತ್ತದೆ. ʻಬಾʼ ಅಂತಾ ಇವರನ್ನು ಕರೆಸಿಕೊಂಡು ಹೆತ್ತವರೇ  ಮರ್ಯಾದಾ ಹತ್ಯೆ ಮಾಡಿಬಿಟ್ಟರಾ? ಭಾವ ಏನಾದರೂ ಚಿತಾವಣೆ ಮಾಡಿಬಿಟ್ಟನಾ? ಇದು ಭಾವನ ತಮ್ಮನ ಕೃತ್ಯವಾ? ಅಥವಾ ಆ ಕಳ್ಳರಿಬ್ಬರೂ ಸೇರಿ ಈ ಜೋಡಿಯ ಜೀವ ತೆಗೆದರಾ? ಈ ಪ್ರಕರಣದಲ್ಲಿ ಪೊಲೀಸ್‌ ಇನ್ಸ್‌ ಪೆಕ್ಟರ್‌ ಪಾತ್ರವೇನು? ಅಸಲಿಗೆ ಇಬ್ಬರೂ ನಾಪತ್ತೆಯಾಗಿದ್ದಾರೂ ಎಲ್ಲಿಂದ? ಯಾಕಾಗಿ? ತನಿಖಾಧಿಕಾರಿ ಎಲ್ಲವನ್ನೂ ಕಂಡು ಹಿಡಿಯುತ್ತಾನಾ? – ಹೀಗೆ ಕ್ಷಣಕ್ಕೊಮ್ಮೆ ನೋಡುಗರನ್ನು ದಿಕ್ಕುತಪ್ಪಿಸುತ್ತಲೇ, ಕುತೂಹಲ ಮೂಡಿಸುತ್ತಾ ಸಾಗುವ ಸಿನಿಮಾ ʻಸದ್ದು ವಿಚಾರಣೆ ನಡೆಯುತ್ತಿದೆʼ. ಸಿನಿಮಾದ ಶೀರ್ಷಿಕೆಗೆ ಹೇಳಿಮಾಡಿಸಿದಂತಾ ಕತೆ ಕೂಡಾ ಈ ಚಿತ್ರದಲ್ಲಿದೆ. ಸಸ್ಪೆನ್ಸ್‌, ಥ್ರಿಲ್ಲರ್‌,  ಮರ್ಡರ್‌ ಮಿಸ್ಟರಿ, ಸೆಂಟಿಮೆಂಟು, ಎಮೋಷನ್ಸ್‌ ಎಲ್ಲವೂ ಇರುವ ಚಿತ್ರ ʻಸದ್ದು ವಿಚಾರಣೆ ನಡೆಯುತ್ತಿದೆʼ.

ಚಿತ್ರದ ಮೊದಲ ಭಾಗ ಸ್ವಲ್ಪ ನಿಧಾನವಾಗಿ ಸಾಗುತ್ತಿದೆಯಾ ಅನ್ನಿಸೋದು ನಿಜ. ಅನವಶ್ಯಕ ದೃಶ್ಯಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿ, ಸ್ಪೀಡ್‌ ಮಾಡಿದರೆ ಸಿನಿಮಾ ಮತ್ತೊಂದು ಲೆವೆಲ್ಲಿಗೆ ಬಂದು ನಿಲ್ಲುತ್ತದೆ. ಎಲ್ಲ ಪಾತ್ರಗಳನ್ನೂ ರಿಜಿಸ್ಟರ್‌ ಮಾಡುವ ಉದ್ದೇಶ ನಿರ್ದೇಶಕರಾಗಿರೋದು ಬಹುಶಃ ನಿಧಾನ ಅನ್ನಿಸಲು ಕಾರಣವಾಗಿರಬಹುದು.

ರಂಭೂಮಿ ಹಿನ್ನೆಲೆಯ ಭಾಸ್ಕರ್‌ ನೀನಾಸಂ ನಿರ್ದೇಶನದ ಚಿತ್ರವಿದು. ಹಲವು ಪಳಗಿದ ಕಲಾವಿದರನ್ನು ಭಾಗಿಯಾಗಿಸಿಕೊಂಡು ಪಾತ್ರಗಳಿಗೆ ಜೀವ ಕೊಡಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಇಷ್ಟೆಲ್ಲವನ್ನೂ ಪ್ರಯೋಗ ಮಾಡಿರುವ ಭಾಸ್ಕರ್‌ ಚಿತ್ರರಂಗದಲ್ಲಿ ಪರ್ಮನೆಂಟಾಗಿ ನೆಲೆ ನಿಲ್ಲಬಲ್ಲ ನಿರ್ದೇಶಕರಾಗೋದು ಖಚಿತ.

 ರಾಘು ಶಿವಮೊಗ್ಗ ಗೊತ್ತಲ್ಲಾ? ಚೂರಿಕಟ್ಟೆ ಸಿನಿಮಾವನ್ನು ನಿರ್ದೇಶಿಸಿದ್ದವರು. Act 1978 ಚಿತ್ರದಲ್ಲಿ ಚೆಂದದ ಪಾತ್ರ ಮಾಡಿ ಗುರುತಿಸಿಕೊಂಡವರು. ಈಗ ಸದ್ದು ವಿಚಾರಣೆ ಚಿತ್ರದಲ್ಲಿ ನಿಜಕ್ಕೂ ಭಯ ಹುಟ್ಟಿಸುವಂತೆ ನಟಿಸಿದ್ದಾರೆ. Act 1978ರಲ್ಲಿ ಎಲ್ಲರನ್ನೂ ನಗಿಸಿದ್ದ ಅದೇ ರಾಘು ಶಿವಮೊಗ್ಗ ಇಲ್ಲಿ ಬೆಚ್ಚಿ ಬೀಳುವಂತೆ ಮಾಡಿದ್ದಾರೆ ಅನ್ನೋದೇ ಆಶ್ವರ್ಯ. ಅಪ್ಪಟ ನಟನೊಬ್ಬನಿಂದ ಮಾತ್ರ ಈ ಥರಾ ಯಾವುದೇ ಪಾತ್ರದಲ್ಲಾದರೂ ನಟಿಸಲು ಸಾಧ್ಯ.  ರಾಘು ಅದನ್ನು ಸಾಧ್ಯವಾಗಿಸಿದ್ದಾರೆ. ಇವರ ಜೊತೆಗೆ ಅಚ್ಯುತ್‌ ಕುಮಾರ್‌, ಗೌತಮ್‌ ರಾಜ್ ಮತ್ತು ಮಧು ನಂದನ್‌ ಕೂಡಾ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ರಾಕೇಶ್‌ ಮಯ್ಯ ಮತ್ತು ಪಾವನಾ ಗೌಡ ಚಿತ್ರದ ಕೇಂದ್ರಬಿಂದುಗಳಾಗಿದ್ದಾರೆ.

ತಿರುವುಗಳೇ ತಿರುಳಾಗಿರುವ ಸದ್ದು ವಿಚಾರಣೆ ನಡೆಯುತ್ತಿದೆ ಥೇಟರ್‌ ಮತ್ತು ಓಟಿಟಿಗಳೆರಡಕ್ಕೂ ಹೊಂದುವ ಸಿನಿಮಾ. ನೋಡಿ. ಖಂಡಿತಾ ನಿಮಗಿಷ್ಟವಾಗಲಿದೆ…


Posted

in

by

Tags:

Comments

Leave a Reply