ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಜ್ಯೂನಿಯರ್ ಕಿರಿಕ್ ಪಾರ್ಟಿ- ಹೀಗಂದಿದ್ದವರು ನಿರ್ದೇಶಕ ರಿಷಬ್ ಶೆಟ್ಟಿ. ಅತ್ತ ಇದು ಮೈಮನಸುಗಳಲ್ಲಿ ಕನ್ನಡತನವನ್ನೇ ತುಂಬಿಕೊಂಡು ಕೇರಳ ಭಾಗವಾಗಿರೋ ಕಾಸರಗೋಡಿನ ಒಡಲ ಕಥೆ ಅಂತ ಸುದ್ದಿ ಹಬ್ಬಿದೆ, ಮತ್ತೊಂದೆಡೆ ಮುಚ್ಚುತ್ತಿರೋ ಸರ್ಕಾರಿ ಶಾಲೆಗಳ ಕಥೆಯನ್ನೊಳಗೊಂಡಿದೆ ಎಂದೂ ಹೇಳಲಾಗುತ್ತಿದೆ. ಆದ್ರೆ ಶೆಟ್ಟರು ಮಾತ್ರ ಇದನ್ನು ಜ್ಯೂನಿಯರ್ ಕಿರಿಕ್ ಪಾರ್ಟಿ ಅನ್ನುತ್ತಿರೋದರ ಮರ್ಮವೇನೆಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು.
ಅದಕ್ಕೀಗ ಈ ಚಿತ್ರದ ಟ್ರೈಲರ್ ಮೂಲಕವೇ ನಿಖರವಾದ ಉತ್ತರ ಸಿಕ್ಕಿದೆ. ಯೂಟ್ಯೂಬಲ್ಲಿ ಈ ಟ್ರೈಲರ್ ಬಿಡುಗಡೆಯಾದ ನಂತರ ಸಿಕ್ಕ ಅಭೂತಪೂರ್ವವಾದ ಮೆಚ್ಚುಗೆಗಳೇ ಇದು ಗೆಲುವಿನ ವಿಚಾರದಲ್ಲಿಯೂ ಜ್ಯೂನಿಯರ್ ಕಿರಿಕ್ ಪಾರ್ಟಿಯಾಗೋ ಸ್ಪಷ್ಟ ಸೂಚನೆಗಳನ್ನು ರವಾನಿಸಿದೆ!
ಇನ್ನೇನು ಈ ಚಿತ್ರ ಬಿಡುಗಡೆಯ ದಿನಗಳು ಹತ್ತಿರಾಗಿವೆ. ಹೀಗಿರುವಾಗ ಚಿತ್ರದ ಬಗ್ಗೆ ಮತ್ತೊಂದಷ್ಟು ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಟಿ ನಡೆಸಿತ್ತು. ಅದರಲ್ಲಿ ಎಂದಿನ ಉತ್ಸಾಹದಿಂದ ಪಾಲ್ಗೊಂಡಿದ್ದವರು ಜ್ಯೂನಿಯರ್ ಕಿರಿಕ್ ಪಾರ್ಟಿಗಳ ಮೇಸ್ಟ್ರು ಅನಂತ ನಾಗ್!
ಅನಂತ್ ನಾಗ್ ಈ ಚಿತ್ರದಲ್ಲಿ ವಕೀಲರಾಗಿ ನಟಿಸಿದ್ದಾರೆ. ಅವರು ಈ ಚಿತ್ರದ ಕಥೆ, ನಿರೂಪಣೆ, ವೈಶಿಷ್ಟ್ಯಗಳ ಬಗ್ಗೆ ಮನದುಂಬಿ ಮಾತಾಡಿದ್ದಾರೆ. ಕಾಸರಗೋಡಿನ ಸಾಂಸ್ಕೃತಿಕ ಆಯಾಮಗಳನ್ನೂ, ತಲ್ಲಣಗಳನ್ನು ಮಕ್ಕಳ ಮೂಲಕವೇ ದಾಟಿಸುವ ವಿಭಿನ್ನ ಪ್ರಯತ್ನ ಮಾಡಿರೋ ನಿರ್ದೇಶಕ ರಿಷಬ್ ಶೆಟ್ಟಿಯವರ ಕಸುಬುದಾರಿಕೆಯನ್ನು ಅನಂತ ನಾಗ್ ಮೆಚ್ಚಿಕೊಂಡಿದ್ದಾರೆ. ಮಕ್ಕಳಿಗೆಲ್ಲ ವರ್ಕ್ಶಾಪ್ ಮಾಡಿ ಪಳಗಿದ ನಟರನ್ನಾಗಿಸಿದ ರಿಷಬ್ ಅವರನ್ನು ತಮಗಿಂತಲೂ ಹೆಚ್ಚು ಜವಾಬ್ದಾರಿ ಹೊರುವಂತೆ ಮಾಡಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಒಂದು ಕಾಲದಲ್ಲಿ ಕರ್ನಾಟಕದ ಭಾಗವಾಗಿದ್ದ ಸಂಪನ್ನ ಪ್ರದೇಶ ಕಾಸರಗೋಡು. ಅದು ಅನೇಕ ಹೋರಾಟದ ನಡುವೆಯೂ ಕೇರಳದ ಪಾಲಾಗಿದ್ದೀಗ ದುರಂತದ ಇತಿಹಾಸ. ಕೇರಳದ ಭಾಗವಾಗಿದ್ದರೂ ತುಳುನಾಡ ಸಂಸ್ಕೃತಿಯ ಮೂಲಕ ಕನ್ನಡವನ್ನು ಧ್ಯಾನಿಸೋ ಮನಸುಗಳು, ಅಲ್ಲೊಂದು ಸರ್ಕಾರಿ ಶಾಲೆ, ಅದಕ್ಕೆ ದಾಂಗುಡಿ ಇಡೋ ಮಲೆಯಾಳಿ ಶಿಕ್ಷಕರು, ಮಾತೃಭಾಷಾ ಮಾಧ್ಯಮವೇ ಏಕಾಏಕಿ ಬದಲಾದ ಮಕ್ಕಳ ಮರ್ಮರ ಮತ್ತು ಬಹುತೇಕ ಸರ್ಕಾರಿ ಶಾಲೆಗಳಂತೆ ಅದಕ್ಕೂ ಬೀಗ ಜಡಿದುಕೊಳ್ಳುವ ಭೀತಿ…
ಇದೆಲ್ಲವನ್ನೂ ಜ್ಯೂನಿಯರ್ ಕಿರಿಕ್ ಪಾರ್ಟಿಗಳ ಕೀಟಲೆಗಳ ಮೂಲಕವೇ ಕಟ್ಟಿಕೊಟ್ಟಿದ್ದರ ಬಗ್ಗೆ ಬೆರಗು ಸೂಚಿಸುತ್ತಲೇ, ಅನಂತ್ ನಾಗ್ ತಾವೂ ಕೂಡಾ ಕನ್ನಡ ಮಾಧ್ಯಮದಲ್ಲಿ ಓದಿ ನಂತರ ಮುಂಬೈನಲ್ಲಿ ಇಂಗಿಷ್ ಮಾಧ್ಯಮದಲ್ಲಿ ಪಟ್ಟ ಪಡಿಪಾಟಲುಗಳನ್ನೂ ನೆನಪಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಜ್ಯೂನಿಯರ್ ಕಿರಿಕ್ ಪಾರ್ಟಿಯಂತಿರೋ ಈ ಚಿತ್ರ ಜನ ಮನ ಗೆಲ್ಲುತ್ತದೆ ಎಂಬ ಭರವಸೆ ಅನಂತ ನಾಗ್ ಅವರ ಪ್ರತೀ ಮಾತುಗಳಲ್ಲಿಯೂ ಧ್ವನಿಸಿದೆ!
#