ಈ ಹಿಂದೆ ಚಮಕ್‌ ಕೊಟ್ಟಿದ್ದ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಸಿಂಪಲ್‌ ಸುನಿ ಕಾಂಬಿನೇಷನ್ನಿನ ಎರಡನೇ ಸಿನಿಮಾ ಸಖತ್.‌ ವಿನೂತನ ಪ್ರಚಾರ ತಂತ್ರ ಸೇರಿದಂತೆ ನಾನಾ ಕಾರಣಗಳಿಗಾಗಿ ಈ ಚಿತ್ರ ಕುತೂಹಲ ಹುಟ್ಟಿಸಿತ್ತು. ಮೊದಲೆಲ್ಲಾ ವರ್ಷಕ್ಕೆ ಒಂದು ಅಥವಾ ಎರಡು ಗಣೇಶ್‌ ಅಭಿನಯದ ಸಿನಿಮಾಗಳು ತೆರೆಗೆ ಬರುತ್ತಿದ್ದವು. ಕೊರೋನಾ ಕಾರಣಕ್ಕೆ ಗಣಿಯನ್ನು ಜನ ತೆರೆ ಮೇಲೆ ನೋಡಿ ವರ್ಷ ಎರಡರ ಹತ್ತಿರವಾಗಿದೆ. ಮುಂಗಾರು ಮಳೆ ಹುಡುಗನ ಸಿನಿಮಾಗಾಗಿಯೇ ಕಾದು, ಚಿತ್ರಮಂದಿರಕ್ಕೆ ಬರುವ ವರ್ಗವಿದೆ. ಮಕ್ಕಳು, ಮಹಿಳೆಯರು, ವೃದ್ಧರು, ಯುವಕರು ಸೇರಿದಂತೆ ಎಲ್ಲ ವರ್ಗದ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿರುವ ಕಾರಣಕ್ಕೆ ಗಣೇಶ್‌ ಸಿನಿಮಾಗಳು ಪ್ರಾಮುಖ್ಯತೆ ಪಡೆಯುತ್ತವೆ. ಈಗ ಡೈರೆಕ್ಟರ್‌ ಸುನಿ ಮತ್ತು ಗಣಿ ಮತ್ತೆ ಒಟ್ಟಿಗೆ ಸೇರಿ ಸಿನಿಮಾ ಮಾಡಿರುವುದು ಎಲ್ಲರ ಕ್ಯೂರಿಯಾಸಿಟಿಗೆ ಕಾಣವಾಗಿದೆ.

ಆರ್ಕೆಸ್ಟ್ರಾ, ಸಿಂಗಿಂಗ್‌ ರಿಯಾಲಿಟಿ ಶೋಗಳ ಹಿನ್ನೆಲೆಯಲ್ಲಿ ಸಿನಿಮಾ ಶುರುವಾಗುತ್ತದೆ. ನಾಯಕನಿಗೆ ನಿರೂಪಕಿಯ ಮೇಲಿನ ಮೋಹ. ಹೇಗಾದರೂ ಮಾಡಿ ಶೋನಲ್ಲಿ ಛಾನ್ಸು ಗಿಟ್ಟಿಸಿಕೊಳ್ಳಬೇಕು ಅನ್ನೋದು ಹೀರೋ ಗುರಿ. ಬರಿಯ ಪ್ರತಿಭಾವಂತರನ್ನಷ್ಟೇ ರಿಯಾಲಿಟಿ ಕಾರ್ಯಕ್ರಮಗಳಿಗೆ ಆಯ್ಕೆ ಮಾಡಿಕೊಳ್ಳುವುದಿಲ್ಲವಲ್ಲಾ? ಹೀಗಾಗಿ ಅಂಧನಂತೆ ನಟಿಸಿ ಅವಕಾಶ ಗಿಟ್ಟಿಸಿಕೊಳ್ಳುತ್ತಾನೆ. ಟಿ ಆರ್‌ ಪಿ ಕೂಡಾ ಏರುತ್ತದೆ. ಅದೇ ಹೊತ್ತಿಗೆ, ಜಗತ್ತಿನ ಕಣ್ಣಿಗೆ ಕುರುಡನಾಗಿ ಕಾಣುವಾತನ ಎದುರು ಬರ್ಬರ ಕೊಲೆಯೊಂದು ನಡೆದುಹೋಗುತ್ತದೆ. ಅದು ಅಂಧ ಶಾಲೆಯ ಮುಖ್ಯಸ್ಥನದ್ದು. ಅದನ್ನು ಮಾಡಿದ ಕಾರ್ಪೊರೇಟರ್‌ ವಿರುದ್ಧ ಹೀರೋ ಹೇಳುವ ಸಾಕ್ಷಿ ನಿಲ್ಲುತ್ತದಾ? ನಿರೂಪಕಿಯೊಂದಿಗಿನ ಪ್ರೀತಿ ಏನಾಗುತ್ತದೆ? ಮತ್ತೊಬ್ಬಳು ನಾಯಕಿಯ ಪಾತ್ರವೇನು? ಅನ್ನೋದೆಲ್ಲಾ ತಿಳಿದುಕೊಳ್ಳಲು ಸಖತ್‌ ಸಿನಿಮಾವನ್ನು ನೋಡಲೇಬೇಕು.

ಪ್ರೀತಿ ಪಡೆಯಲು ಸುಳ್ಳು ಹೇಳುವ ನಾಯಕ ನ್ಯಾಯವನ್ನು ಎತ್ತಿಹಿಡಿಯಲು ಸತ್ಯವನ್ನೇ ಹೇಳುವ ಕಾನ್ಸೆಪ್ಟು ಇಷ್ಟವಾಗುತ್ತದೆ. ಸಾಧು ಕೋಕಿಲಾ, ಡುಮ್ಮ ಗಿರಿ ಜೊತೆಗೆ ಗಣೇಶ್‌ ಕಾಂಬಿನೇಷನ್‌ ಸಖತ್‌ ವರ್ಕೌಟ್ ಆಗಿದೆ. ಆಸ್ಪತ್ರೆ ಸೀನು ಇಡೀ ಸಿನಿಮಾದ ಹೈಲೇಟು. ಪಾತ್ರ ಯಾವುದೇ ಆದರೂ, ಅದರೊಳಗಿಳಿದು ನಟಿಸುವ ಗಣೇಶ್‌ ಅಂಧನ ಪಾತ್ರದಲ್ಲಿ ಸಖತ್ತಾಗೇ ಸಮ್ಮೋಹಕಗೊಳಿಸುತ್ತಾರೆ. ನಗಿಸುವುದರಲ್ಲಿಯೂ ಪೂರ್ತಿ ಅಂಕ ಪಡೆದಿದ್ದಾರೆ. ಮತ್ತೆ ಮತ್ತೆ ನೋಡಬೇಕು ಅನ್ನುವ ಷ್ಟರಮಟ್ಟಿಗೆ ನಿಶ್ವಿಕಾ ಸೆಳೆಯುತ್ತಾಳೆ. ಈ ಹುಡುಗಿಯ ನಟನೆ ಕೂಡಾ ಅಷ್ಟೇ ಚೆಂದ ಚೆಂದ. ಥೇಟು ರಿಯಾಲಿಟಿ ಶೋ ತೀರ್ಪುಗಾರನಂತೆಯೇ ಡಿ.ಪಿ.ರಘುರಾಮ್‌ ಅವತಾರವೆತ್ತಿದ್ದಾರೆ. ಲಾಯರ್‌ ಗಳ ಪಾತ್ರದಲ್ಲಿ ರಂಗಾಯಣ ರಘು ಮತ್ತು ಪಯಣ ರವಿಶಂಕರ್‌ ಅವರದ್ದು ಬೆಸ್ಟ್‌ ಪರ್ಫಾರ್ಮೆನ್ಸ್.‌ ಮಾಳವಿಕಾಗೆ ಸಿಕ್ಕಿರುವ ಜಡ್ಜ್‌ ಪಾತ್ರ ಹೇಳಿಮಾಡಿಸಿದಂತಿದೆ.

ಸದಾ ಹೊಸತನಕ್ಕೆ ತೆರೆದುಕೊಳ್ಳುವ ಸುನಿ, ಯಾವತ್ತೂ ಸಿದ್ದಸೂತ್ರದ ಮಾಮೂಲಿ ಸಿನಿಮಾವನ್ನು ಮಾಡಿದವರಲ್ಲ. ರೂಪಿಸಿದ ಪ್ರತಿಯೊಂದು ಚಿತ್ರದಲ್ಲೂ ಏನಾದರೊಂದು ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಈಗ ಸಖತ್‌ ಸಿನಿಮಾದಲ್ಲಿ ಕೂಡಾ ಆ ಎಕ್ಸ್‌ಪರಿಮೆಂಟು ಮುಂದುವರೆದಿದೆ. ಸಂತೋಷ್‌ ರೈ ಪತಾಜೆ ಕ್ಯಾಮೆರಾ ಕೆಲಸ ಯಾವತ್ತಿಗೂ ಬ್ಯೂಟಿಫುಲ್ಲಾಗೇ ಇರುತ್ತದೆ. ಸಖತ್‌ ನಲ್ಲಿ ಎಲ್ಲವನ್ನೂ ಸಖತ್ತಾಗಿ ಕಾಣಿಸಿರುವ ಪತಾಜೆಯ ಶ್ರಮ ಎದ್ದು ಕಾಣುತ್ತದೆ. ಜ್ಯುಡಾ ಸ್ಯಾಂಡಿ ಮ್ಯೂಸಿಕ್‌ ಸಾಧಾರಣ, ಹಿನ್ನೆಲೆ ಸಂಗೀತ ಅಸಾಧಾರಣ!

 ಇಡೀ ಸಿನಿಮಾದಲ್ಲಿ ಕಾಮಿಡಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಪ್ರತೀ ದೃಶ್ಯದ ಪ್ರಧಾನ ಉದ್ದೇಶ ನಗಿಸುವುದೇ ಆಗಿದೆ.  ʻʻನಾವು ಮುಖ್ಯ ಸಾಕ್ಷೀದಾರನಿಗೆ ಐ ವಿಟ್ನೆಸ್‌ ಅಂತೀವಿ. ಆದರೆ ಇಲ್ಲಿ ಇವನಿಗೆ ಕಣ್ಣು ಇಲ್ಲದೇ ಇರೋದರಿಂದ ಈತನನ್ನು ಸಾಂದರ್ಭಿಕ ಸಾಕ್ಷಿ ಅಂತಷ್ಟೇ ಪರಿಗಣಿಸಬಹುದು-ʼʼ ಅಂತಾ ಲಾಯರ್‌ ವಾದ ಶುರು ಮಾಡಿದಾಗ, ʻʻಮಹಾ ಸ್ವಾಮಿಗಳೇ ನಾನು ಐ ವಿಟ್ನೆಸ್‌ ಅಲ್ಲದೇಇರಬಹುದು. ಆದರೆ, ಐ ವಿಟ್ನೆಸ್‌ ದಟ್‌ ಇನ್ಸಿಡೆಂಟ್‌. ನಾನು ನ್ಯಾಯದೇವತೆ ಇಬ್ಬರೂ ಒಂದೇ. ಇಬ್ರಿಗೂ ಕಣ್ಣಿಲ್ಲ. ಆದರೆ ತಕ್ಕಡಿಯನ್ನ ಸಮವಾಗೇ ತೂಗ್ತೀವಿ…ʼʼ ಅನ್ನೋದು ಹೀರೋ ಮಾತು. – ಇದು ಸಖತ್‌ ಸಿನಿಮಾದ ಆರಂಭದಲ್ಲಿ ಬರುವ ಸಂಭಾಷಣೆ. ಇಡೀ ಸಿನಿಮಾದಲ್ಲಿ ಇಂಥ ಟ್ರಿಕ್ಕೀ ಮಾತುಗಳು ತುಂಬಿಕೊಂಡಿವೆ. ಭರಪೂರ ಮನರಂಜನೆಯನ್ನೂ ನೀಡುತ್ತದೆ. ಸದ್ಯ ಕೊರೋನಾ ವೈರಸ್ಸು ಸೃಷ್ಟಿಸಿ ಹೋಗಿರುವ ಪರಿಸ್ಥಿತಿಯಲ್ಲಿ ಜನ ನಗುವಿಲ್ಲದೇ ನರಳಾಡುತ್ತಿದ್ದಾರೆ. ಖಂಡಿತಾ ಸಖತ್‌ ನಗುವಿನ ಗುಳಿಗೆಯಂತೆ ಕೆಲಸ ಮಾಡುತ್ತದೆ. ಧಾರಾಳವಾಗಿ ಹೋಗಿ ನೋಡಿಬನ್ನಿ…!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬೆಂಗಳೂರಿನಲ್ಲಿ ಸಿಕ್ಕಿಕೊಂಡವರ ಸ್ಟೋರಿ!

Previous article

ಕನ್ನಡಿಗರಿಗೆ ಕ್ಷಮೆ ಕೇಳಿದ್ದೇಕೆ ರಾಜಮೌಳಿ..?

Next article

You may also like

Comments

Leave a reply

Your email address will not be published. Required fields are marked *