ಈ ಚಿತ್ರವನ್ನು ನೋಡಿದ ಯಾರಿಗೇ ಆದರೂ ಇದು ನಿರ್ದೇಶಕನ ಮೊದಲ ಸಿನಿಮಾ ಅಂತಾ ಅನ್ನಿಸುವುದಿಲ್ಲ. ಒಂದು ಹಳ್ಳಿ, ಅದರಾಚೆಗೊಂದು ತೋಟ, ಅಲ್ಲಿ ನಡೆಯುವ ಕೊಲೆ. ಆ ಕೊಲೆ ಸೃಷ್ಟಿಸುವ ಅವಾಂತರಗಳ ಸುತ್ತಾ ಬಿಗಿಯಾದ ಕಥೆಯನ್ನು ಕಟ್ಟಿ, ಸಿನಿಮಾ ರೂಪದಲ್ಲಿ ತೆರೆದಿಟ್ಟಿದ್ದಾರೆ ನಿರ್ದೇಶಕ ಕೃಪಾಸಾಗರ್.
ನಾಲ್ಕು ಜನ ಹುಡುಗರು, ಅವರ ಸುತ್ತಲಿನ ಪ್ರೇಮ ಪ್ರಕರಣಗಳು, ಹಳ್ಳಿಯ ವೈವಿದ್ಯಮಯ ಪರಿಸರ, ಹೆತ್ತವರ ಸೆಂಟಿಮೆಂಟು, ತಳಮಳಗಳು, ಕೊಲೆಯೊಂದರ ಸುತ್ತ ಹರಡಿಕೊಳ್ಳುವ ಗೊಂದಲ… ಹೀಗೆ ಸಾಕಷ್ಟು ಎಲಿಮೆಂಟುಗಳನ್ನಿಟ್ಟುಕೊಂಡು ಒಂದೇ ಹಿಡಿಯಲ್ಲಿ ಸಿನಿಮಾವನ್ನು ಕಟ್ಟಿಕೊಡುವುದು ಕಷ್ಟದ ಕೆಲಸ ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಕೃಪಾಸಾಗರ್ ಗೆದ್ದಿದ್ದಾರೆ.


ಹಳ್ಳಿಯಲ್ಲಿನ ನಾಲ್ಕು ಜನ ಹುಡುಗರಿಗೆ ಪ್ರತ್ಯೇಕವಾದ ಲವ್ ಟ್ರ್ಯಾಕ್ ಇರುತ್ತದೆ. ಇದು ಲವ್ ಜಾನರಿನ ಸಿನಿಮಾವಾ ಅಂದುಕೊಳ್ಳುವಷ್ಟರಲ್ಲಿ ಕತೆ ನಾಜೂಕಾಗಿ ಕ್ರೈ ಥ್ರಿಲ್ಲರಿನ ಕಡೆಗೆ ಹೊರಳಿಕೊಳ್ಳುತ್ತದೆ. ಈ ಹುಡುಗರ ಗುಂಪಿನಲ್ಲೊಬ್ಬ ಪರಮ ಸೋಮಾರಿ. ಇಂಥವನಿಗೆ ಪ್ರೀತಿಸಿದವಳ ಜೊತೆಗೆ ಮದುವೆಯೂ ನಡೆದುಹೋಗುತ್ತದೆ. ಯಾಕಾದರೂ ಈತನ ಸಾವಾಸ ಮಾಡಿದೆನೋ ಅನ್ನುವಷ್ಟರ ಮಟ್ಟಿಗೆ ಹುಡುಗನ ಉಡಾಳತನವಿರುತ್ತದೆ. ಈ ಹೊತ್ತಿನಲ್ಲೇ ತೋಟದಲ್ಲಿ ಘಟಿಸುವ ಕೊಲೆಯೊಂದರ ಆರೋಪ ಈತನ ಹೆಗಲೇರುತ್ತದೆ. ಅಸಲಿಗೆ ಕೊಲೆಗೂ ಈತನಿಗೂ ಏನು ಸಂಬಂಧ? ಅಷ್ಟಕ್ಕೂ ಇದು ಸುಪಾರಿ ಕೊಲೆಯಾ? ಈ ಕೊಲೆಯ ಹಿಂದಿನ ಅಸಲಿ ಕೈಗಳು ಯಾವುವು ಎಂಬುದನ್ನೆಲ್ಲಾ ಕುತೂಹಲದಂತೆ ಉಳಿಸಿಕೊಂಡು ಕಡೇ ದೃಶ್ಯದ ತನಕ ತವಕ ಹುಟ್ಟಿಸಲಾಗಿದೆ.


ರಂಗಭೂಮಿ ಹಿನ್ನೆಲೆಯ ಮದನ್ ರಾಜ್ ಅಮೋಘವಾಗಿ ನಟಿಸಿದ್ದಾರೆ. ನಾಯಕಿ ಅಮೃತಾ ಕೂಡಾ ಕಾಡುವಂತಾ ಪಾತ್ರ ನಿಭಾಯಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್ ಪಂಡಿಂತ್ ಬೇರೆಯದ್ದೇ ರೀತಿಯಲ್ಲಿ ಅಭಿನಯಿಸಿ ಗಮನಸೆಳೆಯುತ್ತಾರೆ. ಚಿತ್ರದಲ್ಲಿ ಬರುವ ಯಾವ ದೃಶ್ಯವೂ ಅನವಶ್ಯಕ ಎನ್ನುವಂತಿಲ್ಲ. ಪ್ರತಿಯೊಂದು ಪಾತ್ರ, ಸನ್ನಿವೇಶವೂ ಕಥೆಗೆ ಪೂರಕವಾಗೇ ಇರೋದು ‘ಸಾರ್ವಜನಿಕರಲ್ಲಿ ವಿನಂತಿ’ಯ ಪ್ಲಸ್ ಪಾಯಿಂಟ್. ಪಿ.ಜೆ. ಅನಿಲ್ ಹಿನ್ನೆಲೆ ಸಂಗೀತ ಮತ್ತು ಅನಿಲ್ ಕುಮಾರ್ ಕೆ ಅವರ ಛಾಯಾಗ್ರಹಣ ಸಿನಿಮಾದ ಶಕ್ತಿಯನ್ನು ಹೆಚ್ಚಿಸಿವೆ.
ಅಕ್ಕಪಕ್ಕದ ರಾಜ್ಯಗಳಲ್ಲಿ ಇಂಥಾ ಸಿನಿಮಾಗಳು ಬಂದಾಗ ಹೊಗಳಿ ಮೆರವಣಿಗೆ ಮಾಡೋ ನಾವು ಒಮ್ಮೆಯಾದರೂ ನೋಡಬೇಕು ಅನ್ನೋದು ‘ಸಾರ್ವ ಜನಿಕರಲ್ಲಿ ವಿನಂತಿ’!

CG ARUN

ಅಲ್ಲಾಡಿಸುವ ಹಾಡು ಕೇಳಿ ಅಮೆರಿಕಾ ಅದುರಿತು!

Previous article

ರುಸ್ತುಂ ಬಗ್ಗೆ ಶಿವಣ್ಣ ಏನಂದ್ರು ಗೊತ್ತಾ?

Next article

You may also like

Comments

Leave a reply

Your email address will not be published. Required fields are marked *