ಸಾಕಷ್ಟು ಸಿನಿಮಾಗಳಲ್ಲಿ ಲೀಡ್ ಪಾತ್ರಗಳಿಗಿಂತ ಸ್ಕ್ರೀನ್ ಮೇಲೆ ಒಂದೆರಡು ನಿಮಿಷ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳು ನೋಡುಗನ ಮನಸ್ಸಿನಲ್ಲಿ ಉಳಿದು ಬಿಡೋದು ಕಾಮನ್ನು. ಸುಕ್ಕಾ ಸೂರಿ ನಿರ್ದೇಶನದ ಟಗರು ಸಿನಿಮಾದಲ್ಲಿ ಡಾಲಿ ಎಷ್ಟರಮಟ್ಟಿಗೆ ನೆನಪುಳಿಯುತ್ತಾನೋ ಅವನೊಂದಿಗೆ ಕಿಲ ಕಿಲ ಎಂದಿದ್ದ ಕಾನ್ ಸ್ಟೇಬಲ್ ಸರೋಜ ಕೂಡ ನೆನಪುಳಿಯುವ ಕ್ಯಾಂಡಿಡೇಟೇ. ಕರ್ತವ್ಯವನ್ನೂ ಮರೆತು ಆತನೊಂದಿಗೆ ಸಿನಿಮಾದಲ್ಲಿ ಅಷ್ಟರಮಟ್ಟಿಗೆ ಮೈ ಮರೆತಿದ್ದಾಳೆ.
ಕಾನ್ ಸ್ಟೇಬಲ್ ಸರೋಜ ಉರುಫ್ ತ್ರಿವೇಣಿ ರಾವ್ ಟಗರು ಸಿನಿಮಾದ ಚಾನ್ಸ್ ಸಿಗುವ ಮುಂಚೆ ಅಲ್ಲೊಂದಿಲ್ಲೊಂದು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವಳು. ಬ್ಲಾಕ್ ಬಸ್ಟರ್ ಹಿಟ್ ಕಂಡ ತೆಲುಗಿನ ಬಾಹುಬಲಿ ಸಿನಿಮಾದಲ್ಲಿ ತ್ರಿವೇಣಿ ರಾವ್ ಶಿವಗಾಮಿಯ ಹಿಂದೆ ನಿಲ್ಲುವ ಸೇವಕಿಯ ಪಾತ್ರವನ್ನು ನಿರ್ವಹಿಸಿ ಕೊಂಚ ಗ್ಯಾಪ್ ನಲ್ಲಿಯೇ ಟಗರು ಚಾನ್ಸ್ ಪಡೆದುಕೊಂಡಳು.
ಟಗರು ಸಿನಿಮಾದಲ್ಲಿ ಕಾನ್ ಸ್ಟೇಬಲ್ ಸರೋಜ ಆಗಿ ಫೇಮಸ್ ಆಗಿದ್ದ ತ್ರಿವೇಣಿ ಚಿತ್ರದ ಯಶಸ್ಸಿನ ನಂತರ ಭಾರಿ ಅವಕಾಶಗಳ ಸುರಿಮಳೆಯೇ ಆಗಬಹುದೆಂಬ ನಿರೀಕ್ಷೆಯಲ್ಲಿದ್ದಳು. ಆದರೆ ಪಾಪ.. ಆಕೆಗೆ ಹೇಳಿಕೊಳ್ಳುವಂತಹ ಅವಕಾಶಗಳೇನು ಬರಲಿಲ್ಲ. ಸಿಕ್ಕ ಅವಕಾಶಗಳಲ್ಲೇ ತೃಪ್ತಿ ಪಡುವ ಹಾಗಾಯಿತು. ಯಾವಾಗ ಅವಕಾಶಗಳ ಕೊರತೆ ಕಂಡುಬಂತೋ ಆಕೆಗೆ ಫೇಮಸ್ ಆಗಲೇಬೇಕೆಂಬ ಉಮೇದು ಹೆಚ್ಚಾಗಿ ಹೋಗಿತ್ತು. ಯಾವ ರೀತಿಯ ಪಾತ್ರದಿಂದಲಾದರೂ ತಾನು ಸೋಶಿಯಲ್ ಮೀಡಿಯಾದಲ್ಲಿ ರಾರಾಜಿಸಬೇಕೆಂಬ ಕನಸು ಕಾಣತೊಡಗಿದಳು. ಆ ಕಾರಣಕ್ಕಾಗಿ ದೆವ್ವ ಬಂದಂತೆ ಡವ್ ಮಾಡುವ ಮೂಲಕ ತ್ರಿವೇಣಿ ರಾವ್ ಸದ್ಯ ಸುದ್ದಿಯಾಗಿಬಿಟ್ಟಿದ್ದಾರೆ.
ಸರೋಜ ಇತ್ತೀಚಿಗೆ ಅಲ್ಲೆ ಡ್ರಾ ಅಲ್ಲೆ ಬಹುಮಾನ ಎನ್ನುವ ಹಾರರ್ ಸಿನಿಮಾದಲ್ಲಿ ನಟಿಸುತ್ತಿದ್ದಳು. ಚಿತ್ರದಲ್ಲಿ ಆಕೆ ಹಾರರ್ ಶೇಡಿನ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾಳಂತೆ. ಬೆಂಗಳೂರಿನಲ್ಲಿ ದ್ವಿತೀಯ ಹಂತದ ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಚಿತ್ರೀಕರಣವನ್ನು ಸಕಲೇಶಪುರದ ಕಾಡಿನಲ್ಲಿ ಸರಾಗವಾಗಿಯೇ ನಡೆಸಲಾಗುತ್ತಿತ್ತು. ಪಾಪ ಸರೋಜಾಳಿಗೆ ಹಠಾತ್ ಏನಾಯಿತೋ ಪಾತ್ರದಲ್ಲಿದ್ದ ಆಕೆ ಕುಸಿದು ಬಿದ್ದು, ಬಾಯಿಗೆ ಬಂದಂತೆ ಬಡಬಡಿಸಲು ಪ್ರಾರಂಭಿಸಿದ್ದಾಳೆ. ಶೂಟಿಂಗ್ ನಲ್ಲಿ ನೆರೆದಿದ್ದ ಮಂದಿಯೆಲ್ಲಾ ಆಕೆಗೆ ಏನೋ ಮೆಟ್ಟಿಕೊಂಡಿದೆ ಎಂಬಂತೆ ರಿಯಾಕ್ಟ್ ಮಾಡಲು ಪ್ರಾರಂಭಿಸಿದರು. ಯಾವಾಗ ಅವರ ರಿಯಾಕ್ಷನ್ ಗಳು ಅತಿಯಾಗಿ ಹೋಯಿತು. ಸರೋಜಾಳ ಆ್ಯಕ್ಷನ್ ಕೂಡ ಹೆಚ್ಚಾಗಿಬಿಟ್ಟಿತು. ಆಕೆ ಅನ್ ಕಾನ್ಸಿಯಸ್ ಆಗಿ ಕರೆಯಲ್ಲಿದ್ದವರ ಜತೆ ಮಾತನಾಡುವುದೇನೂ? ಕರೆಯಲಿದ್ದವರೂ ಆಕೆಗೆ ಛೇಡಿಸುವುದೇನು? ಆಕೆಯ ಆಸೆಯನ್ನು ಕೇಳುವುದೇನೋ? ಪ್ರೊಡಕ್ಷನ್ ಬಾಯ್ಸ್ ಆಕೆಗೆ ಅರಿಶಿಣ ತೀಡುವುದೇನು? ಕುಂಕುಮ ಹಚ್ಚುವುದೇನು? ಮಲಯಾಳಂ ಹಾರರ್ ಪಿಕ್ಚರ್ ಗಳನ್ನೇ ಹೆಚ್ಚಾಗಿ ನೋಡಿರುವ ಪುಣ್ಯಾತ್ಮನೊಬ್ಬ ಆಕೆಯ ಹಣೆಯನ್ನು ಗಟ್ಟಿಯಾಗಿ ಅಮುಕುವುದೇನು. ಇನ್ಯಾರೋ ಆಕೆಯ ಮುಖಕ್ಕೆ ನೀರು ರಾಚುವುದೇನು.. ನೋಡುಗರಿಗೆ ಅದೊಂದು ದೊಂಬರಾಟದಂತೆ, ಆಕೆ ಮಹಾನ್ ಡವ್ ರಾಣಿಯಂತೆ ಕಂಡಿದ್ದಂತು ಅಕ್ಷರಶಃ ಸತ್ಯವೇ. ಈ ಸೀನನ್ನು ಮಕ್ಕಳೇನಾದರೂ ಹತ್ತಿರದಿಂದೇನಾದರೂ ನೋಡಿ ಬಿಟ್ಟಿದ್ದರೆ ಹೆದರುವುದಿರಲಿ ಬಾರದ ಕಡೆಗಳಿಂದಲ್ಲೆಲ್ಲಾ ಸಂತೋಷ ಉಕ್ಕಿ ಬಿದ್ದು ಬಿದ್ದು ನಗುತ್ತಿದ್ದರು. ಇರಲಿ ಮಾಡಿದವರ ಪಾಪ ಆಡಿದವರ ಬಾಯಿಗೆ.
ಶೂಟಿಂಗ್ ನಲ್ಲಿ ಯಾಕಮ್ಮ ಹಾಗ್ ಆಡ್ತಿದ್ದೇ ಅಂತ ಸರೋಜಾಳನ್ನು ಕೇಳಿದ್ದಕ್ಕೆ ಅದು.. ನಾನು ಆ ಸಿನಿಮಾದಲ್ಲಿ ಹಾರರ್ ಶೇಡಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಮಾಡುತ್ತಲೇ ನಾನು ಆ ಪಾತ್ರವನ್ನು ಆವಾಯಿಸಿಕೊಂಡು ಅನ್ ಕಾನ್ಸಿಯಸ್ ಆಗಿಬಿಟ್ಟೆ. ಅದಾದ ಮೇಲೆ ಏನಾಯ್ತೋ ನನಗೆ ಗೊತ್ತಿಲ್ಲ. ಎಚ್ಚರ ವಾದಾಗ ದೇವಸ್ಥಾನದಲ್ಲಿದ್ದೆ ಎಂದು ನವರಂಗಿ ನಾಟಕ ಆಡ್ತಾಳೆ ಸರೋಜಕ್ಕ. ಹಾರರ್ ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗಿರಬೇಕು. ಜನರನ್ನು ಅಡ್ಡದಾರಿಗೆ ಎಳೆಯುವ, ದಾರಿತಪ್ಪಿಸುವ, ಮೂಡನಂಬಿಕೆಯನ್ನು ಬಿತ್ತುವ ಕೆಲಸವನ್ನು ದೃಶ್ಯ ಮಾಧ್ಯಮಗಳು, ಸಿನಿಮಾಗಳು ಮಾಡಲೇಬಾರದು. ಕೇವಲ ಪ್ರಚಾರದ ರೇಸಿಗೆ ಬಿದ್ದು ಇಂತಹ ಚೀಪ್ ಟ್ರಿಕ್ಸ್ ಗಳನ್ನು ಯೂಸ್ ಮಾಡಿ ಗೆಲ್ಲಬೇಕೆಂದು ಹವಣಿಸುವ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಕಾಣುತ್ತವೆ ಎಂಬ ತಿರುಕನ ಕನಸನ್ನು ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಇಟ್ಟುಕೊಂಡದ್ದೇ ಆದಲ್ಲಿ ಗೋವಿಂದ ಗೋವಿಂದ….
No Comment! Be the first one.