ನಾಲ್ಕು ವರ್ಷಗಳ ಹಿಂದೆ ರಿಕ್ತ ಹೆಸರಿನ ಸಿನಿಮಾವೊಂದು ತೆರೆಗೆ ಬಂದಿತ್ತು. ಕಥೆ ಆರಂಭಗೊಂಡು ಸ್ವಲ್ಪವೇ ಹೊತ್ತಾಗಿರುತ್ತದೆ. ಅಚಾನಕ್ಕಾಗಿ ಹೀರೋ ಕಾಲುಜಾರುತ್ತದೆ. ಸ್ಲೋ ಮೋಷನ್ನಲ್ಲಿ ಹಂಗಂಗೇ ಹಿಂದಕ್ಕೆ ಬೀಳುತ್ತಾನೆ. ಮತ್ತೆ ಮೇಲೆ ಏಳೋದೇ ಇಲ್ಲ. ತಲೆಗೆ ಬಿದ್ದ ಬಲವಾದ ಪೆಟ್ಟು ಅವನ ಜೀವ ತೆಗೆದಿರುತ್ತದೆ. ನಂತರ ಮತ್ತೆ ಕಥೆ ಮುಂದುವರೆಯುವುದು ಆ ಹೀರೋ ಆತ್ಮ, ಪ್ರೇತ-ಗೀತ ಇತ್ಯಾದಿಗಳ ಮೂಲಕ…
ಆ ಚಿತ್ರದ ಹೀರೋ ಆಗಿ ನಟಿಸಿದ್ದು ಇದೇ ಸಂಚಾರಿ ವಿಜಯ್…!
ಅದೇನು ದುರಂತವೋ ಗೊತ್ತಿಲ್ಲ. ಕೆಲವೊಮ್ಮೆ ತಾವು ಅನುಭವಿಸಿ ನಟಿಸಿದ ಪಾತ್ರ ಮತ್ತು ದೃಶ್ಯಗಳು ಕಲಾವಿದರ ನಿಜ ಬದುಕಿನಲ್ಲೂ ಹೆಚ್ಚೂಕಮ್ಮಿ ಹಾಗೇ ಮರುಸೃಷ್ಟಿಯಾಗಿಬಿಡುತ್ತವೆ.
ʻಮೇಲೊಬ್ಬ ಮಾಯಾವಿʼ ಎನ್ನುವ ಮತ್ತೊಂದು ಸಿನಿಮಾ. ನವೀನ್ ಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮತ್ತು ಚಕ್ರವತ್ರಿ ಚಂದ್ರಚೂಡ್ ಜೊತೆಯಾಗಿ ನಟಿಸಿದ್ದಾರೆ. ಇನ್ನೂ ತೆರೆಗೆ ಬಂದಿಲ್ಲದ ಮಾಯಾವಿಗೆ ಸಂಗೀತ ಸಂಯೋಜಿಸಿದ್ದವರು ಎಲ್ ಎನ್ ಶಾಸ್ತ್ರಿ. ʻʻಕಲ್ಲ ಕೊಳಲ ಹಿಡಿದವನೊಬ್ಬ ಗೋಪಾಲ. ನುಡಿಸಲು ಹೊರಟ ಲೋಕವೆಂಬ ಜೀವ ಜಾಲ. ಬೊಗಸೆಯಷ್ಟು ಸಾವಿಲ್ಲದ ಮನೆ ಸಾಸಿವೆ.. ಹುಡುಕಿದಷ್ಟು ಸಾಲಿಲ್ಲದಾ ಹರಿವ ಇರುವೆ… ನೀ ಹೊರಟೆಯಲ್ಲೋ ಮಹಾ ಯಾನ… ನಿಂತು ಹೋಯಿತೇ ಜೀವ ಗಾನ…ʼʼ ಅಣು ಅಣುವನ್ನೂ ಕಾಡುವ ಇಂಥಾ ಸಾಲುಗಳನ್ನು ಇದೇ ಸಿನಿಮಾಗಾಗಿ ಚಂದ್ರಚೂಡ್ ರಚಿಸಿದ್ದರು. ಇದು ಎಲ್ ಎನ್ ಶಾಸ್ತ್ರಿ ಮ್ಯೂಸಿಕ್ ಮಾಡಿ, ಹಾಡಿದ ಕೊನೇ ಹಾಡಾಗಿತ್ತು. ಹಾಡಿನ ಪ್ರತಿ ಪದವೂ ಈಗ ಸಂಚಾರಿ ವಿಜಯ್ ಬದುಕಿಗೂ ಅಕ್ಷರಶಃ ಅನ್ವಯವಾಗುತ್ತಿದೆ…
ಬಹುತೇಕ ಕುತಂತ್ರಿ, ಕೇಡುಗರೇ ತುಂಬಿರುವ ಈ ಜಗತ್ತಿನಲ್ಲಿ ತಮ್ಮ ಕಣ್ಣ ಮುಂದೆ ಯಾರೂ ನರಳಬಾರದು ಅಂತಾ ಬಯಸಿದ್ದ ಶುದ್ದಾತ್ಮ, ಸುಗುಣಸಾಂದ್ರ ಸಂಚಾರಿ ವಿಜಯ್. ಕೊರೋನಾ ಸಿಕ್ಕವರನ್ನೆಲ್ಲಾ ಕೊಂದು ಉರುಳಿಸುತ್ತಿದ್ದ ಹೊತ್ತಿನಲ್ಲಿ ʻಉಸಿರುʼ ತಂಡದ ಸದಸ್ಯನಾಗಿ ದುಡಿಯುತ್ತಿದ್ದವರು ವಿಜಯ್. ʻತಾವು ಕೊಡುವ ಸಹಾಯ ಕೈ ಸೋತವರಿಗಷ್ಟೇ ತಲುಪಬೇಕುʼ ಎನ್ನುವ ಕಾಳಜಿಯ ಸಂದೇಶವನ್ನು ಸಾಹಿತಿ ಕವಿರಾಜ್ ಗೆ ಕಳಿಸಿದ್ದಾರೆ. ಅದನ್ನು ಓದಿದರೆ ವಿಜಯ್ ಒಳ್ಳೇತನದ ಅರಿವಾಗುತ್ತದೆ.
ಯಾರೇ ಕಷ್ಟದಲ್ಲಿದ್ದಾಗ ಅವರ ಬಗ್ಗೆ ನಾಲ್ಕು ಸಾಲು ಬರೆದು, ತಮ್ಮ ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಮೀಡಿಯಾ ಮೂಲಕ ಎಲ್ಲರಿಗೂ ತಲುಪಿಸುತ್ತಿದ್ದರು. ಚಿಕಿತ್ಸೆಯ ಖರ್ಚುಗಳಿಗೆ ಹಣ ಹೊಂದಿಸುವ ವ್ಯವಸ್ಥೆ ಮಾಡುತ್ತಿದ್ದರು. ದಯವಿಟ್ಟು cinibuzz ನಲ್ಲಿ ಈ ಬಗ್ಗೆ ಪ್ರಕಟಿಸಿ, ಅನುಕೂಲ ಮಾಡಿ ಅಂತಾ ವಿನಂತಿಸಿದ ಸಾಕಷ್ಟು ಉದಾಹರಣೆಗಳಿವೆ. ಇಡ್ಲಿ ವಡೆ ದಾನ ಮಾಡಿ ಇಂಗ್ಲಿಷ್ ಪೇಪರುಗಳಲ್ಲಿ ದೊಡ್ಡ ಫೋಟೋದೊಂದಿಗೆ ಪಬ್ಲಿಸಿಟಿ ಪಡೆಯುವ ನೀಚರ ನಡುವೆ ವಿಜಯ್ ತಮಗೆ ಗೊತ್ತಿದ್ದ ಮಾಧ್ಯಮ ಮಿತ್ರರನ್ನು ಪರೋಪಕಾರಕ್ಕೆ ಬಳಸಿಕೊಳ್ಳುತ್ತಿದ್ದರು ಅನ್ನೋದು ನಿಜಕ್ಕೂ ದೊಡ್ಡ ವಿಚಾರ.
ಯಾವ ಗಿಮಿಕ್ಕುಗಳನ್ನು ಮಾಡದೆ, ಜೀವಪರ ನಿಲುವುಗಳನ್ನು ಹೊಂದಿದ್ದ ವಿಜಯ್ ಇಷ್ಟು ಬೇಗ ಮಹಾಯಾನಕ್ಕೆ ಹೊರಟುಬಿಟ್ಟರಲ್ಲಾ? ಜೀವಗಾನ ನಿಲ್ಲಿಸಲು ಇಷ್ಟೊಂದು ಆತುರವಾದರೂ ಏನಿತ್ತು ಈ ಸಂಚಾರಿಗೆ?
No Comment! Be the first one.