ಸಿನಿಮಾದಲ್ಲಿ ಸಾಕಷ್ಟು ಹೆಸರು ಮಾಡಿ, ಕಡೆಗೆ ಜೈಲಿನ ರುಚಿಯನ್ನು ಕಂಡಿರುವ ಸಂಜಯ್ ದತ್ ಸದ್ಯದಲ್ಲೇ ಪಾಲಿಟಿಕ್ಸ್ ಗೂ ಎಂಟ್ರಿ ಕೊಡಲಿದ್ದಾರೆಂಬ ಸುದ್ದಿ ರಾಜಕೀಯ ವಲಯದಿಂದಲೇ ಕೇಳಿಬರುತ್ತಿದೆ. ಹತ್ತು ವರ್ಷಗಳ ಹಿಂದೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಕ್ಕೆ ಯತ್ನಿಸಿ ಕಾನೂನಾತ್ಮಕವಾಗಿ ಸೋತು ಹಿಂದೆ ಸರಿದಿದ್ದರು. ಈಗ ಮತ್ತೆ ರಾಜಕೀಯ ಪ್ರವೇಶಕ್ಕೆ ಸಿದ್ದವಾಗಿದ್ದಾರೆ. ಸಂಜಯ್ ದತ್ ಸೆಪ್ಟೆಂಬರ್ 25 ರಂದು ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿರುವ ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರಲು ಸಜ್ಜಾಗಿದ್ದಾರೆ ಎಂದು ಮಹಾರಾಷ್ಟ್ರದ ಸಚಿವರು, ಪಕ್ಷದ ಸಂಸ್ಥಾಪಕ ಮತ್ತು ಕ್ಯಾಬಿನೆಟ್ ಸಚಿವ ಮಹಾದೇವ್ ಜಂಕರ್ ಮುಂಬೈನಲ್ಲಿ ಹೇಳಿದ್ದಾರೆ.
‘ಧಂಗರ್’ ಅಥವಾ ಕುರುಬ ಸಮುದಾಯವನ್ನು ಪ್ರತಿನಿಧಿಸುವ ಆರ್ಎಸ್ಪಿ ಪಕ್ಷವನ್ನು ವಿಸ್ತರಿಸಲು ನಾವು ಚಿತ್ರರಂಗದ ಕಡೆಗೆ ಮುಖ ಮಾಡಿದ್ದೇವೆ. ಇದರ ಭಾಗವಾಗಿ ನಟ ಸಂಜಯ್ ದತ್ ಸೆಪ್ಟೆಂಬರ್ 25 ರಂದು ರಾಷ್ಟ್ರೀಯ ಸಮಾಜ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದು ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಖಾತೆ ಸಚಿವರು ಮಾಧ್ಯಮದವರಿಗೆ ಮಾಹಿತಿ ಹಂಚಿಕೊಂಡಿದ್ದಾರೆ.