ಸಿನಿಮಾ ಅಂದ್ರೇನೇ ಮಾಯಾ ಲೋಕ. ಇದಕ್ಕೆ ಎಲ್ಲರೂ ಮಾರಿ ಹೋದವರೇ. ಬಹಳಷ್ಟು ಸಂದರ್ಭದಲ್ಲಿ ಹಳ್ಳಕ್ಕೆ ಬಿದ್ದವರೇ. ಸ್ವ ನಟನಾ ಸಾಮರ್ಥ್ಯ, ಅದೃಷ್ಟದಿಂದ ಗೆದ್ದವರೇ. ಆದರೆ ಎಲ್ಲವೂ ಶೀಘ್ರವಾಗಿಯೇ ಆಗಬೇಕೆಂಬ ಹುಂಬತನದಲ್ಲಿ ಬಹುತೇಕರು ಸಿನಿಮಾಕ್ಕಾಗಿ ಅಡ್ಡದಾರಿಗಳನ್ನು ಹಿಡಿಯಲು ರೆಡಿಯಾಗಿರುತ್ತಾರೆ. ಇಂತಹ ಬಕ್ರಾಗಳನ್ನೇ ಗುರಿಯಾಗಿಸಿಕೊಂಡ ಬಹಳಷ್ಟು ಜನರ ಗುಂಪು ಸಿನಿಮಾ ರಂಗವನ್ನು ಅರೆದು ಕುಡಿದವರಂತೆ ನನಗೆ ಆ ನಟ ಗೊತ್ತು, ಈ ನಟ ಗೊತ್ತು, ಆ ನಿರ್ದೇಶಕ ಗೊತ್ತು, ಈ ನಿರ್ಮಾಪಕನ ಜತೆ ಬೆಳಿಗ್ಗೆ ಟಿಫನ್ ಮಾಡಿಬಂದೆ ಎಂದು ಅಂತಹ ಬಕ್ರಾಗಳ ಕಿವಿಗೆ ನಾಮ ತೀಡಿ, ಸಾಲ ಸೋಲ ಮಾಡಿ ಬಣ್ಣದ ಲೋಕದಲ್ಲಿ ಮೆರೆಯಬೇಕೆಂದು ಬಂದಿದ್ದವರಿಂದ ಲಪಟಾಯಿಸಿ ಕೈಗೆ ಸಿಗದಂತೆ ಕಣ್ಮರೆಯಾಗಿರುತ್ತಾರೆ. ಇಂತಹುದೇ ಅವಘಡ ಇತ್ತೀಚಿಗೆ ಸಂಭವಿಸಿದ್ದು, ಖ್ಯಾತ ನಟ ಸಾಧು ಕೋಕಿಲ ಹೆಸರಿನಲ್ಲಿ ಉಂಡೆನಾಮ ತೀಡುವ ಘಟನೆ ಲೇಟ್ ಆದ್ರೂ ಲೇಟೆಸ್ಟಾಗಿ ಬೆಳಕಿಗೆ ಬಂದಿದೆ.
ಹೊಸ ಪ್ರತಿಭೆಗಳೇ ಒಟ್ಟಾಗಿ ಸೇರಿ ನಿರ್ಮಾಣ ಮಾಡುತ್ತಿರುವ ಸಿನಿಮಾ ರಾವಣ ಈಸ್ ಬ್ಯಾಕ್. ಕೆಲ ದಿನಗಳ ಕಾಲ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತಂತೆ. ಆದರೆ ಸದ್ಯ ನಿರ್ಮಾಪಕ ಶಿವಶಂಕರ್ ತಮಗೆ ಮೋಸವಾಗಿದೆ ಎಂದು ಫಿಲ್ಮ್ ಛೇಂಬರ್ ಮೊರೆ ಹೋಗಿದ್ದಾರೆ. ವಿಪರ್ಯಾಸವೆಂದರೆ ಸಿನಿಮಾದ ನಿರ್ದೇಶಕರೇ ನಿರ್ಮಾಪಕರಿಗೆ ತಿರುಪತಿಗೆ ದಾರಿ ತೋರಿಸಿದ್ದಾರೆ.
ಸಿನಿಮಾದ ದೃಶ್ಯವೊಂದಕ್ಕೆ ಸಾಧುಕೋಕಿಲಾ ಅವರನ್ನು ಒಂದು ದಿನದ ಮಟ್ಟಿಗೆ ಕರೆ ತರುತ್ತೇವೆ ಎಂದು ನಿರ್ಮಾಪಕರನ್ನು ನಂಬಿಸಿದ್ದ ನಿರ್ದೇಶಕ ಹರಿಹರನ್ ಹಾಗೂ ಕೊರಿಯೋಗ್ರಾಫರ್ ಅವಿ ದಿನವೊಂದಕ್ಕೆ ಒಂದು ಲಕ್ಷ ರುಪಾಯಿ ಸಂಭಾವನೆ ಬೇಕಾಗಬಹುದೆಂದು ಬೇಡಿಕೆಯನ್ನು ಇಟ್ಟಿದ್ದರಂತೆ. ನಿರ್ದೇಶಕರ ಮಾತು ನಂಬಿ ನಿರ್ಮಾಪಕರು ಮೂವತ್ತೈದು ಸಾವಿರ ಮುಂಗಡ ಹಣವನ್ನು ನೀಡಿದ್ದಾರೆ. ಅಲ್ಲದೇ ಸಾಧುಕೋಕಿಲಾ ಬರುತ್ತಾರೆಂದು ಹುಬ್ಬಳ್ಳಿಯಲ್ಲಿ ಚಿತ್ರೀಕರಣಕ್ಕೆ ತಯಾರಿ ಮಾಡಿಕೊಂಡಿದ್ದರು. ಆದರೆ ಸಾಧುಕೋಕಿಲಾ ಕೊಟ್ಟ ಸಮಯಕ್ಕೆ ಬಾರದೇ ಇದ್ದುದರಿಂದ ಅನುಮಾನಗೊಂಡ ನಿರ್ಮಾಪಕರು ಸಾಧುಕೋಕಿಲಾ ಅವರನ್ನೇ ಕೇಳಿದಾಗ, ನಿಮಗೆ ಯಾರೋ ಮುಂಡಾಯಿಸಿದ್ದಾರೆ. ನಾನು ಯಾರಿಗೂ ಕಾಲ್ ಶೀಟ್ ಕೊಟ್ಟಿಲ್ಲವೆಂದು ತಿಳಿಸಿದ್ದಾರೆ.
No Comment! Be the first one.