ಸಖತ್ ಅದ್ಧೂರಿಯಾಗಿ ನೆರವೇರಿದೆ ‘ಸಖತ್’
ವೇದಿಕೆಯಲ್ಲಿ ಗಣೇಶ್-ಪ್ರೇಮ್ ಹಾಡಿನ ಜುಗಲ್ ಬಂದಿ..!
ಕೊರೋನಾ ಕರಿ ನೆರಳು ಆವರಿಸಿದ ನಂತರ ಎರಡೆರಡು ಲಾಕ್ ಡೌನುಗಳು ಏರ್ಪಟ್ಟವು. ಈ ನಡುವೆ ಸಿನಿಮಾ ರಂಗ ಕೂಡಾ ಚಾಲನೆಗೊಂಡಿತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಸ್ಯಾಂಡಲ್ ವುಡ್ಡನ್ನು ಮತ್ತಷ್ಟು ಗಾಢ ಅಂಧಃಕಾರಕ್ಕೆ ತಳ್ಳಿದ್ದು ಸುಳ್ಳಲ್ಲ. ಸರಿ ಸುಮಾರು ಇಪ್ಪತ್ತು ದಿನದ ಸೂತಕದ ಛಾಯೆ ಚಾಲ್ತಿಯಲ್ಲಿದೆ. ಇದರ ನಡುವೆಯೇ ಕಳೆದೊಂದು ವಾರದಿಂದ ಕನ್ನಡ ಚಿತ್ರಜಗತ್ತು ಮೈಕೊಡವಿ ಎದ್ದು ನಿಂತಂತಾ ಭಾವ ಕೂಡಾ ಮೂಡಿದೆ.
2019ರ ನಂತರ ಕೊರೋನಾ ಕಾಟದಿಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಯಾವುದೇ ಚಿತ್ರ ತೆರೆಗೆಬರಲು ಸಾಧ್ಯವಾಗಿರಲಿಲ್ಲ. ಗಣಿ ಅಭಿನಯದ ಮೂರು ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದ್ದು, ಮೊದಲನೆಯದಾಗಿ ಸಖತ್ ಹೊರಬರುತ್ತಿದೆ. ಈ ಚಿತ್ರ ಇದೇ ನವೆಂಬರ್ 26ಕ್ಕೆ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸುತ್ತಿದೆ. ಫಸ್ಟ್ ಲುಕ್, ಟೀಸರ್ ಹಾಗೂ ಸಾಂಗ್ಸ್ ಮೂಲಕ ಕುತೂಹಲದ ಚಿಟ್ಟೆಯಾಗಿರುವ ಸಖತ್ ಸಿನಿಮಾ ಬಳಗ ನಿನ್ನೆ ಸಖತ್ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಸಿನಿಮಾದ ನಾಯಕ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಸಿಂಪಲ್ ಸುನಿ, ನಾಯಕಿಯರಾದ ನಿಶ್ವಿಕಾ ನಾಯ್ಡು, ಸುರಭಿ, ನಿರ್ಮಾಪಕರಾದ ಸುಪ್ರಿತ್-ನಿಶಾ, ಹಿರಿಯ ಕಲಾವಿದರ ರಂಗಾಯಣ ರಘು ಸೇರಿದಂತೆ ಸ್ಯಾಂಡಲ್ ವುಡ್ ನ ಹಲವು ತಾರಾಬಳಗ ಸಖತ್ ಪ್ರೀ-ರಿಲೀಸ್ ಇವೆಂಟ್ ಗೆ ಸಾಕ್ಷಿಯಾದರು. ನಿರ್ದೇಶಕ ಕಂ ನಟ ಜೋಗಿ ಪ್ರೇಮ್, ಬೈ ಟು ಲವ್ ಬ್ಯೂಟಿ ಶ್ರೀಲೀಲಾ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಖತ್ ಸಿನಿಮಾಗೆ ಶುಭ ಹಾರೈಸಿದರು.
ಗಣೇಶ್ ಪ್ರೇಮ್ ಒಟ್ಟಿಗೆ ವೇದಿಕೆ ಏರಿದರು. ಈ ವೇಳೆ ಗಣೇಶ್ ಪ್ರೇಮ್ ಗೆ ಒಂದು ಮನವಿ ಮಾಡಿಕೊಂಡರು. ಎಕ್ಸ್ ಕ್ಯೂಸ್ ಮೀ ಸಿನಿಮಾದ ಬ್ರಹ್ಮ ವಿಷ್ಣು ಹಾಡು ಹೇಳುವಂತೆ ಕೋರಿಕೊಂಡರು. ಅದಕ್ಕೆ ಅಕ್ಕರೆಯಿಂದ ಪ್ರತಿಕ್ರಿಯಿಸಿದ ಪ್ರೇಮ್ ಹಾಡು ಹೇಳಿದರು. ಈ ವೇಳೆ ಗಣೇಶ್ ಕೂಡ ಧನಿಗೂಡಿಸಿ ಬ್ರಹ್ಮ ವಿಷ್ಣು ಹಾಡು ಹೇಳಿದರು.
ಇದಕ್ಕೂ ಮೊದಲು ಮಾತಾಡಿದ ಗೋಲ್ಡನ್ ಸ್ಟಾರ್ ಗಣೇಶ್, ಅಪ್ಪುಗೆ ನಮನ ಸಲ್ಲಿಸಿ ಪವರ್ ಸ್ಟಾರ್ ಕನ್ನಡ ಚಿತ್ರರಂಗ ಇರುವವರೆಗೂ ನಂಬರ್-1 ಸ್ಟಾರ್ ಅಂತ ಮನದ ಮಾತು ಬಿಚ್ಚಿಟ್ಟರು. ಬಳಿಕ ತಮ್ಮ ಚಂದದ ಮಾತಿನ ಮೂಲಕ ಎಲ್ಲರನ್ನೂ ನಕ್ಕು ನಲಿಸಿದ ಗಣಪ ಸಖತ್ ಸಿನಿಮಾ ಎಲ್ಲರೂ ನೋಡಿ ಅಂತಾ ಮನವಿ ಮಾಡಿಕೊಂಡರು.
ಚಿತ್ರದ ನಾಯಕಿ ನಿಶ್ವಿಕಾ ನಾಯ್ಡು, ನಿರ್ದೇಶಕ ಸಿಂಪಲ್ ಸುನಿ, ಸಂಗೀತ ನಿರ್ದೇಶಕ ಜೂಡಾ ಸ್ಯಾಂಡಿ, ಹಾಸ್ಯನಟ ಧರ್ಮಣ್ಣ ಕಡೂರು, ರಂಗಾಯಣ ರಘು ಸಖತ್ ಸಿನಿಮಾದಲ್ಲಿನ ಜರ್ನಿ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಟಿವಿ ರಿಯಾಲಿಟಿ ಶೋ ಸುತ್ತ ಎಣೆದಿರೋ ಸಖತ್ ಸಿನಿಮಾಕ್ಕೆ ಸುಪ್ರಿತ್ ಹಾಗೂ ನಿಶಾ ಬಂಡವಾಳ ಹೂಡಿದ್ದು, ಈಗಾಗ್ಲೇ ಸೆನ್ಸಾರ್ ಮುಗಿಸಿರೋ ಸಖತ್ ಸಿನಿಮಾ ಇದೇ 26ಕ್ಕೆ ಥಿಯೇಟರ್ ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದೆ.
Comments