ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದಲ್ಲಿ ಜಯ್ ಶೆಟ್ಟಿ ನಾಯಕನಾಗಿ ನಟಿಸಿರುವ “ಸಂಭಾವಮಿ ಯುಗೇಯುಗೇ” ಚಿತ್ರ ಇತ್ತೀಚಿಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆದರೆ ನಿರೀಕ್ಷಿಸಿದಷ್ಟು ಜನರು ಚಿತ್ರ ನೋಡುತ್ತಿಲ್ಲ ಎಂಬ ಬೇಸರ ಚಿತ್ರತಂಡಕ್ಕಿದೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಈ ಕುರಿತು ಮಾತನಾಡಿದರು.
ಪಕ್ಕಾ ಗ್ರಾಮೀಣ ಶೈಲಿಯ, ಉತ್ತಮ ಕಥಾಹಂದರ ಹೊಂದಿರುವ ನಮ್ಮ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿದೆ. ಆದರೆ ನಾವು ನಿರೀಕ್ಷಿಸಿದಷ್ಟು ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆ ಬಗ್ಗೆ ಬೇಸರವಿದೆ. ಆದರೆ ಈವರೆಗೂ ನಮ್ಮ ಚಿತ್ರ ನೋಡಿದವರು ಚಿತ್ರದ ಕುರಿತು ಆಡುತ್ತಿರುವ ಒಳ್ಳೆಯ ಮಾತುಗಳು ಖುಷಿ ಕೊಟ್ಟಿದೆ. ಕರ್ನಾಟಕದಾದ್ಯಂತ ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡುವುದರ ಮೂಲಕ ಹೊಸತಂಡದ ಹೊಸಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಚೇತನ್ ಚಂದ್ರಶೇಖರ್ ಶೆಟ್ಟಿ.
ಹೊಸ ನಾಯಕನ ಮೊದಲ ಚಿತ್ರಕ್ಕೆ ಹೆಚ್ಚು ಜನ ಚಿತ್ರಮಂದಿರಕ್ಕೆ ಬರುವುದಿಲ್ಲ ಎನ್ನುತ್ತಾರೆ. ಆದರೆ ನನ್ನ ಮೊದಲ ಚಿತ್ರದ ಬಿಡುಗಡೆಯ ದಿನ ಅಧಿಕ ಸಂಖ್ಯೆಯ ಜನರು ಬಂದು ವೀಕ್ಷಿಸಿ ಪ್ರೋತ್ಸಾಹ ನೀಡಿದರು. ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯವಿದ್ದರೂ, ಆನಂತರದ ದಿನಗಳಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಚಿತ್ರವನ್ನು ನೋಡುವುದರ ಮೂಲಕ ಉತ್ತೇಜನ ನೀಡಬೇಕೆಂದರು ನಾಯಕ ಜಯ್ ಶೆಟ್ಟಿ.
ಚಿತ್ರದಲ್ಲಿ ನಟಿಸುರುವ ಮಧುರ ಗೌಡ, ಭಜರಂಗಿ ಪ್ರಸನ್ನ, ವೆಂಕಟೇಶ್ ಪ್ರಸಾದ್ ಹಾಗೂ ಛಾಯಾಗ್ರಾಹಕ ರಾಜು ಹೆಮ್ಮಿಗೆಪುರ ಮೊದಲಾದವರು ಚಿತ್ರವನ್ನು ಹೆಚ್ಚಿನ ಜನರು ನೋಡುವ ಮೂಲಕ ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
No Comment! Be the first one.