ಭಾರತದ ಅತಿ ವೇಗದ ಕೀಬೋರ್ಡ್ ಪ್ಲೇಯರ್, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟ, ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕ, ಕೆಲವು ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ಸಿನೆಮಾ ನಿರ್ದೇಶಕ – ಈ ಎಲ್ಲವೂ ಒಬ್ಬರೇ ಆಗಿರುವ ವ್ಯಕ್ತಿ ಸಾಧು ಕೋಕಿಲ. 53ನೇ ವರ್ಷಕ್ಕೆ ಕಾಲಿಟ್ಟಿರುವ ಈ ಸಂಗೀತ ಮಾಂತ್ರಿಕ, ಕಾಮಿಡಿ ಕಿಲಾಡಿಗೆ ಶುಭ ಕೋರೋಣ…
ಭಾರತದ ಅತಿ ವೇಗದ ಕೀಬೋರ್ಡ್ ಪ್ಲೇಯರ್, ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯ ನಟ, ಅತ್ಯಂತ ಬ್ಯುಸಿಯಾಗಿರುವ ಸಂಗೀತ ಸಂಯೋಜಕ, ಕೆಲವು ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ಸಿನೆಮಾ ನಿರ್ದೇಶಕ – ಈ ಎಲ್ಲವೂ ಒಬ್ಬರೇ ಆಗಿರುವ ವ್ಯಕ್ತಿ ಯಾರೆಂದು ಕೇಳಿದರೆ, ಅದು ಸಾಧು ಕೋಕಿಲ. ಒಂದು ರೀತಿಯಲ್ಲಿ ಆಲ್ರೌಂಡರ್ ಎಂದೇ ಗುರುತಿಸಬಹುದಾದ ಸಾಧುಕೋಕಿಲ ಜೀವನ ಸಾಧನೆ ಮಾದರಿಯಾಗಿ ನಿಲ್ಲುವಂಥದ್ದು.
ಸಾಧು ಅವರ ಮೂಲ ಹೆಸರು ಸಹಾಯ ಶೀಲನ್ ಸಾಧ್ರಕ್. ಇದರಲ್ಲಿ ಕೊನೆಯ ಸಾಧ್ರಕ್ ಶಾರ್ಟ್ ಅಂಡ್ ಸ್ವೀಟ್ ಆಗಿ ಸಾಧು ಆಯಿತು. ಇವರ ತಂದೆ ನಟೇಶ್ ಮತ್ತು ತಾಯಿ ಮಂಗಲ. ಇವರು ಜನಿಸಿದ್ದು ೨೪ ಮಾರ್ಚ್ ೧೯೬೬ ರಂದು, ಬೆಂಗಳೂರಿನಲ್ಲಿ. ಅಲ್ಲೇ ಸೆಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಸಾಧು ಅವರನ್ನು ಸಂಗೀತ ಸೆಳೆದಿದ್ದು ಆಕಸ್ಮಿಕವೇನಲ್ಲ. ಇವರ ತಂದೆ ಮುರುಗನ್ ದೇವಾಲಯದಲ್ಲಿ ಪಿಟೀಲು ವಾದಕರಾಗಿದ್ದರು. ಪೊಲೀಸ್ ಡಿಪಾರ್ಟ್ಮೆಂಟಿನಲ್ಲಿದ್ದ ಇವರು, ಸಂಗೀತದ ಹುಚ್ಚಿನಿಂದಾಗಿ ಮುಂದೆ ಪೊಲೀಸ್ ಆರ್ಕೆಸ್ಟ್ರಾ ಸೇರಿಕೊಂಡರು. ತಾಯಿ ಆರ್ಕೆಸ್ಟ್ರಾದಲ್ಲಿ ದೊಡ್ಡ ಹೆಸರು ಮಾಡಿದ್ದ ಗಾಯಕಿ. ಇವರ ಅಣ್ಣ ಲಯೇಂದ್ರ ಸಹ ನಟರಾಗಿದ್ದರು. ಬಾಲ್ಯದಲ್ಲೇ ಸಂಗೀತದ ಗೀಳು ಬೆಳೆಸಿಕೊಂಡಿದ್ದ ಸಾಧು, ಬಹಳ ಬೇಗ ಇವರೆಲ್ಲರನ್ನು ಕೂಡಿಕೊಂಡರು. ಓದಿನಲ್ಲಿ ನಂಬರ್ ಒನ್ ಆಗಿದ್ದ ಸಾಧು, ರ್ಯಾಂಕ್ ಸ್ಟೂಡೆಂಟ್ ಆಗಿದ್ದವರು. ಸ್ಪೋರ್ಟ್ಸ್ನಲ್ಲಿ ಕೂಡ ಮುಂಚೂಣಿಯ ಆಟಗಾರರಾಗಿದ್ದವರು. ಫುಟ್ ಬಾಲ್ನಲ್ಲಿ ಸ್ಟೇಟ್ ಲೆವೆಲ್ ಫುಟ್ ಬಾಲ್ ಟೀಮ್ ನಲ್ಲಿ ಕ್ಯಾಪ್ಟನ್ ಆಗಿದ್ದ ಸಾಧು, ಮುಂದೆ ಹೈಟ್ ಪ್ರಾಬ್ಲಮ್ನಿಂದಾಗಿ ಹೆಚ್ಚು ದೂರ ಹೋಗಲಾಗಲಿಲ್ಲವಂತೆ. ಅದಕ್ಕೆ ಸರಿಯಾಗಿ ಮನೆಯ ಸಮಸ್ಯೆಗಳಿಂದಾಗಿ ಎಂಟನೇ ತರಗತಿಗೇ ಓದು ನಿಲ್ಲಿಸಬೇಕಾಯ್ತು. ಆ ವಯಸ್ಸಿಗೇ ಕಸ್ತೂರಿ ಶಂಕರ್ರ ಮ್ಯೂಸಿಕ್ ಶಾಪಿನಲ್ಲಿ ಕೆಲಸಕ್ಕೆ ಸೇರಿಕೊಂಡರು ಸಾಧು. ಅವರಿಗೆ ಸಂಗಿತ ವಾದ್ಯಗಳ ಮೊದಲ ನೇರ ಪರಿಚಯವಾಗಿದ್ದು ಅಲ್ಲಿಯೇ. ಬದುಕು ಒಂದು ನೆಲೆ ಕಾಣತೊಡಗಿದ್ದೂ ಕಸ್ತೂರಿ ಶಂಕರ್ ಸಹವಾಸದಲ್ಲಿಯೇ.
ಸಾಧು ಕೋಕಿಲಾರ ಸಿನೆಮಾ ರಂಗದ ಪಯಣ ಬಹಳ ಇಂಟರೆಸ್ಟಿಂಗ್. ಮೊದಲು ಸಂಗೀತ ನಿರ್ದೇಶಕ, ಕೀಬೋರ್ಡ್, ಡೈರೆಕ್ಟರ್, ಆಗಿ ಇವರು ಕೆಲಸ ಮಾಡಿದರು. ಅನಂತರದ ದಿನಗಳಲ್ಲಿ ನಟನೆ ಇವರನ್ನು ಕೈಬೀಸಿ ಕರೆಯಿತು. ತಮ್ಮ ವಿಶಿಷ್ಟ ಮ್ಯಾನರಿಸಮ್ನಿಂದ ಬಹಳ ಬೇಗ ಜನಪ್ರಿಯ ಹಾಸ್ಯನಟರಾಗಿ ಗುರುತಿಸಿಕೊಂಡರು. ಇಂದು ತೆರೆಕಾಣುವ ಬಹುಪಾಲು ಚಿತ್ರಗಳಲ್ಲಿ ಸಾಧು ಇರುತ್ತಾರೆ, ಅವರ ಸಂಗೀತವೂ ಇರುತ್ತದೆ. ಅಷ್ಟರಮಟ್ಟಿಗೆ ಅವರಿಂದು ಪಾಪ್ಯುಲರ್.
ಮುಳ್ಳಿನ ದಾರಿ
ಇವತ್ತು ನಮ್ಮೆದುರು ನಿಂತಿರೋದು ಸಾಧನೆಯ ಶೃಂಗವೇರಿದ ಸಾಧು ಕೋಕಿಲ. ಸೆಲಿನಾ ಎಂಬುವವರನ್ನು ಪ್ರೀತಿಸಿ ಮದುವೆಯಾದ ಸಾಧು ಕೋಕಿಲಾಗೆ ಸುರಾಗ್ ಮತ್ತು ಸೃಜನ್ ಎಂಬ ಇಬ್ಬರು ಮಕ್ಕಳಿದ್ದಾರೆ, ಹಿರಿ ಮಗ ಅದಾಗಲೇ ತಂದೆಗೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ.
ಒಂದು ಕಾಲದಲ್ಲಿ ’ನಂಬರ್ ೧’ ಅಂತ ಸಿನೆಮಾ ಮಾಡಲು ಹೋಗಿ ಕೈಸುಟ್ಟುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಎದುರಿಸಿದ್ದರು. ಆ ಚಿತ್ರದಿಂದ ಇರೋ ಬರೋ ದುಡ್ಡೆಲ್ಲಾ ಹೋಯ್ತು. ಸಿನೆಮಾಗಾಗಿ ಸಾಲ ಎತ್ತಿ ದೊಡ್ಡ ಸಾಲಗಾರ ಆಗಿಬಿಟ್ಟಿದ್ದರು ಸಾಧು. ಒಂದೊಂದು ರೂಪಾಯಿ ಕೂಡ ಸಂಪಾದನೆ ಮಾಡಿ, ಕೂಡಿಟ್ಟ ಹಣ ಎಲ್ಲಾ ಹೋಯ್ತು. ಮನೆಯೂ ಜಪ್ತಿ ಆಯ್ತ್ತು. ಇದ್ದ ಒಂದು ಗಾಡಿಯನ್ನೂ ಮಾರುವಂತಾಯ್ತು. ಒಂದು ಚಪ್ಪಲಿ ಕೂಡ ಇಲ್ಲದೆ ರೋಡ್ ನಲ್ಲಿ ಓಡಾಡುವ ಹಾಗಾಯ್ತು. ಹಾಗೆಂದು ಸಾಧುಕೋಕಿಲಾ ಅಳುತ್ತ ಕೂರಲಿಲ್ಲ. ಫೀನಿಕ್ಸ್ನಂತೆ ಮತ್ತೆ ಜಿಗಿದೆದ್ದರು. ಹಗಲಿರುಳು ದುಡಿದು ನಷ್ಟ ಭರಿಸಿಕೊಂಡರು. ಸಂಗೀತ ಸಂಯೋಜನೆ ಜೊತೆಗೆ ಹಾಸ್ಯ ಪಾತ್ರಗಳಲ್ಲೂ ನಟಿಸುತ್ತ ದುಡಿಮೆಗೆ ಇಳಿದ ಸಾಧು, ಐದೇ ವರ್ಷಗಳಲ್ಲಿ ಮೊದಲಿನಂತಾದರು. ಕೈತಪ್ಪಿದ್ದ ಜಾಗವನ್ನು ಮರಳಿ ಪಡೆದು, ಅಲ್ಲಿಯೇ ಮನೆ ಕಟ್ಟಿಸಿದರು. ಈಗ ಅವರ ಕುಟುಂಬ ಇರುವುದು ಅದೇ ಮನೆಯಲ್ಲೇ.
ಆದರೆ ಅದಕ್ಕೂ ಹಿಂದಿನ ಅವರ ಕತೆಯನ್ನು ಕೇಳಿದರೆ ಕಣ್ಣಿರು ಜಿನುಗುತ್ತದೆ. ಬಾಲ್ಯ ಮತ್ತು ಯೌವನದ ದಿನಗಳನ್ನು ಕಡುಕಷ್ಟದಲ್ಲಿ ಕಳೆದ ಸಾಧು ಕೋಕಿಲ, ತನ್ನ ಅಣ್ಣನೊಂದಿಗೆ ರೋಡಲ್ಲಿ ಬಿಸಾಡಿದ, ಕಸದ ತೊಟ್ಟಿಯಲ್ಲಿ ಹಾಕಿದ ಮಿಕ್ಕುಳಿದ ಆಹಾರವನ್ನೆಲ್ಲ ತಿಂದುಕೊಂಡು ಇರುತ್ತಿದ್ದರಂತೆ. ಅಂಥ ಕಡುಕಷ್ಟದಲ್ಲೂ ಇಳಯ ರಾಜ ಅವರ ಸಂಗೀತ ಕೇಳುತ್ತ, ಹುಚ್ಚಿಗೆ ಬಿದ್ದು ಅವುಗಳ ನೋಟ್ಸ್ ಬರೆದುಕೊಳ್ಳುತ್ತ, ತಾವೂ ಮುಂದೊಂದು ದಿನ ಸಂಗೀತ ಸಂಯೋಜಿಸುವ ಕನಸು ಕಾಣುತ್ತಿದ್ದರಂತೆ. ತಮ್ಮ ಈ ಕನಸನ್ನು ನನಸು ಮಾಡಿಕೊಳ್ಳಲು ಅವರು ಕ್ರಮಿಸಿದ ದಾರಿ ಬರೀ ಮುಳ್ಳುಗಳಿಂದಲೇ ತುಂಬಿದ್ದಂಥದು. ಆದರೆ ಸಾಧು ಕೋಕಿಲಾರ ದೃಢ ನಿರ್ಧಾರ ಅವರನ್ನಿಂದು ಸಾಧಕರ ಸಾಲಿನಲ್ಲಿ ತಂದು ನಿಲ್ಲಿಸಿದೆ.
ಇವತ್ತು ಸಾಧು ಕೋಕಿಲಾ ಸ್ವತಃ ಹತ್ತಾರು ಕಲಾವಿದರಿಗೆ ಆಶ್ರಯವಾಗಿದ್ದಾರೆ. ಕಲಿಯಲು ಬರುವವರು, ಕಲಾವಿದರಾಗಿ ಅವಕಾಶ ಹುಡುಕಿ ಬರುವವರು ಯಾರೇ ಇರಲಿ ಸಾಧುಕೋಕಿಲಾ ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ. ನಟನೆಯ ಗುಂಗಿನಲ್ಲಿ ಮತ್ತು ಜನಪ್ರಿಯತೆಯಿಂದಾಗಿ ಸಂಗೀತ ಸಂಯೋಜನೆಯಲ್ಲಿ ಸ್ವಲ್ಪ ಹಿಂದೆ ಬೀಳುತ್ತಿರುವ ಸಾಧು ಕೋಕಿಲಾ ಮತ್ತೆ ಸಂಪೂರ್ಣವಾಗಿ ಸಂಗೀತಕ್ಕೆ ಮುಡಿಪಾಗುವ ಸನ್ನಾಹ ತೋರಿದ್ದಾರೆ. ಅವರ ಕುಟುಂಬವೂ ಅದನ್ನೇ ಬಯಸುತ್ತಿದೆ. ಸಂಗೀತಾಭಿಮಾನಿಗಳ ಬಯಕೆಯೂ ಅದೇ ಆಗಿದೆ. ಒಂದು ಕಾಲದಲ್ಲಿ, ಬರಿಗಾಲಲ್ಲಿ ಅವಕಾಶವನ್ನೂ ಅನ್ನವನ್ನೂ ಹುಡುಕಿಕೊಂಡು ಅಲೆಯುತ್ತಿದ್ದ ಸಾಧುಕೋಕಿಲಾ ಇಂದು ಮಾದರಿಯಾಗಿ ನಿಂತಿದ್ದಾರೆ. ಮತ್ತು ಕಷ್ಟ ಪಟ್ಟರಷ್ಟೇ ಸುಖ ಸಿಗುವುದು ಅನ್ನುವ ಮಾತಿಗೆ ಉತ್ಕೃಷ್ಟ ನಿದರ್ಶನವಾಗಿ ತೋರುತ್ತಾರೆ.
ನಿಮ್ಮ ಬದುಕನ್ನು ಬದಲಿಸಿದ ಘಟನೆ ಯಾವುದು?
ಮೋಹನ್ ಅವರ ಹತ್ತಿರ ನಾನು Instruments ಫಿಟ್ ಮಾಡುವ ಕೆಲಸದಲ್ಲಿ ಇದ್ದೆ. ಒಂದು ಪ್ರೋಗ್ರಾಂನಲ್ಲಿ ಎಲ್ಲಾ ವಾದ್ಯಗಳನ್ನ ಫಿಟ್ ಮಾಡಿ, ನಂತರ ಅದನ್ನ ವಾಪಸ್ ತಂದು ಇಡುವುದಕ್ಕೆ ಹತ್ತು ರೂಪಾಯಿ ಕೊಡೋರು. ಮೋಹನ್ ಅವರು ತುಂಬಾ ಸ್ಟ್ರಿಕ್ಟ್ ಪರ್ಸನ್. ಒಂದು ದಿನ ನಾನು ತಾಳ ಏನೋ ತೆಗೆದು ಹೊರಗೆ ಇಟ್ಟಿರ್ಲಿಲ್ಲ. ಅವರಿಗೆ ತುಂಬಾ ಸಿಟ್ಟು ಬಂತು. ಅವತ್ತು ತುಂಬಾ ಕೆಟ್ಟ ಶಬ್ಧದಲ್ಲಿ ನನ್ನ ಬೈದು ಬಿಟ್ಟಿದ್ರು. ಕಲಾವಿದನ ತರಹ ಮಾತನಾಡಬೇಡ. ನೀನು ನಮ್ಮ ಆರ್ಕೇಸ್ಟ್ರಾದಲ್ಲಿ ಕ್ಲೀನರ್ ಅಷ್ಟೆ’ ಅಂತ ಬೈದಿದ್ರು. ನನಗೆ ಅದು ತುಂಬಾ ಹರ್ಟ್ ಆಗೋಯ್ತು. ಸೈಕಲ್ ತೆಗೆದುಕೊಂಡು. ಸೀದಾ ಹಲಸೂರು ಕೆರೆ ಕಡೆಗೆ ಹೋದೆ. ಆಗ ನಾನಗಿನ್ನೂ ೧೪ ವರ್ಷ ಇರಬೇಕು. ಸಾಯೋಣ ಅಂತ ಹಲಸೂರು ಕೆರೆ ಕಡೆ ಹೊರಟೆ. ಎಂ.ಜಿ ರೋಡ್ ನಲ್ಲಿ ಬ್ಲೂ ಮೂನ್ ಥಿಯೇಟರ್ ಇತ್ತು. ಅಲ್ಲಿ ’ಸ್ಟಿಚ್ ಇನ್ ಟೈಮ್’ ಅಂತ ಸಿನಿಮಾ ಹಾಕಿದ್ರು. ಸಾಯೋಕೂ ಮುಂಚೆ ಪಿಕ್ಚರ್ ನೋಡಿ ಆಮೇಲೆ ಸಾಯೋಣ ಅಂತ ಸಿನಿಮಾ ನೋಡೋಕೆ ಹೋದೆ. ಆ ಸಿನಿಮಾದಲ್ಲಿ ಶುರುವಿನಿಂದ ಎಂಡಿಂಗ್ ವರೆಗೂ ನಗು, ನಗು, ನಗು. ಸಖತ್ ಕಾಮಿಡಿ ಮೂವಿ. ಸಿನಿಮಾ ನೋಡ್ತಾ ನೋಡ್ತಾ, ನನಗೆ ಅಲ್ಲಿವರೆಗೂ ಮನಸ್ಸಲ್ಲಿ ಇದ್ದ ನೋವೆಲ್ಲಾ ಮರೆತು ಹೋಯ್ತು. ಆ ಸಿನಿಮಾ ಇಂದ ನನ್ನ ಲೈಫ್ ಚೇಂಜ್ ಆಗಿದ್ದು. ನಾನು ದೊಡ್ಡ ಮ್ಯೂಸಿಶಿಯನ್ ಆಗ್ತೀನಿ ಅಂತ ಡಿಸೈಡ್ ಮಾಡಿದ್ದೇ ಅವತ್ತು.
ಅಶ್ವತ್ಥ್ ಅವರನ್ನು ನೀವು ಸಂಗೀತದ ದೇವರೆನ್ನುತ್ತೀರಿ..
ಹೌದು. ಅಶ್ವತ್ಥ್ ಅವರ ಲೆಕ್ಕವಿಲ್ಲದಷ್ಟು ಹಾಡುಗಳಿಗೆ ಕೀಬೋರ್ಡ್ ನುಡಿಸಿದ್ದೇನೆ. ಅವರು ಸಂಗೀತ ಲೋಕದ ದೇವರು. ಅವರ ಸಂಗೀತದಲ್ಲಿ, ದನಿಯಲ್ಲಿ ದೈವೀ ಶಕ್ತಿಯಿದೆ. ಅವರ ಹಾಡುಗಳನ್ನು ಕೇಳುತ್ತಲೇ ಬೆಳದ ನನ್ನ ಮೇಲೆ ಅವರ ಪ್ರಭಾವ ಬಹಳವಿದೆ. ಅವರ ಸಂಯೋಜನೆಯ “ಕಾಣುವ ಕಡಲಿಗೆ ಹಂಬಲಿಸಿದೆ ಮನ” ಹಾಡನ್ನು ಕೇಳುತ್ತ ಗಂಟೆಗಟ್ಟಲೆ ಕಣ್ಣೀರು ಸುರಿಸಿದ ದಿನಗಳು ಇವೆ.
ನಿಮ್ಮ ಫ್ಯಾಮಿಲಿ ಬಗ್ಗೆ ಹೇಳಿ
ನನ್ನ ಹೆಂಡತಿ ಸೆಲೀನಾ ನನ್ನ ಪಾಲಿನ ಅದೃಷ್ಟ ದೇವತೆ. ನೋಡಲು ಸುಂದರಿಯಾಗಿರುವ ಅವಳು ನನ್ನನ್ನು ಮದುವೆಯಾಗಿದ್ದೇ ನನ್ನ ಪುಣ್ಯ. ಅವಳು ನನ್ನ ಸಂಗೀತವನ್ನು ಪ್ರೀತಿಸಿದಳು. ನಾನು ನಟಿಸೋದು ಅವಳಿಗೆ ಇಷ್ಟವಿಲ್ಲ. ನಾನು ಸಂಗೀತ – ನಟನೆ ಅಂತ ಮನೆಗೆ ಹೋಗುವುದೇ ಅಪರೂಪವಾಗಿ ಬಹಳ ವರ್ಷಗಳಾಗಿಬಿಟ್ಟವು. ಆದರೆ ಸೆಲೀನಾ ಎಲ್ಲವನ್ನೂ ಸಹನೆಯಿಂದ ಸಂಭಾಳಿಸುತ್ತ ನನಗೆ ಬೆಂಬಲವಾಗಿದ್ದಾಳೆ. +ನನ್ನ ಅಣ್ಣ ಲಯೇಂದ್ರ ನನ್ನನ್ನು ಬೆಳೆಸಿದ. ನನ್ನ ತಂಗಿ ಉಷಾ ನನ್ನ ಮುದ್ದಿನ ಕೂಸು. ಮತ್ತೊಬ್ಬ ಸಹೋದರ ಬೆನೆಡಿಕ್ಟ್ನನ್ನು ನಾವು ಕಳೆದುಕೊಂಡೆವು. ಸಂಗೀತದಲ್ಲೇ ಬೆಳೆದು ನಮ್ಮನ್ನೂ ಬೆಳೆಸಿದ ಅಪ್ಪ – ಅಮ್ಮ ನಮ್ಮ ಕುಟುಂಬದ ಬಹು ದೊಡ್ಡ ಸ್ಟ್ರೆಂತ್. ಇವತ್ತು ನಾನು ಏನಾದರೂ ಸಾಧಿಸಿದ್ದರೆ, ನನ್ನ ಶ್ರಮದಷ್ಟೇ ಈ ಎಲ್ಲರ ಸಹಕಾರದ್ದೂ ಪಾಲಿದೆ.
ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ ಎಲ್ಲವೂ ಆಗಿರುವ ನೀವು ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದಾದರೆ?
ಬೇರೆ ಮಾತೇ ಇಲ್ಲ. ಸಂಗೀತ ನನ್ನ ಉಸಿರು. ಸಂಗೀತವನ್ನು ಬಿಟ್ಟರೆ ಬೇರೆ ಯಾವುದನ್ನೂ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.
ಸದ್ಯದ ಕಾಮಿಟಿ ನಟರಲ್ಲಿ ನೀವೇ ಸ್ಟಾರ್… ಏನನ್ನುತ್ತೀರಿ ಇದರ ಬಗ್ಗೆ..?
ಜನ ನನ್ನನ್ನು ಒಪ್ಪಿದ್ದಾರೆ. ನಾನು ಪರದೆ ಮೇಲೆ ಬಂದರೆ ಅಪಾರವಾದ ಖುಷಿ ತೋರುತ್ತಾರೆ. ಈ ಕಾರಣದಿಂದ ನಾನು ನಟಿಸುತ್ತಿದ್ದೇನೆ. ಆದರೆ ಒಂದು ಮಾತ್ರ ನಿಜ. ನನ್ನ ಕ್ಷೇತ್ರ ಸಂಗೀತ. ನಾನು ಸಾಧನೆ ಅಂತಾ ಮಾಡಿದ್ದರೆ, ಅದು ಅಲ್ಲಿ… ನಟನೆ ನನಗೆ ದುಡ್ಡು ತಂದುಕೊಟ್ಟಿದೆ. ಬದುಕಿಗಾಗಿಯೂ ನಟಿಸಿದ್ದೇನೆ. ಆದರೆ ಇದು ನನ್ನ ಸ್ವಂತ ಕ್ಷೇತ್ರವಲ್ಲ!
ನಿರ್ದೇಶನದ ಬಗ್ಗೆ?
ನನ್ನ ನಿರ್ದೇಶನದ ರಕ್ತ ಕಣ್ಣೀರು, ಅನಾಥರು, ರಾಕ್ಷಸ, ಸುಂಟರಗಾಳಿ, ದೇವ್ರು ಚಿತ್ರಗಳು ಸೇರಿದಂತೆ ಅನೇಕ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ನಿರ್ದೇಶನ ಮಾಡುವುದು ಎಲ್ಲದಕ್ಕಿಂತ ಕಷ್ಟದ ಕೆಲಸ. ಅದು ಅಪಾರವಾದ ಸಮಯ, ಸಂಯಮವನ್ನು ಬೇಡುತ್ತದೆ. ನಾನು ನಟನೆ, ಸಂಗೀತ ನಿರ್ದೇಶನದಲ್ಲಿ ಬ್ಯುಸೀ ಇರೋದರಿಂದ ಆಯ್ದ ಕೆಲವು ಸಿನಿಮಾಗಳನ್ನಷ್ಟೇ ನಿರ್ದೇಶನ ಮಾಡುತ್ತೀನಿ.