ಸಿನಿಮಾ ಆರಂಭಿಸುವ ಮುಂಚೆ ತಂಡ ರಚನೆಯಾಗುತ್ತದಲ್ಲಾ? ಎಷ್ಟೋ ಸಲ ಹೀಗೆ ಟೀಮು ಫಾರ್ಮ್ ಆದಾಗಲೇ `ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು’ ಅನ್ನೋ ಪಾಸಿಟೀವ್ ಫೀಲ್ ಹುಟ್ಟುಹಾಕಿಬಿಡುತ್ತದೆ.
ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಾಯಕನಟರಲ್ಲಿ ದುನಿಯಾ ವಿಜಯ್ ಕೂಡಾ ಒಬ್ಬರು. ಸಿನಿಮಾವೊಂದನ್ನು ಆರಂಭಿಸುವ ಮುಂಚೆಯೇ ಆ ಪಾತ್ರಕ್ಕಾಗಿ ಅವರು ನಡೆಸುವ ತಾಲೀಮು, ಪೂರ್ವ ತಯಾರಿಗಳೇ ಬೆರಗಾಗಿಸುತ್ತದೆ. ದುನಿಯಾ ಮೂಲಕ ಹೀರೋ ಆಗಿ ಆನಂತರ ದೊಡ್ಡ ಮಟ್ಟದ ಸ್ಟಾರ್ ಎನಿಸಿಕೊಂಡು, ಅದ್ಭುತವಾದ ಗೆಲುವು, ಸಣ್ಣ ಪುಟ್ಟ ತೊಡಕುಗಳೆಲ್ಲವನ್ನೂ ಅನುಭವಿಸಿರುವ ವಿಜಯ್ ಈಗ ಎಲ್ಲ ರೀತಿಯಲ್ಲೂ ಮಾಗಿದ್ದಾರೆ. ಇದು ಅವರಿಗೊಪ್ಪು ಹೊಸ ಬಗೆಯ ಪಾತ್ರಗಳು, ಸಿನಿಮಾಗಳು ರೂಪುಗೊಳ್ಳಲು ಸಕಾಲ. ಸಲಗ ಸಿನಿಮಾದ ಮೂಲಕ ವಿಜಯ್ ವೃತ್ತಿಬದುಕಿಗೆ ದೊಡ್ಡದೊಂದು ತಿರುವು ಸಿಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಅದಕ್ಕೆ ಕಾರಣ `ಟಗರು’ ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕರು `ಸಲಗ’ದಲ್ಲಿ ಒಂದಾಗಿರೋದು. ಸದ್ಯಕ್ಕೆ ನಿರ್ದೇಶಕ ಸೂರಿ ಅವರನ್ನು ಹೊರತುಪಡಿಸಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಸಂಗೀತ ನಿರ್ದೇಶಕ ಚರಣ್ ರಾಜ್, ಸಂಭಾಷಣೆಕಾರ ಮಾಸ್ತಿ, ಸಹ ನಿರ್ದೇಶಕ ಅಭಿ, ಕಲಾ ವಿಭಾಗದ ಮಲ್ಲ, ಸಂಗೀತ ನಿರ್ದೇಶಕ ಚರಣ್ ರಾಜ್ ಹೀಗೆ ಟಗರು ಚಿತ್ರತಂಡ ಬಹುತೇಕ ಸದಸ್ಯರು ಹಾಗೂ ಗಾಯಕ ನವೀನ್ ಸಜ್ಜು ಸಹ `ಸಲಗ’ಕ್ಕೆ ಸಾಥ್ ನೀಡುತ್ತಿದ್ದಾರೆ. ಈ ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ ಅನ್ನೋದು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ವಿಶೇಷ ಸಂದರ್ಭವೊಂದರಲ್ಲಿ ನಿರ್ದೇಶಕರ ಹೆಸರು ಜಾಹೀರಾಗಲಿದೆ. ಈ ಬಾರಿ ವಿಜಯ್ ವಿಕ್ಟರಿ ಗ್ಯಾರೆಂಟಿ ಅನ್ನೋ ಮಾತು ಈಗಾಗಲೇ ಎಲ್ಲೆಡೆ ಮಾರ್ದನಿಸುತ್ತಿದೆ. `ಸಲಗ’ ಅನ್ನೋ ಶೀರ್ಷಿಕೆಯಲ್ಲೇ ಏನೋ ಒಂದು ಶಕ್ತಿ ಇದೆ. ಅದರ ಜೊತೆಗೆ ವಿಜಯ್ ಅವರ ಪಳಗಿದ ನಟನೆ, `ಟಗರು’ ಟೀಮು… ಹೀಗೆ ಎಲ್ಲ ಪಾಸಿಟೀವ್ ಅಂಶಗಳೂ ಒಂದೆಡೆ ಸೇರಿವೆ. ಸಲಗಕ್ಕೆ ಒಳಿತಾಗಲಿ..