ರಿಷಬ್ ಶೆಟ್ಟಿ ಮತ್ತವರ ತಂಡದವರು ಭರ್ಜರಿ ಗೆಲುವೊಂದರ ಖುಷಿಯಲ್ಲಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಬೆರಗಾಗಿಸುವಂಥಾ ಯಶಸ್ಸಿನ ರೂವಾರಿಯಾಗಿದೆ. ಕಂಟೆಂಟು, ನಿರೂಪಣೆಯಲ್ಲಿ ಹೊಸತನ ಇದ್ದರೆ ಖಂಡಿತಾ ಕನ್ನಡದ ಪ್ರೇಕ್ಷಕರು ಕೈ ಬಿಡಲಾರರೆಂಬ ವಿಚಾರವೂ ಈ ಮೂಲಕವೇ ಸಾಬೀತಾಗಿದೆ.
ಈ ಚಿತ್ರ ಬಿಡುಗಡೆಯಾಗೋ ಮುನ್ನವೇ ಇದು ಪಕ್ಕಾ ಜ್ಯೂನಿಯರ್ ಕಿರಿಕ್ ಪಾರ್ಟಿ ಎಂಬ ವಿಚಾರವನ್ನು ರಿಷಬ್ ಸ್ಪಷ್ಟಪಡಿಸಿದ್ದರು. ಈ ಹಿಂದೆ ಕಿರಿಕ್ ಪಾರ್ಟಿ ಚಿತ್ರ ಕನ್ನಡದಲ್ಲಿ ಸಾರ್ವಕಾಲಿಕ ದಾಖಲೆ ಮಾಡಿತ್ತಲ್ಲಾ? ಜ್ಯೂನಿಯರ್ ಕಿರಿಕ್ ಪಾರ್ಟಿಗಳೂ ಅಂಥಾದ್ದೇ ಒಂದು ಭರಪೂರ ಯಶಸ್ಸನ್ನು ಸಂಪಾದಿಸಿಕೊಳ್ಳೋ ನಿರೀಕ್ಷೆಗಳೂ ಹುಟ್ಟಿಕೊಂಡಿದ್ದವು. ಅದೆಲ್ಲವೂ ಈಗ ನಿಜವಾಗಿದೆ.
ಇಡೀ ರಾಜ್ಯದ ತುಂಬಾ ಈ ಕ್ಷಣಕ್ಕೂ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಇದು ಕಾಸರಗೋಡು ಕನ್ನಡಿಗರ ತಲ್ಲಣಗಳನ್ನು ಸರ್ಕಾರಿ ಶಾಲೆಯೊಂದರ ಭೂಮಿಕೆಯಲ್ಲಿ ಅನಾವರಣಗೊಳಿಸಿರೋ ಚಿತ್ರ. ಆದರೀಗ ಈ ಸಿನಿಮಾಗೆ ಇಡೀ ಕರ್ನಾಟಕದ ಎಲ್ಲ ಭಾಗಗಳಿಂದಲೂ ಭರ್ಜರಿ ಪ್ರೋತ್ಸಾಹ ಸಿಕ್ಕಿದೆ. ಉತ್ತರ ಕರ್ನಾಟಕವೂ ಸೇರಿದಂತೆ ಪ್ರತೀ ಜಿಲ್ಲೆಗಳ ಮೂಲೆ ಮೂಲೆಯಲ್ಲಿಯೂ ಈಗ ಜ್ಯೂನಿಯರ್ ಕಿರಿಕ್ ಪಾರ್ಟಿಯದ್ದೇ ಹವಾ.
ಇದು ಸಾಧ್ಯವಾದದ್ದು ನಿರ್ದೇಶಕ ರಿಷಬ್ ಶೆಟ್ಟಿಯವರ ಸೂಕ್ಷ್ಮ ಒಳನೋಟಗಳಿಂದ. ಮಾಮೂಲಿಯಾಗಿ ಯೋಚಿಸಿದ್ದರೆ ಈ ಸಿನಿಮಾ ಗಡಿನಾಡು ಕಾಸರಗೋಡಿನ ತಲ್ಲಣಗಳ ಸಾಕ್ಷ್ಯ ಚಿತ್ರವಾಗುತ್ತಿತ್ತು. ಮುಚ್ಚಲ್ಪಡುತ್ತಿರೋ ಸರ್ಕಾರಿ ಶಾಲೆಗಳ ದುರಂತವನ್ನಷ್ಟೇ ದಾಖಲಿಸುವ ಚಿತ್ರವೂ ಆಗ ಬಹುದಿತ್ತು. ಆದರೆ ಇದನ್ನು ಈ ಎರಡು ವಿಚಾರಗಳಾಚೆಗೆ ಚೇತೋಹಾರಿಯಾಗಿ ಕಟ್ಟಿ ಕೊಟ್ಟಿರುವ ರಿಷಬ್ ಶೆಟ್ಟಿ ನಿಜವಾದ ಕಮಾಲ್ ಸೃಷ್ಟಿಸಿದ್ದಾರೆ. ಈ ಮೂಲಕವೇ ಹೊಸಾ ಪ್ರಯೋಗವನ್ನೂ ಯಶಸ್ವಿಗೊಳಿಸಿದ್ದಾರೆ. ಈ ಕಾರಣದಿಂದಲೇ ಈಗ ಸರ್ಕಾರಿ ಶಾಲೆಯ ಯಶಸ್ಸಿನ ಮೆರವಣಿಗೆ ಅಡೆತಡೆಯಿಲ್ಲದೆ ಮುನ್ನಡೆಯುತ್ತಿದೆ!
#
Leave a Reply
You must be logged in to post a comment.