ಚಿತ್ರೀಕರಣದ ಸಂದರ್ಭದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಕುತೂಹಲ ಸೃಷ್ಟಿಸುತ್ತಾ ಬಂದಿದ್ದ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಸಲಗ ಚಿತ್ರದ ವಿಡಿಯೋ ಹಾಡೊಂದು ರಿಲೀಸಾಗಿದೆ. ಮೋಹನ್ ಕೊರಿಯೋಗ್ರಫಿ ಮಾಡಿರುವ ಈ ಹಾಡಿನ ಮೇಕಿಂಗ್ ವಿಡಿಯೋನೇ ಮಜಾ ಕೊಡುವಂತಿದೆ. ಪೂರ್ತಿ ಡ್ಯಾನ್ಸಿನ ಸಮೇತ ಹೊರಬಂದಮೇಲೆ ಮತ್ತಷ್ಟು ಗಮನ ಸೆಳೆಯೋದು ಗ್ಯಾರೆಂಟಿ. ಪಡ್ಡೆ ಹುಡುಗರ ಮೈ ಕುಣಿಸುವಂತಾ ಈ ಹಾಡು ಸಖತ್ ಕಲರ್ಫುಲ್ ಆಗಿ ಮೂಡಿಬಂದಿದೆ. ಟಗರು ಹಾಡಿನ ನಂತರ ಅಂಥೋಣಿ ದಾಸನ್ ಮತ್ತು ಚರಣ್ ರಾಜ್ ಕಾಂಬಿನೇಷನ್ನಿನ ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗುವ ಎಲ್ಲ ಕ್ವಾಲಿಟಿ ಹೊಂದಿದೆ.
ಬೆಂಗಳೂರಿನ ಸ್ಲಂವೊಂದರಲ್ಲಿ ದಿನದ ಕೂಲಿ ಮಾಡುತ್ತಾ ಅದ್ಭುತವಾಗಿ ಹಾಡು ಹೇಳುವ ಹುಡುಗನೊಬ್ಬ ಈಗ ತೆರೆ ಮೇಲೂ ಹಾಡುಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಈ ಹುಡುಗನ ಪ್ರತಿಭೆ ಗುರುತಿಸಿ ಸಲಗ ಚಿತ್ರದ ಭಾಗವಾಗಿಸಿರೋದು ನಮ್ಮ ದುನಿಯಾ ವಿಜಯ್. ಪೇಂಟಿಂಗ್ ಕೆಲಸ ಮಾಡಿಕೊಂಡು, ದಿನಕ್ಕೆ ಏಳುನೂರೋ ಎಂಟುನೂರೋ ದುಡಿಮೆ ಮಾಡುವ ಕುಮಾರ್, ಸಂಜೆಹೊತ್ತು ಮೊಬೈಲ್ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾನೆ. ಮೂಲ ತಮಿಳಿಗನಾದರೂ, ಡಾ. ರಾಜ್ ಕುಮಾರ್ ಅವರ ಹಾಡುಗಳನ್ನು ಅದ್ಭುತವಾಗಿ ಹಾಡುವುದು ಈತನ ರೂಢಿ. ಇಂತಾ ಕುಮಾರ್ನ ಪ್ರತಿಭೆ ಗುರುತಿಸಿ ದುನಿಯಾ ವಿಜಯ್ ಈ ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ. ಜೊತೆಗೆ ಕೊಕ್ಕಿ ಕುಮಾರ್ ಅನ್ನೋ ಹೊಸ ನಾಮಕರಣವನ್ನೂ ಮಾಡಿದ್ದಾರೆ!
ಟಗರು ಖ್ಯಾತಿಯ ಗಾಯಕ ಅಂಥೋಣಿ ದಾಸನ್ ಹಾಡಿರುವ ‘ಸೂರಿ ಅಣ್ಣಾ ಅಂತಾ ಶುರುವಾಗುವ ಈ ಹಾಡಿನಲ್ಲಿ ಕೊಕ್ಕಿ ಕುಮಾರ್ ಕಾಣಿಸಿಕೊಂಡಿದ್ದಾನೆ. ‘ಮುಂದೆ ಈತ ದೊಡ್ಡ ಹೆಸರು ಮಾಡುವ ಎಲ್ಲ ಸಾಧ್ಯತೆಯೂ ಇದೆ. ಹಗಲಿನಲ್ಲಿ ಕೂಲಿ ಕೆಲಸ ಮುಗಿಸಿ, ಸಂಜೆಯಾಗುತ್ತಿದ್ದಂತೇ, ಆರ್ಕೆಸ್ಟ್ರಾಗಳಲ್ಲಿ ಹಾಡುವ ಆತನ ಕಲಾಸಕ್ತಿ ನಿಜಕ್ಕೂ ಮೆಚ್ಚಲೇಬೇಕು. ಈ ಕಾರಣದಿಂದ ಸಲಗ ಸಿನಿಮಾದಲ್ಲಿ ಒಂದೊಳ್ಳೆ ಅವಕಾಶ ನೀಡಿದ್ದೇನೆ. ಮುಂದೊಂದು ದಿನ ಆತ ದೊಡ್ಡ ಎತ್ತರಕ್ಕೆ ತಲುಪಿದಾಗ ಆತ ಸಲಗ ತಂಡವನ್ನು ಮರೆಯಲಾರ. ‘ಸಲಗದಲ್ಲಿ ಇಂಥಾ ಹತ್ತಾರು ಪ್ರಯತ್ನಗಳು ನಡೆಯುತ್ತಿವೆ. ಪ್ರತಿಭಾವಂತರಾಗಿದ್ದುಕೊಂಡು, ಅವಕಾಶಕ್ಕಾಗಿ ಪರದಾಡುವವರ ಕಷ್ಟ ಏನು ಅನ್ನೋದು ನನಗೆ ಸ್ವಲ್ಪ ಜಾಸ್ತೀನೇ ಗೊತ್ತು. ಹೀಗಾಗಿ ತೆರೆಮರೆಯಲ್ಲಿರುವವರನ್ನು ಬೆಳಕಿಗೆ ತರುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನಷ್ಟೇ? ಎಂದು ಸ್ವತಃ ದುನಿಯಾ ವಿಜಯ್ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಾಯಕನಟರಲ್ಲಿ ದುನಿಯಾ ವಿಜಯ್ ಕೂಡಾ ಒಬ್ಬರು. ಸಿನಿಮಾವೊಂದನ್ನು ಆರಂಭಿಸುವ ಮುಂಚೆಯೇ ಆ ಪಾತ್ರಕ್ಕಾಗಿ ಅವರು ನಡೆಸುವ ತಾಲೀಮು, ಪೂರ್ವ ತಯಾರಿಗಳೇ ಬೆರಗಾಗಿಸುತ್ತದೆ. ದುನಿಯಾ ಮೂಲಕ ಹೀರೋ ಆಗಿ ಆನಂತರ ದೊಡ್ಡ ಮಟ್ಟದ ಸ್ಟಾರ್ ಆಗಿ ಕನ್ನಡ ಚಿತ್ರರಂಗದಲ್ಲಿ ಉದ್ಭವಿಸಿದವರು ಬ್ಲಾಕ್ ಕೋಬ್ರಾ ವಿಜಯ್. ಸಲಗ ಸಿನಿಮಾದ ಮೂಲಕ ವಿಜಯ್ ವೃತ್ತಿಬದುಕಿಗೆ ದೊಡ್ಡದೊಂದು ತಿರುವು ಸಿಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇದು ವಿಜಯ್ ಅವರು ಮೊದಲ ಬಾರಿಗೆ ನಿರ್ದೇಶಿಸಿ, ನಟಿಸುತ್ತಿರುವ ಸಿನಿಮಾ. ಈ ಚಿತ್ರ ಆರಂಭವಾಗುತ್ತಲೇ ಒಂದು ರೀತಿಯ ಪಾಸಿಟೀವ್ ಫೀಲ್ ಶುರುವಾಗಿದೆ. ಪ್ರತೀ ಹಂತದಲ್ಲೂ ಸುದ್ದಿಯಾಗುತ್ತಿದೆ. ನವೀನ್ ಸಜ್ಜು ಮತ್ತು ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಒಟ್ಟಾರೆಯಾಗಿ, ಎಲ್ಲ ಪ್ರತಿಭಾವಂತರನ್ನು ಒಂದೆಡೆ ಸೇರಿಸಿ ಕೆ.ಪಿ. ಶ್ರೀಕಾಂತ್ ನಿರ್ಮಾಣದಲ್ಲಿ, ವಿಜಯ್ ‘ಸಲಗವನ್ನು ರೂಪಿಸುತ್ತಿದ್ದಾರೆ. ಹೀಗಾಗಿ ‘ಸಲಗ ಶಕ್ತಿಶಾಲಿಯಾಗಿ ಜನ್ಮವೆತ್ತುವುದು ಗ್ಯಾರೆಂಟಿ!
No Comment! Be the first one.