salaga exclusive review

ದುನಿಯಾ ವಿಜಯ್ ಹೀರೋ ಆಗಿ ಮತ್ತೊಂದು ಸುತ್ತಿನ ಗೆಲುವು ದಾಖಲಿಸಬೇಕಿರುವ ಜರೂರತ್ತಿದೆ. ನಿರ್ದೇಶಕನಾಗಿ ಮೊದಲ ಪ್ರಯತ್ನದಲ್ಲಿ ತಲೆಯೆತ್ತಿ ನಿಲ್ಲಬೇಕಿರುವುದು ಅವರ ಮುಂದಿರುವ ಸವಾಲು. ಸದ್ಯದ ಸನ್ನಿವೇಶದಕಲ್ಲಿ ಏಕಕಾಲದಲ್ಲಿ ಎರಡೂ ಉದ್ದೇಶ ಸಾಕಾರಗೊಳ್ಳುತ್ತದಾ ಅನ್ನೋದು ಎಲ್ಲರ ಕುತೂಹಲವಾಗಿತ್ತು. ಸಲಗ ಸಿನಿಮಾ ಏನಾಗಬಹುದು ಅಂತಾ ಪ್ರೇಕ್ಷಕರು ಮಾತ್ರವಲ್ಲದೆ ಸಿನಿಮಾ ಮಂದಿ ಕೂಡ ಕುತೂಹಲದಿಂದ ಕಾದಿದ್ದರು. ಇವತ್ತು ಇವೆಲ್ಲದಕ್ಕೂ ಉತ್ತರ ಸಿಕ್ಕಿದೆ.

ಸತತ ಒಂದು ವರ್ಷದಿಂದ ಕೊರೋನಾ ಸಂಕಟದ ನಡುವೆ ಸಿಲುಕಿ ಒದ್ದಾಡಿರುವ ಜನ ಔಟ್ ಅಂಡ್ ಔಟ್ ಮನರಂಜನೆ ನೀಡುವ, ಪಕ್ಕಾ ಕಮರ್ಷಿಯಲ್ ಸಿನಿಮಾವೊಂದನ್ನು ನಿರೀಕ್ಷಿಸುತ್ತಿದ್ದರು. ಬಹುಶಃ ಸಲಗ ಸಿನಿಮಾ ಪ್ರೇಕ್ಷಕರ ದಾಹವನ್ನು ನೀಗಿಸೋದರಲ್ಲಿ ಡೌಟಿಲ್ಲ.

ಸೂರಿ ಅನ್ನೋ ನಟೋರಿಯಸ್ ವ್ಯಕ್ತಿಯ ಕೊಲೆ, ಅಣ್ಣನನ್ನು ಕೊಂದವನನ್ನು ಎತ್ತಿಬಿಡುವ ಶಪಥ ಮಾಡಿ ನಿಂತ ಬ್ರದರ್. ಕೊಲ್ಲಲು ಬಂದವನಿಗೇ ಖೆಡ್ಡಾ ತೋಡಿ ಕತ್ತರಿಸುವ ಹಂಟರ್… ಅವನಿಗೊಂದು ಹಿನ್ನೆಲೆ. ಪೊಲೀಸರು ಖಾಕಿ ಹಾಕಿಕೊಂಡೇ ಹುಟ್ಟಿರೋದಿಲ್ಲ; ರೌಡಿಗಳೂ ಲಾಂಗು ಹಿಡಿದುಕೊಂಡು ಜನ್ಮವೆತ್ತಿಲ್ಲ ಎನ್ನುವ ಥಿಯರಿ. ತನ್ನ ಹುಡುಗ ರೌಡಿ ಅನ್ನಿಸಿಕೊಳ್ಳುವ ಮುಂಚೆಯೇ ಮನಸು ಕೊಟ್ಟವಳು, ಆತ ಲಾಂಗು ಹಿಡಿದಮೇಲೂ ಬದುಕಿನಲ್ಲಿ ಲಾಂಗ್‌ ಡ್ರೈವ್‌ ಮಾಡಲು ಬಯಸುವ ಹುಡುಗಿ. ರೌಡಿಯೊಬ್ಬನ ಸಲಿಂಗ ಪ್ರೇಮ, ಕಾಮ., ಗಟ್ಟಿ ಗುಂಡಿಗೆಯ ಪೊಲೀಸ್‌ ಸಾಮ್ರಾಟ, ರಕ್ತ ಅಂಟಿಸಿಕೊಳ್ಳದೇ ರೌಡಿಯಾದವರು, ಬಣ್ಣ ಮೆತ್ತಿಕೊಳ್ಳದೇ ಕ್ರೈಂ ಮಾಡುವ ವೈಟ್‌ ಕಾಲರ್‌ ಗಳು, ಬದುಕು ಉಳಿಸಿಕೊಳ್ಳಲು ಅಡ್ಡ ದಾರಿ ಹಿಡಿದವರು, ಅಡ್ಡದಾರಿಯಲ್ಲೇ ಜೀವನ ಕಟ್ಟಿಕೊಳ್ಳಲು ಹವಣಿಸುವವರು… ಹೀಗೆ ಕಣ್ಣಮುಂದಿನ ಚಿತ್ರಣಗಳನ್ನೇ ಸಿನಿಮಾ ರೂಪದಲ್ಲಿ ನಿಲ್ಲಿಸಿ ʻಸಲಗʼ ಎನ್ನುವ ಹೆಸರಿಟ್ಟಿದ್ದಾರೆ.

ಒಂದು ವರ್ಗವನ್ನು ಎತ್ತಿ ಹಿಡಿದು, ಮತ್ತೊಬ್ಬರನ್ನು ದುಷ್ಟರನ್ನಾಗಿಸುವ ಅನಾಹುತಗಳನ್ನು ತಪ್ಪಿಸಿರುವುದು ಸಲಗ ಹೆಚ್ಚುಗಾರಿಕೆ. ಪಟ್ಟಭದ್ರ ಹಿತಾಸಕ್ತಿ ಕಾಯುವ ಪೊಲೀಸ್‌ ಅಧಿಕಾರಿಯೊಬ್ಬ ಏನೇನೂ ಅಪರಾಧ ಮಾಡದ ಹುಡುನೊಬ್ಬನ ಇಡೀ ಕುಟುಂಬವನ್ನು ಹೇಗೆ  ನಾಶ ಮಾಟಡುತ್ತಾನೆ ಅನ್ನೋದನ್ನು ತೋರಿಸುತ್ತಲೇ, ನಿಷ್ಟಾವಂತ ಪೊಲೀಸ್‌ ಅಧಿಕಾರಿ ಅನ್ನಿಸಿಕೊಂಡವನು ತನ್ನದೇ ಇಲಾಖೆಯ ಕುತುಂತ್ರಿ, ಕೇಡುಗರಿಂದ ಎಷ್ಟೆಲ್ಲಾ ಚಿತ್ರ ಹಿಂಸೆ ಅನುಭವಿಸಬಹುದು ಎನ್ನುವುದನ್ನು ಕೂಡಾ ಅಷ್ಟೇ ನೇರವಾಗಿ ತೆರೆದಿಟ್ಟಿದ್ದಾರೆ. ಪರೇಡ್‌ ಹೆಸರಲ್ಲಿ ಫೀಲ್ಡು ಬಿಟ್ಟವರನ್ನೆಲ್ಲಾ ರೌಡಿಗಳ ಹೆಸರಲ್ಲಿ ತಂದು ನಿಲ್ಲಿಸಿ, ಅವಮಾನಿಸೋದರಿಂದ ಎಂತೆಂಥಾ ಘೋರ ಅನಾಹುತಗಳಾಗುತ್ತವೆ ಅನ್ನೋದನ್ನೂ ಇಲ್ಲಿ ತೋರಿಸಲಾಗಿದೆ.

ಯಾವ ಎವಿಡೆನ್ಸ್‌ ಅನ್ನು ನೆಪ ಮಾಡಿಕೊಂಡು ಒಬ್ಬ ಅಮಾಯಕ ಮತ್ತವನ ಫ್ಯಾಮಿಲಿಯನ್ನು ಶಿಕ್ಷೆಗೀಡುಮಾಡುತ್ತಾರೋ? ಅದೇ ಸಾಕ್ಷಿ ಕೈಗೆ ಸಿಗದಂತೆ ಏನೆಲ್ಲಾ ಮಾಡಿʻಮುಗಿಸʼಬಹುದು ಅನ್ನೋದು ಸಲಗ ಚಿತ್ರದ ಪ್ರಧಾನ ಅಂಶ. ಇದೊಂದು ರಿವೇಂಜ್‌ ಕಿಲ್ಲಿಂಗ್‌ ಸ್ಟೋರಿ ಎನ್ನುವುದು ನೋಡುಗರ ಗಮನಕ್ಕೇ ಬಾರದಂತೆ ರೂಪಿಸಿರುವುದು ಕೂಡಾ ಗಮನಾರ್ಹ. ಅಚ್ಚುಕಟ್ಟಾದ್ದೊಂದು ಕತೆ, ನೂರೆಂಟು ಪಾತ್ರಗಳ ನಡುವಡೆ ಕೂಡಾ ಎಲ್ಲೂ ಗೊಂದಲ ಸೃಷ್ಟಿಸದ  ಸ್ಕ್ರೀನ್ ಪ್ಲೇ ಮತ್ತು ಮಾಸ್ತಿ ಬರೆದಿರುವ ಸಂಭಾಷಣೆ ʻಸಲಗʼದ ಗತ್ತು ಹೆಚ್ಚಿಸಿದೆ. ಮಾತಿನ ಪ್ರಾಸದ ಜೊತೆಗೆ ಪವರ್‌ ಸೇರಿಸಿದರೆ ದೃಶ್ಯ ಎಷ್ಟು ಗಟ್ಟಿಯಾಗುತ್ತದೆ ಅನ್ನೋದನ್ನು ತೋರಿಸಿದ ಮಾಸ್ತಿ ಕನ್ನಡ ಚಿತ್ರರಂಗದ ಆಸ್ತಿಯಾಗಿದ್ದಾರೆ!

ಕಮರ್ಷಿಯಲ್, ಮಾಸ್ ಸಿನಿಮಾ ಅಂದರೆ ಟೈಟಲ್ ಕಾರ್ಡು ಶುರುವಾದಾಗಿಂದ, ಕೊನೇ ದೃಶ್ಯದ ತನಕ ಗೋಡೆ ಮೇಲೆ ಲೊಚಗುಟ್ಟುವ ಹಲ್ಲಿ ಥತಾ ಹೀರೋ ತೆರೆ ಮೇಲೆ ಮಿಸುಕಾಡಬೇಕು ಅನ್ನೋದು ಫಾರ್ಮುಲಾ ಆಗಿಬಿಟ್ಟಿದೆ. ಬಹುಶಃ ಕನ್ನಡದಲ್ಲಿ ಉಳಿದುಕೊಂಡಿರುವ ಈ ಸೂತ್ರವನ್ನು ಬ್ರೇಕ್ ಮಾಡಲು ಸಾಕ್ಷಾತ್ ವಿಜಯಕುಮಾರರೇ ಬರಬೇಕಾಯ್ತೇನೊ. ಸಿನಿಮಾಗೆ ಹೀರೋ ಬೇಕು ಆದರೆ ಕತೆಯನ್ನೆ ನುಂಗಿ ಕೊಳ್ಳುವ ಮಟ್ಟಿಗೆ ಇರಬಾರದು ಅನ್ನೋದನ್ನು ನಿರ್ದೇಶಕ ವಿಜಯ ಕುಮಾರ್ ಮನಗಂಡಿದ್ದಾರಲ್ಲಾ? ಲಗದ ಮೊದಲ ಯಶಸ್ಸು ಅದೇ. ಸ್ವತಃ ದುನಿಯಾ ವಿಜಯ್ ಹೀರೋ ಆಗಿ, ನಿರ್ದೇಶಿಸಿಕೊಂಡ ಮೊದಲ ಚಿತ್ರ ಇದಾಗಿಯೂ, ಕಡಿಮೆ ಅನ್ನಿಸಿದರೂ ಅಗತ್ಯವಿರುವಷ್ಟೇ ದೃಶ್ಯಗಳಲ್ಲಿವರು ಕಾಣಿಸಿಕೊಂಡಿದ್ದಾರೆ. ಕತೆ ಎಲ್ಲೆಲ್ಲಿ ಚಲಿಸುತ್ತದೋ, ಆ ದೃಶ್ಯಗಳಲ್ಲಿ ಕಾಣಿಸಿಕೊಂಡವರೇ ಅಲ್ಲಿ ಹೀರೋ. ಅವರಾಡುವ ಮಾತಲ್ಲೇ ವೀರತ್ವವೂ ಅಡಗಿದೆ. ಅದು ಅಮ್ಮನ್ ಇರಲಿ ಅಕ್ಕನ್ ಇರಲಿ, ಗಾಂಡು, ಶಾಟ, ಸಿಂಗ್ರಿ ಯಾವುದೇ ಆಗಲಿ…!

ದುನಿಯಾವ ವಿಜಯ್‌ ಕಡಿಮೆ ದೃಶ್ಯಗಳಲ್ಲಿ ತೀರಾ ಕಡಿಮೆ ಮಾತನಾಡಿಯೂ ಪವರ್‌ ಫುಲ್ ಹೀರೋ ಅನ್ನಿಸಿಕೊಳ್ಳುತ್ತಾರೆ. ಅತಿಮಾನುಷನಂತೆ ವರ್ತಿಸದೆ, ತೀರಾ ಸಹಜವಾಗಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ಸಾವಿತ್ರಿಯಾಗಿ ಅವತಾರವೆತ್ತಿರುವ ಕಾಕ್ರೋಜ್‌ ಸುಧಿಯದ್ದು ನಟನೆ ಅಂತಾ ಎಲ್ಲೂ ಅನ್ನಿಸುವುದಿಲ್ಲ. ಅಷ್ಟು ಸಹಜವಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ರೌಡಿ ಸೂರಿ ತಮ್ಮನ ಪಾತ್ರದಲ್ಲಿ ಕಾಣಿಸಿರುವ ಬಿಳೀತಲೆ ಹುಡುಗ ಮಲ್ಲೇಶ ಕಣ್ಣುಗಳಲ್ಲೇ ಬೆಚ್ಚಿಬೀಳಿಸುತ್ತಾನೆ. ಈ ಚಿತ್ರದಲ್ಲಿ ಡಾಲಿ ಧನಂಜಯ ನಿಜವಾದ ಹೀರೋ ಅನ್ನಿಸಲು ಸಾಕಷ್ಟು ಕಾರಣಗಳಿವೆ. ಅದನ್ನು ಸಾಧ್ಯವಾಗಿಸಿರೋದು ನಿರ್ದೇಶಕ ವಿಜಯ್‌ ಅವರ ಗೆಲುವು. ಚರಣ್‌ ರಾಜ್‌ ಹಿನ್ನೆಲೆ ಸಂಗೀತ ಬೇರೆ ಲೆವೆಲ್ಲಿನಲ್ಲಿದೆ. ಶಿವು ಸೇನಾ ಎನ್ನುವ ಛಾಯಾಗ್ರಾಹಕ ಇಷ್ಟು ದಿನ ಅದೆಲ್ಲಿದನೋ? ಕ್ಯಾಮೆರಾದ ಲೆನ್ಸುಗಳನ್ನು ಕಣ್ಣಿಗೇ ಕಟ್ಟಿಕೊಂಡವರಂತೆ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ರೌಡಿಸಂ, ಕಮರ್ಷಿಯಲ್ ಎಲಿಮೆಂಟ್ ಇರುವ ಸಿನಿಮಾಗಳಲ್ಲಿ ಬಟ್ಟೆ ಬಿಚ್ಚಿಸಿ ನಿಲ್ಲಿಸಿ ಇವಳೇ ಹೀರೋಯಿನ್ ಅನ್ನಲಾಗುತ್ತಿತ್ತಲ್ಲಾ, ಇಲ್ಲಿ ನಾಯಕಿಯ ಬಾಯಿ ಬಿಚ್ಚಿಸಿದ್ದಾರೆ. ಮಾತೆತ್ತಿದರೆ ತಿಕ ಮುಚ್ಚೋ ಲೋಫರ್ ಅಂತಾ ಬೈಯುವ ಸಂಜನ ನೋಡಿದವರಿಗೆ ಶ್ಯಾನೆ ಇಷ್ಟವಾಗುತ್ತಾಳೆ. ಸಲಗದ ಕಂಟೆಂಟ್ ಕೂಡಾ ಯಾವುದೋ ಒಂದು ವರ್ಗಕ್ಕೆ ಸೀಮಿತವಾಗಿರದೆ, ಎಲ್ಲಾ ಥರದ ಜನರೂ ಕೂತು ನೋಡುವ ಅಂಶಗಳನ್ನು ಒಳಗೊಂಡಿದೆ. ಎಮೋಷನ್ನು, ಲವ್ವು ಎಲ್ಲವೂ ಇಲ್ಲಿವೆ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅಣ್ಣಾವ್ರ ಮೊಮ್ಮಗಳ ನಟನೆ ಹೇಗಿದೆ ಗೊತ್ತಾ…!?

Previous article

ಒಬ್ಬ ಕಿಲಾಡಿ ಇನ್ನೊಬ್ಬ ಕೇಡಿಗೇ ಕೇಡಿ!

Next article

You may also like

Comments

Leave a reply

Your email address will not be published.