ಇದೀಗ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸುತ್ತಿರುವ ರಿಷಬ್ ಶೆಟ್ಟಿ ಒಂದು ಭಿನ್ನ ಕಥಾ ವಸ್ತುವನ್ನು ಮುಟ್ಟಿದ್ದಾರೆ. `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’ ಎಂಬ ಕಲಾತ್ಮಕ ಚಿತ್ರವೊಂದನ್ನು ಅವರು ನಿರ್ದೇಶನ ಮಾಡಿದ್ದಾರೆ. ಇನ್ನೇನು ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರ ಯಾವ ಕಮರ್ಷಿಯಲ್ ಚಿತ್ರಗಳಿಗೂ ಸರಿಸಾಟಿಯಾಗುವಂತೆ ಟ್ರೆಂಡಿಂಗ್ನಲ್ಲಿದೆ!
ಆರ್ಟ್ ಮೂವಿಗೂ ಪ್ರೇಕ್ಷಕರು ಹೃದಯಪೂರ್ವಕವಾಗಿ ಬೆಂಬಲಿಸುತ್ತಾರೆ, ಕಾತರದಿಂದ ಕಾಯುತ್ತಾರೆಂಬುದಕ್ಕೆ ಈ ಚಿತ್ರ ಸ್ಪಷ್ಟ ಸಾಕ್ಷಿಯಾಗಿದೆ. ರಿಕ್ಕಿಯಂಥಾ ಚಿತ್ರದಲ್ಲಿ ಉದ್ದಿಮೆಗಳಿಗೆ ರೈತರ ಭೂಮಿ ವಶ ಪಡಿಸಿಕೊಳ್ಳುವುದರ ಸುತ್ತ ನಕ್ಸಲಿಸಂ ಅನ್ನೂ ಒಳಗೊಂಡಂಥಾ ಕಥೆಯ ಮೂಲಕ ಗಮನ ಸೆಳೆದಿದ್ದವರು ರಿಷಬ್ ಶೆಟ್ಟಿ. ಇದೀಗ ಅವರು ಸರ್ಕಾರಿ ಶಾಲೆಯೊಂದರ ಹಿನ್ನೆಲೆಯಲ್ಲಿ ಗಡಿನಾಡಿನ ತವಕ ತಲ್ಲಣಗಳನ್ನು ಈ ಚಿತ್ರದ ಮೂಲಕ ಮುಖ್ಯವಾಹಿನಿಗೆ ರವಾನಿಸಲು ಮುಂದಾಗಿದ್ದಾರೆ.
ಇದೊಂದು ಮಕ್ಕಳ ಚಿತ್ರ. ಇದರ ಮುಖ್ಯಭೂಮಿಕೆಯಲ್ಲಿ ಅನಂತ ನಾಗ್ ನಟಿಸಿದ್ದಾರೆ. ಹಾಗಂಥ ಇದನ್ನು ಮಕ್ಕಳ ಸಿನಿಮಾ ಅಂತ ಪೂರ್ತಿಯಾಗಿ ಬ್ರ್ಯಾಂಡ್ ಮಾಡುವಂತೆಯೂ ಇಲ್ಲ. ಇದರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರೋ ವಿದ್ಯಮಾನ, ಇತ್ತ ಕರ್ನಾಟವೂ ಅಲ್ಲ ಅತ್ತ ಕೇರಳವೂ ಅಲ್ಲ ಎಂಬಂಥಾ ಸಾಂಸ್ಕೃತಿಕ, ಭಾವುಕ ತೊಳಲಾಟದಲ್ಲಿರೋ ಗಡಿನಾಡ ಜನರ ಬದುಕು ಸೇರಿದಂತೆ ಎಲ್ಲವೂ ಈ ಚಿತ್ರದಲ್ಲಿರೋ ಸೂಚನೆಗಳಿದ್ದಾವೆ.
ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯಲ್ಲಿದ್ದ ಸಿಂಹದ ಮರಿ ಸೈನ್ಯ ಚಿತ್ರ ಮಕ್ಕಳ ಸಿನಿಮಾದ ಮಾಸ್ಟರ್ ಪೀಸ್ ಆಗಿ ದಾಖಲಾಗಿದೆ. ಸಾಲು ಸಾಲಾಗಿ ಮಕ್ಕಳ ಚಿತ್ರಗಳು ಬಂದರೂ ಸದರಿ ಚಿತ್ರ ಮುಖ್ಯವವಾಗಿ ನಿಂತಿದ್ದು ಭಿನ್ನ ಕಥನದಿಂದ. ಆದರೆ ಮಕ್ಕಳ ಚಿತ್ರ ಅಂದರೆ ಪ್ರೇಕ್ಷಕರು ರಿಷಬ್ ನಿರ್ದೇಶನದ ಈ ಚಿತ್ರವೂ ಕಣ್ಮುಂದೆ ಬರುವಂಥಾ ದಾಖಲೆ ಸೃಷ್ಟಿಯಾಗಲಿದೆ ಎಂಬ ವಾತಾವರಣವಿದೆ. ಎಲ್ಲೆಡೆ ಗುನುಗಿಸಿಕೊಳ್ಳುತ್ತಿರೋ ಈ ಚಿತ್ರದ ಹಾಡುಗಳೇ ಭರ್ಜರಿ ಗೆಲುವೊಂದರ ದಿಕ್ಸೂಚಿಯಂತೆಯೂ ಕಾಣಿಸುತ್ತಿದೆ.
#