ಕ್ಯಾನ್ಸರ್ ಎನ್ನುವ ಕ್ರೂರ ಕಾಯಿಲೆ ಯಾರಿಗಾದರೂ ಬರಬಾರದು. ಅದರಲ್ಲೂ ಎಳೇ ಮಕ್ಕಳಿಗನ್ನು ಈ ಮಹಾಮಾರಿ ಆವರಿಸಿದರೆ ಸಂಕಟವಾಗಿಬಿಡುತ್ತದೆ. ಐದೂವರೆವರ್ಷದ ಮಗುವೊಂದು ಕ್ಯಾನ್ಸರಿನಿಂದ ನರಳುತ್ತಿದೆ. ಈ ಕುರಿತು ನಟ ಸಂಚಾರಿ ವಿಜಯ್ ಬರೆದಿದ್ದಾರೆ. ಓದಿ. ನಿಮ್ಮಿಂದ ಸಾಧ್ಯವಾದ ಸಹಾಯ ಮಾಡಿ ಪ್ಲೀಸ್…
ಒಂದು ವಾರದಿಂದ ಶತ ಪ್ರಯತ್ನ ಮಾಡಿದರೂ ಕೂಡ ಈ ಮಗುವಿಗೆ ಸಹಾಯ ಮಾಡೋಕೆ ಆಗುತ್ತಿಲ್ಲವಲ್ಲ ಅಂತ ಬೇಜಾರಾಗ್ತಿದೆ. ಕೆಳಗಿನ ಫೋಟೋ ನೋಡಿದ ತಕ್ಷಣ ಎಲ್ಲರಿಗೂ ಸ್ವಲ್ಪ ಕಷ್ಟ ಆಗ್ಬಹುದು ಇದನ್ನ ವಾಲ್ನಿಂದ ತೆಗೆದುಬಿಡು ಅನ್ನಬಹುದು. ಅದು ಗೊತ್ತಿದ್ದೂ ಫೋಟೋ ಸಮೇತ ವಿವರಣೆ ಹಾಕುತ್ತಿದ್ದೇನೆ ಕಾರಣ ಇದರ ಗಂಭೀರತೆ ತಿಳಿಯಲಿ ಅಂತ.
ಐದೂವರೆ ವರ್ಷದ ಈ ಮಗುವು leukocyte adhesion ಅನ್ನೋ ವಿರಳಾತಿವಿರಳ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದೆ. ನಾನೇ ಖುದ್ದಾಗಿ ಆಸ್ಪತ್ರೆಗೆ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆದು ಬಂದಿದ್ದೇನೆ. ನಾಲ್ಕಾರು ಜನ ನೀಡಿರುವ ದೇಣಿಗೆಯಲ್ಲಿ ಸದ್ಯ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ನಾರಾಯಣ ಹೃದಯಾಲಯದಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡುತ್ತಿದ್ದಾರೆ, ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. Dr. Sunil bhat ಅವರು ಮಗುವಿನ ಈಗಿನ ಆರೋಗ್ಯದ ಪರಿಸ್ಥಿತಿಯನ್ನು ವಿವರಿಸಿರುವ ಆಡಿಯೋ ನನ್ನ ಬಳಿ ಇದೆ. ಚಿಕಿತ್ಸೆಗೆ ಬೇಕಾಗಿರುವ ಖರ್ಚು ಅಂದಾಜು 40 ರಿಂದ 45 ಲಕ್ಷ. ಅಷ್ಟೇನೂ ಸ್ಥಿತಿವಂತರಲ್ಲದ ಮಗುವಿನ ತಂದೆ ತಾಯಿ ಇಷ್ಟೊಂದು ಹಣವನ್ನು ಹೊಂದಿಸಲಾಗದೆ ಒಬ್ಬನೇ ಮಗನನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇನ್ನೂ ಜಗತ್ತನ್ನೇ ಸರಿಯಾಗಿ ನೋಡದ, ಆಟ ಆಡುತ್ತಾ ಕಾಲ ಕಳೆಯಬೇಕಾದ ವಯಸ್ಸಿನಲ್ಲಿ ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯ ಕಷ್ಟ ಪಟ್ಟು ಉಸಿರಾಡುತ್ತಾ ಮೊಬೈಲ್ ಹಿಡಿದುಕೊಂಡು ಕಾಲ ಕಳೆಯುವುದನ್ನು ನೋಡಿದರೆ ಮನಸ್ಸಿಗೆ ತುಂಬಾ ಹಿಂಸೆಯಾಗುತ್ತೆ.
ಭಾರತಿ ಬಿ ವಿ ಯವರ ‘ಸಾಸಿವೆ ತಂದವಳು’ ಪುಸ್ತಕ ಓದಿದಾಗ ಕ್ಯಾನ್ಸರ್ ಅನ್ನೋ ಖಾಯಿಲೆ ಎಷ್ಟು ಗಂಭೀರವಾದದ್ದು ಅನ್ನೋದು ತಿಳಿದಿತ್ತು, ಆದರೆ ಈ ಪುಟ್ಟ ಮಗುವಿಗೆ ಇಂಥಾ ಕಾಯಿಲೆ ಬಂದಿರುವುದು ನಿಜಕ್ಕೂ ವಿಧಿಯ ಆಟವೇ ಸರಿ. ಮಗುವಿನ ತಂದೆ ತಾಯಿಯ ಅನುಮತಿ ಪಡೆದೇ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಸದ್ಯ ವಿಜಯನಗರದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿರುವ ಇವರು 12ಸಾವಿರ ಬಾಡಿಗೆ ಕಟ್ಟಲೂ ಹಣವಿಲ್ಲದೆ ಒದ್ದಾಡುತ್ತಿದ್ದಾರೆ. ನನ್ನ ಸ್ನೇಹಿತರಲ್ಲಿ ತುಂಬಾ ಜನ ಉದಾರಿಗಳಿದ್ದೀರಿ, ಬರೀ ಹಣದ ಸಹಾಯ ಮಾತ್ರವಲ್ಲ ಬೇರೆ ಯಾವುದೇ ರೀತಿಯಲ್ಲಾದರೂ ಸಹ ಇವರಿಗೆ ನೆರವಾಗ ಬಯಸುವವರು ನನಗೆ ಇನ್ಬಾಕ್ಸ್ ಮಾಡಿ. ಹಾಗೆಯೇ ಸರಕಾರದಿಂದ ಏನಾದರು ಸಹಾಯ ಸಿಗುವ ದಾರಿಗಳಿದ್ದರೆ ನನಗೆ ತಿಳಿಸಿ.
- ಸಂಚಾರಿ ವಿಜಯ್