ಕನ್ನಡ ಚಿತ್ರರಂಗದಲ್ಲಿ ಈಗೊಂದು ವರ್ಷದಿಂದೀಚೆಗೆ ಅವ್ಯಾಹತವಾಗಿ ಹಾರರ್ ಚಿತ್ರಗಳ ಗಾಳಿ ಬೀಸಲಾರಂಭಿಸಿವೆ. ಹೊಸಾ ಥರದ ಕಥೆ, ನಿರೂಪಣೆ ಇದ್ದರೆ ಈ ಜಾನರಿನ ಚಿತ್ರಗಳನ್ನು ಪ್ರೇಕ್ಷಕರು ಕೈ ಬಿಡೋದಿಲ್ಲ ಎಂಬ ನಂಬಿಕೆಯೂ ಈಗಾಗಲೇ ಹುಟ್ಟಿಕೊಂಡಿದೆ. ಇದೀಗ ಪೂರ್ಣ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣಗೊಂಡು ಬಿಡುಗಡೆಗೆ ಸಜ್ಜಾಗಿರೋ ಸಾಲಿಗ್ರಾಮ ಚಿತ್ರವೂ ಹಾರರ್ ಜಾನರಿನದ್ದೇ. ಆದರೆ ಹೆಸರಿಗೆ ತಕ್ಕ ಹಾಗೆ ಈವರೆಗಿನ ಹಾರರ್ ಕಥಾನಕಗಳಿಗಿಂತಲೂ ಈ ಚಿತ್ರವನ್ನು ಭಿನ್ನವಾಗಿ ರೂಪಿಸಿದ ಭರವಸೆ ನಿರ್ದೇಶಕ ಹರ್ಷ ನಾರಾಯಣಸ್ವಾಮಿ ಅವರದ್ದು.
ಸಾಲಿಗ್ರಾಮ ಚಿತ್ರ ಹರ್ಷ ನಿರ್ದೇಶನದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ. ಇದು ಫ್ಯಾಮಿಲಿ ಓರಿಯಂಟೆಡ್ ಹಾರರ್ ಚಿತ್ರ. ಸಾಲಿಗ್ರಾಮ ಎಂಬೂರಿನಲ್ಲಿ ಕುಟುಂಬವೊಂದು ದುಷ್ಟಶಕ್ತಿಗಳ ಕಾಟಕ್ಕೀಡಾಗುವುದರ ರೋಚಕ ಕಥಾ ಹಂದರವನ್ನು ಈ ಚಿತ್ರ ಒಳಗೊಂಡಿದೆ. ಇದೀಗ ಹಾಡುಗಳ ಮೂಲಕವೂ ಅಲೆಯೆಬ್ಬಿಸಿರೋ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸಿದ್ಧಾರ್ಥ ನಾಯಕನಾಗಿ ನಟಿಸಿದ್ದಾರೆ. ಇದುವರೆಗೂ ವಿಭಿನ್ನವಾದ ಪಾತ್ರಗಳಲ್ಲಿಯೇ ನಟಿಸುತ್ತಾ ಬಂದಿರುವ ಪಲ್ಲವಿ ರಾಜು ನಾಯಕಿಯಾಗಿ ನಟಿಸಿದ್ದಾರೆ. ದಿಶಾ ಪೂವಯ್ಯ ಮತ್ತೋರ್ವ ನಾಯಕಿ. ಈ ಚಿತ್ರದ ಮೂಲಕ ಆರಂಭಿಕ ಹೆಜ್ಜೆಯಲ್ಲಿಯೇ ಹರ್ಷ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಜೊತೆಗೆ ಹಾರರ್ ಪ್ರಧಾನ ಅಂಶಗಳನ್ನು ಹೊಂದಿರೋ ಸಾಲಿಗ್ರಾಮ ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡುವಂಥಾ ಸಿನಿಮಾ ಎಂಬುದು ನಿರ್ದೇಶಕ ಹರ್ಷ ಅವರ ಅಭಿಪ್ರಾಯ. ಈ ಮೂಲಕ ಸಾಕಷ್ಟು ಸವಾಲುಗಳನ್ನು ಮೈ ಮೇಲೆಳೆದುಕೊಂಡು ಅದೆಷ್ಟೋ ವರ್ಷಗಳ ಕನಸನ್ನು ನನಸಾಗಿಸಿಕೊಂಡ ಖುಷಿ ಅವರದ್ದು. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಹರ್ಷ ಅವರದ್ದು ನೇರಾ ನೇರ ಸಿನಿಮಾ ಕನಸಿನ ಬೆಂ ಬೀಳೋ ವಾತಾವರಣವಿರೋ ಕುಟುಂಬವಲ್ಲ. ಅದರ ನಡುವೆಯೂ ಬದುಕೇ ಮುಖ್ಯ ಅಂದುಕೊಂಡು ಸಿನಿಮಾ ಕನಸೆಲ್ಲವನ್ನು ಹತ್ತಿಕ್ಕಿಕೊಂಡ ಹರ್ಷ ಕಂಪ್ಯೂಟರ್ ಸೈನ್ಸ್ ಓದಿಕೊಂಡಿದ್ದರು. ಆ ಬಳಿಕ ಸಿಸ್ಕೋ ಕಂಪೆನಿಯಲ್ಲಿ ಹಲವಾರು ವರ್ಷ ಕೆಲಸ ಮಾಡಿದ್ದರು.
ಬಳಿಕ ತನ್ನ ಖಾಸಗಿ ಬದುಕನ್ನು ಆರ್ಥಿಕವಾಗಿ ಒಂದು ಮಟ್ಟಿಗೆ ಸುಸ್ಥಿರಗೊಳಿಸಿಕೊಂಡ ನಂತರವಷ್ಟೇ ಸಿನಿಮಾದತ್ತ ವಾಲಿಕೊಂಡಿದ್ದರು. ಪಟಾಭಿಶೇಕ ಅಂತೊಂದು ಚಿತ್ರಕ್ಕೆ ಛಾಯಾಗ್ರಾಹಕರಾಗಿಯೂ ಕಾರ್ಯ ನಿರ್ವಹಿಸಿದ್ದ ಹರ್ಷ ನಂತರ ಸಾಕಷ್ಟು ತಯಾರಿ ಮಾಡಿಕೊಂಡು ಆರಂಭಿಸಿದ ಚಿತ್ರ ಸಾಲಿಗ್ರಾಮ. ಈ ಚಿತ್ರ ಆರಂಭಿಸಿದ ಮೇಲೆ ಭಯಾನಕ ಅಡೆತಡೆಗಳೂ ಎದುರಾಗಿದ್ದವಂತೆ. ಆದರೆ ಅದೆಲ್ಲವನ್ನು ಸಮರ್ಥವಾಗಿ ಎದುರಿಸಿ ಅವರು ತಮ್ಮ ಕನ ಸನ್ನು ನನಸು ಮಾಡಿಕೊಂಡಿದ್ದಾರೆ.
ಸಾಲಿಗ್ರಾಮ ಹಾರರ್ ಚಿತ್ರವೆಂದಾಕ್ಷಣ ಅದೊಂದಕ್ಕೇ ಸೀಮಿತ ಮಾಡುವಂತಿಲ್ಲ. ಯಾಕೆಂದರೆ ಇದರಲ್ಲಿ ಒಂದು ರಸವತ್ತಾದ ಕೌಟುಂಬಿಕ ಕಥೆ ಇದೆ. ನವಿರಾದ ಪ್ರೇಮ ಕಥಾನಕವಿದೆ. ಮೈ ನವಿರೇಳಿಸೋ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೂ ಇವೆಯಂತೆ. ಹಾಗಾದರೆ ಇದುವರೆಗೂ ಬಂದಿರೋ ಹಾರರ್ ಚಿತ್ರಗಳಿಗಿಂತ ಈ ಚಿತ್ರ ಹೇಗೆ ಭಿನ್ನವಾಗಿ ನಿಲ್ಲುತ್ತದೆ ಎಂಬುದಕ್ಕೂ ಹರ್ಷ ಅವರ ಬಳಿ ನಿಖರವಾದ ಉತ್ತರವಿದೆ. ಈ ಚಿತ್ರ ಹೆದರಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಹೊಸೆದ ಕಥೆಯನ್ನು ಹೊಂದಿಲ್ಲ. ಬದಲಾಯಿ ವ್ಯಕ್ತಯೋರ್ವನ ಪಾರ್ವ ಜನ್ಮದ ಕರ್ಮ ಹಾರರ್ ಸ್ವರೂಪದಲ್ಲಿ ಕಾಡಿದಾಗ ಅದರಿಂದ ಹೊರ ಬರಲು ಏನೇನೆಲ್ಲ ಮಾಡಬೇಕಾಗುತ್ತದೆಂಬುದನ್ನು ಈ ಚಿತ್ರದಲ್ಲಿ ಹೊಸಾ ರೀತಿಯಲ್ಲಿ ನಿರೂಪಿಸಲಾಗಿದೆಯಂತೆ
ಇದೀಗ ಈ ಚಿತ್ರದ ಹಾಡುಗಳೂ ಅನಾವರಣಗೊಂಡಿವೆ. ಅದಕ್ಕೆ ವ್ಯಾಪಕ ಮೆಚ್ಚುಗೆಯೂ ಸಿಕ್ಕಿದೆ. ಇನ್ನೇನು ತಿಂಗಳೊಪ್ಪತ್ತಿನಲ್ಲಿಯೇ ಈ ಚಿತ್ರವನ್ನು ಬಿಡುಗಡೆಗೊಳಿಸಲು ಹರ್ಷ ನಿರ್ಧರಿಸಿದ್ದಾರೆ.
#
No Comment! Be the first one.