ಮಾಸ್ತಿಗುಡಿ ಸಿನಿಮಾ ರಿಲೀಸ್ ಆದಮೇಲೆ ದುನಿಯಾ ವಿಜಯ್ ಅವರ ಕೆರಿಯರ್ ಬೇರೆ ಲೆವೆಲ್ಲಿಗೆ ತಲುಪುತ್ತದೆ ಅನ್ನೋ ಭರವಸೆಯಿತ್ತು. ಆ ಚಿತ್ರ ಹುಟ್ಟಿಸಿದ್ದ ಕ್ರೇಜ಼್ ನಿರೀಕ್ಷೆಗಳೆಲ್ಲವಕ್ಕೂ ಪೂರಕವಾಗೇ ಇತ್ತು. ಒಳ್ಳೇ ರೇಟಿಗೆ ಸಿನಿಮಾ ವ್ಯಾಪಾರ ಮಾಡಿತ್ತು. ಹಾಡುಗಳು, ಟ್ರೇಲರು ಹಿಟ್ ಆಗಿದ್ದವು. ಆದರೆ, ಬಿಡುಗಡೆ ನಂತರ ಯಾವುದೂ ಅಂದುಕೊಂಡಂತೆ ಆಗಲಿಲ್ಲ. ವಿಜಯ್ ಅವರ ಪರ್ಸನಲ್ ಲೈಫಿನಲ್ಲೂ ಮತ್ತೊಂದು ಸುತ್ತು ಬಿರುಗಾಳಿಯೆದ್ದಿತು. ಸುತ್ತ ಇದ್ದವರೇ ಮಸಲತ್ತು ಮಾಡಿದರು. ಸಣ್ಣ ವಿಚಾರಗಳನ್ನೆಲ್ಲಾ ಮೀಡಿಯಾ ದೊಡ್ಡದಾಗಿ ಬಿಂಬಿಸಿತು. ವಿಜಯ್ ಅವರನ್ನು ಮೇಲೇಳದಂತೆ ನೆಲಕ್ಕದುಮಿಬಿಡಬೇಕು ಎನ್ನುವಷ್ಟರ ಮಟ್ಟಿಗೆ ಕುತಂತ್ರಗಳು ನಡೆದವು.
ಪಾನಿಪೂತಿ ಕಿಟ್ಟಿ ಕಿತಾಪತಿ ಮಾಡಿದ. ಯಾರೋ ಹೇಳಿಕೊಟ್ಟು ಮಾತಾಡಿಸಿದರೋ? ಭಾವೋದ್ವೇಗದಕ್ಕೆ ಒಳಗಾಗಿದ್ದರೋ? ಗೊತ್ತಿಲ್ಲ; ಶ್ರೀಮತಿ ನಾಗರತ್ನಮ್ಮನವರು ಟೀವಿಯಲ್ಲಿ ಕೂತು ಮನಸಿಗೆ ಬಂದಿದ್ದನ್ನೆಲ್ಲಾ ಬಡಬಡಿಸಿಬಿಟ್ಟರು. ಮೂವರು ನಿರ್ದೇಶಕರು ಬದಲಾದರೂ ಘೋಷಣೆಯಾಗಿದ್ದ ಕುಸ್ತಿ ಶುರುವಾಗಲೇ ಇಲ್ಲ. ಇದನ್ನೆಲ್ಲಾ ಕಂಡವರಿಗೆ, ʻಏದೇನಿದು ವಿಜಿ ಯಡವಟ್ಟು ಮಾಡಿಕೊಂಡರಾ? ಅವರ ಕೋಪ ಅವರ ಲೈಫನ್ನು ಅಲುಗಾಡಿಸುತ್ತಿದೆಯಾ?ʼ ಅಂತಾ ಮೇಲ್ನೋಟಕ್ಕೆ ಅನ್ನಿಸುವಂತಿತ್ತು ಆವತ್ತಿನ ಪರಿಸ್ಥಿತಿ.
ಆದರೆ ವಿಜಯ್ ಸ್ಥಿತಪ್ರಜ್ಞತೆಯನ್ನು ಉಳಿಸಿಕೊಂಡಿದ್ದರು. ಅನ್ನುವವರು, ಆಡುವವರ ಬಾಯಿಗೆ ಬಿರಡೆ ತುರುಕಬೇಕೆಂದರೆ, ಶ್ರದ್ದೆಯಿಟ್ಟು ಕೆಲಸ ಮಾಡುವುದೊಂದೇ ಹಾದಿ ಎನ್ನುವ ತೀರ್ಮಾನಕ್ಕೆ ಬಂದರು. ಬೇರೊಬ್ಬ ಡೈರೆಕ್ಟರನ್ನು ನಂಬಿ, ಬದುಕನ್ನು ಪಣಕ್ಕಿಡಲು ಆಗುವುದಿಲ್ಲ. ತನಗೇನು ಏಕೋ ಅದನ್ನು ತಾನೇ ರೂಪಿಸಿಕೊಂಡರಷ್ಟೇ ಈ ಸಲ ಗೆಲ್ಲಲು ಸಾಧ್ಯ ಅಂದುಕೊಂಡವರೇ ʻಸಲಗʼ ಶೀರ್ಷಿಕೆ ಅನೌನ್ಸ್ ಮಾಡಿ ತಾವೇ ಡೈರೆಕ್ಟರ್ ಅಂತಾ ಘೋಷಿಸಿಕೊಂಡರು. ʻಕತೆ ಮುಗೀತು. ವಿಜಯ್ ಕೈಲಿ ಡೈರೆಕ್ಷನ್ ಸಾಧ್ಯಾನಾ?ʼ ಅಂತಾ ಗಾಂಧೀನಗರದ ಕೆಲವರು ನಾಸಬಾಯಿ ಹಾಕಿದರು. ಈ ಸಲ ವಿಜಯ್ ಯಾವುದಕ್ಕೂ ಪ್ರತಿಕ್ರಿಯಿಸುವ ಗೋಜಿಗೇ ಹೋಗಲಿಲ್ಲ. ತಮ್ಮ ಪಾಡಿಗೆ ತಾವು ಕೆಲಸ ಮುಂದುವರೆಸಿದರು.
ದುನಿಯಾ ಮೂಲಕ ಹೀರೋ ಆಗಿ ಆನಂತರ ದೊಡ್ಡ ಮಟ್ಟದ ಸ್ಟಾರ್ ಎನಿಸಿಕೊಂಡು, ಅದ್ಭುತವಾದ ಗೆಲುವು, ಸಣ್ಣ ಪುಟ್ಟ ತೊಡಕುಗಳೆಲ್ಲವನ್ನೂ ಅನುಭವಿಸಿದ್ದ ವಿಜಯ್ ಅಷ್ಟೊತ್ತಿಗೇ ಎಲ್ಲ ರೀತಿಯಲ್ಲೂ ಮಾಗಿದ್ದರು. ಇಲ್ಲಿ ಯಾರು ಹೇಗೆ ಅನ್ನೋದನ್ನು ಜಡ್ಜ್ ಮಾಡುವುದನ್ನು ಕಲಿತಿದ್ದರು. ಇದೆಲ್ಲದರ ಜೊತೆಗೆ ಸಿನಿಮಾವನ್ನು ವಿಪರೀತ ಪ್ರೀತಿಸುವ ವಿಜಯ್ ಕಣ್ಮುಂದೆ ಸ್ಪಷ್ಟವಾದ ಗುತಿಯಿತ್ತು. ಸಿನಿಮಾವೊಂದನ್ನು ಆರಂಭಿಸುವ ಮುಂಚೆಯೇ ಆ ಪಾತ್ರಕ್ಕಾಗಿ ಅವರು ನಡೆಸುವ ತಾಲೀಮು, ಪೂರ್ವ ತಯಾರಿಗಳೇ ನಿಜಕ್ಕೂ ಬೆರಗಾಗಿಸುತ್ತವೆ.
ಸಲಗ ಆರಂಭಗೊಂಡಾಗ ʻಟಗರುʼ ಸಿನಿಮಾಗೆ ಕೆಲಸ ಮಾಡಿದ್ದ ಒಂದಿಷ್ಟು ಕ್ರಿಯಾಶೀಲ ಹುಡುಗರು ವಿಜಯ್ ಅವರ ತಂಡ ಸೇರಿದರು. ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಸಂಗೀತ ನಿರ್ದೇಶಕ ಚರಣ್ ರಾಜ್, ಸಂಭಾಷಣೆಕಾರ ಮಾಸ್ತಿ, ಸಹ ನಿರ್ದೇಶಕ ಅಭಿ, ಕಲಾ ವಿಭಾಗದ ಮಲ್ಲ, ಸಂಗೀತ ನಿರ್ದೇಶಕ ಚರಣ್ ರಾಜ್ ಹೀಗೆ ಟಗರು ಚಿತ್ರತಂಡ ಬಹುತೇಕ ಸದಸ್ಯರು ಹಾಗೂ ಗಾಯಕ ನವೀನ್ ಸಜ್ಜು ಸಹ `ಸಲಗ’ಕ್ಕೆ ಸಾಥ್ ನೀಡಿದರು. ಛಾಯಾಗ್ರಾಹಕನಾಗಿ ಶಿವು ಸೇನಾ ಬಂದು ಹೊಸದಾಗಿ ತಂಡ ಸೇರಿಕೊಂಡರು. ಇವೆಲ್ಲದರ ಜೊತೆಗೆ `ಸಲಗ’ ಅನ್ನೋ ಶೀರ್ಷಿಕೆಯಲ್ಲೇ ಏನೋ ಒಂದು ಶಕ್ತಿ ಇತ್ತು. ಸಿನಿಮಾ ಶುರುವಾದ ಮೇಲೆ ಹಂತ ಹಂತವಾಗಿ ಸೌಂಡು ಮಾಡುತ್ತಾ ಬಂತು.
ಪ್ರತಿಭಾವಂತರಿಗೆ ವೇದಿಕೆ!
ಪೇಂಟಿಂಗ್ ಕೆಲಸ ಮಾಡಿಕೊಂಡು, ದಿನಕ್ಕೆ ಏಳುನೂರೋ ಎಂಟುನೂರೋ ದುಡಿಮೆ ಮಾಡುವ ಕುಮಾರ್, ಸಂಜೆಹೊತ್ತು ಮೊಬೈಲ್ ಆರ್ಕೆಸ್ಟ್ರಾಗಳಲ್ಲಿ ಹಾಡುತ್ತಾನೆ. ಮೂಲ ತಮಿಳಿಗನಾದರೂ, ಡಾ. ರಾಜ್ ಕುಮಾರ್ ಅವರ ಹಾಡುಗಳನ್ನು ಅದ್ಭುತವಾಗಿ ಹಾಡುವುದು ಈತನ ರೂಢಿ. ಇಂತಾ ಕುಮಾರನ ಪ್ರತಿಭೆ ಗುರುತಿಸಿ ದುನಿಯಾ ವಿಜಯ್ ಈ ಹಾಡಿನಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ಅವಕಾಶ ಮಾಡಿಕೊಟ್ಟರು. ಜೊತೆಗೆ ಕೊಕ್ಕಿ ಕುಮಾರ್ ಅನ್ನೋ ಹೊಸ ನಾಮಕರಣವನ್ನೂ ಮಾಡಿದರು. ಅಂಥೋಣಿ ದಾಸನ್ ಹಾಡಿರುವ ‘ಸೂರಿ ಅಣ್ಣಾ ಅಂತಾ ಶುರುವಾಗುವ ಈ ಹಾಡಿನಲ್ಲಿ ಕೊಕ್ಕಿ ಕುಮಾರ್ ಕಾಣಿಸಿಕೊಂಡಿದ್ದಾನೆ. ‘ಮುಂದೆ ಈತ ದೊಡ್ಡ ಹೆಸರು ಮಾಡುವ ಎಲ್ಲ ಸಾಧ್ಯತೆಯೂ ಇದೆ. ಹಗಲಿನಲ್ಲಿ ಕೂಲಿ ಕೆಲಸ ಮುಗಿಸಿ, ಸಂಜೆಯಾಗುತ್ತಿದ್ದಂತೇ, ಆರ್ಕೆಸ್ಟ್ರಾಗಳಲ್ಲಿ ಹಾಡುವ ಆತನ ಕಲಾಸಕ್ತಿ ನಿಜಕ್ಕೂ ಮೆಚ್ಚಲೇಬೇಕು. ಈ ಕಾರಣದಿಂದ ಸಲಗ ಸಿನಿಮಾದಲ್ಲಿ ಒಂದೊಳ್ಳೆ ಅವಕಾಶ ನೀಡಿದ್ದೇನೆ. ಮುಂದೊಂದು ದಿನ ಆತ ದೊಡ್ಡ ಎತ್ತರಕ್ಕೆ ತಲುಪಿದಾಗ ಆತ ಸಲಗ ತಂಡವನ್ನು ಮರೆಯಲಾರ. ‘ಸಲಗದಲ್ಲಿ ಇಂಥಾ ಹತ್ತಾರು ಪ್ರಯತ್ನಗಳು ನಡೆಯುತ್ತಿವೆ. ಪ್ರತಿಭಾವಂತರಾಗಿದ್ದುಕೊಂಡು, ಅವಕಾಶಕ್ಕಾಗಿ ಪರದಾಡುವವರ ಕಷ್ಟ ಏನು ಅನ್ನೋದು ನನಗೆ ಸ್ವಲ್ಪ ಜಾಸ್ತೀನೇ ಗೊತ್ತು. ಹೀಗಾಗಿ ತೆರೆಮರೆಯಲ್ಲಿರುವವರನ್ನು ಬೆಳಕಿಗೆ ತರುವ ಸಣ್ಣ ಪ್ರಯತ್ನ ಮಾಡುತ್ತಿದ್ದೇನಷ್ಟೇ ಅಂತಾ ಸ್ವತಃ ವಿಜಯ ಕುಮಾರ್ ಹೇಳಿಕೊಂಡಿದ್ದರು.
ವಿಜಯ್ ನಿರ್ದೇಶನ ಹೇಗಿರಬಹುದು? ದೃಶ್ಯಗಳನ್ನು ಹೇಗೆ ಕಟ್ಟಿರುತ್ತಾರೆ? ಡಾಲಿ ಧನಂಜಯ್ ಪಾತ್ರ ಎಂಥದ್ದಿರಬಹುದು? ಕಾಕ್ರೋಜ್ ಸುಧಿ, ಯಶ್ವಂತ್ ಶೆಟ್ಟಿ ಸೇರಿದಂತೆ ಸಾಕಷ್ಟು ಜನ ಸಹ ಕಲಾವಿದರೂ ಈ ಪ್ರಾಜೆಕ್ಟಿನಲ್ಲಿ ಒಟ್ಟಿಗೇ ಸೇರಿದ್ದಾರಲ್ಲಾ? ಇವರೆಲ್ಲರ ರೋಲು ಏನಿರಬಹುದು? ಎಲ್ಲಕ್ಕಿಂತಾ ಮುಖ್ಯವಾಗಿ, ಸಿನಿಮಾದಿಂದ ಸಿನಿಮಾಗೆ ಭಿನ್ನ ಬಗೆಯಲ್ಲಿ ಕಾಣಿಸಿಕೊಳ್ಳುವ ವಿಜಯ್ ಅವರ ಲುಕ್ಕು, ಮ್ಯಾನರಿಸಮ್ಮು ‘ಸಲಗ’ದಲ್ಲಿ ಯಾವಥರಾ ಇದೆಯೋ… ಹೀಗೆ ಸಲಗ ಅನ್ನೋ ಸಿನಿಮಾ ಬಗ್ಗೆ ಇದ್ದ ಕೌತುಕದ ಪ್ರಶ್ನೆಗಳು ಒಂದೆರಡಲ್ಲ. ಸಲಗ ಬಿಡುಗಡೆಗೂ ಮುನ್ನ ಹೊರಬಿಟ್ಟಿದ್ದ ಟ್ರೇಲರಿನಲ್ಲಿ ಹೇಳಬಹುದಾದ ವಿಚಾರಗಳನ್ನೆಲ್ಲಾ ಅತಿ ವೇಗವಾಗಿ ತಿಳಿಸಿದ್ದರು. ರೌಡಿಗಳ ಆರ್ಭಟದ ಜೊತೆಗೆ ಅವರ ಭಯ, ತಲ್ಲಣಗಳು… ಚಪ್ಲಿ ಕಿತ್ತು ಹೋಗುವಂತೆ ಹೊಡೆಯೋದು ಅಂದ್ರೆ ಏನು ಅಂತಾ ತೋರಿಸುವ ಆ ಹುಡುಗಿಯ ಧೈರ್ಯ…
ರೌಡಿಪಡೆಗಳ ನಡುವಿನ ಯುದ್ಧ, ಪೊಲೀಸರ ದರ್ಪ, ಲಾಂಗು, ಗನ್ನು, ನೆತ್ತರು, ಕ್ರೌರ್ಯಗಳೆಲ್ಲಾ ಸೇರಿದ ಬೆಂಗಳೂರಿನ ಕರಾಳ ಅಧ್ಯಾಯವನ್ನು ಸಲಗ ತೆರೆದಿಡಲಿದೆ ಅನ್ನೋದನ್ನು ಆ ಟೀಸರ್ ಸ್ಪಷ್ಟವಾಗಿ ಹೇಳಿತ್ತು. ʻʻಜೀವದ್ ಭಯ ಬಂದ್ಬುಟ್ಟು ಸುತ್ತ ಹುಡುಗ್ರುನ್ನಾಕೊಂಡ್ ಓಡಾಡ್ತಿದ್ಯಲ್ಲೋ ನಿನ್ನ…. ಜುಟ್ಟು! ಟಿಣಿಂಗ ಮಿಣಿಂಗ ಟಿಶ್ಶ್ಶ !!ʼʼ ಎನ್ನುವ ವಿಚಿತ್ರ ಹಾಡೊಂದು ರಿಲೀಸಾಗಿ ಎಲ್ಲರ ಗಮನ ಸೆಳೆಯಿತು. ಈ ಹಾಡಿನಿಂದ ರಂಗಭೂಮಿ ನಟಿ ಗಿರಿಜಾ ಸಿದ್ದಿ ಇವತ್ತು ವಿಶ್ವವಿಖ್ಯಾತಿ ಪಡೆದಿದ್ದಾರೆ. ಈ ಚಿತ್ರದಲ್ಲಿ ಕೆಂಡ ಕ್ಯಾರೆಕ್ಟರಲ್ಲಿ ನಟಿಸಿರುವ ಮಲ್ಲೇಶ್ ಎನ್ನುವ ಖಡಕ್ಕು ನಟ ಕೂಡಾ ಪರಿಚಯಗೊಂಡಿದ್ದಾನೆ. ವಿಲನ್ ಗಳಲ್ಲಿ ಒಬ್ಬರಾಗಿ ನಟಿಸಿದ್ದ ರಂಗಭೂಮಿ ನಟ ಮತ್ತು ಗಿರಿಜಾ ಸಿದ್ದಿ ಅವರ ಗಂಡ ಚನ್ನಕೇಶವ ಚಿತ್ರಬಿಡುಗಡೆಗೂ ಮುಂಚೆ ಕಣ್ಮುಚ್ಚಿದರು ಅನ್ನೋದೊಂದೇ ಸಲಗ ತಂಡದ ಬೇಸರ.
ಬ್ಲಾಕ್ ಕೋಬ್ರಾ ವಿಜಯ್ ಅವರ ಪಾಲಿಗೆ ಸಲಗ ಸಿನಿಮಾ ಮತ್ತೊಂದು ದುನಿಯಾ ಆಗೋದು ಗ್ಯಾರೆಂಟಿ. ಬಿಡುಗಡೆಗೂ ಮುಂಚೆ ಸಲಗವನ್ನು ಉದಯ ಟೀವಿ ಮೂರು ಕೋಟಿ ಕೊಟ್ಟು ಖರೀದಿಸಿದೆ. ಡಬ್ಬಿಂಗ್ ರೈಟ್ಸು ಬರೋಬ್ಬರಿ ಮೂರು ಕೋಟಿ ಸಂಪಾದಿಸಿದೆ. ಈಗ ರಿಲೀಸ್ ಆದ ಮೇಲೆ ಐದು ದಿನಗಳ ಕಲೆಕ್ಷನ್ ಬರೋಬ್ಬರಿ ಇಪ್ಪತ್ತು ಕೋಟಿ ದಾಟಿದೆ. ಸಲಗ ಸೂಪರ್ ಹಿಟ್ ಅನ್ನಿಸಿಕೊಳ್ಳಲು ಇದಕ್ಕಿಂತಾ ಇನ್ನೇನು ಬೇಕು ಅಲ್ಲವಾ!?
Comments