ತಾನೊಬ್ಬ ನಟನಾಗಬೇಕೆನ್ನುವುದೇ ಮಹೇಶ್ ಅಂತರಾಳದ ಬಯಕೆಯಾಗಿತ್ತು. ನಟನೆಗೆ ಅವಕಾಶ ಕೇಳಿಕೊಂಡು ಹೋದರೆ “ನೀನು ಕಪ್ಪಗಿದ್ದೀಯ, ನಿನ್ನ ನೆತ್ತಿ ಮೇಲೆ ಕೂದಲಿಲ್ಲ. ನಿನಗೆ ಎಂಥಾ ಪಾತ್ರ ಕೊಡಲು ಸಾಧ್ಯ” ಅಂತಲೇ ಬಹುತೇಕರು ರಿಜೆಕ್ಟ್ ಮಾಡಿ ಕಳಿಸುತ್ತಿದ್ದರು.
ಈ ಹುಡುಗನ ಹೆಸರು ಮಹೇಶ್. ಸಾಕಷ್ಟು ಸಿನಿಮಾಗಳು, ರಿಯಾಲಿಟಿ ಶೋಗಳಲ್ಲಿ ನೀವೀತನನ್ನು ನೋಡಿರುತ್ತೀರಿ. ಈತನ ತಂದೆ ಹೆಸರುಘಟ್ಟ ಬಳಿಯ ತೋಟಗೆರೆಯವರು. ವೃತ್ತಿಯಲ್ಲಿ ಅವರು ವಾಚ್ ಮನ್. ತಾಯಿ ತುಮಕೂರಿನ ಗೂಳೂರಿನವರು. ಮಹೇಶ್ ಬೆಳೆದದ್ದೆಲ್ಲಾ ಅಲ್ಲೇ. ಹಸು, ಮೇಕೆ ಮೇಯಿಸಿಕೊಂಡು, ಹಾಲು ಮಾರಿಕೊಂಡು ಅದರ ಜೊತೆಗೆ ಓದುತ್ತಾ ಎಸ್ಸೆಸ್ಸೆಲ್ಸಿ ಮುಗಿಸೋ ಹೊತ್ತಿಗೆ ಪುಸ್ತಕದ ಸಾವಾಸ ಸಾಕುಸಾಕೆನ್ನುವಂತಾಗಿತ್ತು. ಏನೇ ಮಾಡಿದರೂ ವಿದ್ಯೆ ತಲೆಗತ್ತುತ್ತಿರಲಿಲ್ಲ. ಸ್ಟಂಟ್ಸ್ ಮಾಡುವುದು, ಬಾಡಿ ಬಿಲ್ಡ್ ಮಾಡುವುದು ಹವ್ಯಾಸವಾಗಿ ಹೋಯ್ತು. ದೇಹದಾರ್ಡ್ಯತೆ ಹೊಂದಿ ಮಿಸ್ಟರ್ ಬೆಂಗಳೂರು, ಮಿಸ್ಟರ್ ಕರ್ನಾಟಕ ಮುಂತಾದ ಪಟ್ಟ, ಪದಕಗಳನ್ನೆಲ್ಲಾ ಪಡೆದಿದ್ದರು. ಆ ಹೊತ್ತಿಗೇ ಪಾಂಡವರು ಚಿತ್ರದಲ್ಲಿ ನಟಿಸುತ್ತಿದ್ದ ನಟ ಅಭಿಜಿತ್ ಅವರಿಗೆ ಸ್ಟಂಟ್ಸ್ ಟ್ರೇನರ್ ಆಗಿಯೂ ಮಹೇಶ್ ಕೆಲಸ ಮಾಡುತ್ತಿದ್ದರು.
ಅಭಿಜಿತ್ ಅವರೊಂದಿಗೆ ಆತ್ಮೀಯತೆ ಬೆಳೆಯುತ್ತಿದ್ದಂತೇ ‘ಸಾರ್ ನಾನು ಸಿನಿಮಾಗೆ ಸೇರಬೇಕು. ಅಲ್ಲಿ ಏನಾದರೂ ಸಾಧನೆ ಮಾಡಬೇಕು’ ಅನ್ನೋ ಬಯಕೆ ವ್ಯಕ್ತಪಡಿಸಿದ್ದರು. ಮಹೇಶನ ಒಳಗಿನ ತುಡಿತವನ್ನು ಕಂಡ ಅಭಿಜಿತ್ ತಮಗೆ ಗೊತ್ತಿರುವವರಿಗೆಲ್ಲಾ ಪರಿಚಯಿಸಿದರು. ಹಾಗೆ ಚಿತ್ರರಂಗದ ನಂಟು ಶುರುವಾಯಿತು. ಹಿಂದೆ ಮುಂದೆ ನೋಡದೆ ಬಟಾ ಬಯಲಿನಲ್ಲಿ ಓಡುವಂತೆ ಬಿಲ್ಡಿಂಗಿಂದ ಬಿಲ್ಡಿಂಗಿಗೆ ಎಗರುವ ಫ್ರೀ ರನ್ನಿಂಗ್ ಎನ್ನುವ ತೀರಾ ಅಪರೂಪದ ಕಲೆ ಮಹೇಶ್’ಗೆ ಸಿದ್ದಿಸಿತ್ತು. ಕತ್ರೋನ್ ಕೆ ಕಿಲಾಡಿ, ಕುಚ್ ಬಿ ಕರೇಗಾ ಥರದ ಹಿಂದಿ ಶೋಗಳಿಗಾಗಿ ಮಹೇಶನ್ನು ಬಾಂಬೆಗೆ ಕರೆಸಿಕೊಂಡು, ರೋಪ್ ಇಲ್ಲದೇ ಸ್ಟಂಟ್ಸ್ ಮಾಡಿಸಿ, ರಿಹರ್ಸಲ್ ಮಾಡಿ, ನಂತರ ಕಲಾವಿದರಿಗೆ ರೋಪ್ ಹಾಕಿಸಿ ಈ ಕಸರತ್ತನ್ನು ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಹೇಶ್ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಫೈಟರ್ ಆಗಿಯೂ ಕಾರ್ಯನಿರ್ವಹಿಸಿದರು. ಜೊತೆಗೆ ಸಣ್ಣ ಪುಟ್ಟ ಪಾತ್ರಗಳೂ ಸಿಗುತ್ತಿದ್ದವಾದರೂ ಚಿತ್ರರಂಗ ಮಹೇಶನ್ನು ಫೈಟರ್ ಆಗಿಯೇ ನೋಡುತ್ತಿತ್ತು. “ಸಾಹಸ ಕಲಾವಿದರ ಸಂಘದಲ್ಲಿ ಕಾರ್ಡು ತಗೊಂಡುಬಿಡು ಕೈತುಂಬಾ ಕೆಲಸ ಸಿಗುತ್ತದೆ” ಅಂತಾ ಎಷ್ಟೋ ಜನ ಅಡ್ವೈಸ್ ಕೂಡಾ ಮಾಡುತ್ತಿದ್ದರು. ಆದರೆ ಮಹೇಶ್ಗೆ ಯಾವ ಕಾರಣಕ್ಕೂ ಬರೀ ಫೈಟರ್ ಆಗಿ ಉಳಿಯುವ ಮನಸ್ಸಿರಲಿಲ್ಲ. ತಾನೊಬ್ಬ ನಟನಾಗಬೇಕೆನ್ನುವುದೇ ಮಹೇಶ್ ಅಂತರಾಳದ ಬಯಕೆಯಾಗಿತ್ತು. ನಟನೆಗೆ ಅವಕಾಶ ಕೇಳಿಕೊಂಡು ಹೋದರೆ “ನೀನು ಕಪ್ಪಗಿದ್ದೀಯ, ನಿನ್ನ ನೆತ್ತಿ ಮೇಲೆ ಕೂದಲಿಲ್ಲ. ನಿನಗೆ ಎಂಥಾ ಪಾತ್ರ ಕೊಡಲು ಸಾಧ್ಯ” ಅಂತಲೇ ಬಹುತೇಕರು ರಿಜೆಕ್ಟ್ ಮಾಡಿ ಕಳಿಸುತ್ತಿದ್ದರು.
ಈ ಹೊತ್ತಿಗೇ ರಿಯಾಲಿಟಿ ಶೋದಲ್ಲಾದರೂ ಭಾಗವಹಿಸಬೇಕು ಅಂತಾ ಮಹೇಶ್ ವರ್ಷಗಟ್ಟಲೆ ಅಲೆದಿದ್ದರು. ಟೀವಿ ವಾಹಿನಿಯ ಕ್ರಿಯೇಟೀವ್ ಟೀಮಿನವರು ಮಹೇಶನ ಕಾಟ ತಾಳಲಾರದೆ ಈತನ ಮೊಬೈಲ್ ನಂಬರನ್ನು ಬ್ಲಾಕ್ ಮಾಡಿಕೊಳ್ಳುತ್ತಿದ್ದರಂತೆ. ಅಲ್ಲಿಗೂ ಬಿಡದೆ ಮಹೇಶ್ ಸಿಕ್ಕ ಸಿಕ್ಕ ಕಾಯಿನ್ ಬೂತುಗಳಿಂದೆಲ್ಲಾ ಕರೆ ಮಾಡಿ ಅವಕಾಶಕ್ಕಾಗಿ ಅಂಗಲಾಚುತ್ತಿದ್ದರಂತೆ. ಹೀಗಿರುವಾಗಲೇ ಅದೊಂದು ದಿನ ವಾಹಿನಿಯೊಂದರ ರಿಯಾಲಿಟಿ ಶೋ ಇಂಚಾರ್ಜ್ ಆಗಿದ್ದ ವರುಣ್ ಅವರು ಕಾಲ್ ಮಾಡಿ ಬರಹೇಳಿದ್ದರು. ಆಗ ಹೋದ ಮಹೇಶ್’ಗೆ ನಿಜಕ್ಕೂ ಅಚ್ಛರಿ ಕಾದಿತ್ತು. ಇಂಡಿಯನ್ ಎನ್ನುವ ರಿಯಾಲಿಟಿ ಶೋಗೆ ಆಯ್ಕೆಯಾದ ಮೊದಲ ಕಂಟೆಸ್ಟೆಂಟ್ ಮಹೇಶ್ ಆಗಿದ್ದರು. ಶ್ರಮ ವಹಿಸಿ, ಕನಸಿಟ್ಟು ಶೋನಲ್ಲಿ ಭಾಗವಹಿಸಿದ್ದ ಮಹೇಶ್ ಇನ್ನೇನು ಮುಕ್ತಾಯ ಹಂತದಲ್ಲಿದ್ದಾಗ ಕಾರ್ಯಕ್ರಮದಿಂದ ಹೊರಬರಬೇಕಾಯಿತು. ಅದಕ್ಕೆ ಕಾರಣ ಇವರ ತಾಯಿಯ ಅನಾರೋಗ್ಯ. ಒಂದು ಕಡೆ ಜೀವನಕ್ಕೆ ದಾರಿ ತೋರಿರುವ ರಿಯಾಲಿಟಿ ಶೋ ಮತ್ತೊಂದು ಕಡೆ ಜೀವಕ್ಕಿಂತಾ ಹೆಚ್ಚಾದ ತಾಯಿ. ಇವೆರಡರಲ್ಲಿ ತಾಯಿಯೇ ಮುಖ್ಯ ಅಂತಾ ತೀರ್ಮಾನಿಸಿದ ಮಹೇಶ್’ಗೆ ಆ ಶೋ ಗೆಲ್ಲುವ ಆಸೆ ಮರೀಚಿಕೆಯಾಯಿತು.
ಈ ನಡುವೆ ಮುಸ್ಸಂಜೆ ಮಾತು ಚಿತ್ರದಲ್ಲಿ ಸಿಕ್ಕ ಅವಕಾಶದಿಂದ ಮಹೇಶ್’ರನ್ನು ಜನ ಗುರುತಿಸುತ್ತಿದ್ದರು. ನಂತರ. ರಾಜ್, ಪೃಥ್ವಿ, ಯಕ್ಷ, ಯೋಗಿ, ಇತ್ತೀಚೆಗೆ ಬಂದ ಅಮ್ಮ ಐ ಲವ್ ಯೂ ಸಿನಿಮಾಗಳಲ್ಲೂ ಮಹೇಶ್ ಅಷ್ಟಿಷ್ಟು ನಟಿಸುವ ಅವಕಾಶ ಪಡೆದರು. ರವಿತೇಜ ನಿರ್ದೇಶಿಸಿದ್ದ ಮೊದಲ ಸಿನಿಮಾ ಜಾತ್ರೆಯಲ್ಲಿ ಚೆಂದದ್ದೊಂದು ಪಾತ್ರ ನೀಡಿದ್ದರು. ಆದರೆ, ಚಿತ್ರರಂಗ ಮಾತ್ರ ಮಹೇಶ್ ಅವರನ್ನು ಪೂರ್ಣ ಪ್ರಮಾಣದಲ್ಲಿ ನಟ ಅಂತ ಪರಿಗಣಿಸಲೇ ಇಲ್ಲ.
ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರ ಕೇಳಿದರೇನೆ, ಕೂದಲಿಲ್ಲ, ಬಣ್ಣವಿಲ್ಲ ಅಂತೆಲ್ಲಾ ಸಬೂಬು ಹೇಳಿತ್ತಿದ್ದದ್ದನ್ನೇ ನೋಡಿದ್ದ ಮಹೇಶ್ ನಿಜಕ್ಕೂ ಬೆರಗಾಗುವಂತಾ ವಾರ್ತೆ ರವಿತೇಜ ನೀಡಿದ್ದರು. ಅದೇನೆಂದರೆ ಸಾಗುತ ದೂರ ದೂರ ಚಿತ್ರಕ್ಕೆ ನೀನೇ ಹೀರೋ ಅನ್ನೋದು. ಆಗಿನ್ನೂ ನಿರ್ಮಾಪಕರು ಕೂಡಾ ಅಂತಿಮವಾಗಿರಲಿಲ್ಲ. ಎಷ್ಟೋ ಸಲ “ಪ್ರೊಡ್ಯೂಸರ್ ಒಪ್ಪಲಿಲ್ಲ ಅಂದರೆ ಬೇರೆ ಯಾರನ್ನಾದರೂ ಹಾಕಿಕೊಳ್ಳಿ, ನನಗೆ ಯಾವುದಾದರೂ ಸಣ್ಣ ಪಾತ್ರ ಕೊಟ್ಟರೂ ಸಾಕು” ಅಂತಾ ಸ್ವತಃ ಮಹೇಶ್ ಹೇಳಿದ್ದಿದೆ. ಆಗ ರವಿತೇಜ ಹೇಳುತ್ತಿದ್ದುದು ಒಂದೇ ಮಾತು ; ಸಿನಿಮಾ ಸ್ಕ್ರಿಪ್ಟು ಪಕ್ಕಕ್ಕೆತ್ತಿಡುತ್ತೀನೇ ಹೊರತು, ನಿನ್ನನ್ನು ಬಿಟ್ಟು ಈ ಚಿತ್ರವನ್ನು, ಈ ಪಾತ್ರವನ್ನು ಬೇರೆಯವರಿಂದ ಮಾಡಿಸಲಾರೆ ಅಂತಾ. ಅದಕ್ಕೆ ತಕ್ಕಂತೆ ಸಿನಿಮಾ ನಿರ್ಮಾಣ ಮಾಡಲು ಒಪ್ಪಿಕೊಂಡ ಅಮಿತ್ ಪೂಜಾರಿ ಕೂಡಾ ಮಹೇಶ್ ಅವರೇ ಈ ಪಾತ್ರ ಮಾಡಲಿ ಅಂದರು. “ಇಷ್ಟೊಂದು ಹಣ ಹಾಕಿ ಸಿನಿಮಾ ಮಾಡುತ್ತಿದ್ದೀನಿ, ಹೆಸರಿರುವ ಯಾರಾದರೂ ಹೀರೋ ಈ ಪಾತ್ರ ಮಾಡಲಿ” ಅಂತಾ ಒಂದು ಸಲ ನಿರ್ಮಾಪಕರು ಯೋಚಿಸಿದ್ದಿದ್ದರೂ ಈ ಚಿತ್ರ ಈ ಮಟ್ಟಕ್ಕೆ ಮೂಡಿಬರುತ್ತಿರಲಿಲ್ಲ. ರವಿತೇಜ ನಿರ್ದೇಶನದಲ್ಲಿ ಈ ವಾರ ತೆರೆಗೆ ಬರುತ್ತಿರುವ ಸಾಗುತ ದೂರ ದೂರ ಮಹೇಶ್ ಇಷ್ಟು ದಿನ ಬಯಸಿದ್ದನ್ನೆಲ್ಲಾ ಒಟ್ಟೊಟ್ಟಿಗೇ ಸಾಕಾರಗೊಳಿಸುವಂತೆ ಮೂಡಿಬಂದಿದೆ.
ಸಾಗುತ ದೂರ ದೂರ ಚಿತ್ರದಲ್ಲಿ ಮಹೇಶ್ ಪಾತ್ರವೇ ತೀರಾ ಭಿನ್ನ. ಈ ಚಿತ್ರದ ಟ್ರೇಲರ್ ನೋಡಿದರೇನೆ ಅದು ಯಾವ ಥರದ್ದು ಅಂತಾ ಗೊತ್ತಾಗುತ್ತದೆ. ಬದುಕಿನಲ್ಲಿ ಕಡುಗಷ್ಟವನ್ನು ಕಂಡು, ಸಿನಿಮಾರಂಗದಲ್ಲಿ ಹೆಸರು ಮಾಡಬೇಕೆನ್ನುವ ಕಾರಣಕ್ಕೆ ಸಾಕಷ್ಟು ಕಷ್ಟ ಪಟ್ಟಿರುವ, ಜೀವದ ಹಂಗು ತೊರೆದು ಸಾಹಸ ಮಾಡುತ್ತಾ ಬಂದಿರುವ ಮಹೇಶ್ ಒಳಗೊಬ್ಬ ಅಪ್ಪಟ ನಟನಿದ್ದಾನೆ. ಆ ನಟನ ತಾಕತ್ತೇನೆನ್ನುವುದು ಜಗತ್ತಿಗೆ ಪರಿಚಯವಾಗಬೇಕೆಂದರೆ ಸಾಗುತ ದೂರ ದೂರ ಎನ್ನುವ ಸುಂದರ ಸಿನಿಮಾ ಗೆಲ್ಲಬೇಕು. ಮಹೇಶ್ ರಂಥಾ ಅಪರೂಪದ ಪ್ರತಿಭೆಗಳು ಬೆಳೆದುನಿಲ್ಲಬೇಕೆಂದರೆ ಪ್ರೇಕ್ಷಕರು ಅವರ ಕೈ ಹಿಡಿಯುವ ಮನಸ್ಸು ಮಾಡಬೇಕು…