ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬ್ಲಾಕ್ಬಸ್ಟರ್ ಸಿನಿಮಾ ಸಾರಥಿ. ಯಾವುದೇ ಗೆದ್ದ ಸಿನಿಮಾದ ಹಿಂದೆ ಹೇಳಲಸಾಧ್ಯವಾದ ಕಷ್ಟಗಳ ಚರಿತ್ರೆಯೂ ಇರುತ್ತದೆ.
ಜೊತೆಜೊತೆಯಲಿ, ನವಗ್ರಹ ಎಂಬೆರಡು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ದಿನಕರ್ ತೂಗುದೀಪ ಬೇರೆಯದ್ದೇ ಜಾನರಿನ ಸಿನಿಮಾವೊಂದನ್ನು ನಿರ್ದೇಶಿಸಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಅದು ದರ್ಶನ್ ಚಿತ್ರರಂಗಕ್ಕೆ ಬಂದ ಹತ್ತನೇ ವರ್ಷದ ಕಾಣಿಕೆಯಾಗಬೇಕು ಅನ್ನೋದು ನಿರ್ದೇಶಕರ ಬಯಕೆಯಾಗಿತ್ತು. ಆ ನಿಟ್ಟಿನಲ್ಲಿ ದಿನಕರ್ ಜನಕ್ಕೆ ಇಷ್ಟವಾಗುವಂತಾ ಕಥೆಯನ್ನೂ ಬರೆದಿಟ್ಟುಕೊಂಡಿದ್ದರು. ಸಿನಿಮಾ ಕೂಡಾ ಶುರುವಾಯಿತು. ಕೆ.ಸಿ.ಎನ್ ಚಂದ್ರಶೇಖರ್ ಮತ್ತು ಸತ್ಯಪ್ರಕಾಶ್ ಸೇರಿ ಸಿನಿಮಾಕ್ಕೆ ಬಂಡವಾಳ ಹೂಡಿದರು. ಅದೇನು ಸಮಸ್ಯೆಗಳಾಯಿತೋ ಗೊತ್ತಿಲ್ಲ, ಸಿನಿಮಾ ಚಿತ್ರೀಕರಣದ ಹಂತದಲ್ಲಿದ್ದಾಗಲೇ ಕೆ.ಸಿ.ಎನ್. ಚಂದ್ರಶೇಖರ್ ಹಿಂದಡಿಯಿಟ್ಟುಬಿಟ್ಟರು. ಸತ್ಯಪ್ರಕಾಶ್ ಒಬ್ಬರೇ ಸಿನಿಮಾವನ್ನು ಮುನ್ನಡೆಸಬೇಕಾಯಿತು.
ಸಾರಥಿ ಹೆಸರು ಯಾರಿಗೂ ಇಷ್ಟವಿರಲಿಲ್ಲ!
ಚಾಲಕನ ಕಥೆಯಿದ್ದ ಕಾರಣಕ್ಕೆ ಈ ಸಿನಿಮಾಗೆ ಸಾರಥಿ ಎನ್ನುವ ಹೆಸರಿಡಲಾಗಿತ್ತು. ಆರಂಭದಲ್ಲಿ ಈ ಶೀರ್ಷಿಕೆ ಯಾರೆಂದರೆ ಯಾರಿಗೂ ಇಷ್ಟವಿರಲಿಲ್ಲ. ನಿರ್ಮಾಪಕರ ಆದಿಯಾಗಿ ಎಲ್ಲರೂ ಸಿನಿಮಾದ ಹೆಸರು ಬೇರೆ ಇದ್ದಿದ್ದರೆ ಚೆನ್ನಾಗಿತ್ತು ಅಂತಲೇ ಆಭಿಪ್ರಾಯ ವ್ಯಕ್ತಪಡಿಸಿದ್ದರು. ಖುದ್ದು ದರ್ಶನ್ ಕೂಡಾ ಸಾರಥಿ ಅನ್ನೋ ಹೆಸರು ಸರಿಹೋಗುತ್ತಾ ಅಂತಾ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಯಾರು ಏನೇ ಹೇಳಿದರೂ ಸಾರಥಿ ಹೆಸರನ್ನು ಬಿಡಲು ದಿನಕರ್ ಕಡಾಖಂಡಿತವಾಗಿಯೂ ನಿರಾಕರಿಸಿದರು. ಸಂಭಾಷಣೆ ಬರೆದಿದ್ದ ಎ.ವಿ. ಚಿಂತನ್ ಸಹಾ ಸಾರಥಿ ಟೈಟಲ್ಲೇ ಇರಲಿ ಎಂದು ದಿನಕರ್ ಇಚ್ಛೆಗೆ ದನಿಯಾಗಿದ್ದರು. ಆ ಮೂಲಕ ಸಾರಥಿ ಅನ್ನೋ ಹೆಸರೇ ಅಂತಿಮವಾಗಿತ್ತು. ಸಿನಿಮಾದ ಸ್ಕ್ರಿಪ್ಟು ಮುಗಿದ ಮೇಲೇ ತಾಯಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಲಾಯಿತು. ಹಾಗೆ ಪೂಜೆ ಮಾಡೋ ಹೊತ್ತಿಗೆ ಚಾಮುಂಡಿ ದೇವಿಯ ವಿಗ್ರಹದಲ್ಲಿದ್ದ ಹೂವು ಸ್ಕ್ರಿಪ್ಟಿನ ಮೇಲೇ ನೇರವಾಗಿ ಬಿದ್ದಿತ್ತು. ಆ ಹೊತ್ತಿನಲ್ಲೇ ನಿರ್ದೇಶಕ ದಿನಕರ್ ಅವರ ಮನಸ್ಸಿನಲ್ಲಿ ಏನೋ ಒಂದು ಬಗೆಯ ಪಾಸಿಟೀವ್ ಫೀಲ್ ಆರಂಭವಾಗಿತ್ತು, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂದು…
ಕ್ಯಾಬ್ ಡ್ರೈವರ್ ಆಗಬೇಕಿತ್ತು!
ಸ್ಕ್ರಿಪ್ಟು ರೆಡಿಯಾದಾಗ ಅದರಲ್ಲಿ ದರ್ಶನ್ ಪಾತ್ರ ಕಾರು ಚಾಲಕನದ್ದಾಗಿತ್ತು. ಇನ್ನೇನು ಶೂಟಿಂಗು ಶುರುವಾಗುವ ಸಂದರ್ಭದಲ್ಲಿ ಅದನ್ನು ಆಟೋಚಾಲಕನನ್ನಾಗಿ ಮಾಡಿದರೆ ಮತ್ತಷ್ಟು ಕಳೆಕಟ್ಟುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ದಿಢೀರೆಂದು ದರ್ಶನ್ ಅವರಿಗೆ ಹೊಂದುವ ಖಾಕಿ ಯೂನಿಫಾರ್ಮ್ ರೆಡಿ ಮಾಡಿಸಿ ತರಲಾಯಿತು. ಆಟೋವೊಂದರ ಮೇಲೆ ಕೈ ಮುಗಿದು ಏರು ಇದು ಕನ್ನಡದ ತೇರು ಅಂತಾ ಬರೆಸಿದ್ದೇ ಅಲ್ಲೇ ಇದ್ದ ಸ್ಟಿಲ್ ಫೋಟೋಗ್ರಾಫರ್ ಬಳಿ ಫೋಟೋವೊಂದನ್ನು ತೆಗೆಸಿದ್ದೂ ಆಯಿತು. ಹೀಗೆ ದಿಢೀರನೆ ಸೃಷ್ಟಿಗೊಂಡ ಕಾಸ್ಟೂಮು ಮತ್ತು ಆಟೋ ಡ್ರೈವರ್ ಲುಕ್ಕು ದರ್ಶನ್ ಅವರಿಗೆ ಹೊಸ ಇಮೇಜನ್ನೇ ತಂದು ಕೊಟ್ಟಿತು. ಇವತ್ತಿಗೂ ಕರ್ನಾಟಕದ ಲಕ್ಷಾಂತರ ಆಟೋಗಳ ಮೇಲೆ ದರ್ಶನ್ ಅವರ ಇದೇ ಸ್ಟಿಲ್ಲು ರಾರಾಜಿಸುತ್ತಿವುದನ್ನು ನಾವು ನೋಡಬಹುದು.
No Comment! Be the first one.