ಕಳೆದ ಹತ್ತನ್ನೆರಡು ವರ್ಷಗಳ ಹಿಂದೆ ನಾಯಕಿಯರಾಗಿ ಹೆಸರು ಮಾಡಿದ ಎಷ್ಟೋ ಜನ ಇವತ್ತು ಕಣ್ಣಿಗೂ ಕಾಣದಂತೆ ಕಳೆದುಹೋಗಿದ್ದಾರೆ. ಸೈಕೋ ಚಿತ್ರದಿಂದ ನಾಯಕಿ ಅನ್ನಿಸಿಕೊಂಡವರು ನಟಿ ಅನಿತಾ ಭಟ್.‌ ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದರೂ ಅನಿತಾ ಇನ್ನೂ ಅದೇ ಕ್ರೇಜ಼್ ಉಳಿಸಿಕೊಂಡಿದ್ದಾರೆ. ಅದಕ್ಕೆ ಕಾರಣಗಳೂ ಇವೆ. ಹೀರೋಯಿನ್ನಾಗಿಯೇ ಉಳಿಯಬೇಕು ಅನ್ನೋದನ್ನು ಬಿಟ್ಟು, ಬಂದ ಪಾತ್ರಗಳನ್ನು ಕಣ್ಣಿಗೊತ್ತಿಕೊಂಡು ನಟಿಸಿದ್ದರಿಂದಲೇ ಬಹುಶಃ ಅನಿತಾ ಚಿತ್ರರಂಗದಲ್ಲಿ ಉಳಿದಿರುವುದು ಮಾತ್ರವಲ್ಲದೆ, ಮತ್ತೊಂದು ಇನ್ನಿಂಗ್ಸ್‌ʼಗೆ ಅಣಿಯಾಗುತ್ತಿದ್ದಾರೆ.

ಟಗರು ಥರದ ಸಿನಿಮಾದಲ್ಲಿ ಬೋಲ್ಡ್‌ ಆಗಿ ಕಾಣಿಸಿಕೊಂಡವರು ಅನಿತಾ ಭಟ್.‌ ಬಿಗ್‌ ಬಾಸ್‌ʼನಂತಹ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದರು. ಯೋಗ ಕೇಂದ್ರವನ್ನು ಆರಂಭಿಸಿದರು. ಇದೆಲ್ಲದರ ಜೊತೆ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಾಬಂದರು. ಈಗ ಅನಿತಾ ಮತ್ತೊಂದು ಸಾಹಸ ಆರಂಭಿಸಿದ್ದಾರೆ. ಅದೇನೆಂದರೆ, ರಾಜಲಕ್ಷ್ಮಿ ಸಿನಿ ಕ್ರಿಯೇಷನ್ಸ್ ಮತ್ತು ಡಾಟ್ ಟಾಕೀಸ್ ಸಹಯೋಗದೊಂದಿಗೆ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಮೂಲಕ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ.

ಗಣೇಶನ ಹಬ್ಬದ ಶುಭ ಘಳಿಗೆಯಲ್ಲಿ ಈ ಚಿತ್ರದ ಟೈಟಲ್‌ ಕೂಡಾ ಲಾಂಚ್‌ ಆಗಿದೆ. ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಅನಾವರಣಗೊಳಿಸಿರುವ ಈ ಸಿನಿಮಾದ ಹೆಸರು ʻಸಮುದ್ರಂʼ. ಕೊರೋನಾ ಕಾರಣಕ್ಕೇ ಏರ್ಪಟ್ಟ ಲಾಕ್‌ ಡೌನ್‌ ಸಮಯದಲ್ಲಿ  ಕೂತು ಅಚ್ಚುಕಟ್ಟಾದ ಸ್ಕ್ರಿಪ್ಟ್‌ ರೆಡಿ ಮಾಡಿಕೊಂಡಿದ್ದರು. ಆ ನಂತರ ಚಿತ್ರೀಕರಣವನ್ನೂ ಯಶಸ್ವಿಯಾಗಿ ಪೂರೈಸಿದ್ದಾರೆ. ಈಗ ಸಮುದ್ರಂ ಶೀರ್ಷಿಕೆ ಕೂಡಾ ಲೋಕಾರ್ಪಣೆಗೊಂಡಿದೆ.

ಅಪ್ಪಳಿಸುವ ಅಲೆಯ ಎದುರು ಪಾತ್ರವೊಂದು ಚೇರು ಹಾಕಿಕೊಂಡು ಕುಳಿತಿದೆ. ʻʻಈ ಸಮುದ್ರ ಎಷ್ಟು ಮಾತಾಡತ್ತೆ ಗೊತ್ತಾ? ಪ್ರತಿ ಕ್ಷಣ ಏನಾದ್ರೂ ಹೇಳ್ತಾನೇ ಇರತ್ತೆ…ʼʼ ಎನ್ನುವ ಹಿನ್ನೆಲೆ ಧ್ವನಿ ಕೇಳಿಸುತ್ತದೆ. ಸಮುದ್ರಂ ಶೀರ್ಷಿಕೆ ಪರದೆ ಮೇಲೆ ತೆರೆದುಕೊಳ್ಳುತ್ತಿದ್ದಂತೇ, ಆ ಕಡೆಯಿಂದ ಹಡಗೊಂದು ಜೊತೆಯಾಗುತ್ತದೆ. ಟೈಟಲ್‌ ಅನಾವರಣದ ಈ ಪುಟ್ಟ ಟೀಸರಿನಲ್ಲೇ ಮೋಡಿ ಮಾಡುವಂತಾ ಎಲಿಮೆಂಟುಗಳಿವೆ. ರಿಷಿಕೇಶ್ ಕ್ಯಾಮೆರಾ ಕೆಲಸ, ಆಕಾಶ್‌ ಪರ್ವ ಹಿನ್ನೆಲೆ ಸಂಗೀತವಂತೂ ಅದ್ಭುತ.

ಅಪಾರ ಪ್ರತಿಭೆ ಇದ್ದು, ಪ್ರಚಾರ ಪಡೆಯದ ಕೆಲವು ತಂತ್ರಜ್ಞರಿರುತ್ತಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕಡೆ ಕೇಳಿಬರುತ್ತಿರುವ ಏಕೈಕ ಹೆಸರು ರಿಷಿಕೇಶ್. ಸಮುದ್ರಂ ಚಿತ್ರಕ್ಕೆ ಛಾಯಾಗ್ರಹಣ ಮತ್ತು ಸಂಕಲನ ಮಾಡಿರುವ ರಿಷಿಕೇಶ್‌ ಚಿತ್ರಕಥೆ ಹಾಗೂ ಸಂಭಾಷಣೆಯ ಕೆಲಸವನ್ನೂ ತಾವೇ ನಿಭಾಯಿಸಿದ್ದಾರೆ. ನಿರ್ದೇಶನದ ಜವಾಬ್ದಾರಿ ಮಾತ್ರ ರಾಘವ ಮಹರ್ಷಿಗೆ ವಹಿಸಲಾಗಿದೆ.

ಟೀಸರಿನಲ್ಲೇ ಹೇಳಿರುವಂತೆ ಸಮುದ್ರ ಸದಾ ಏನಾದರೊಂದು ಹೇಳುವ, ನಿರಂತರ ಮಾತಾಡುತ್ತಲೇ ಇರುವ ಮಾಯಕಾರನಂತೆ. ಆದರೂ, ಕಡಲ ಕಿನಾರೆ ಇದುವರೆಗೂ ಹೇಳಿಕೊಳ್ಳದ ಅಗಣಿತ ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿದೆ. ಅಂಥದ್ದೊಂದು ಕತೆ ಸಮುದ್ರಂನಲ್ಲಿ ತೆರೆದುಕೊಳ್ಳಲಿದೆ. ಕಡಲಿನಷ್ಟೇ ವಿಶಾಲವಾಗಿ ಹರಡಿಕೊಂಡಿರುವ ಭೂಗತ ಜಗತ್ತು, ಇಲ್ಲಿನ ಮಾಫಿಯಾ, ಹೆಣ್ಣೊಬ್ಬಳ ಬಿಕ್ಕಳಿಕೆ, ಕ್ರೂರಿ ಸಮಾಜದ ಎದುರಿಗೆ ಆಕೆ ತೋರುವ ದಿಟ್ಟತನಗಳೆಲ್ಲಾ ಕಣ್ಣಿಗೆ ಕಟ್ಟುವಂತೆ ಇಲ್ಲಿ ಬಿಡಿಸಿಡಲಾಗಿದೆಯಂತೆ.

ಸಕಲೇಶಪುರ, ಚಿಕ್ಕಮಗಳೂರು, ಉಡುಪಿ, ಮಲ್ಪೆ ಮತ್ತು ಬ್ರಹ್ಮಾವರಗಳ ರುದ್ರರಮಣೀಯ ಸ್ಥಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದ ಇನ್ನಷ್ಟು ವಿವರಗಳು ಹಂತ ಹಂತವಾಗಿ ಹೊರಬರಲಿದೆ…

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬೂಟಿನ ರುಚಿಗಾಗಿ ಹಪಹಪಿಸುವ ಕನ್ನಡ ವಿರೋಧಿ ಇವನು!

Previous article

ಕರಿಯ ನಿರ್ಮಾಪಕರ ಮತ್ತೊಂದು ಸಿನಿಮಾ!

Next article

You may also like

Comments

Leave a reply

Your email address will not be published.