ಈ ಹಿಂದೆ ಲೋಕಸಭಾ ಚುನಾವಣೆಯ ಮುಂಜಾಗ್ರತೆಯ ಕ್ರಮವಾಗಿ ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಬೆಂಗಳೂರಿನ ರೌಡಿ ಶೀಟರ್ ಗಳನ್ನು ಕರೆಸಿ ರೌಡಿ ಪರೇಡ್ ನಡೆಸಿ ಎಚ್ಚರಿಕೆ ನೀಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು. ಅದರಲ್ಲೂ ರೌಡಿ ಶೀಟರ್ ಸೈಲೆಂಟ್ ಸುನೀಲ ಮತ್ತು ಸಿಸಿಬಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಡುವೆ ನಡೆದ ಸಂಭಾಷಣೆಯ ವಿಡಿಯೋವಂತೂ ಸಿಕ್ಕಾ ಪಟ್ಟೆ ವೈರಲ್ ಕೂಡಾ ಆಗಿತ್ತು. ‘ಏನೋ ಗುರ್ರಾಯಿಸ್ತಿದ್ದಿಯಾ, ಕಣ್ಣು ಕೆಳಗೆ ಇಳಿಸೋ, ಸರಿಯಾಗಿ ನಿಂತ್ಕೋ’ ಇತ್ಯಾದಿಯಾಗಿ ಗದರಿಸಿ ಅಲೋಕ್ ಕುಮಾರ್ ಸುನೀಲನಿಗೆ ಚಳಿ ಬಿಡಿಸಿದ್ದರು. ಇದೀಗ ವೈರಲ್ ಆದ ಈ ದೃಶ್ಯಕ್ಕೂ ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಲಗ ಸಿನಿಮಾಕ್ಕೂ ಏನೋ ಲಿಂಕ್ ಇದೆ ಎಂಬ ಸುಳಿವು ಸಿಕ್ಕಿದೆ.
ಹೌದು ಸಲಗ ಸಿನಿಮಾ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಈ ಚಿತ್ರದಲ್ಲಿ ಧನಂಜಯ್ ಐಪಿಎಸ್ ಆಫೀಸರ್ ಪಾತ್ರ ಮಾಡುತ್ತಿದ್ದು, ದುನಿಯಾ ವಿಜಯ್ ರೌಡಿ ಶೀಟರ್ ಪಾತ್ರವಂತೆ. ಇತ್ತೀಚಿಗೆ ಸಲಗ ಚಿತ್ರೀಕರಣದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ವಿಜಯ್ ಪೊಲೀಸ್ ಠಾಣೆ ಮುಂದೆ ನಿಂತು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಗುರಾಯಿಸಿ ನೋಡುತ್ತಿದ್ದಾರೆ. ಸಿಸಿಬಿ ಆಯುಕ್ತ ಅಲೋಕ್ ಕುಮಾರ್ ಮತ್ತು ಸೈಲೆಂಟ್ ಸುನೀಲ್ ನಡುವೆ ನಡೆದ ಘಟನೆ ಮತ್ತು ಸಲಗ ಚಿತ್ರದ ಮೇಕಿಂಗ್ ಚಿತ್ರ ಗಮನಿಸಿದಾಗ ಇವೆರಡಕ್ಕೂ ಸಂಬಂಧ ಇದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದುನಿಯಾ ವಿಜಯ್, ‘ವೈರಲ್ ಆಗಿರುವ ಘಟನೆಗೂ, ನಮ್ಮ ಕಥೆಗೂ ಸಂಬಂಧವಿಲ್ಲ. ಆದರೆ ಈ ಚಿತ್ರ ನೈಜ ಘಟನೆಗಳನ್ನು ಆಧರಿಸಿರುವ ಕಾಲ್ಪನಿಕ ಕಥೆ. ಈ ಫೋಟೋಗಳು ಅದೇ ಥರ ಕಾಣುತ್ತಿವೆ ಎಂದರೆ ಅದು ಕಾಕತಾಳಿಯವಷ್ಟೇ.ಯಾವುದೇ ಕಾರಣಕ್ಕೂ ಸಲಗ ಸಿನಿಮಾದಲ್ಲಿ ಸುನೀಲನ ಕಥೆಯಾಗಲಿ, ಪೊಲೀಸರ ಕಥೆಯಾಗಲಿ ಇಲ್ಲ. ಒಂದು ಮಾಸ್, ಎಮೋಷನ್ಸ್, ಕಾಮಿಡಿ ಎಲ್ಲವೂ ಇರುವಂತಹ ಕಮರ್ಷಿಯಲ್ ಸಿನಿಮಾ ನಮ್ಮದು.ಇದರಲ್ಲಿ ನಾನು ರೌಡಿ ಪಾತ್ರ ನಿರ್ವಹಿಸಿದರೆ ಧನಂಜಯ ಐಪಿಎಸ್ ಅಧಿಕಾರಿ ಪಾತ್ರ ಮಾಡುತ್ತಿದ್ದಾರೆ. ಆದರೆ ಸುನೀಲನ ಕಥೆಗೂ ಇದಕ್ಕೂ ಸಬಂಧವಿಲ್ಲ ಎಂದು ನಾನು ಮತ್ತೊಮ್ಮೆ ಕನ್ಫರ್ಮ್ ಮಾಡುತ್ತೇನೆ ಎಂದಿದ್ದಾರೆ. ಸದ್ಯ ಸಲಗದ ಫೋಟೋ ಮತ್ತು ಸೈಲೆಂಟ್ ಸುನೀಲನಿಗೆ ಅವಾಜ್ ಹಾಕುತ್ತಿರುವ ಅಲೋಕ್ ಕುಮಾರ್ ಫೋಟೋ ಬಳಸಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಇದು ನಿಜವೋ ಅಥವಾ ಬರಿ ಪ್ರಚಾರದ ಗಿಮ್ಮಿಕ್ಕೋ ಎಂಬ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಯಾವುದು ಸತ್ಯ! ಯಾವುದು ಸುಳ್ಳು? ಎಂಬುದನ್ನು ತಿಳಿಯಲು ಕಾದು ನೋಡಬೇಕಷ್ಟೇ.
No Comment! Be the first one.