ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಈಗಾಗಲೇ ಕಾತುರದಿಂದ ಕಾಯುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಆಗಸ್ಟ್ 30ಕ್ಕೆ ಸಾಹೋ ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಸಾಹೋ ಚಿತ್ರದ ಪೋಸ್ಟರ್ ಗಳನ್ನು ಒಂದರ ಹಿಂದೆ ಒಂದರಂತೆ ರಿಲೀಸ್ ಕೂಡ ಮಾಡಿದೆ. ಸದ್ಯ ಈ ಪೋಸ್ಟರ್ಗಳಿಂದಲೇ ‘ಸಾಹೋ’ ಚಿತ್ರ ವಿವಾದಕ್ಕೀಡಾಗಿದೆ.
ಇತ್ತೀಚಿಗೆ ಸಾಹೋ ತಂಡವು ಪ್ರಭಾಸ್ ಹಾಗೂ ಶ್ರದ್ಧಾ ಕಪೂರ್ ಪರಸ್ಪರ ಅಪ್ಪಿಕೊಂಡಿರುವ ರೊಮ್ಯಾಂಟಿಕ್ ಪೋಸ್ಟರ್ವೊಂದನ್ನು ಹಂಚಿಕೊಂಡಿತ್ತು. ಆದರೆ ಆ ಪೋಸ್ಟರ್ 2016ರಲ್ಲಿ ರಣಬೀರ್ ಹಾಗೂ ಐಶ್ವರ್ಯಾ ರೈ ಬಚ್ಚನ್ ನಟಿಸಿದ ‘ಏ ದಿಲ್ ಹೇ ಮುಶ್ಕಿಲ್’ ಚಿತ್ರದ್ದು. ಅದನ್ನು ಯಥಾವತ್ತಾಗಿ ನಕಲು ಮಾಡಿದ್ದಾರೆ ಎಂಬ ಗುಸು ಗುಸು ಕೇಳಿಬರುತ್ತಿದೆ. ಇದೊಂದೆ ಅಲ್ಲದೇ, ಈ ಹಿಂದೆ ಬಿಡುಗಡೆ ಮಾಡಿರುವ ಆರೇಳು ಪೋಸ್ಟರ್ಗಳು ಹಾಲಿವುಡ್ ಚಿತ್ರಗಳ ಪೋಸ್ಟರ್ಗಳ ನಕಲು ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಎಲ್ಲ ಪೋಸ್ಟರ್ ಗಳನ್ನು ಕಾಪಿ ಮಾಡಿದ್ದರೂ ಸಹ ಸಾಹೋ ಚಿತ್ರತಂಡ ಅದನ್ನು ಸ್ಪೂರ್ತಿ ಎಂದೂ ಕರೆಯಬಹುದು ಎಂದು ಕಮೆಂಟಿಗರು ಕಾಮಿಡಿ ಮಾಡಿದ್ದಾರೆ. ಆದರೆ ಈ ಕುರಿತು ಚಿತ್ರತಂಡ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.