ನಿರ್ಮಾಣ : ದೇವರಾಜ ಆರ್, ಪ್ರಶಾಂತ್ ರೆಡ್ಡಿ, ಜನಾರ್ದನ ಚಿಕ್ಕಣ್ಣ
ನಿರ್ದೇಶನ : ಅನೂಪ್ ರಾಮಸ್ವಾಮಿ ಕಷ್ಯಪ್
ತಾರಾಗಣ : ರಿಷಿ, ಧನ್ಯಾ, ರಂಗಾಯಣ ರಘು, ದತ್ತಣ್ಣ, ಮಿತ್ರ, ಸಿದ್ದು ಮೂಲಿಮನೆ,
ಆ ಹುಡುಗಿಯ ಹುಟ್ಟಿದ ಹಬ್ಬದ ಕೊಡುಗೆಯಾಗಿ ಆಕೆಯ ತಾಯಿ ಒಂದು ಚೈನು ಕೊಡಿಸಿರುತ್ತಾಳೆ. ಅದ್ಯಾವುದೋ ಘಳಿಗೆಯಲ್ಲಿ ಅದು ಕಳೆದುಹೋಗುತ್ತದೆ. ಆ ಚೈನು ಆಕೆಗೆ ಬೇಕೇಬೇಕು. ಕಳೆದುಹೋದ ಚೈನಿನ ತಲೆಮೇಲೆ ಹೊಡೆದಂತೆ ಮತ್ತೊಂದು ಚೈನು ತಂದುಕೊಡುವ ಟಾಸ್ಕು ಹೀರೋ ಹೆಗಲಿಗೆ ತಗುಲಿಕೊಳ್ಳುತ್ತದೆ. ಪ್ರೀತಿಸೋ ಹುಡುಗಿಗಾಗಿ ಅಷ್ಟೂ ಮಾಡದಿದ್ದರೆ ಹೇಗೆ? ಅದೂ ‘ನಾನು ತಂದುಕೊಟ್ಟೇ ಕೊಡ್ತೀನಿ. ನನ್ನನ್ನು ನಂಬ್ತೀಯ ತಾನೆ? ಅಂತಾ ಹೇಳಿರುತ್ತಾನೆ. ಅದಕ್ಕೆ ಅವಳು ‘ನಿನ್ನನ್ನು ನಂಬದೆ ಇನ್ಯಾರನ್ನು ನಂಬಲಿ ಅಂದುಬಿಟ್ಟಿರುತ್ತಾಳೆ. ತನ್ನ ಹುಡುಗಿಯ ನಂಬಿಕೆ ಉಳಿಸಿಕೊಳ್ಳಲು ಮೂರು ಗಂಟೆಯಲ್ಲಿ ಚೈನು ತಂದುಕೊಡ್ತೀನಿ ಅಂತಾ ಪ್ರಾಮಿಸ್ ಮಾಡಿ ಹೊರಡುತ್ತಾನೆ ಹೀರೋ. ಅಲ್ಲಿಂದ ಶುರುವಾಗುತ್ತದೆ ಅಸಲೀ ಕತೆ…

ಸರ ಕಳೆದುಕೊಂಡು ಕಂಗಾಲಾದ ಹುಡುಗಿಯ ಸಮಾಧಾನಕ್ಕಾಗಿ ಹೇಳಿದಷ್ಟು ಸಲೀಸಾಗಿ ಚೈನು ತರಲು ಸಾಧ್ಯವಾ? ಚೈನು ತರಲು ಹೊರಟವನ ಎದುರಿಗೆ ಬಂದು ನಿಲ್ಲುವ ಸವಾಲುಗಳು ಏನೇನು? ಎಂತೆಂಥಾ ಇಕ್ಕಟ್ಟುಗಳಲ್ಲಿ ಸಿಲುಕಬೇಕಾಗುತ್ತದೆ? ಈ ಹಾದಿಯಲ್ಲಿ ಯಾರೆಲ್ಲಾ ಜೊತೆಯಾಗುತ್ತಾರೆ? ಕಡೆಗೂ ಹುಗಿಯ ಕೈಗೆ ಚೈನು ತಂದು ಕೊಡಲು ಸಾಧ್ಯವಾಗುತ್ತದಾ? ಇಲ್ಲವಾ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವನ್ನೊಮ್ಮೆ ನೋಡಲೇಬೇಕು.
ಮುದ್ದು ಜೋಡಿಗಳ ಪ್ರೀತಿ, ಸಣ್ಣದೊಂದು ಘಟನೆ, ಚೈನು ಮಿಸ್ಸಿಂಗ್… ಹೀಗೆ ಶುರುವಾಗುವ ಚಿತ್ರವನ್ನು ಮಧ್ಯಮವರ್ಗದ ಜನರ ಬವಣೆ, ಭಾವನೆಗಳ ತೊಳಲಾಟ, ದಿಢೀರ್ ಶ್ರೀಮಂತಿಕೆ ಹೊಂದಲು ಹುಡುಕಿಕೊಳ್ಳುವ ಮಾರ್ಗ, ಸೋಲು, ಹತಾಷೆ, ದುಃಖ ಇವೆಲ್ಲದರ ಜೊತೆ ಭರಪೂರ ಹಾಸ್ಯದೊಂದಿಗೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ದಂಧೆ ಕೂಡಾ ಈ ಸಿನಿಮಾದಲ್ಲಿ ಪ್ರಧಾನವಾಗಿ ಸುಳಿದುಹೋಗುತ್ತದೆ. ಆದರೆ ಅದು ಇನ್ನೊಂಚೂರು ಟ್ರಿಮ್ ಆಗಿದ್ದಿದ್ದರೆ ಇನ್ನೂ ಚೆಂದ ಇರುತ್ತಿತ್ತು. ರಿಷಿ ಗಂಭೀರವಾದ ರೋಲುಗಳ ಜೊತೆಗೆ ಹಾಸ್ಯವನ್ನು ಹೊರಹೊಮ್ಮಿಸಬಲ್ಲ ಅಪರೂಪದ ಚಾಲಾಕಿತನ ಕೂಡಾ ಹೊಂದಿದ್ದಾರೆ. ಇಷ್ಟು ದಿನ ರಿಷಿಯ ಡ್ಯಾನ್ಸು ಫೈಟು ಯಾರಾದರೂ ನೋಡದೇ ಇದ್ದರೆ, ಮಜಬೂತಾದ ಕುಣಿತ, ಹೊಡೆದಾಟ, ಚೇಸಿಂಗನ್ನು ನೋಡುವ ಸುವರ್ಣಾವಕಾಶ ಪ್ರೇಕ್ಷಕರಿಗೆ ಇಲ್ಲಿ ದೊರೆತಿದೆ!

ಮೈತುಂಬಾ ಸಾಲವಿದ್ದರೂ, ಟೆನ್ಷನ್ನು ತೆಗೆದುಕೊಳ್ಳದ ತಂದೆಯಾಗಿ ದತ್ತಣ್ಣನ ಅಭಿನಯ ನಿಜಕ್ಕೂ ಮನೋಜ್ಞ. ಸಿಂಗಲ್ ಹ್ಯಾಂಡ್ ಶಿವನಾಗಿ ರಂಗಾಯಣ ರಘು ಇಷ್ಟವಾಗುತ್ತಾರೆ. ಯೇಸಪ್ಪನಾಗಿ ನಟ ಮಿತ್ರ ಸಾಕುಸಾಕೆನ್ನುವಷ್ಟು ನಗಿಸುತ್ತಾರೆ. ಧನ್ಯಾ ಬಾಲಕೃಷ್ಣ ರಿಷಿಗೆ ಹೇಳಿಮಾಡಿಸಿದಂತಾ ಜೋಡಿಯಾಗಿದ್ದಾರೆ. ಸಿದ್ದು ಮೂಲಿ ಮನಿ ಸೇರಿದಂತೆ ಎಲ್ಲ ಕಲಾವಿದರೂ ಅಚ್ಚುಕಟ್ಟಾಗಿ ಪತ್ರ ಪೋಷಣೆ ಮಾಡಿದ್ದಾರೆ. ಮಿಧುನ್ ಮುಕುಂದನ್ ಸಂಗೀತದ ಹಾಡಿನ ಫ್ಲೇವರು ಘಮ್ಮೆನ್ನುತ್ತವೆ. ಛಾಯಾಗ್ರಾಹಕ ವಿಘ್ನೇಶ್ ಕೂಡಾ ಒಂದಷ್ಟು ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದಿದ್ದಾರೆ.
ಜನಾರ್ದನ ಚಿಕ್ಕಣ್ಣ ಅವರ ಚೆಂದದ ಕಥೆಗೆ ಅನೂಪ್ ರಾಮಸ್ವಾಮಿ ಕಷ್ಯಪ್ ನಿರ್ದೇಶನ ನ್ಯಾಯ ಒದಗಿಸಿದೆ. ಅದಕ್ಕೆ ಮಿಕ್ಕೆಲ್ಲಾ ಪಾತ್ರಗಳು ಸಾಥ್ ಕೊಟ್ಟಿವೆ. ಸಾಕಷ್ಟು ತಿರುವುಗಳು, ಸೆಂಟಿಮೆಂಟು, ಕಾಮಿಡಿಯ ಮೂಲಕ ನೋಡುಗರ ಮನಸ್ಸು ಗೆಲ್ಲುವ ಈ ಚಿತ್ರ ನಿಜಕ್ಕೂ ಕನ್ನಡದ ಪ್ರೇಕ್ಷಕರ ಪಾಲಿಗೆ ಸುವರ್ಣಾವಕಾಶದಂತೆ ಮೂಡಿದೆ. ಮಿಸ್ ಮಾಡದೇ ಮನೆಮಂದಿಯೆಲ್ಲಾ ಹೋಗಿ ಒಮ್ಮೆ ನೋಡಿಬನ್ನಿ!
No Comment! Be the first one.