ಅಪ್ಪಟ ಕನ್ನಡದ ಅಸಾಧಾರಣ ಪ್ರತಿಭೆ ಸಂಚಾರಿ ವಿಜಯ್, ತನ್ನ ಪಾಲಿನ ಬದುಕು ಮುಗಿಸಿಕೊಂಡರು.! ಇವರು ಸಂಚಾರಿ ಎಂಬ ನಾಟಕ ತಂಡದಲ್ಲಿ ತೊಡಗಿಸಿಕೊಂಡ ಕಾರಣಕ್ಕೆ, ಇವರ ಹೆಸರ ಹಿಂದೆ ‘ಸಂಚಾರಿ’ ಸೇರಿಕೊಂಡಿತ್ತು. ವಿಪರ್ಯಾಸವೆಂದರೆ, ಕೊನೆಯಲ್ಲಿ ಇವರ ಮೈಮರೆತದ ಸಂಚಾರವೇ ಇವರಿಗೆ ಮುಳುವಾಗಿದೆ! ಹೌದು, ಅವತ್ತು ಶನಿವಾರ ರಾತ್ರಿ ಸ್ನೇಹಿತನ ಜೊತೆ ಬೈಕ್ನಲ್ಲಿ ಸಂಚರಿಸುವ ವೇಳೆಯಲ್ಲಿ, ವಿಜಯ್ ಹೆಲ್ಮೆಟ್ ಧರಿಸಿರಲಿಲ್ಲ. ಅಪಘಾತದ ತೀವೃತೆ ಎಷ್ಟಿತ್ತೆಂದರೆ, ಅವರ ಬಲ ಭಾಗದ ತೊಡೆ ಮುರಿದು, ದೇಹ ರಕ್ತ ಸಿಕ್ತವಾಗಿತ್ತು. ಎಡ ತಲೆಗೆ ಎಲೆಕ್ಟ್ರಿಕ್ ಕಂಬ ಡಿಕ್ಕಿಯಾದ ಪರಿಣಾಮ ಮೆದುಳು ಮಗ್ಗುಲು ಬದಲಿಸಿ, ರಕ್ತ ಚೆಲ್ಲಿಕೊಂಡಿತ್ತು!!
ಅಪೋಲೋ ಆಸ್ಪತ್ರೆಯಲ್ಲಿ ಬದುಕಿಸುವ ಸರ್ವ ಪ್ರಯತ್ನ ನಡೆಸಿದರೂ ಫಲಿಸಲಿಲ್ಲ. ಅತಿಅಪರೂಪದ “ಬ್ರೈನ್ ಡೆಡ್” ಎಂಬ ಪರಿಣಾಮಕ್ಕೆ ವಿಜಯ್ ಉಸಿರು ಚೆಲ್ಲುವಂತಾಯ್ತು. ನೆನಪಿರಲಿ, ವಿಜಯ್ ಸಂಚಾರದ ವೇಳೆ ಹೆಲ್ಮೆಟ್ ಧರಿಸಿದ್ದರೆ, ಅವರ ಮೆದುಳಿಗೆ ಆ ಪಾಟಿ ಏಟು ತಗುಲುತ್ತಿರಲಿಲ್ಲ. ಹಾಗಾಗಿದ್ದರೆ ಅವರು ಬದುಕುವ ಚಾನ್ಸ್ ಇತ್ತು. ಅದಕ್ಕೆ ಸಾಕ್ಷಿಯಾಗಿ, ಮೆದುಳು ನಿಷ್ಕ್ರೀಯಗೊಂಡರೂ, ಅವರ ದೇಹ ಚಲನೆಯಲ್ಲಿತ್ತು. ಉಸಿರು ನಿಂತಿರಲಿಲ್ಲ! ವೈದ್ಯಲೋಕದ ಪ್ರಕಾರ ಮಿದುಳು ಸತ್ತ ಪರಿಣಾಮ ಜೀವ ಉಳಿಯದು! ಮುಂದೆ ಮನೆಯವರ ಸಲಹೆಯಂತೆ, ವಿಜಯ್ ದೇಹದ ಅಂಗಾಂಗವನ್ನ ಅವರು ಉಸಿರು ನಿಲ್ಲಿಸುವ ಮೊದಲೇ, ಬೇರೆಯವರಿಗೆ ಕಸಿ ಮಾಡಿಸಿ, ಅವರ ಉಸಿರು ನಿಲ್ಲಿಸಲಾಯಿತು. ಅಲ್ಲಿಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಎಂಬ ಬಿ.ವಿಜಯ್ ಕುಮಾರ್ ಬದುಕು ದುರಂತ ಅಂತ್ಯ ಕಂಡಿತು!!
ಸಂಚಾರಿ ಬದುಕಿನ ಹಿನ್ನೋಟ…
ಬದುಕಿದ್ದರೆ ಬರುವ ಜುಲೈ ಹದಿನೇಳಕ್ಕೆ ಮೂವತ್ತೆಂಟು ವರ್ಷ ತುಂಬುತ್ತಿದ್ದ ವಿಜಯ್ ಕುಮಾರ್ ಹುಟ್ಟಿದ್ದು 1983ರಲ್ಲಿ. ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲೂಕಿನ, ಪಂಚನಹಳ್ಳಿಯಲ್ಲಿ ಜನನ. ಬಡ ಕುಟುಂಬದಲ್ಲಿ ಹುಟ್ಟಿದರೂ ಶಾಲಾ ದಿನಗಳಲ್ಲೇ ನೃತ್ಯ, ನಾಟಕದ ಗೀಳು ಅಂಟಿಕೊಂಡು ಬಂದಿತ್ತು. ಕಾರಣ ಕಲೆಗಾರರಾದ ತಂದೆ ಬಸವರಾಜಯ್ಯ ಸಂಗೀತ ವಾದ್ಯ ನುಡಿಸುತ್ತಿದ್ದರು, ತಾಯಿಯೂ ಜಾನಪದ ಕಲಾವಿದರಾಗಿದ್ದರು. ಅದರಂತೆ ಕಲೆಯತ್ತ ಆಸಕ್ತಿ ತಳೆದು, ನಟನೆಯತ್ತ ವಾಲುತ್ತಲೇ ಬೆಳೆದು ಬಂದರು. ಮುಂದೆ ದುರ್ದೈವಕ್ಕೆ ತಾಯಿ ಖಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ನೋಡನೋಡುತ್ತಲೇ ಸಾವಿಗೀಡಾಗುತ್ತಾರೆ.
ಈ ಸಾವಿನ ನೋವು ಮಾಸುವ ಮೊದಲೇ, ಕೆಲವೇ ತಿಂಗಳಲ್ಲಿ ತಂದೆಯೂ ಅಸುನೀಗುತ್ತಾರೆ. ವಿಜಯ್ ಪಾಲಿಗೆ ಉಳಿದದ್ದು ಅಣ್ಣ ಮಾತ್ರ. ಮುಂದೆ ಜೀವನ ನರಕದ ದರ್ಶನ ತೋರ ತೊಡಗಿತು. ಓದಿನಲ್ಲಿ ಚುರುಕಾಗಿದ್ದ ಅಣ್ಣನನ್ನು ಓದಲು ಬಿಟ್ಟು, ತಾನು ಬೆಂಗಳೂರಿಗೆ ಬಂದು ರಾಜಾಜಿನಗರದ ಹೋಟೆಲ್ ಒಂದರಲ್ಲಿ ಕ್ಲೀನಿಂಗ್ ಕೆಲಕ್ಕೆ ಸೇರಿಕೊಳ್ಳುತ್ತಾರೆ. ಅಣ್ಣನ ಓದಿಗೆ ಹಣ ಹೊಂದಿಸುತ್ತಾ ಬದುಕು ದೂಡುತ್ತಾರೆ. ಬಣ್ಣದ ಗೀಳು ಸುಲಭಕ್ಕೆ ಬಿಡದು ಎಂಂತೆ ನಾಟಕ ಇವರನ್ನು ಆ ಕಷ್ಟದ ದಿನಗಳಲ್ಲೂ ಸೆಳೆಯುತ್ತಲೇ ಇತ್ತು.
ಹೋಟೆಲ್ ಕೆಲಸದ ಬಿಡುವಿನ ವೇಳೆಯಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಿ ನಾಟಕ ನೋಡುತ್ತಾ, ಅವರುಗಳ ಪ್ರಾಕ್ಟೀಸು ನೋಡುತ್ತಾ, ತಾನೂ ಒಂದು ದಿನ ಅವರಂತೆಯೇ ಬಣ್ಣ ಹಚ್ಚಿ ವೇದಿಕೆಯಲ್ಲಿ ಮಿಂಚುವ ಕನಸು ಕಾಣುತ್ತಿದ್ದರು. ಮುಂದೆ ಅಣ್ಣ ಕಾಲೇಜು ಮುಗಿಸಿ ಕೆಲಸ ಗಿಟ್ಟಿಸಿಕೊಂಡಾಗ, ವಿಜಯ್ ತಾನು ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ಗಿಟ್ಟಿಸಿಕೊಂಡು ಓದು ಮುಗಿಸಿಕೊಳ್ಳುತ್ತಾರೆ. ಇಲ್ಲಿ ಕಷ್ಟಪಟ್ಟು ಓದು ಮುಗಿಸಿ ಇಂಜಿನಿಯರ್ ಆಗಿ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿಕೊಂಡರೂ, ವಿಜಯ್ ಮನಸ್ಸು ಮಾತ್ರ ನಟನೆಯತ್ತಲೇ ವಾಲುತ್ತಿತ್ತು.! ಎರಡೇ ವರ್ಷದಲ್ಲಿ ಲೆಕ್ಚರರ್ ಪೋಸ್ಟಿಗೆ ಫುಲ್ಲಿಸ್ಟಾಪ್ ಇಟ್ಟು, ರಂಗಭೂಮಿಗೆ ಮರಳಿ ಬಂದರು. ಅದರಂತೆ ಸಂಚಾರಿ ರಂಗ ತಂಡ ಸೇರಿಕೊಂಡು ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.
ಮುಂದೆ ಶೂದ್ರ ತಪಸ್ವಿ, ಸತ್ಯಾಗ್ರಹ, ಸಂತೆಯೊಳಗೊಂದು ಮನೆಯ ಮಾಡಿ, ಸಾವಿರದವಳು, ನರಗಳಿಗೇಕೆ ಕೋಡಿಲ್ಲ, ಮಾರ್ಗೋಸಾ ಮಹಲ್ ಸೇರಿದಂತೆ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿ ನಟನೆಯಲ್ಲಿ ಗಟ್ಟಿ ಹಿಡಿತ ಸಾಧಿಸುತ್ತಾರೆ. ಕೆಲವು ದಾರಾವಾಹಿಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ ಸತತ ಪರಿಶ್ರಮದ ಫಲವಾಗಿ 2011ರಲ್ಲಿ ತೆರಕಂಡಿದ್ದ, ನಟ ರಮಶ್ ಅರವಿಂದ್ ನಟನೆಯ “ರಂಗಪ್ಪ ಹೋಗ್ಬಿಟ್ನಾ” ಚಿತ್ರದ ಮೂಲಕ ಸಿನಿಮಾಲೋಕಕ್ಕೆ ಕಾಲಿಡುತ್ತಾರೆ. ಇಲ್ಲಿ ಸಿಕ್ಕ ಪಾತ್ರದಲ್ಲೇ ತನ್ನೊಳಗೊಬ್ಬ ಅದ್ಭುತ ಕಲಾವಿದ ಇದ್ದಾನೆ ಎನ್ನುವುದರ ಪರಿಚಯ ಮಾಡಿಸಿದಂತಿತ್ತು, ಆ ಚಿತ್ರದಲ್ಲಿನ ವಿಜಯ್ ಅಭಿನಯ.
ಅಂದು ನಾಯಕ ರಮೇಶ್ ಅರವಿಂದ್ ಬೆನ್ನುತಟ್ಟಿ ಶಹಬ್ಬಾಶ್ ಎಂದಿದ್ದರಂತೆ. ಅಲ್ಲಿಂದಾಚೆಗೆ ನಾಲ್ಕಾರು ಸಿನಿಮಾಗಳು ಅರಸಿ ಬಂದವಾದರೂ; ಅಲ್ಲಿ ವಿಜಯ್ ಮನತಣಿಸುವ ಪಾತ್ರ ಸಿಗಲಿಲ್ಲ. ನಟನೆಗೆ ಮಹತ್ವ ಸಿಗದ ಪಾತ್ರ ಎಷ್ಟೇ ಮಾಡಿದರೂ ಗುರುತಿಸಿಕೊಳ್ಳಲಾಗದು ಎಂಬ ಸತ್ಯ ವಿಜಿಗೆ ಗೊತ್ತಿತ್ತು. ತನ್ನ ಪ್ರತಿಭೆ ಅನಾವರಣಗೊಳಿಸುವ ಕನಸಿನ ಪಾತ್ರಕ್ಕಾಗಿ ಕಾಯುತ್ತಲೇ ಹೋದರು. ಮತ್ತೆ ನಾಟಕಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಂಡು ನಟನೆಗೆ ಸಾಣೆ ಹಿಡಿಯುತ್ತಾ ಬಂದರು. ಆಗ ಜೊತೆ ಸೇರಿ ಸಾತ್ ಕೊಟ್ಟಿದ್ದು ರಂಗಭೂಮಿ ಗೆಳೆಯ, ನಿರ್ದೇಶಕ ಮಂಸೋರೆ. ಇವರುಗಳೇ ತಂಡಕಟ್ಟಿಕೊಂಡು “ಹರಿವು” ಎಂಬ ಚಿತ್ರ ತಯಾರಿಸಲು ಮುಂದಾಗುತ್ತಾರೆ. ಹಣದ ಸಮಸ್ಯೆಯಿಂದಾಗಿ ಆಗಾಗ ನಿಲ್ಲಿಸಿ, ಸಾಲ ಮಾಡಿ ಹಣ ಹೊಂದಿಸಿ ಕಷ್ಟಪಟ್ಟು ಚಿತ್ರಮುಗಿಸಿಕೊಳ್ಳುತ್ತಾರೆ.
ಅಲ್ಲಿ ಮುಖ್ಯಪಾತ್ರ ಮಾಡಿದ್ದ ಸಂಚಾರಿ ವಿಜಯ್ ಮನೋಜ್ಞ ಅಭಿನಯ ನೀಡಿದ್ದರು. “ತನ್ನ ಆಸೆ ಕನಸು ಹೊತ್ತ ಆ ಸಿನಿಮಾ ಸೋತಿದ್ದರೇ, ಖಂಡಿತಾ ನಾನು ಸಿನಿಮಾ ನಟನೆಗೆ ಸಲಾಮ್ ಹೊಡೆದು ವಾಪಸ್ಸು ಹೋಗುತ್ತಿದ್ದೆ” ಎಂದು ಸ್ವತ: ವಿಜಿಯೇ ಹೇಳಿಕೊಂಡಿದ್ದರು. ಆದರೆ ಹಾಗಾಗಲಿಲ್ಲ ಕಷ್ಟಪಟ್ಟು ಸಾಲಸೂಲ ಮಾಡಿ ತಯಾರಿಸಿದ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ದೊರೆಯಿತು. ಆದರೂ ಅದರ ಲಾಭ ಪಡೆಯುವ ದಾರಿ ಅರಿಯದ, ಬಕೀಟು ಹಿಡಿಯುವ ಬುದ್ದಿ ಇರದ ಈ ಸಜ್ಜನ ಪ್ರತಿಭಾವಂತನಿಗೆ, ಹೇಳಿಕೊಳ್ಳುವ ಅವಕಾಶ ದೊರೆಯಲೇ ಇಲ್ಲ. ಮತ್ತೆ ಇವರಿಗೆ ನಾಲ್ಕಾರು ಸಣ್ಣ ಪಾತ್ರಗಳೇ ಸಿಕ್ಕವು. ವಿಜಿ ಅದ್ಯಾವುದನ್ನೂ ತೂಕಹಾಕಿ ಮಾಡುತ್ತಿರಲಿಲ್ಲ. ಅದು ಅವರಿಗೆ ರಂಗಭೂಮಿ ಕಲಿಸಿದ ಪಾಠ.
ಪಾತ್ರ ಯಾವುದೇ ಇರಲಿ ತನ್ನಿಂದ ಆದಷ್ಟು ನ್ಯಾಯ ಒದಗಿಸಬೇಕು ಎಂಬ ಪಾಠದ ಅರಿವಲ್ಲಿ ಅಭಿನಯಿಸುತ್ತಿದ್ದರು ವಿಜಯ್. ಹಾಗೆಯೇ ಮುಂದೆ 2013ರಲ್ಲಿ ತೆರೆಕಂಡ ಪ್ರಕಾಶ್ ರಾಜ್ ಅಭಿನಯದ ‘ಒಗ್ಗರಣೆ’ ಎಂಬ ಚಿತ್ರದಲ್ಲಿ ಸಣ್ಣದೊಂದು ಪಾತ್ರ ವಿಜಿಗೆ ಸಿಗುತ್ತದೆ. ಯತಾಪ್ರಕಾರ ಅಲ್ಲೂ ಪರಕಾಯ ಪ್ರವೇಶದ ಅಭಿನಯ ನೀಡುತ್ತಾರೆ. ನಿಜಕ್ಕೂ ಇವರಿಗೆ ಆದೇ ಪಾತ್ರ ದೊಡ್ಡ ತಿರುವ ಕೊಟ್ಟಿದ್ದು.! ಅಲ್ಲಿ ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದ ವಿಜಯ್ ನಿರ್ದೇಶಕ ಲಿಂಗದೇವರು ಕಣ್ಣಿಗೆ ಬೀಳುತ್ತಾರೆ. “ನಾನು ಅವನಲ್ಲ.. ಅವಳು” ಚಿತ್ರದ ಕಥೆ ಬರೆದು ಪಾತ್ರಧಾರಿಯ ಹುಡುಕಾಟದಲ್ಲಿದ್ದ ಲಿಂಗದೇವರು, ಒಗ್ಗರಣೆ ಸಿನಿಮಾ ನೋಡಿದ್ದೇ ತಡ, ಈ ಸಂಚಾರಿಯನ್ನ ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮುಂದಿನದ್ದೆಲ್ಲಾ ಇತಿಹಾಸ!
ಅಂದು ಆ ಕಥೆ ಕೇಳಿ ಮೈ ಜುಮ್ಮೆಂದಿತ್ತು ಎಂದಿದ್ದರು ವಿಜಿ. ಹುಡುಗನೊಬ್ಬ ಹುಡುಗಿಯಾಗಿ ಬದಲಾಗುತ್ತಾ ಮಂಗಳಮುಖಿಯಾಗುವ ಕಥೆ ಆಧಾರಿತ ಚಿತ್ರವದು. ಭಾವನೆಗಳಿಗೆ ಒತ್ತು ಕೊಡುವ, ಬವಣೆಗಳೇ ತುಂಬಿದ ವಿಶೇಷ ಪಾತ್ರದಲ್ಲಿ ವಿಜಯ್, ತನ್ನ ಒಳ-ಹೊರ ಮರೆತು ಪಾತ್ರಕ್ಕೆ ಶರಣಾಗುತ್ತಾರೆ. ಪರಕಾಯ ಪ್ರವೇಶ ಮಾಡಿ ಮನೋಜ್ಞ ಅಭಿನಯ ನೀಡುತ್ತಾರೆ. ಆ ಪಾತ್ರದ ಪವರ್ ಫುಲ್ ನಟನೆ ಹೇಗಿತ್ತೆಂದರೆ, 2014ರ ಸಾಲಿನಲ್ಲಿ, ದಿಗ್ಗಜ ನಟರನ್ನೇ ಮೀರಿಸಿ ಅತ್ಯುತ್ತಮ ನಟ ‘ರಾಷ್ಟ್ರ ಪ್ರಶಸ್ತಿ’ ಇವರ ಮುಡಿಗೇರಿತ್ತು.! ಖ್ಯಾತನಾಮರಾದ ಆಮೀರ್ ಖಾನ್, ಮುಮ್ಮೊಟ್ಟಿ, ಶಾಹೀದ್ ಕಪೂರ್ ರಂಥ ನಟರುಗಳ ಪೈಪೋಟಿ ಮೀರಿಸಿ, ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ದೊರಕಿಸಿದ್ದರು ಈ ಸಿನಿ ಸಂಚಾರಿ.
ಇಷ್ಟಾಗಿಯೂ ಇವರ ಕಾಲು ನೆಲ ಬಿಡಲಿಲ್ಲ. ಒಂದಿನಿತೂ ಅಹಂಕಾರ ತಲೆಗೇರಿಸಿಕೊಳ್ಳದೆ, ಸಿನಿಮಾದಲ್ಲಿ ತೊಡಗಿಸಿಕೊಂಡರು. ಕೇವಲ ನಾಯಕನ ಪಾತ್ರಕ್ಕಾಗಿ ಮಾತ್ರ ಕಾಯದೆ, ಅವಕಾಶ ಬಂದಂತೆ ಸ್ವೀಕರಿಸಿದರು. ಶಿವರಾಜ್ ಕುಮಾರ್ ನಟನೆಯ ಕಿಲ್ಲಿಂಗ್ ವೀರಪ್ಪನ್, ಗೌರೀಶ್ ಅಕ್ಕಿ ನಿರ್ದೇಶನದ ಸಿನಿಮಾ ಮೈ ಡಾರ್ಲಿಂಗ್, ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗಳಲ್ಲಿ ನಟಿಸಿದರು. ಮಾರಿಕೊಂಡವರು, ರಿಕ್ತ, ನನ್ ಮಗಳೇ ಹೀರೋಯಿನ್, ಕೃಷ್ಣ ತುಳಸಿ, ಪಾದರಸ, ಆರನೇ ಮೈಲಿ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದರು. ತೀರಾ ಇತ್ತೀಚೆಗೆ ತೆರೆಕಂಡು ಸೌಂಡು ಮಾಡಿದ್ದ “ಆಕ್ಟ್ ನಂಬರ್ 1978″ ಹಾಗು *ಜಂಟಲ್ ಮ್ಯಾನ್” ಸಿನಿಮಾದಲ್ಲೂ ವಿಶೇಷ ಪಾತ್ರ ಗಿಟ್ಟಿಸಿ ಮಿಂಚಿದ್ದರು ವಿಜಯ್.
ಇನ್ನು ಮೇಲೊಬ್ಬ ಮಾಯಾವಿ, ಆಟಕ್ಕುಂಟು ಲೆಕ್ಕಕ್ಕಿಲ್ಲ, ತಲೆದಂಡ ಸೇರಿದಂತೆ ಕೆಲ ವಿಶಿಷ್ಟ ಬಗೆಯ ಸಿನಿಮಾಗಳು ತಯಾರಾಗಿ ಬಿಡುಗಡೆಗೆ ಸಿದ್ಧವಿದೆ. ಆದರೇನು ಮಾಡೋಣ ದುರ್ದೈವಕ್ಕೆ ನಟನೇ ನಮ್ಮೊಂದಿಗಿಲ್ಲ. ಮುಂದೆ ಇವರು ಪಾತ್ರಗಳಲ್ಲಷ್ಟೆ ಜೀವಂತ! ಹಾಗೆ ನೋಡಿದರೆ, ಬರಿಯ ನಟ ಅಷ್ಟೆ ಆಗಿರದ ವಿಜಯ್, ತಾನೂ ಕಷ್ಟದಲ್ಲೇ ಬೆಳೆದು ಬಂದ ಜೀವವಾದ್ದರಿಂದ, ಅನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುವ ಸಹೃದಯೀ ಮನುಷ್ಯನಾಗಿದ್ದರು. ಕೊರೋನ ಹೊಡೆತಕ್ಕೆ ತತ್ತರಿಸಿ ಕುಳಿತ ಅದೆಷ್ಟೋ ಜೀವಗಳಿಗೆ ತನ್ನ ಕೈಲಾದಷ್ಟು ಸಹಾಯ ಹಸ್ತ ಚಾಚುತ್ತಾ ಮಾನವೀಯತೆ ಮೆರೆದವರು.
ಸದಾ ನೊಂದವರ ಸಹಾಯಕ್ಕೆಂದೆ ಸಮಾನ ಮನಸ್ಕ ಸ್ನೇಹಿತರೊಡಗೂಡಿ “ಉಸಿರು” ಎಂಬ ಸಂಸ್ಥೆ ಕಟ್ಟಿದ್ದರು. ಆ ಮೂಲಕ ಹಸಿದವರಿಗೆ ಅನ್ನ, ಆಹಾರ ಪೂರೈಸಿದ್ದರು. ಆಕ್ಸಿಜನ್ ಕೊರತೆಯಾದಾಗ ಸುತ್ತಾಡಿ ಆಕ್ಸಿಜನ್ ಹುಡುಕಿ-ಹುಡುಕಿ ತಂದು ಸರಬರಾಜು ಮಾಡಿದ್ದರು ಈ ಸಂಚಾರಿ ವಿಜಯ್. ಅಸಲಿಗೆ, ಅಸಹಾಯಕರ ಪಾಲಿಗೆ ‘ಉಸಿರು’ ಸಂಸ್ಥೆ ಕಟ್ಟಿ ದುಡಿದ ವಿಜಯ್ ‘ಉಸಿರಿನ’ ಆಯಸ್ಸು ಮಾತ್ರ ಕೇವಲ 37 ವರ್ಷ! ಆ ವಿಧಿಯ ಕ್ರೂರ ನಡೆಗೆ ಶಪಿಸದೇ ಇರಲಾದೀತೆ.?!
ನೋಡಿ, ಎಲ್ಲಾ ವಿಚಾರದಲ್ಲೂ ಇವರು ಶ್ರೇಷ್ಠನಾಗೆ ಬದುಕು ಮುಗಿಸಿಕೊಂಡರು. ಈ ಅಲ್ಪಾಯುಷಿ ತನಗರಿವಿಲ್ಲದೆ ಒಂದು ಹೆಣ್ಣುಮಗಳ ಬವಣೆ ತಪ್ಪಿಸಿದರು!!. ಹೌದು. ಇವರು ಮೂವತ್ತೇಳು ವರ್ಷವಾಗಿದ್ದರೂ ಮದುವೆ ಆಗಿರಲಿಲ್ಲ. ಆಗಿದ್ದಿದ್ದರೆ ಈಗ ಒಂದೆರಡು ವರ್ಷದ ಮೊದಲು ಆಗಿರುತ್ತಿದ್ದರು. ಹಾಗೇನಾದರು ಆಗಿದ್ದರೆ ಮದುವೆಯಾದ ಹುಡುಗಿ ಒಂದೆರಡು ವರ್ಷದಲ್ಲೇ ಕುಂಕುಮ ಅಳಿಸಿಕೊಂಡು, ಈ ದುಷ್ಟ ಸಮಾಜದ ಮುಂದೆ ನಿಲ್ಲುವಂತಾಗುತ್ತಿತ್ತು.
ಅದಕ್ಕೆ ಈಗ ಅವಕಾಶವಿಲ್ಲ!! ಇನ್ನು ಅಪಘಾತವಾಗುವ ಕೊನೆಯ ದಿನದವರೆಗೂ, ಅಸಹಾಯಕರ ಆಶಾಕಿರಣವಾಗೇ ಬದುಕಿದ ಸಂಚಾರಿ ವಿಜಯ್ ತನ್ನ ಬದುಕಿನ ಪ್ರಯಾಣ ಮುಗಿಸುವಾಗಲೂ ನಾಲ್ಕು ಜನಕ್ಕೆ ಬದುಕು ಕೊಟ್ಟೇ ಹೊರಟುಹೋದವರು. ಅಬ್ಬಾ! ಅದೆಂಥಾ ಬದುಕು ಇವರದ್ದು. ಸಾವಿನಲ್ಲೂ ಸಾರ್ಥಕತೆ!! ತನ್ನ ಕಣ್ಣು, ಕಿಡ್ನಿ ಲಿವರ್, ಸೇರಿದಂತೆ ಅಂಗಾಂಗ ದಾನಗೈಯ್ಯುತ್ತಾ, ಕೊನೆ ಉಸಿರು ಚೆಲ್ಲಿಹೋದರು ವಿಜಯ್.! ನೆನಪಿರಲಿ, ರಾಷ್ಟ್ರ ಅಂದು ಇವರನ್ನು ‘ಶ್ರೇಷ್ಠ ನಟ’ ಎಂದು ಗುರುತಿಸಿತ್ತು; ಅದಕ್ಕೂ ಮಿಗಿಲಾಗಿ ಈಗ ಆತ, ಕರುನಾಡ ಕಣ್ಣಲ್ಲಿ “ಶ್ರೇಷ್ಠ ಮಾನವನಾಗಿ” ಗುರುತಿಸಿಕೊಂಡಿದ್ದಾರೆ!! ಇನ್ನೆಂದಿಗೂ ಇವರು ಕನ್ನಡಿಗರ ಸಹೃದಯಗಳಲ್ಲಿ ಚಿರಸ್ಥಾಯಿ.
ಏನೇ ಆದರೂ, ಇದೊಂದು ದುರಂತ ಸಂಭವಿಸಬಾರದಿತ್ತು. ಸಂಭವಿಸಿದೆ! ಎಲ್ಲವೂ ಮುಗಿದು ಹೋಗಿದೆ!!
ಹೆಲ್ಮೆಟ್ ಇಲ್ಲದ ಸಂಚಾರ ಅಪಾಯ ಎಂಬುದಕ್ಕೆ ಇವರು ಬಹುದೊಡ್ಡ ಸಾಕ್ಷಿ ಆದರು. ಕಾಲ ಮಿಂಚಿಹೋಗಿದೆ. ಏನೇ ಇದ್ದರೂ ‘ಮರಳಿ ಈ ಮಣ್ಣಲ್ಲೇ ಹುಟ್ಟಿ ಬನ್ನಿ” ಎಂದಷ್ಟೇ ಬಯಸ ಬಹುದು. ತನಗೆ ದೊರೆತ ಅಲ್ಪ ಆಯುಷ್ಯದಲ್ಲೇ ಸಾಧನೆಯ ಶಿಖರ ಮುಟ್ಟಿ, ಸಾರ್ಥಕ ಸಂಚಾರ ಮುಗಿಸಿದ ಸಂಚಾರಿ ವಿಜಯ್ಗೆ ಭಾವಪೂರ್ಣ ಶ್ರದ್ಧಾಂಜಲಿ.
- ನಾಗರಾಜ್ ಅರೆಹೊಳೆ
No Comment! Be the first one.