ಈ ನೆಲದ ಗುಣವೋ ಏನೋ? ಬಹುತೇಕರು ತಮ್ಮ ಬದುಕನ್ನು ಒಂದಿಷ್ಟು ಸಿದ್ದ ಸೂತ್ರಗಳಿಗೆ ಕಟ್ಟಿಹಾಕಿಕೊಂಡಿರುತ್ತಾರೆ. ಹುಟ್ಟಿನಿಂದ ಸಾಯೋ ತನಕ ಒಂದಷ್ಟು ವಿಚಾರಗಳು ಬದುಕಿನಲ್ಲಿ ಘಟಿಸಿದರೇನೆ ಜೀವನ ಪರಿಪೂರ್ಣಗೊಳ್ಳುತ್ತದೆ ಎನ್ನುವ ಹುಸಿ ನಂಬಿಕೆಯನ್ನು ಬದುಕು ಬಿತ್ತಿದೆ. ವಿಜ್ಞಾನ, ಮನಸ್ಸು, ಮಬೋಭಾವಗಳು, ನಂಬಿಕೆಗಳು – ಈ ಎಲ್ಲ ವಿಚಾರಗಳ ಸುತ್ತ ಹರಡಿಕೊಂಡಿರುವ ಚಿತ್ರ ‘ಸಾಂಕೇತ’!
ವೃತ್ತಿಯಿಂದ ಅವನು ವೈದ್ಯ. ಹೆಸರು ಪೃಥ್ವಿ. ಮದುವೆಯಾಗಿ ಮಕ್ಕಳನ್ನು ಹೊಂದಿದಾಗ ಮಾತ್ರ ತನ್ನ ಬದುಕು ಸಾರ್ಥಕತೆ ಕಾಣುತ್ತದೆ ಅನ್ನೋದು ಅವನ ನಂಬಿಕೆ. ದಂತವೈದ್ಯೆ ಪ್ರಕೃತಿಯನ್ನು ಮದುವೆಯಾಗಿರುತ್ತಾನೆ. ಏನೇ ಪ್ರಯತ್ನಿಸಿದರೂ ಪ್ರಕೃತಿ ಗರ್ಭಧರಿಸೋದೇ ಇಲ್ಲ. ಸಾಮಾನ್ಯಕ್ಕೆ ದಂಪತಿಗೆ ಮಗುವಾಗುವ ಕುರಿತು ಕುಟುಂಬಸ್ಥರಿಗೇ ಹೆಚ್ಚು ಕುತೂಹಲ. ಇಲ್ಲಿ ಕೂಡಾ ಅದೇ ಆಗುತ್ತದೆ. ಮದುವೆಯಾಗಿ ಇಷ್ಟು ದಿನ ಕಳೆದರೂ ಇನ್ನೂ ಮಕ್ಕಳಾಗಲಿಲ್ಲ ಎನ್ನುವುದರ ಕುರಿತು ಕುಟುಂಬ ವಲಯದಲ್ಲಿ ಮೂದಲಿಕೆಗಳು, ನಿಂದನೆಗಳು ಶುರುವಾಗುತ್ತವೆ.
ನಮಗೆ ಮಕ್ಕಳೇ ಬೇಡ ನಾವೇ ಮಕ್ಕಳಂತೆ ಒಬ್ಬರಿಗೊಬ್ಬರು ಪ್ರೀತಿ ತೋರುತ್ತಾ ಇದ್ದುಬಿಡೋಣ ಅನ್ನೋದು ಪ್ರಕೃತಿಯ ಅಭಿಪ್ರಾಯವಾಗಿರುತ್ತದೆ. ಆದರೆ ಪೃಥ್ವಿಯ ನಿಲುವೇ ಬೇರೆ. ಈ ನಡುವೆ ಸಾಂಕೇತ್ ಎನ್ನುವ ಪಾತ್ರ ಎಂಟ್ರಿ ಕೊಡುತ್ತದೆ. ಇಂಥಾ ಮಂತ್ರ ಹೇಳಿದರೆ, ಒಂದಿಷ್ಟು ವ್ರತ, ಆಚರಣೆಗಳನ್ನು ಮಾಡಿದರೆ ಪ್ರಕೃತಿ ಗರ್ಭಧರಿಸುತ್ತಾಳೆ ಎನ್ನುತ್ತಾನೆ. ಅಲ್ಲಿಂದ ಮತ್ತೆ ಪ್ರಯತ್ನಗಳು ಶುರುವಾಗುತ್ತವೆ. ಸಾಂಕೇತ್ ಹೇಳಿದ್ದನ್ನೆಲ್ಲಾ ಪಾಲಿಸೋ ಹೊತ್ತಿಗೆ ಪೃಥ್ವಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿಹೋಗುತ್ತಾನೆ. ಈ ನಡುವೆ ಸಾಂಕೇತ್ ಯಾರು? ಈತ ಎಲ್ಲಿಂದ ಬಂದ? ಪೃಥ್ವಿ-ಪ್ರಕೃತಿ ಬದುಕಿನ ಬಗ್ಗೆ ಇವನಿಗೆ ಯಾಕೆ ಇಷ್ಟು ಕಾಳಜಿ ಅನ್ನೋ ಪ್ರಶ್ನೆ ಉದ್ಭವಿಸುತ್ತದೆ. ಈ ಬಗ್ಗೆ ಹುಡುಕುತ್ತಾ ಹೋದಾಗ ಅನೇಕ ವಿಚಿತ್ರಗಳು, ಗೊಂದಲಗಳು, ಕೌತುಕಗಳೆಲ್ಲಾ ತೆರೆದುಕೊಳ್ಳುತ್ತಾ ಸಾಗುತ್ತದೆ. ಆ ನಿಗೂಢಗಳೆಲ್ಲಾ ಏನು ಅಂತಾ ತಿಳಿದುಕೊಳ್ಳಬೇಕೆಂದರೆ ಸಾಂಕೇತ್ ಸಿನಿಮಾವನ್ನು ನೋಡಲೇಬೇಕು.
ಇದು ಜ್ಯೋತ್ಸ್ನಾ ಕೆ. ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಚೊಚ್ಚಲ ಚಿತ್ರ. ಮೊದಲ ಸಿನಿಮಾಗೇ ಇಂಥದ್ದೊಂದು ಕಂಟೆಂಟ್ ಅನ್ನು ಆಯ್ಕೆ ಮಾಡಿಕೊಳ್ಳುವುದು ನಿಜಕ್ಕೂ ತ್ರಾಸದಾಯಕ ಕೆಲಸ. ಆದರೆ ಜ್ಯೋತ್ಸ್ನಾ ತಾವೇ ಸ್ವೀಕರಿಸಿದ ಸವಾಲನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮನೋವೈಜ್ಞಾನಿಕ ನೆಲೆಗಟ್ಟಿನ ಕಥಾವಸ್ತು ಕೈಗೆತ್ತಿಕೊಂಡರೂ ಎಲ್ಲೂ ಗೋಜಲಾಗದಂತೆ ಹಿಡಿದಿಟ್ಟಿದ್ದಾರೆ. ಒಟ್ಟಾರೆ ಚಿತ್ರ ಪ್ರಸ್ತುತ ಸಮಾಜದ ಕೌಟುಂಬಿಕ ವ್ಯವಸ್ಥೆಯನ್ನು ಪ್ರತಿಫಲಿಸಿದೆ. ವಿದ್ಯಾವಂತ, ಅದರಲ್ಲೂ ವೈದ್ಯನೆನಿಸಿಕೊಂಡವನು ತನ್ನ ಬದುಕನ್ನು ಮೌಢ್ಯಕ್ಕೆ ಕಟ್ಟಿಹಾಕಿಕೊಳ್ಳುತ್ತಾನೆ… ಆ ಮೂಲಕ ಒಂದು ಕುಟುಂಬ ಯಾವ ಕೊನೆಯನ್ನು ಮುಟ್ಟುತ್ತದೆ ಅನ್ನೋದೆಲ್ಲಾ ಮನಸ್ಸಿಗೆ ಹತ್ತಿರವೆನಿಸುವಂತೆ ಅನಾವರಣಗೊಂಡಿದೆ. ಇದು ನಿರ್ದೇಶಕಿ ಜ್ಯೋತ್ಸ್ನಾ ಅವರ ಗೆಲುವು ಅಂದುಕೊಳ್ಳಬಹುದು.
ಇನ್ನು ಪಾತ್ರಗಳ ಆಯ್ಕೆ ಕೂಡಾ ಅಷ್ಟೇ ಸ್ಪಷ್ಟವಾಗಿದೆ. ಐದು ಪ್ರಮುಖ ಪಾತ್ರಗಳಿರುವ ಈ ಚಿತ್ರದಲ್ಲಿ ಚೈತ್ರಾ ಶೆಟ್ಟಿ, ವಿಕ್ಕಿ ರಾವ್ ಮತ್ತು ಮೋಹನ್ ಶೇಣಿ ಆಪ್ತವಾಗಿ ನಟಿಸಿದ್ದಾರೆ.
ನಿರ್ದೇಶನದ ಜೊತೆಗೆ ಧ್ವನಿ ವಿನ್ಯಾಸ ಮತ್ತು ಸಂಕಲನವನ್ನೂ ಮಾಡಿರುವುದು ಜ್ಯೋತ್ಸ್ನಾ ಅವರ ಹೆಚ್ಚುಗಾರಿಕೆ. ಚಿತ್ರಕತೆ, ಛಾಯಾಘರಹಣದೊಂದಿಗೆ ಹಿನ್ನೆಲೆ ಸಂಗೀತ ಕೂಡಾ ನೀಡಿರುವ ರಾಜ್ ಕಾರ್ತಿಕ್ ಅವರದ್ದು ಸಾಧನೆ ಅಂದುಕೊಳ್ಳಬಹುದು. ಒಟ್ಟಾರೆ ಒಂದೊಳ್ಳೆ ಸಂದೇಶದ ಜೊತೆಗೆ ನೋಡುಗರನ್ನು ಹಿಡಿದಿಡುವ ಶಕ್ತಿ ಸಾಂಕೇತ್ ಚಿತ್ರಕ್ಕಿದೆ….
No Comment! Be the first one.