ಇಲ್ಲೊಂದು ಚಿತ್ರತಂಡ ಸಿನಿಪ್ರಿಯರಿಗೆ ಹೊಸಬಗೆಯ ಚಿತ್ರವೊಂದನ್ನು ತರುವುದಕ್ಕೆ ಸನ್ನದ್ಧವಾಗಿದೆ. ‘ಸಾಲಿಗ್ರಾಮ’ ಎನ್ನುವ ವಿಶಿಷ್ಟ ಶೀರ್ಷಿಕೆಯ ಚಿತ್ರವನ್ನು, ಚಿತ್ರೀಕರಣ ಸಾಮಾಗ್ರಿಗಳನ್ನು ಬಾಡಿಗೆಗೆ ನೀಡುತ್ತಿದ್ದ ಹರ್ಷ ಅವರು ನಿರ್ದೇಶನ ಮಾಡಿದ್ದಾರೆ. ಕಥೆ, ಛಾಯಾಗ್ರಹಣ, ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ಹರ್ಷ, ಪೂರ್ವಜನ್ಮದಲ್ಲಿ ಮಾಡಿದ ಕರ್ಮಗಳು, ನಂತರದ ಜನ್ಮದಲ್ಲಿ ಕಾಡುವ ಸನ್ನಿವೇಶಗಳನ್ನು ತೋರಿಸುವ ಮುಖಾಂತರ ಕಥೆಯೊಂದನ್ನು ತೆರೆಯ ಮೇಲೆ ತರಲಿದ್ದಾರಂತೆ.
ಅಂಬೇಡ್ಕರ್ ಭವನದಲ್ಲಿ ನಡೆದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೆಂಚುರಿ ಸ್ಟಾರ್ ಶಿವಣ್ಣ, ಈ ನಡುವೆ ಒಳ್ಳೆಯ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ದಾಪುಗಾಲಿಡುತ್ತಿವೆ. ಚಿತ್ರರಂಗಕ್ಕೆ ಈ ಬಗೆಯ ನವಯುವಕರ ಅವಶ್ಯಕತೆಯಿದೆ. ಹಾಗಾಗಿ ಹೊಸಚಿಂತನೆಯ ಚಿತ್ರಗಳು ಯಶಸ್ವಿಯಾಗಲಿ ಎಂದಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಭಗವಾನ್ ಅವರು ಇಂದಿನ ಯುವ ಪೀಳಿಗೆ ಹೊಸ ಕಲ್ಪನೆಗಳೊಂದಿಗೆ ಚಿತ್ರಗಳನ್ನು ಹೊಸೆಯುತ್ತಿದ್ದು, ನವೀನ ವಿನ್ಯಾಸದ ಸಿನಿಮಾಗಳು ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವುದು ಸಂತಸದ ವಿಚಾರ. ಒಂದು ಕಾಲಕ್ಕೆ ವರ್ಷದಲ್ಲಿ ೬-೭ ಕನ್ನಡ ಚಿತ್ರಗಳು ಬಿಡುಗಡೆಯಾಗುವ ಸಂದರ್ಭವಿತ್ತು. ಈಗ ೨೫೦ ಕ್ಕೂ ಹೆಚ್ಚು ಚಿತ್ರಗಳು ತೆರೆ ಕಾಣುತ್ತಿದೆ. ಇದು ಚಂದನವನ ಪ್ರವರ್ಧಮಾನಕ್ಕೆ ಬಂದು ಪ್ರಬುದ್ಧವಾಗುತ್ತಿರುವ ಲಕ್ಷಣ ಎಂದು ಹೇಳಿದ್ದಾರೆ.
ಸಾಲಿಗ್ರಾಮವನ್ನು ಪವಿತ್ರವಾದ ಕಲ್ಲಿನಲ್ಲಿ ತಿಕ್ಕಿದರೆ ಅದು ಬಂಗಾರವಾಗುತ್ತದೆಂದು ಹೇಳಿದ್ದಾರೆ. ಅದೇ ರೀತಿ ‘ಸಾಲಿಗ್ರಾಮ’ ಶೀರ್ಷಿಕೆಯ ಚಿತ್ರ ಸಿನಿಜಗತ್ತಿನ ಬಂಗಾರವಾಗಲಿ ಎಂದು ಕೆ.ಕಲ್ಯಾಣ್ ಹಾರೈಸಿದ್ದಾರೆ.
ನಟ ಶಿವರಾಜ್ ಕುಮಾರ್, ದಿನೇಶ್ ಗುಂಡೂರಾವ್ ಮೊದಲಾದ ಖ್ಯಾತನಾಮರು ಶುಭ ಹಾರೈಸಿರುವ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಸಿದ್ದಾರ್ಥ್, ನಾಯಕಿಯರಾಗಿ ಪಲ್ಲವಿರಾಜು, ದಿಶಾಪೂವಯ್ಯ, ನಟಿಸಿದ್ದಾರೆ. ಸನ್ನಿರಾಜ್ ಸಂಗೀತ ಸಂಯೋಜನೆಯಿರುವ ಚಿತ್ರದ ಧ್ವನಿಸುರುಳಿ ಡಾ.ಅಂಬೇಡ್ಕರ್ ಭವನದಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡು, ಸಿನಿಮಾರಂಗದಲ್ಲಿ ಸದ್ದುಮಾಡಿದೆ.
#
No Comment! Be the first one.