ಪಾರ್ವತಮ್ಮ ರಾಜ್ಕುಮಾರ್ ಅವರ ತಂಗಿಯ ಮಗ ಸಂತೋಷ್ ನಿರ್ದೇಶನದ ಎರಡನೇ ಚಿತ್ರ ಬಿಂದಾಸ್ ಗೂಗ್ಲಿ. ಕಾಲೇಜು ಮತ್ತು ಆ ಕಾರಿಡಾರಿಂದಲೇ ಅರಳಿಕೊಳ್ಳುವ ಡ್ಯಾನ್ಸ್ ವ್ಯಾಮೋಹದ ಸುತ್ತ ಹರಡಿಕೊಳ್ಳುವ ಯೂಥ್ಫುಲ್ ಕಥೆಯನ್ನು ಹೊಂದಿರೋ ಈ ಚಿತ್ರ ನಾಳೆ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ.
ಕಳೆದ ವರ್ಷ ಸಂತೋಷ್ ಸ್ಟೂಡೆಂಟ್ಸ್ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅದು ತಕ್ಕಮಟ್ಟಿಗೆ ಯಶಸನ್ನೂ ಗಳಿಸಿಕೊಂಡಿತ್ತು. ಇದೀಗ ಯುವ ಹುಮ್ಮಸ್ಸಿನ ಹೊಸಾ ಬಗೆಯ ಕಥೆಯೊಂದಿಗೆ ಬಿಂದಾಸ್ ಗೂಗ್ಲಿ ಚಿತ್ರ ಅವರ ಎರಡನೇ ಪ್ರಯತ್ನವಾಗಿ ಮೂಡಿ ಬಂದಿದೆ. ಪ್ರತಿಯೊಬ್ಬರಲ್ಲಿಯೂ ಯಾವುದಾದರೂ ಒಂದು ಪ್ರತಿಭೆ ಇದ್ದೇ ಇರುತ್ತೆ. ಆದರೆ ಅದನ್ನು ಬಿಂದಾಸ್ ಆಗಿ ಪ್ರೆಸೆಂಟ್ ಮಾಡಿದಾಗ ಮಾತ್ರವೇ ಯಶಸ್ಸು ಸಿಕ್ಕುತ್ತೆ. ಈ ಬೇಸಿನ ಮೇಲೆ ರಚಿಸಲ್ಪಟ್ಟಿರೋ ಈ ಕಥೆಯ ಪ್ರಧಾನ ಅಂಶ ಡ್ಯಾನ್ಸ್. ಮೂಲತಃ ಚೆನ್ನಾಗಿ ಡ್ಯಾನ್ಸು ಮಾಡೋ ಕಲೆ ಹೊಂದಿರೋ ಹತ್ತೊಂಬತ್ತು ವರ್ಷದ ಹುಡುಗ ಆಕಾಶ್ ಈ ಚಿತ್ರದ ಮೂಲಕ ನಾಯಕನಾಗಿದ್ದಾನೆ. ಮಮತಾ ರಾವುತ್, ಶಿಲ್ಪಾ ಮತ್ತು ನಿವಿಕಾ ರತ್ನಾಕರ್ ನಾಯಕಿಯರಾಗಿ ನಟಿಸಿದ್ದಾರೆ. ನಟ ಧರ್ಮ ಕೀರ್ತಿರಾಜ್ ಚಕ್ ದೇ ಇಂಡಿಯಾದಲ್ಲಿ ಶಾರುಖ್ ನಿರ್ವಹಿಸಿದ್ದ ಪಾತ್ರದಂತೆ ಸಾಧನೆಯ ಹಾದಿಯಲ್ಲಿರುವ ಯುವಕರನ್ನು ಹುರಿದುಂಬಿಸುವಂಥ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.
ಹೀಗೆ ತಮ್ಮ ನಿರ್ದೇಶನದ ಎರಡನೇ ಚಿತ್ರವನ್ನು ತೆರೆಗಾಣಲು ಸಜ್ಜುಗಳಿಸಿರುವ ಸಂತೋಷ್ ಅವರದ್ದು ಸಿನಿಮಾ ವಾತಾವರಣವೇ ತುಂಬಿರುವ ಕುಟುಂಬ. ಇವರ ತಂದೆ ಕೂಡಾ ಸಿನಿಮಾ ಡಿಸ್ಟ್ರಿಬ್ಯೂಟರ್. ಸರಿ ಸುಮಾರು ನಲವತ್ತೆಂಟು ವರ್ಷಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ನಂಟು ಹೊಂದಿರೋ ಕುಟುಂಬ ಇವರದ್ದು. ಪಾರ್ವತಮ್ಮ ರಾಜ್ ಕುಮಾರ್ ಅವರ ಕೊನೆಯ ತಂಗಿ ಮಗನಾದ ಸಂತೋಷ್ಗೆ ಆರಂಭದಿಂದಲೂ ನಿರ್ದೇಶಕನಾಗೋ ಹಂಬಲವಿತ್ತು. ಆದರೆ ಮನೆಯ ಕಡೆ ಮಗ ಚೆನ್ನಾಗಿ ಓದಲಿ ಎಂಬ ಅಭಿಲಾಷೆ ಇದ್ದಿದ್ದರಿಂದ ಅತ್ತ ಗಮನ ಹರಿಸಿದ್ದ ಅವರು ಒಳ್ಳೆಯದೊಂದು ಕೆಲಸವನ್ನೂ ಗಿಟ್ಟಿಸಿಕೊಂಡಿದ್ದರು. ವಿದೇಶದಲ್ಲೂ ಕಾರ್ಯ ನಿರ್ವಹಿಸಿ ಬಂದಿದ್ದಾರೆ. ಆದರೆ ಸಿನಿಮಾ ಧ್ಯಾನ ಅಲ್ಲಿರಲು ಬಿಟ್ಟಿರಲೇ ಇಲ್ಲ.
ನಿರ್ದೇಶಕನಾಗಬೇಕೆಂಬ ಹಂಬಲ ಇದ್ದರೂ ಸಂತೋಷ್ ಮೊದಲು ಚಿತ್ರರಂಗಕ್ಕೆ ಆಗಮಿಸಿದ್ದ ನಟನಾಗಿ. ಸಿರಿವಂತ, ಹೋಗಿ ಬಾ ಮಗಳೆ ಮುಂತಾದ ಚಿತ್ರಗಳಲ್ಲಿಯೂ ಅವರು ಅಭಿನಯಿಸಿದ್ದರು. ಆದರೆ ನಟನಾಗೋದು ತನ್ನ ಉದ್ದೇಶವಲ್ಲ ಅಂತ ಪಕ್ಕಾ ಮಾಡಿಕೊಂಡಿದ್ದ ಸಂತೋಷ್ ಕಡೆಗೂ ನಿರ್ದೇಶನದತ್ತ ಮನಸು ಮಾಡಿ ಕಳೆದ ವರ್ಷ ಸ್ಟೂಡೆಂಟ್ಸ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು.
ಬಿಂದಾಸ್ ಗೂಗ್ಲಿ ಎಂಬುದು ಯುವ ಮನಸುಗಳಿಗೆ ಹತ್ತಿರಾದ ಬಿಂದಾಸ್ ಕಥೆಯೊಂದನ್ನು ಹೊತ್ತು ತರಲಿದೆ. ಆಕಾಶ್ಗೆ ನೃತ್ಯದಲ್ಲಿ ಪರಿಣತಿ ಇರೋದರಿಂದ ಆ ಹಿನ್ನೆಯದ್ದೊಂದು ಕಥೆ ಮಾಡಬೇಕೆಂದುಕೊಂಡ ಸಂತೋಷ್ ಬೆಳಗಾವಿಯಲ್ಲಿ ಆರೇಳು ತಿಂಗಳ ಕಾಲ ಈ ಚಿತ್ರದ ಕಥೆ ಬರೆದಿದ್ದರಂತೆ. ಕಡೆಗೂ ಒಂದು ಉತ್ಸಾಹಿ ತಂಡ ಕಟ್ಟಿ ತಾವಂದುಕೊಂಡಂತೆಯೇ ಈ ಚಿತ್ರವನ್ನವರು ರೂಪಿಸಿದ್ದಾರೆ.
ನಾಳೆ ತೆರೆ ಕಾಣಲಿರುವ ಈ ಚಿತ್ರದಲ್ಲಿ ಅದ್ದೂರಿ ತಾರಾಗಣವಿದೆ. ನುರಿತ ತಂತ್ರಜ್ಞರ ತಂಡವೇ ಇದಕ್ಕಾಗಿ ಕೆಲಸ ಮಾಡಿದೆ. ವಿನು ಮನಸು ಸಂಗೀತ ನಿರ್ದೇಶನದಲ್ಲಿ ಬಿಟ್ ಸಾಂಗುಗಳೂ ಸೇರಿದಂತೆ ಹನ್ನೊಂದು ಹಾಡುಗಳಿರೋದು ವಿಶೇಷ. ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವೆಂಕಟೇಶ್ ಸಂಕಲನ, ಹೈದ್ರಾಬಾದಿನ ಶ್ರುತಿ, ಕಲೈ ಮಾಸ್ಟರ್ ಮತ್ತು ಹೈಟ್ ಮಂಜು ಅವರ ನೃತ್ಯ ನಿದೇಶನ ಈ ಚಿತ್ರಕ್ಕಿದೆ. ಈ ಚಿತ್ರದ ಮೂಲಕ ನಿರ್ಮಾಪಕ ವಿಜಯ್ ಸದಾನಂದ್ ತಮ್ಮ ಪುತ್ರ ಆಕಾಶ್ನನ್ನು ಹೀರೋ ಮಾಡಿದ ಖುಷಿಯಲ್ಲಿದ್ದಾರೆ. ನಾಯಕನಟನಾಗಿ ನೆಲೆನಿಲ್ಲಲು ಬೇಕಿರುವ ಎಲ್ಲ ಗುಣಗಳನ್ನೂ ಹೊಂದಿರುವ ಆಕಾಶ್ ಬಿಂದಾಸ್ ಗೂಗ್ಲಿಯ ಮುಖಾಂತರ ಚಿತ್ರರಂಗದಲ್ಲಿ ನೆಲೆನಿಲ್ಲಲಿ.
#
No Comment! Be the first one.