‘ಸದ್ಯ ಕನ್ನಡ ಚಿತ್ರರಂಗದಲ್ಲಿರುವ ಹೊಸ ತಲೆಮಾರಿನ ಪ್ರತಿಭಾವಂತ ನಟರಲ್ಲಿ ರಿಷಿ ಪ್ರಮುಖರಾಗಿದ್ದಾರೆ. ಎಂಥಾ ಭಾವನೆಗಳನ್ನು ಬೇಕಾದರೂ ವ್ಯಕ್ತಪಡಿಸಬಲ್ಲ ಕಲೆ ಅವರಲ್ಲಿದೆ.
- ಜೇಕಬ್ ವರ್ಗೀಸ್
ರಿಷಿ ನಟಿಸುತ್ತಿರುವ ‘ಸಕಲ ಕಲಾ ವಲ್ಲಭ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸವಾರಿ, ಪೃಥ್ವಿ, ಚಂಬಲ್ನಂಥಾ ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿರೋ ನಿರ್ದೇಶಕ ಜೇಕಬ್ ವರ್ಗೀಸ್ ಸಕಲ ಕಲಾ ವಲ್ಲಭನೊಂದಿಗೆ ಮತ್ತೆ ಪ್ರೇಕ್ಷಕರಿಗೆ ಎದುರಾಗಿದ್ದಾರೆ. ಇದೀಗ ವಿನೂತನ ಶೀರ್ಷಿಕೆಯ ಫಸ್ಟ್ ಲುಕ್ ಪೋಸ್ಟರ್ ರೂಪಿಸಿ ಕುತೂಹಲವನ್ನೂ ಹುಟ್ಟಿಸಿದ್ದಾರೆ.
ಜೇಕಬ್ ವರ್ಗೀಸ್ ಸಕಲ ಕಲಾ ವಲ್ಲಭ ಎಂಬ ಹೆಸರು ಘೋಷಣೆ ಮಾಡಿದಾಗಲೇ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಗಮನ ಕೇಂದ್ರೀಕರಿಸಿದ್ದರು. ಇದಕ್ಕೆ ರಿಷಿ ನಾಯಕನಾಗಿ ಆಯ್ಕೆಯಾದಾಗ ಮತ್ತೊಂದು ರೌಂಡು ಸದ್ದಾಗಿತ್ತು. ಅಷ್ಟಕ್ಕೂ ಓರ್ವ ಭಿನ್ನವಾಗಿ ಆಲೋಚಿಸುವ ಪ್ರತಿಭಾವಂತ ನಿರ್ದೇಶಕನ ಚಿತ್ರಗಳ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಜೇಕಬ್ ವರ್ಗೀಸ್ ಈ ಹಿಂದೆ ಸವಾರಿ ಚಿತ್ರದ ಮೂಲಕ ಚಿತ್ರರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿದ್ದವರು. ಆ ಬಳಿಕ ಪೃಥ್ವಿ ಮತ್ತು ಚಂಬಲ್ ಎಂಬ ರಿಯಲಿಸ್ಟಿಕ್ ಚಿತ್ರಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಇಂಥಾ ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿರುವ ಅವರ ಐದನೇ ಚಿತ್ರ ಸಕಲ ಕಲಾ ವಲ್ಲಭ. ರಿಯಲಿಸ್ಟಿಕ್ ಸಿನಿಮಾಗಳನ್ನು ಕಟ್ಟಿಕೊಡುತ್ತಿದ್ದ ಜೇಕಬ್ ಇದ್ದಕ್ಕಿದ್ದ ಹಾಗೆ ಬೇರೆಯದ್ದೇ ಒಳಹು ನೀಡುವ ಶೀರ್ಷಿಕೆಯನ್ನು ಇಟ್ಟಿದ್ದಾರಲ್ಲಾ? ಅನ್ನೋ ಕುತೂಹಲ ಸಹಜವಾಗಿಯೇ ಮೂಡುತ್ತದೆ. ಹೌದು, ಈ ಬಾರಿ ಜೇಕಬ್ ವರ್ಗೀಸ್ ಬೇರೆ ಜಾನರಿನ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸೀರಿಯಸ್ ಸಬ್ಜೆಕ್ಟಿಗೆ ಒಂಚೂರು ಬ್ರೇಕ್ ಹಾಕಿ ಔಟ್ ಅಂಡ್ ಔಟ್ ರೊಮ್ಯಾಂಟಿಕ್ ಕಾಮಿಡಿ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯುವ ಕಥೆ ಈ ಚಿತ್ರದ್ದಾಗಿದ್ದು, ರಿಷಿ ಅನೇಕ ಬಗೆಯಲ್ಲಿ ಇಲ್ಲಿ ಅವತರಿಸಿದ್ದಾರೆ. ರೇಬಾ ಮೋನಿಕಾ ರಿಷಿಗೆ ಜೋಡಿಯಾಗಿ ನಟಿಸಿದ್ದಾರೆ. ಆಪರೇಷನ್ ಅಲಮೇಲಮ್ಮ ಮತ್ತು ಕವಲು ದಾರಿ ಚಿತ್ರಗಳಲ್ಲಿ ನಟಿಸಿರುವ ರಿಷಿ ಇಲ್ಲಿ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್, ವಿನಯ ಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.
‘ಸದ್ಯ ಕನ್ನಡ ಚಿತ್ರರಂಗದಲ್ಲಿರುವ ಹೊಸ ತಲೆಮಾರಿನ ಪ್ರತಿಭಾವಂತ ನಟರಲ್ಲಿ ರಿಷಿ ಪ್ರಮುಖರಾಗಿದ್ದಾರೆ. ಎಂಥಾ ಭಾವನೆಗಳನ್ನು ಬೇಕಾದರೂ ವ್ಯಕ್ತಪಡಿಸಬಲ್ಲ ಕಲೆ ಅವರಲ್ಲಿದೆ. ಹೀಗಾಗಿ ರಿಷಿಯವರನ್ನು ಈ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸ್ವತಃ ಜೇಕಬ್ ಹೇಳಿದ್ದಾರೆ. ಈಗಾಗಲೇ ಸಕಲ ಕಲಾ ವಲ್ಲಭ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಎಲ್ಲವನ್ನೂ ಮುಗಿಸಿ ಸೆನ್ಸಾರ್ ಮುಂದೆ ಹಾಜರಾಗುತ್ತಿದೆ. ನವೆಂಬರ್ ಕೊನೆಯ ವಾರದಲ್ಲಿ ಸಕಲ ಕಲಾ ವಲ್ಲಭ ಜಗತ್ತಿನಾದ್ಯಂತ ತೆರೆಮೇಲೆ ಎದ್ದು ನಿಲ್ಲಲಿದ್ದಾನೆ.
ಇನ್ನುಳಿದಂತೆ ಸಕಲ ಕಲಾ ವಲ್ಲಭ ಚಿತ್ರದ ಪೋಸ್ಟರಿನಲ್ಲಿ ಶೀರ್ಷಿಕೆಯನ್ನಷ್ಟೇ ಪ್ರಧಾನವಾಗಿಸಿದ್ದಾರೆ. ಚಿತ್ರ ಕೂಡಾ ತೀರಾ ಭಿನ್ನವಾಗಿದೆ ಎಂಬ ಸುಳಿವನ್ನೂ ಈ ಶೀರ್ಷಿಕೆ ವಿನ್ಯಾಸ ರವಾನಿಸಿದೆ.