ಹಿರಿಯ ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್ ಅವರಿಗೆ ಧೀರ, ಶೂರ ಎಂಬಿತ್ಯಾದಿ ಬಿರುದುಗಳು ಪ್ರಾಪ್ತಿಯಾಗಿವೆ. ನಾಯಕತ್ವ ಗುಣದ ವ್ಯಕ್ತಿ ಅಂತಾ ಒಂದಷ್ಟು ಜನ ನಂಬಿದ್ದಾರೆ. ಈಗ ಇದೇ ರಾಕ್ ಲೈನ್ ವೆಂಕಟೇಶ್ ಆಡುತ್ತಿರುವ ಮಾತುಗಳನ್ನು ಕೇಳಿಸಿಕೊಂಡವರು ʻಇವರಿಗೆಲ್ಲಾ ಏನಾಗಿದೆ?ʼ ಎಂದು ಪ್ರಶ್ನಿಸುವಂತಾಗಿದೆ.
- ಅರುಣ್ ಕುಮಾರ್.ಜಿ
ಕನ್ನಡ ಚಿತ್ರರಂಗ ನೆಲಕಚ್ಚಿದೆ ನಿಜ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಆ ಕಾರಣಗಳನ್ನು ಗುರುತಿಸಿ, ಅದಕ್ಕೆ ತಕ್ಕ ಪರಿಹಾರ ಹುಡುಕುವ ನಿಟ್ಟಿನಲ್ಲಿ ಯೋಜನೆಗಳು ರೂಪುಗೊಳ್ಳಬೇಕು. ಅದನ್ನು ಬಿಟ್ಟು ಹೋಮ ಮಾಡಿದರೆ ಸರಿ ಹೋಗುತ್ತದೆ ಎನ್ನುವ ಅವೈಜ್ಞಾನಿಕ ಮನಸ್ಥಿತಿ ಬಿಗ್ ಬ್ರದರ್ ಮತ್ತು ರಾಕ್ ಲೈನ್ ಅವರಿಗೆ ಯಾಕೆ ತೋಚಿತೋ ಗೊತ್ತಿಲ್ಲ!
ಕಾರಣ ಇಷ್ಟೇ : ʻʻಕನ್ನಡ ಚಿತ್ರರಂಗ ವಿಪರೀತ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೋವಿಡ್ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವುಗಳಾದವು. ದೊಡ್ಡಣ್ಣ ಒಂದು ತಿಂಗಳ ಮುಂಚೆ ಯಾಕೆ ಒಂದು ಪೂಜೆ ಮಾಡಿಸಬಾರದು ಎಂದು ಹೇಳಿದರು. 14ರಂದು ದಿನ ಚೆನ್ನಾಗಿರುವುದರಿಂದ ಅಂದು ಚಿತ್ರರಂಗದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋಮ ಮಾಡಿಸುತ್ತಿದ್ದೇವೆ.ʼʼ ಅಂತಾ ಖುದ್ದು ರಾಕ್ ಲೈನ್ ವೆಂಕಟೇಶ್ ಪತ್ರಿಕಾ ಗೋಷ್ಠಿ ಮಾಡಿ ಹೋಮ ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ. ರಾಕ್ ಲೈನ್ ವೆಂಕಟೇಶ್ ಮಾತು ಕೇಳಿದವರು ನಗಬೇಕೋ ಅಳಬೇಕೋ ಗೊತ್ತಾಗದೆ ಗೊಂದಲದಲ್ಲಿದ್ದಾರೆ!
ದರ್ಶನ್ಗಾಗಿ ನಡೆದ ಯಾಗವಾ?
ದೊಡ್ಡಣ್ಣ ತಮಿಳು ನಾಡಿನ ಒಬ್ಬ ಕಾಲಜ್ಞಾನಿಯ ಬಳಿಗೆ ಆಗಾಗ ಹೋಗಿಬರುತ್ತಾರಂತೆ. ಹೊಸೂರಿನಿಂದ ಹದಿನಾರು ಕಿಲೋಮೀಟರ್ ಒಳಗಿನ ಹಳ್ಳಿಯಲ್ಲಿರುವ ಆ ಅವಧೂತರ ಬಳಿ ದರ್ಶನ್ ಅವರ ಬಗ್ಗೆ ಕೇಳಲಾಗಿ, ಅವರು ʻʻದರ್ಶನ್ಗೆ ಕಾಳರಾಹು ದೋಷ, ಸರ್ಪ ದೋಷ ಇದೆʼ ಇದು ಏಳು ವರ್ಷಗಳ ಕಾಲ ನರಳಾಡಿಸುತ್ತೆ. ಇದಕ್ಕೆ ಸುಬ್ರಹ್ಮಣ್ಯ ಸರ್ಪಸತ್ರಯಾಗ ಮಾಡಿಸಿʼʼ ಒಂದಿಷ್ಟು ದೋಷ ಪರಿಹಾರವಾಗುತ್ತದೆʼʼ ಅಂತಾ ಹೇಳಿದ್ದರಂತೆ. ಆಗ ಶುರುವಾಗಿದ್ದೇ ಈ ಹೋಮ ಕಾರ್ಯಕ್ರಮ. ʻʻದರ್ಶನ್ ಗಾಗಿ ಹೋಮ ನಡೆಸುತ್ತಿದ್ದಾರೆʼʼ ಅಂತಾ ವಿಚಾರ ಗೊತ್ತಾಗುತ್ತಿದ್ದಂತೇ ವ್ಯಾಪಕ ವಿರೋಧಗಳು ವ್ಯಕ್ತವಾಗಿದ್ದವು. ಈ ಕಾರಣಕ್ಕೇ ಪತ್ರಿಕಾಗೋಷ್ಟಿಯೊಂದನ್ನು ಕರೆದು ʻʻಇದು ಚಿತ್ರರಂಗದ ಒಳಿತಿಗಾಗಿ ಮಾಡುತ್ತಿರುವ ಯಾಗʼ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿಕೆ ನೀಡಿದ್ದಾರೆʼʼ ಎನ್ನುವ ಮಾತುಗಳೂ ಕೇಳಿಬರುತ್ತಿವೆ!
ಇವೆಲ್ಲ ಏನೇ ಆಗಲಿ, ಸಿನಿಮಾರಂಗ ಈಮಟ್ಟಿಗೆ ತಳ ಹಿಡಿಯಲು ಬೇರೇಯದ್ದೇ ಕಾರಣಗಳಿವೆ. ಅವೆಲ್ಲವನ್ನೂ ಸರಿಮಾಡಿಕೊಳ್ಳದ ಹೊರತು ಯಾವ ಹೋಮ ಮಾಡಿದರೂ ಈ ಉದ್ಯಮ ನೇರ್ಪಾಗುವುದಿಲ್ಲ.
ನಂಬಿಸಿ ಹಳ್ಳಕ್ಕೆ ನೂಕಿದ ಓಟಿಟಿ!
ಬಂಡವಾಳಶಾಹಿ ಟೀವಿ ವಾಹಿನಿಗಳು ಮತ್ತು ಓಟಿಟಿ ಕಂಪೆನಿಗಳು ಕಳೆದ ಐದಾರು ವರ್ಷಗಳಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಸಿನಿಮಾಗಳ ಮೇಲೆ ಇನ್ವೆಸ್ಟ್ ಮಾಡಿವೆ. ಜನರನ್ನು ಬಹುತೇಕ ಚಿತ್ರಮಂದಿರದ ದಾರಿ ಮರೆಸಿ, ಮೊಬೈಲುಗಳಿಗೆ ಅಡಿಕ್ಟ್ ಮಾಡಿವೆ. ಸಿನಿಮಾದ ಟ್ರೇಲರು ಬಿಡುಗಡೆಯಾದಾಗಲೇ ಅದರ ಕೊನೆಯಲ್ಲಿ ಓಟಿಟಿಯ ಲೋಗೋ ಕೂಡಾ ಹಾಕಿರುತ್ತಾರೆ. ಟ್ರೇಲರು ನೋಡುತ್ತಿದ್ದಂತೇ ಇದು ಇನ್ನು ಹದಿನೈದಿಪ್ಪತ್ತು ದಿನಗಳಲ್ಲಿ ಆಪ್ನಲ್ಲಿ ಅಪ್ಲೋಡ್ ಆಗುತ್ತದೆ ಅನ್ನೋದು ಪ್ರೇಕ್ಷಕನ ಗಮನಕ್ಕೆ ಬರುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ ಮನೆಮಂದಿಯೆಲ್ಲಾ ಸಮಯ ಸಿಕ್ಕಾಗ ಸಿನಿಮಾಗಳನ್ನು ನೋಡಿ ಸುಮ್ಮನಾಗುತ್ತಾರೆ.
ಓಟಿಟಿ, ಚಾನೆಲ್ಲಿನವರು ತಮ್ಮ ಸಿನಿಮಾವನ್ನು ಪರ್ಚೇಸ್ ಮಾಡುತ್ತಾರೆ, ಬಿಡುಗಡೆಗೂ ಮುಂಚೆಯೇ ವ್ಯಾಪಾರವಾಗುತ್ತದೆ ಅಂತಾ ನಂಬಿದ ಎಷ್ಟೋ ನಿರ್ಮಾಪಕರು ಬೀದಿಗೆ ಬಿದ್ದಿದ್ದಾರೆ. ಇಂಥದ್ದೊಂದು ಹುಸಿ ನಂಬಿಕೆಯನ್ನು ಬಿತ್ತಿದ್ದು ಕೂಡಾ ಬಂಡವಾಳಶಾಹಿ ಕಂಪೆನಿಗಳೇ. ಆರಂಭದಲ್ಲಿ ಸಿಕ್ಕ ಸಿಕ್ಕ ಸಿನಿಮಾಗಳಿಗೆಲ್ಲಾ ಯದ್ವಾತದ್ವಾ ಕಾಸು ಕೊಟ್ಟು ಪರ್ಚೇಸು ಮಾಡಿದವು. ಕೃತಕ ಬೇಡಿಕೆಯನ್ನು ಸೃಷ್ಟಿಸಿ ಚಿತ್ರೋದ್ಯಮವನ್ನು ಮೇಲಕ್ಕೆತ್ತಿ ಒಮ್ಮೆಗೇ ನೆಲಕ್ಕೆ ಬಡಿದವು. ಓಟಿಟಿ ಎನ್ನುವ ಕಾನ್ಸೆಪ್ಟು ಶುರುವಾದಾಗಲೇ ನಟ ಗಣೇಶ್ ಒಂದು ಮಾತು ಹೇಳಿದ್ದರು ʻʻಈ ಕಂಪನಿಗಳು ನಮ್ಮ ನಿರ್ಮಾಪಕರಿಗೆ ನಂಬಿಕೆ ಹುಟ್ಟಿಸಿ, ಮಾರ್ಕೇಟ್ ಸೃಷ್ಟಿಸುತ್ತಾರೆ. ನಂತರ ದೊಪ್ಪಂತಾ ಕೆಳಗೆ ಬಿಸಾಕುತ್ತಾರೆ ನೋಡ್ತಿರಿʼʼ ಅಂತಾ. ಅಕ್ಷರಶಃ ಗಣೇಶ್ ಅವರು ನುಡಿದಿದ್ದ ಭವಿಷ್ಯ ಇಂದು ನಿಜವಾಗಿದೆ.
ಗಬ್ಬು ನಾರುವ ಚಿತ್ರಮಂದಿರಗಳು!
ಓಟಿಟಿಯಲ್ಲಿ ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡುವ ಪ್ರೇಕ್ಷಕ ವರ್ಗಕ್ಕೆ ಮೊಬೈಲ್ ಮನರಂಜನೆ ಅಗ್ಗವಾಗಿದೆ. ಅದೇ ಚಿತ್ರಮಂದಿರಕ್ಕೆ ಬಂದರೆ ಸಾವಿರಾರು ರುಪಾಯಿಗಳ ಖರ್ಚು. ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಬೆಲೆಗಿಂತಾ ಅಲ್ಲಿ ಸಿಗುವ ಪಾಪ್ಕಾರ್ನ್ ಬೆಲೆಯೇ ಅಧಿಕ. ಸಾಮಾನ್ಯಕ್ಕೆ ʻಕನ್ನಡ ಚಿತ್ರರಂಗದ ಪ್ರೇಕ್ಷಕರುʼ ಅನ್ನಿಸಿಕೊಂಡವರು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು. ಇಲ್ಲಿ ತಿಂಗಳಿಗೆ ಸರಾಸರಿ ಇಪ್ಪತ್ತೈದು ಸಿನಿಮಾಗಳು ತೆರೆಗೆ ಬರುತ್ತವೆ. ಪರಭಾಷೆಯ ಸಿನಿಮಾಗಳನ್ನೂ ಸೇರಿಸಿದರೆ ಅದಕ್ಕಿಂತಾ ಹೆಚ್ಚಾಗುವುದೂ ಇದೆ. ಕಡೇ ಪಕ್ಷ ಒಬ್ಬ ಪ್ರೇಕ್ಷಕ ವಾರಕ್ಕೊಂದು ಸಿನಿಮಾವನ್ನು ಮಲ್ಟಿಪ್ಲೆಕ್ಸ್ನಲ್ಲಿ ತನ್ನ ಕುಟುಂಬದ ಸಮೇತ ನೋಡಲು ಹೋದರೆ, ದುಡಿಮೆಯ ಅರ್ಧದಷ್ಟು ಭಾಗ ಖರ್ಚು ಮಾಡಬೇಕಾಗುತ್ತದೆ. ಮಲ್ಟಿಪ್ಲೆಕ್ಸ್ಗೇ ಹೋಗಿ ಯಾಕೆ ಸಿನಿಮಾ ನೋಡಬೇಕು? ಸಿಂಗಲ್ ಸ್ಕ್ರೀನ್ಗಳು ಇಲ್ಲವಾ ಎನ್ನುವ ಪ್ರಶ್ನೆ ಏಳಬಹುದು. ಕರ್ನಾಟಕದ ಅದರಲ್ಲೂ ಬೆಂಗಳೂರಿನಂಥಾ ಮಹಾನಗರಗಳಲ್ಲಿರುವ ಬಹುತೇಕ ಸಿಂಗಲ್ ಸ್ಕ್ರೀನ್ಗಳು ಮನೆಮಂದಿ ಕಾಲಿಡದಂಥಾ ಪರಿಸ್ಥಿತಿಯಲ್ಲಿವೆ. ಮೆಜೆಸ್ಟಿಕ್, ಕೆಂಪೇಗೌಡ ರಸ್ತೆಯ ಯಾವುದೇ ಥೇಟರಿಗೆ ಹೋಗಿ ನೋಡಿ, ಕಾಲ ಕೆಳಗೆ ಇಲಿ, ಹೆಗ್ಗಣಗಳು ಓಡಾಡುತ್ತಿರುತ್ತವೆ. ಅಥವಾ ದೇಹವಾಂಛೆ ತೀರಿಸಿಕೊಳ್ಳಲು ಬಂದ ಜೋಡಿಗಳು ಕೂತಿರುತ್ತಾರೆ. ಕುಟುಂಬದಿಂದ ದೂರಾಗಿ, ಮಾದಕ ವ್ಯಸನಿಗಳಾದವರು, ಗಾಂಜಾ ಗಿರಾಕಿಗಳು, ಥಿನ್ನರ್ ಮೂಸುವವರು ಪ್ರತೀ ಚಿತ್ರಮಂದಿರದಲ್ಲಿ ಉಚಿತ ಟಿಕೇಟು ಪಡೆದು, ವಿಶ್ರಾಂತ ಸ್ಥಿತಿಯಲ್ಲಿ ಬಿದ್ದುಕೊಂಡಿರುತ್ತಾರೆ. ಒಂದು ವೇಳೆ ಇಲ್ಲಿನ ಶೌಚಾಲಯಗಳನ್ನು ಬಳಸಿದರೆ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈಧ್ಯರು ಚಿಕಿತ್ಸೆ ನೀಡಿದರೂ ಬದುಕುಳಿಯೋದು ಕಷ್ಟಕಷ್ಟ!
ಗಿರಿನಗರದ ವೆಂಕಟೇಶ್ವರ, ಜೆಪಿ ನಗರ ಬಳಿ ಇರುವ ಸಿದ್ದಲಿಂಗೇಶ್ವರ, ಕಾಮಾಕ್ಷಿ ಪಾಳ್ಯದಲ್ಲಿರುವ ವಿಕ್ಟರಿ, ಮಾಗಡಿ ರಸ್ತೆಯ ಅಂಜನ್, ಕಾಡುಗೋಡಿ ವಿಜಯಲಕ್ಷ್ಮಿ ಚಿತ್ರಮಂದಿರ ಸೇರಿದಂತೆ ಕೆಲವೇ ಕೆಲವು ಥೇಟರುಗಳು ಮಾತ್ರ ಬೆಂಗಳೂರಿನಲ್ಲಿ ಉತ್ತಮ ವಾತಾವರಣವನ್ನು ಮೇಂಟೇನ್ ಮಾಡಿವೆ. ಇನ್ನು ಬೆಂಗಳೂರಿನ ಹೊರತಾಗಿ ಇತರ ಜಿಲ್ಲೆಗಳಲ್ಲಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸ್ಥಿತಿಯೂ ಇದೇ ಆಗಿದೆ. ಇನ್ನು ಮಾಹಿತಿಯ ಪ್ರಕಾರ ಕಳೆದೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಎಂಭತ್ತಕ್ಕೂ ಅಧಿಕ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ಅರವತ್ತೆಪ್ಪತ್ತು ವರ್ಷಗಳ ಇತಿಹಾಸವಿದ್ದು, ಶಿಥಿಲಾವಸ್ಥೆಯಲ್ಲಿದ್ದ ಅನೇಕ ಥಿಯೇಟರುಗಳನ್ನು ನೆಲಸಮಗೊಳಿಸಿ ಮಾಲ್ಗಳನ್ನು, ಬಟ್ಟೆ ಮಳಿಗೆಗಳನ್ನು ನಿರ್ಮಿಸಿದ್ದಾರೆ.
ಕಲಾವಿದರ ಸಂಘ ಯಾಕೆ ಖಾಲಿ ಬಿದ್ದಿದೆ?
ಡಾ. ರಾಜ್ ಕುಮಾರ್ ಅವರ ಕನಸನ್ನು ಸಾಕಾರಗೊಳಿಸಿದವರು ರೆಬೆಲ್ ಸ್ಟಾರ್ ಅಂಬರೀಶ್. ಕನ್ನಡ ಸಿನಿಮಾ ಕಲಾವಿದರ ಸಂಘಕ್ಕೊಂದು ಕಟ್ಟಡ ಇಲ್ಲವಲ್ಲಾ ಎನ್ನುವ ಕೊರಗು ರಾಜ್ ಅವರಿಗಿತ್ತು. ಅಂಬರೀಶ್ ಅವರ ಶ್ರಮದಿಂದ ಚಾಮರಾಜಪೇಟೆಯಲ್ಲಿ ಅತ್ಯುತ್ತಮವಾದ್ದೊಂದು ಕಟ್ಟಡ ನಿರ್ಮಾಣವಾಯಿತು. ಆದರೆ, ಆ ನಂತರ ಆ ಕಟ್ಟಡದ ಗತಿ ಏನಾಗಿದೆ? ಮೇಲಂತಸ್ತಿನಲ್ಲಿ ಅಲ್ಲೊಂದು ಇಲ್ಲೊಂದು ಪತ್ರಿಕಾಗೋಷ್ಠಿಗಳು ನಡೆಯುತ್ತವೆ. ಪಾರ್ಕಿಂಗ್ ಇತ್ಯಾದಿ ಸಮಸ್ಯೆಗಳು ಇರುವುದರಿಂದ ಅಲ್ಲಿ ಹೆಚ್ಚಿನ ಪತ್ರಿಕಾಗೋಷ್ಟಿ ಆಯೋಜಿಸಲು ಸಿನಿಮಾಮಂದಿ ಹಿಂದೇಟು ಹಾಕುತ್ತಾರೆ. ಇದಲ್ಲದೇ ಕಲಾವಿದರ ಸಂಘದ ಬಹುತೇಕ ಜಾಗ ಪ್ರಯೋಜನಕ್ಕಿಲ್ಲದೆ ಖಾಲಿ ಹೊಡೆಯುತ್ತಿದೆ. ಈ ಜಾಗವನ್ನು ಚಿತ್ರರಂಗದ ಇತರೆ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದಲ್ಲವೇ? ಇನ್ನೊಂದು ಬಹುಮುಖ್ಯ ವಿಚಾರವೆಂದರೆ, ಕಲಾವಿದರ ಸಂಘದ ಚುನಾವಣೆ ನಡೆದು ಯಾವ ಕಾಲವಾಯಿತೋ ಗೊತ್ತಿಲ್ಲ. ಅಂಬರೀಶ್ ಅವರು ಈ ಸಂಘದ ಅಧ್ಯಕ್ಷರಾಗಿದ್ದವರು. ಅವರು ತೀರಿಕೊಂಡು ಇಷ್ಟು ವರ್ಷಗಳಾದರೂ ಆ ಅಧ್ಯಕ್ಷಸ್ಥಾನ ಹಾಗೇ ಉಳಿದಿದೆ. ಕಾರ್ಯದರ್ಶಿ ರಾಕ್ ಲೈನ್ ವೆಂಕಟೇಶ್ ಮತ್ತು ಖಜಾಂಚಿ ದೊಡ್ಡಣ್ಣ ಬಿಟ್ಟರೆ ಈ ಸಂಘಕ್ಕೆ ಬೇರೆ ಯಾರೂ ದಿಕ್ಕು ದೆಸೆ ಇಲ್ಲದಂತಾಗಿದೆ.
ಎಲ್ಲರೂ ಕ್ಷೇಮ ಆದರೆ….!
“ಕಲಾವಿದರು, ಕಾರ್ಮಿಕರು, ತಂತ್ರಜ್ಞರು ದಿನದಿಂದ ದಿನಕ್ಕೆ ತಮ್ಮ ಸಂಭಾವನೆಯನ್ನು ಏರಿಸಿಕೊಂಡೇ ಹೋಗುತ್ತಿದ್ದಾರೆ. ಯಾರೋ ಮೂರು ಜನ ನಿರ್ಮಾಪಕರು, ಸಂಸ್ಥೆಗಳು ಕೇಳಿದಷ್ಟು ಹಣ ಕೊಟ್ಟು ಅಭ್ಯಾಸ ಮಾಡಿವೆ. ಅದನ್ನೇ ಎಲ್ಲರಿಂದ ಬಯಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಎನ್ನುವ ಅಮಲು ಎಲ್ಲರನ್ನೂ ಹಳ್ಳ ಹಿಡಿಸುತ್ತಿದೆ. ಚಿತ್ರರಂಗದಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರದೇಹೋದರೆ ಸಿನಿಮಾವನ್ನೇ ನಂಬಿಕೊಂಡು ಬದುಕುತ್ತಿರುವ ನಿರ್ಮಾಪಕರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಈ ಕ್ಷೇತ್ರದಲ್ಲಿ ನಿರ್ಮಾಪಕ ಒಬ್ಬನನ್ನು ಬಿಟ್ಟು ಮಿಕ್ಕೆಲ್ಲರೂ ಕ್ಷೇಮವಾಗಿದ್ದಾರೆ. ಸುಭೀಕ್ಷವಾಗಿದ್ದಾರೆ. ಸಿನಿಮಾ ಅಂತಾ ಆರಂಭವಾಗುವ ಮುಂಚೆ ನಿರ್ದೇಶಕರು ಸೇರಿದಂತೆ ಒಂದಷ್ಟು ಮಂದಿ ನಿರ್ಮಾಪಕರಿಗೆ ಹೇಳೋದೇ ಬೇರೆ… ನಂತರ ಶೂಟಿಂಗ್ ಶುರುವಾಗುತ್ತಿದ್ದಂತೆ ಆಗೋದೇ ಬೇರೆ. ಹೇಳಿದ ಬಜೆಟ್ಟು ಅರ್ಧ ಚಿತ್ರೀಕರಣಕ್ಕೇ ಮುಗಿದುಹೋಗಿರುತ್ತೆ. ಶುರು ಮಾಡಿಬಿಟ್ಟಿದ್ದೇವಲ್ಲಾ ಅಂತಾ ಎಲ್ಲೆಲ್ಲಿಂದಲೋ ಹಣ ಹೊಂಚಿಕೊಂಡು ತಂದು ಸಿನಿಮಾ ಮುಗಿಸುತ್ತಾರೆ. ಇಲ್ಲಿ ನೋಡಿದರೆ ವ್ಯಾಪಾರವೆಲ್ಲಾ ಎಕ್ಕುಟ್ಟಿಹೋಗಿದೆ. ಓಟಿಟಿ ಸಂಸ್ಥೆಗಳು ಆರಂಭದಲ್ಲಿ ಆಸೆ ಹುಟ್ಟಿಸಿ ಈಗ ನಿರಾಸೆ ಮಾಡುತ್ತಿವೆ. ಟೀವಿ ವಾಹಿನಿಗಳು ಅಷ್ಟೊಂದು ಹಣ ಕೊಟ್ಟು ಸಿನಿಮಾ ಮಾಡೋದಕ್ಕಿಂತಾ ನಮ್ಮದೇ ಯಾವುದಾದರೂ ಕಂಟೆಂಟ್ ಕ್ರಿಯೇಟ್ ಮಾಡೋಣ ಅಂತಾ ಸುಮ್ಮನಾಗಿದ್ದಾರೆ. ಇನ್ನು ಥೇಟರ್ ಕಲ್ಚರ್ ಅಂತೂ ಬಹುತೇಕ ಸಾವನ್ನಪ್ಪಿದೆ. ಏನೇ ತಿಪ್ಪರಲಾಗ ಹಾಕಿದರೂ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ದೊಡ್ಡ ಹೀರೋಗಳ ಸಿನಿಮಾಗಳಾದರೂ ಬಂದರೆ ಒಳ್ಳೇದಾಗಬಹುದು ಅಂತಾ ಕಾದರೆ, ಇಲ್ಲಿರೋ ಮೂರು ಮತ್ತೊಂದು ಜನ ಸಿನಿಮಾ ಮಾಡೋದೇ ಮೂರು ವರ್ಷಕ್ಕೊಂದು!
ವೃತ್ತಿಪರ ನಿರ್ಮಾಪಕರು ದನಿಯೆತ್ತಬೇಕು!
ಒಂದು ಕಡೆ ವ್ಯಾಪಾರವಿಲ್ಲದೆ, ಸಿನಿಮಾ ನೋಡೋರಿಲ್ಲದೆ ಚಿತ್ರರಂಗ ಸೊರಗಿದೆ. ಮತ್ತೊಂದು ಕಡೆ ಕಾರ್ಮಿಕರು ತಂತ್ರಜ್ಞರ ಸಂಬಳ ಕಾಲ್ ಶೀಟು, ಕೈ ಶೀಟುಗಳ ಲೆಕ್ಕದಲ್ಲಿ ಏರುತ್ತಲೇ ಇದೆ. ವೃತ್ತಿಪರ ನಿರ್ಮಾಪಕರು ಈಗಲಾದರೂ ಎದ್ದುನಿಲ್ಲಬೇಕು. ಕೆ.ಮಂಜು, ಸೂರಪ್ಪ ಬಾಬು, ಎನ್ ಕುಮಾರ್ ಮೊದಲಾದ ನಿರ್ಮಾಪಕರು ದಶಕಗಳ ಕಾಲ ಇಲ್ಲೇ ಇದ್ದು ಚಿತ್ರರಂಗದ ಇಂಚಿಂಚೂ ಸಮಸ್ಯೆ-ಸವಾಲುಗಳನ್ನು ಅರಿತಿದ್ದಾರೆ. ಮಾರ್ಸ್ ಸುರೇಶ್, ಕೆ.ವಿ. ಚಂದ್ರಶೇಖರ್ ಮೊದಲಾದ ತಿಳುವಳಿಕಸ್ಥರನ್ನು ಗಣನೆಗೆ ತೆಗೆದುಕೊಳ್ಳಬೇಕು. ಮೊದಲಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತೊಳೆದು ಶುದ್ಧ ಮಾಡಬೇಕು. ವಾಣಿಜ್ಯ ಮಂಡಳಿಯ ಆಯಕಟ್ಟಿನ ಜಾಗಕ್ಕೆ ಉತ್ತಮರನ್ನು ಆಯ್ಕೆ ಮಾಡಿ ಕೂರಿಸಬೇಕು. ಈ ಹಿಂದಿನ ಅವಧಿಯಲ್ಲಿ ಒಂದಿಷ್ಟು ಒಳ್ಳೇ ಕೆಲಸಗಳನ್ನು ಮಾಡಲು ಯೋಜನೆಗಳನ್ನು ರೂಪಿಸಿಕೊಂಡಿದ್ದ ಬಾ ಮಾ ಹರೀಶ್ ಅವರ ವಿರುದ್ಧ ತಂತ್ರಗಳನ್ನು ರೂಪಿಸಿದರು. ಅವರ ಅಧಿಕಾರಾವಧಿಯಲ್ಲಿ ಕೆಲಸವನ್ನೇ ಮಾಡದಂತೆ ನಿಷ್ಕ್ರಿಯಗೊಳಿಸಿದರು. ಈಗಿರುವ ಎನ್.ಎಂ. ಸುರೇಶ್ ಥರದವರು ಇಲ್ಲದ ಆಮಿಷ ತೋರಿಸಿ ಅಧ್ಯಕ್ಷಸ್ಥಾನದಲ್ಲಿ ಕುಂತಿದ್ದಾರೆ. ತಮ್ಮ ಗೆಣೇಕ್ಕಾರರನ್ನು ಗೋವಾಕ್ಕೆ ಕರೆದುಕೊಂಡು ಹೋಗಿ ಬಿಯರ್ ಬಾಟಲಿಯಲ್ಲಿ ಬಡಿದಾಡಿಸುತ್ತಾರೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ಕರೆದೊಯ್ಯುತ್ತಾರೆ. ಅದೇನೇನೋ ಹಲ್ಕಾ ಕೆಲಸ ಮಾಡಿಕೊಂಡವರ, ಚಿತ್ರರಂಗಕ್ಕೆ ಸಂಬಂಧವೇ ಇಲ್ಲದ, ಕೊಲೆಯಾದವರ ಮನೆಗೆ ಹೋಗಿ ಇಂಡಸ್ಟ್ರಿ ದುಡ್ಡನ್ನು ದಾನ ಮಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಚಿತ್ರೋದ್ಯಮ ಏಳಿಗೆಯಾಗಬೇಕು ಅಂದರೆ ಹೇಗೆ ಸಾಧ್ಯ?
ಈಗ ಹೇಳಿ ದೊಡ್ಡಣ್ಣನವರೇ, ರಾಕ್ ಲೈನ್ ಅವರೇ… ದರ್ಶನ್ ಗಾಗಿ ಆಗಲಿ, ಚಿತ್ರರಂಗಕ್ಕೇ ಆಗಲಿ, ಹೋಮ, ಯಾಗಗಳು ಮಾಡಿದೇಟಿಗೆ ಎಲ್ಲವೂ ಸರಿಯಾಗಬಲ್ಲದೇ? ನಿಮ್ಮ ಹೋಮ ಕಾರ್ಯಕ್ರಮ ಮಾಡಿ ಮುಗಿಸುತ್ತಿದ್ದಂತೇ, ಚಿತ್ರರಂಗದ ಒಳಗೇ ಇದ್ದು ನಿರ್ಮಾಪಕರನ್ನು ಹುರಿದು ಮುಕ್ಕುತ್ತಿರುವವರ ಮನಸ್ಸು ಪರಿವರ್ತನೆಯಾಗುತ್ತದಾ? ಓಟಿಟಿ ಕಂಪನಿಗಳ ನಿರ್ಧಾರ ಬದಲಾಗುತ್ತದಾ? ಕೆ.ಜಿ. ರಸ್ತೆಯಲ್ಲಿರುವ ಚಿತ್ರಮಂದಿರಗಳ ಗಬ್ಬು ನಾರುತ್ತಿರುವ ಟಾಯ್ಲೆಟ್ಟುಗಳು ಕ್ಲೀನಾಗುತ್ತವಾ? ದೇವೇಗೌಡರ ಕಾಲದಿಂದಲೂ ನೆನೆಗುದಿಗೆ ಬಿದ್ದಿರುವ ಚಿತ್ರನಗರಿ ಯೋಜನೆ ಆರಂಭಗೊಳ್ಳುತ್ತಾ? ಎಲ್ಲಕ್ಕಿಂತಾ ಮುಖ್ಯವಾಗಿ ಕಲಾವಿದರ ಸಂಘದ ಎಲೆಕ್ಷನ್ ನಡೆದುಬಿಡತ್ತಾ? ಉತ್ತರಿಸಿ ಧೀರ ವೆಂಕಟೇಶ್ ಅವರೇ…
ಏನು ಮಾಡಬೇಕು?
ಸದ್ಯ ಬೆಳಿಗ್ಗೆ 8 ರಿಂದ ರಾತ್ರಿ 8ರ ತನಕದ ಕಾಲ್ ಶೀಟ್ ಮಾಡಬೇಕು. ಕೇರಳ ಮಾದರಿಯ ನಿಯಮಗಳನ್ನು ಜಾರಿಗೆ ತರಬೇಕು. ಅದೆಲ್ಲಾ ಯಾವಾಗ ಕಾರ್ಯರೂಪಕ್ಕೆ ಬರುತ್ತವೋ ಗೊತ್ತಿಲ್ಲ. ಇನ್ನಷ್ಟು ಜನ ನಿರ್ಮಾಪಕರು ಜೀವ ಕಳೆದುಕೊಳ್ಳುವ ಮುಂಚೆ ನಿರ್ಮಾಪಕಸ್ನೇಹಿ ನಿಯಮಗಳು ಜಾರಿಯಾಗಲಿ…
ಕನ್ನಡ ಸಿನಿಮಾಗಳೆಂದರೆ ಕಳಪೆಯಲ್ಲ!
ಕನ್ನಡ ಚಿತ್ರರಂಗದ ಕುರಿತು ಬುದ್ದಿಜೀವಿ ವಲಯದಲ್ಲಿ ಕೆಲದವು ತಪ್ಪು ಕಲ್ಪನೆಗಳಿವೆ. ಕೆಲವರು ʼಕನ್ನಡ ಚಿತ್ರರಂಗದಲ್ಲಿ ಗುಣಮಟ್ಟದ ಸಿನಿಮಾಗಳೇ ಬರುತ್ತಿಲ್ಲʼ ಅಂತಾ ದೂರುತ್ತಾರೆ. ಅದು ಖಂಡಿತಾ ತಪ್ಪು. ಯಾವ ಮಲಯಾಳಿ, ತಮಿಳು ಸಿನಿಮಾಗಳನ್ನು ಮೀರಿಸುವ ಚಿತ್ರಗಳು ಲಿಮಿಟೇಷನ್ನುಗಳ ನಡುವೆಯೇ ತಯಾರಾಗುತ್ತಿವೆ. ಒಂದುವೇಳೆ ʻಕನ್ನಡದಲ್ಲಿ ಕ್ವಾಲಿಟಿ ಸಿನಿಮಾಗಳೇ ಬರುತ್ತಿಲ್ಲʼ ಅಂತಾ ಯಾರಾದರೂ ಮಾತಾಡುವುದಾದರೆ, ಅಂಥವರು ಕನ್ನಡದ ಎಲ್ಲ ಸಿನಿಮಾಗಳ ಬಗ್ಗೆ ಗಮನಿಸುತ್ತಿಲ್ಲ; ಮಾಹಿತಿಯ ಕೊರತೆಯಿಂದಷ್ಟೇ ಮಾತಾಡುತ್ತಿದ್ದಾರೆ ಅನ್ನೋದು ಸ್ಪಷ್ಟ. ಕಳೆದ ಹತ್ತು ವರ್ಷಗಳಲ್ಲಿ ಕನ್ನಡದ ಎಷ್ಟು ಸಿನಿಮಾಗಳು ಅತ್ಯುತ್ತಮ ಕಂಟೆಂಟು, ಗುಣಮಟ್ಟಗಳಿದ್ದೂ ಕಮರ್ಷಿಯಲ್ಲಾಗಿ ಸೋತಿವೆ ಅನ್ನೋದಕ್ಕೆ ಸಾಕಷ್ಟು ಮಾಹಿತಿ ಇದೆ. ಪ್ರಚಾರ ಮಾಡಲು ಕಾಸಿಲ್ಲದೆಯೋ, ಜನರನ್ನು ತಲುಪಿಸುವ ಸ್ಟಾಟರ್ಜಿ ಗೊತ್ತಿಲ್ಲದೆಯೋ ಸೋತಿವೆ. ತೀರಾ ಕನ್ನಡ ಚಿತ್ರರಂಗಕ್ಕೆ ಬೌದ್ಧಿಕ ದಾರಿದ್ರ್ಯ ಬಂದಿದೆ ಅಂದರೆ ಅಕ್ಷರಶಃ ಅದು ಸುಳ್ಳು!
ಕನ್ನಡ ಚಿತ್ರರಂಗದ ಏಳಿಗೆಗಾಗಿ ಮೊದಲು ಕಲ್ಟ್ ಸಿನಿಮಾ ನಿರ್ದೇಶಕರಿಗೆ, ಬರಹಗಾರರಿಗೆ, ಸಹ ಮತ್ತು ಸಹಾಯಕ ನಿರ್ದೇಶಕರಿಗೆ- ಕಾರ್ಮಿಕರಿಗೆ ಸರಿಯಾದ ಸಂಬಳ ಹಾಗೂ ಗೌರವ ಕೊಡಿ. ಕನ್ನಡ ಚಿತ್ರರಂಗದಲ್ಲಿರುವ ಶ್ರೀಮಂತ ಸರಸ್ವತಿಯನ್ನು ಉಳಿಸಿಕೊಳ್ಳಲು ಇರುವುದು ಇದೊಂದೇ ಮಾರ್ಗ. ಅದರ ಬದಲು ಯಜ್ಞ – ಯಾಗಗಳನ್ನು ಮಾಡಿ ಚಿತ್ರರಂಗವನ್ನು ಏಳಿಗೆಯತ್ತ ಕೊಂಡೊಯ್ಯುತ್ತೇವೆ ಎನ್ನುವುದು ಅಪ್ಪಟ ಮೌಢ್ಯ…. ಮೂರ್ಖತನ….
- ಚಕ್ರವರ್ತಿ ಚಂದ್ರ ಚೂಡ್
ಪತ್ರಕರ್ತ, ನಟ, ನಿರ್ದೇಶಕ
No Comment! Be the first one.