ದುನಿಯಾ ವಿಜಯ್ ತನ್ನ ವೈಯಕ್ತಿಕ ಜೀವನದ ರಂಪಾಟಗಳಲ್ಲಿ ಕಳೆದು ಹೋಗಿದ್ದಾಗ ಕುಸ್ತಿ ಚಿತ್ರದ ಕಥೆ ಮುಗಿದೇ ಹೋಯ್ತೆಂಬಂತೆ ಸುದ್ದಿ ಹರಡಿಕೊಂಡಿತ್ತು. ಇದು ವಿಜಿ ಪಾಲಿಗೆ ಬಂದೆರಗಿದ್ದ ಮತ್ತೊಂದು ಆಘಾತ. ಯಾರಿಂಥಾ ಸುದ್ದಿ ಹರಡಿದ್ದರೋ ಗೊತ್ತಿಲ್ಲ. ಆದರೆ ಕುಸ್ತಿ ಚಿತ್ರ ನಿಂತಿಲ್ಲ, ಅದರ ಜೊತೆಗೇ ಮತ್ತೊಂದು ಚಿತ್ರ ಬರಲಿದೆ ಅಂತ ನಿರ್ದೇಶಕ ಶಿವಮೊಗ್ಗ ರಾಘು ಹೇಳಿದ್ದರಲ್ಲಾ? ಆ ಚಿತ್ರದ ಟೈಟಲ್ ಇದೀಗ ಜಾಹೀರಾಗಿದೆ!
ದುನಿಯಾ ವಿಜಿಯ ಈ ಹೊಸಾ ಚಿತ್ರದ ಶೀರ್ಷಿಕೆ ಸಲಗ. ಈ ಟೈಟಲ್ ಡಿಸೈನಿಂಗ್ನಲ್ಲಿಯೇ ಒಟ್ಟಾರೆ ಚಿತ್ರದ ಖದರ್ ಅನಾವರಣಗೊಂಡಿದೆ. ಇತ್ತೀಚೆಗೆ ಹೇಳಿಕೊಳ್ಳುವಂಥಾ ಏಳಿಗೆ ಕಾಣದೆ ಸೊರಗಿದಂತಿರೋ ವಿಜಿಗೆ ಸಲಗ ದೊಡ್ಡ ಮಟ್ಟದಲ್ಲಿಯೇ ಸಾಥ್ ನೀಡೋ ಸೂಚನೆಗಳೂ ಸ್ಪಷ್ಟವಾಗಿವೆ. ನಿರ್ದೇಶಕ ರಾಘು ಶಿವಮೊಗ್ಗ ಪ್ರತಿಭಾವಂತ ನಿರ್ದೇಶಕ. ಈ ಹಿಂದೆ ಚೂರಿ ಕಟ್ಟೆ ಚಿತ್ರದಲ್ಲಿಯೇ ಅದು ಸಾಬೀತಾಗಿತ್ತು. ಅವರೀಗ ವಿಜಿಗೆ ತಕ್ಕುದಾದ, ಆದರೆ ಬೇರೆಯದ್ದೇ ಬಗೆಯಲ್ಲಿ ವಿಜಿಯನ್ನು ತೋರಿಸಲಿರೋ ಭಿನ್ನವಾದ ಕಥೆಯೊಂದನ್ನು ಸಲಗಕ್ಕಾಗಿ ಸಿದ್ಧಪಡಿಸಿದ್ದಾರೆ.
ಈಗ ಜಾಹೀರಾಗಿರೋದು ಸಲಗ ಚಿತ್ರದ ಟೈಟಲ್ ಮಾತ್ರ. ಆದರೆ ಹೊಸಾ ವರ್ಷದ ಮೊದಲ ದಿನದಂದೇ ಇದರ ಫಸ್ಟ್ ಲುಕ್ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅದಾದ ಬಳಿಕ ವಿದ್ಯುಕ್ತವಾಗಿ ಸಲಗ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಈ ಚಿತ್ರೀಕರಣದ ಜೊತೆ ಜೊತೆಗೇ ದುನಿಯಾ ವಿಜಿ ಮತ್ತು ಅವರ ಪುತ್ರ ಸಾಮ್ರಾಟರ್ ಕುಸ್ತಿ ಚಿತ್ರಕ್ಕಾಗಿ ಮತ್ತೆ ತಯಾರಿ ನಡೆಸಲಿದ್ದಾರೆ. ಸಲಗ ಪೂರ್ಣಗೊಳ್ಳೋದರೊಳಗಾಗಿ ಅವರಿಬ್ಬರೂ ಕುಸ್ತಿಗಾಗಿ ಅಗತ್ಯ ತರಬೇತಿಯನ್ನೂ ಪಡೆಯಲಿದ್ದಾರಂತೆ.
ಸಲಗ ಚಿತ್ರೀಕರಣ ಮುಗಿಸಿಕೊಳ್ಳುತ್ತಲೇ ತಕ್ಷಣವೇ ಕುಸ್ತಿ ಚಿತ್ರಕ್ಕೆ ಚಾಲನೆ ಕೊಡಲು ವಿಜಿ ಮತ್ತು ಶಿವಮೊಗ್ಗ ರಾಘು ನಿರ್ಧರಿಸಿದ್ದಾರೆ. ಸದ್ಯ ಅವರು ಸಲಗವನ್ನು ಸಂಭಾಳಿಸೋದರತ್ತ ಚಿತ್ರ ನೆಟ್ಟಿದ್ದಾರೆ.
#