ಇತ್ತೀಚಿಗೆ ಟಗರು ಟೀಮ್ ದುನಿಯಾ ವಿಜಯ್ ಅವರನ್ನು ಭೇಟಿಯಾಗಿತ್ತು. ಟಗರು ಟೀಮ್ ದುನಿಯಾ ವಿಜಯ್ ಜೊತೆ ಸಲಗ ಸಿನಿಮಾವನ್ನು ಮಾಡಲಿದ್ದಾರೆ ಇತ್ಯಾದಿ ಇತ್ಯಾದಿ ಸುದ್ದಿಗಳು ವೈರಲ್ ಆಗಿತ್ತು. ಟಗರು ಟೀಮ್ ದುನಿಯಾ ವಿಜಯ್ ಜತೆಯಾಗಿದ್ದರೂ ಸಲಗ ಸಿನಿಮಾದ ನಿರ್ದೇಶನವನ್ನು ಯಾರು ಮಾಡಲಿದ್ದಾರೆ ಎಂಬ ವಿಚಾರವನ್ನು ಪೆಂಡಿಂಗ್ ನಲ್ಲಿಟ್ಟಿದ್ದರು. ಸದ್ಯ ಆ ವಿಚಾರಕ್ಕೂ ಉತ್ತರ ದೊರೆತಿದ್ದು, ಕರಿ ಚಿರತೆ ಸಲಗ ಸಿನಿಮಾದಲ್ಲಿ ಅಭಿನಯಿಸುವ ಜತೆಗೆ ಸಲಗದ ಮೂಲಕ ನಿರ್ದೇಶಕನ ಕ್ಯಾಪ್ ನ್ನು ತೊಡಲಿದ್ದಾರಂತೆ.
ಹೌದು, ನಟನಾಗಿ, ನಿರ್ಮಾಪಕನಾಗಿ ಅವತಾರವೆತ್ತಿದ್ದ ವಿಜಯ್, ಸದ್ಯ ನಿರ್ದೇಶಕನಾಗಿಯೂ ತನ್ನ ಅಭಿಮಾನಿಗಳಿಗೆ ದರ್ಶನ ನೀಡುವುದು ಕನ್ ಫರ್ಮ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದುನಿಯಾ ವಿಜಯ್, ಈಗಾಗಲೇ ಸಲಗ ಸಿನಿಮಾಕ್ಕಾಗಿ ಬಹಳಷ್ಟು ರಿಸರ್ಚ್ ನಡೆಸುತ್ತಿದ್ದು, ಕೆಲ ಭೂಗತ ಪಾತಕದವರನ್ನು ಭೇಟಿಯಾಗಿದ್ದಾರಂತೆ. ಸಿನಿಮಾ ಮುಗ್ಧನೊಬ್ಬ ಭೂಗತ ಲೋಕಕ್ಕೆ ಎಂಟ್ರಿ ಪಡೆದಾಗ ಆತನ ಸ್ಥಿತಿಗತಿಗಳನ್ನು ತಿಳಿಸುವ ಕಥೆಯಾಗಿರಲಿದೆ ಎಂಬುದು ನಿರ್ದೇಶಕ ದುನಿಯಾ ವಿಜಯ್ ಅಂಬೋಣ.
ದುನಿಯಾ ವಿಜಯ್ ನಿರ್ದೇಶನದ ಕುರಿತಂತೆ ಟ್ವೀಟ್ ಮಾಡಿರುವ ಸುದೀಪ್, ಯಾರೇ ಆಗಲಿ ಜೀವನದಲ್ಲಿ ಒಂದು ಹೊಸ ಹೆಜ್ಜೆ ಇಡುತ್ತಾರೆ ಎಂದರೆ ಅದೊಂದು ಅದ್ಭುತ ಕ್ಷಣ. ಕೆಲವೊಮ್ಮೆ ನಮ್ಮನ್ನು ನಾವು ಅರಿತುಕೊಳ್ಳಲು, ಕೆಲವೊಮ್ಮೆ ಹೊಸ ಉತ್ಸಾಹ ಕಂಡುಕೊಳ್ಳಲು ಹಾಗೂ ಕೆಲವೊಮ್ಮೆ ಏಳಿಗೆಗಾಗಿ ಬದಲಾವಣೆಗೆ ತೆರೆದುಕೊಳ್ಳಬೇಕಾಗುತ್ತದೆ. ಒಬ್ಬ ನಟ ನಿರ್ದೇಶಕನಾಗುವುದು ಉನ್ನತವಾದುದ್ದು, ಅಷ್ಟೇ ಒತ್ತಡವೂ ಇರುತ್ತದೆ. ಈಗ ನಿರ್ದೇಶಕನಾಗುತ್ತಿರುವ ವಿಜಯ್ಗೆ ನಾನು ಶುಭ ಹಾರೈಸುತ್ತೇನೆ. ಈ ಕ್ಷಣವನ್ನು ಆನಂದಿಸಿ… ಬೆಳೆಯಿರಿ, ಪ್ರಕಾಶಿಸಿ ಎಂದು ವಿಶ್ ಮಾಡಿದ್ದಾರೆ.
ಟ್ವೀಟ್ ಮೂಲಕ ಹಾರೈಸಿದ ಸುದೀಪ್ಗೆ ದುನಿಯಾ ವಿಜಯ್ ಹೃತ್ಪೂರ್ವಕ ಕೃತಜ್ಞತೆ ತಿಳಿಸಿದ್ದಾರೆ. ‘ಎಲ್ಲದರಲ್ಲೂ ವಿಫಲವಾದಾಗ ತಾಳ್ಮೆಯಿಂದ ಪ್ರಯತ್ನಿಸಬೇಕು…’ ಎಂಬ ಮಾತಿನಲ್ಲಿ ನಂಬಿಕೆ ಇಟ್ಟಿದ್ದೇನೆ. ಈ ಇಂಡಸ್ಟ್ರಿಯಲ್ಲಿರುವ ನಿಮ್ಮಂಥ ಹಿರಿಯರು ನನಗೆ ಬೆಂಬಲವಾಗಿ ನಿಂತಿದ್ದೀರಿ. ಅದರೊಂದಿಗೆ ದೇವರೂ ಕೂಡ ನನ್ನ ಈ ಹೊಸ ಕೆಲಸಕ್ಕೆ ಆಶೀರ್ವಾದ ಮಾಡುತ್ತಾನೆ ಎಂಬ ಆಶಯ ಇದೆ ಎಂದು ಮರು ಟ್ವೀಟ್ ಮಾಡಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಜುಲೈನಲ್ಲಿ ಸಲಗ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.
No Comment! Be the first one.