ಬ್ಲಾಕ್ ಕೋಬ್ರಾ ವಿಜಯ್ ಅವರ ಪಾಲಿಗೆ ಈ ಸಿನಿಮಾ ಮತ್ತೊಂದು ದುನಿಯಾ ಆಗೋದು ಗ್ಯಾರೆಂಟಿ. ಸ್ವತಃ ವಿಜಯ್ ನಿರ್ದೇಶಿಸಿ, ನಟಿಸಿರುವ ಸಿನಿಮಾ ಸಲಗ. ಕೆ.ಪಿ. ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ ಬಗ್ಗೆ ಆರಂಭದ ದಿನದಿಂದಲೂ ಥರಹೇವಾರಿ ಕುತೂಹಲಗಳು ಸೃಷ್ಟಿಯಾಗುತ್ತಲೇ ಇವೆ. ಈ ಚಿತ್ರದ ಪೋಸ್ಟರ್, ಫಸ್ಟ್ ಲುಕ್ ಇತ್ಯಾದಿಗಳನ್ನು ನೋಡಿದಾಗಲೇ ವಿಜಿ ಈ ಸಲ ದೊಡ್ಡಮಟ್ಟದಲ್ಲೇ ಸೌಂಡು ಮಾಡುತ್ತಾರೆ ಅನ್ನೋ ಮುನ್ಸೂಚನೆ ಸಿಕ್ಕಿತ್ತು.
ವಿಜಯ್ ನಿರ್ದೇಶನ ಹೇಗಿರಬಹುದು? ದೃಶ್ಯಗಳನ್ನು ಹೇಗೆ ಕಟ್ಟಿರುತ್ತಾರೆ? ಡಾಲಿ ಧನಂಜಯ್ ಪಾತ್ರ ಎಂಥದ್ದಿರಬಹುದು? ಕಾಕ್ರೋಜ್ ಸುಧಿ, ಯಶ್ವಂತ್ ಶೆಟ್ಟಿ ಸೇರಿದಂತೆ ಸಾಕಷ್ಟು ಜನ ಸಹ ಕಲಾವಿದರೂ ಈ ಪ್ರಾಜೆಕ್ಟಿನಲ್ಲಿ ಒಟ್ಟಿಗೇ ಸೇರಿದ್ದಾರಲ್ಲಾ? ಇವರೆಲ್ಲರ ರೋಲು ಏನಿರಬಹುದು? ಎಲ್ಲಕ್ಕಿಂತಾ ಮುಖ್ಯವಾಗಿ, ಸಿನಿಮಾದಿಂದ ಸಿನಿಮಾಗೆ ಭಿನ್ನ ಬಗೆಯಲ್ಲಿ ಕಾಣಿಸಿಕೊಳ್ಳುವ ವಿಜಯ್ ಅವರ ಲುಕ್ಕು, ಮ್ಯಾನರಿಸಮ್ಮು ‘ಸಲಗ’ದಲ್ಲಿ ಹೇಗಿರಬಹುದು… ಹೀಗೆ ಸಲಗ ಅನ್ನೋ ಸಿನಿಮಾ ಬಗ್ಗೆ ಇದ್ದ ಮತ್ತು ಇರುವ ಕೌತುಕದ ಪ್ರಶ್ನೆಗಳು ಒಂದೆರಡಲ್ಲ. ಈಗಾಗಲೇ ಬಿಡುಗಡೆಯಾಗಿರುವ ಸಲಗದ ಟೀಸರ್ ಮತ್ತು ಹಾಡುಗಳು ಈ ಎಲ್ಲ ಕ್ಯೂರಿಯಾಸಿಟಿಗೆ ಉತ್ತರ ನೀಡುತ್ತಲೇ ಬಂದಿವೆ.
ಹಿಂದೆ ಬಿಡುಗಡೆಯಾಗಿದ್ದ ಟ್ರೇಲರಿನಲ್ಲಿ ಒಂದು ಟ್ರೇಲರಿನಲ್ಲಿ ಹೇಳಬಹುದಾದ ವಿಚಾರಗಳನ್ನೆಲ್ಲಾ ಅತಿ ವೇಗವಾಗಿ ತಿಳಿಸಿದ್ದರು. ರೌಡಿಗಳ ಆರ್ಭಟದ ಜೊತೆಗೆ ಅವರ ಭಯ, ತಲ್ಲಣಗಳು… ಚಪ್ಲಿ ಕಿತ್ತು ಹೋಗುವಂತೆ ಹೊಡೆಯೋದು ಅಂದ್ರೆ ಏನು ಅಂತಾ ತೋರಿಸುವ ಆ ಹುಡುಗಿಯ ಧೈರ್ಯ… ರೌಡಿಪಡೆಗಳ ನಡುವಿನ ಯುದ್ಧ, ಪೊಲೀಸರ ದರ್ಪ, ಲಾಂಗು, ಗನ್ನು, ನೆತ್ತರು, ಕ್ರೌರ್ಯಗಳೆಲ್ಲಾ ಸೇರಿದ ಬೆಂಗಳೂರಿನ ಕರಾಳ ಅಧ್ಯಾಯವನ್ನು ಸಲಗ ತೆರೆದಿಡಲಿದೆ ಅನ್ನೋದನ್ನು ಆ ಟೀಸರ್ ಸ್ಪಷ್ಟವಾಗಿ ಹೇಳಿತ್ತು.
ಫೈಟುಗಳನ್ನು ಕಂಪೋಸ್ ಮಾಡಿರುವ ವಿನೋದ್, ಮ್ಯೂಸಿಕ್ಕಿನಲ್ಲಿ ಚರಣ್ ರಾಜ್, ಡೈಲಾಗ್ ಬರೆದಿರುವ ಮಾಸ್ತಿ ಕೂಡಾ ಸಲಗದಿಂದ ಸರಿಯಾಗೇ ಸ್ಕೋರು ಮಾಡಿಕೊಳ್ಳಲಿದ್ದಾರೆ ಅನ್ನೋದೀಗ ಗ್ಯಾರೆಂಟಿಯಾಗಿದೆ. ಒಂದಾದಮೇಲೊಂದು ಹೊರಬರುತ್ತಿರುವ ಈ ಚಿತ್ರದ ಹಾಡುಗಳೆಲ್ಲಾ ಹಿಟ್ ಆಗಿವೆ. ʻʻಜೀವದ್ ಭಯ ಬಂದ್ಬುಟ್ಟು ಸುತ್ತ ಹುಡುಗ್ರುನ್ನಾಕೊಂಡ್ ಓಡಾಡ್ತಿದ್ಯಲ್ಲೋ ನಿನ್ನ…. ಜುಟ್ಟು! ಟಿಣಿಂಗ ಮಿಣಿಂಗ ಟಿಶ್ಶ್ಶ !!ʼʼ ಎನ್ನುವ ವಿಚಿತ್ರ ಹಾಡೊಂದು ಈಗಷ್ಟೇ ರಿಲೀಸಾಗಿ ಎಲ್ಲರ ಗಮನ ಸೆಳೆದಿದೆ.
No Comment! Be the first one.