ತೀರಾ ಸಣ್ಣ ವಯಸ್ಸಿಗೇ ನಿರ್ದೇಶಕ ಅನ್ನಿಸಿಕೊಂಡವರು ಲೋಹಿತ್. ಮಮ್ಮಿ ಮತ್ತು ದೇವಕಿ ಎನ್ನುವ ಎರಡು ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಚುರುಕು ಸ್ವಭಾವ, ಲವಲವಿಕೆ, ಕ್ರಿಯಾಶೀಲತೆ, ಸ್ನೇಹಶೀಲ ಗುಣದಿಂದ ಸಿನಿಮಾರಂಗದ ಎಲ್ಲರಿಗೂ ಪರಿಚಯವಿರುವ ಲೋಹಿತ್ ಈಗ ದೊಡ್ಡ ಆಟಕ್ಕೆ ರೆಡಿಯಾಗಿದ್ದಾರೆ!
ಕನ್ನಡದಲ್ಲಿ ನಿರ್ದೇಶಕರಾಗಿ ಬರುವ ಯಾರಿಗೇ ಆದರೂ ಒಂದು ಕನಸಿರುತ್ತದೆ. ನೀವು ಯಾರ ಜೊತೆ ಸಿನಿಮಾ ಮಾಡಬೇಕು ಅನ್ನುತ್ತಿದ್ದಂತೇ ʻಶಿವಣ್ಣನ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಸಾಕುʼ ಅನ್ನುತ್ತಾರೆ. ಆದರೆ ಸ್ವತಃ ಶಿವಣ್ಣನೇ ಕರೆದು ನನಗೆ ಕಥೆ ಇಷ್ಟವಾಗಿದೆ ಸಿನಿಮಾ ಮಾಡಿ ಅಂದರೆ ಹೇಗಿರುತ್ತೆ? ಲೋಹಿತ್ ಅದೃಷ್ಟವೋ? ಅವರ ಕ್ರಿಯೇಟಿವಿಟಿಗೆ ಸಿಕ್ಕ ಗೌರವವೋ ಗೊತ್ತಿಲ್ಲ. ಹ್ಯಾಟ್ರಿಕ್ ಹೀರೋ ಸಿನಿಮಾವನ್ನು ಡೈರೆಕ್ಟ್ ಮಾಡುವ ಛಾನ್ಸಂತೂ ಇವರಿಗೆ ದಕ್ಕಿದೆ.
ಸತ್ಯಮಂಗಳದ ದಾರಿ ಶುರು… ʻʻಸದ್ಯ ನನ್ನ ನಿರ್ಮಾಣದಲ್ಲಿ ಬೈರಾಗಿ ಚಿತ್ರ ನಡೀತಿದೆ. ನಾನು ಲೋಹಿತ್ ಜೊತೆ ಕತೆಗಳ ಬಗ್ಗೆ ಸಾಕಷ್ಟು ಡಿಸ್ಕಸ್ ಮಾಡ್ತಾ ಇರ್ತೀನಿ. ಇದೊಂದು ಲೈನ್ ಹೇಳಿದ್ರು. ತುಂಬಾ ಇಂಪ್ರೆಸ್ ಆಗಿತ್ತು. ಶಿವಣ್ಣ ಅವರ ಜೊತೆ ಒಂದ್ಸಲ ಮಾತಾಡುವಾಗ, ಲೋಹಿತ್ ಹೇಳಿದ್ದ ಎಳೆಯನ್ನು ಹಾಗೇ ಹೇಳಿದ್ದೆ. ಅದನ್ನು ಕೇಳಿದ ಶಿವಣ್ಣ ತುಂಬಾನೇ ಚನ್ನಾಗಿದೆ. ನಾವೇ ಮಾಡೋಣ. ಡೈರೆಕ್ಟರನ್ನು ಕರೆಸಿ ಅಂದಿದ್ದರು. ಲೋಹಿತ್ ಬಂದು ಒಂದು ಎಳೆ ಹೇಳಿದ್ದರು. ಮತ್ತೆ ಎರಡು-ಮೂರು ತಿಂಗಳು ಸಮಯ ತೆಗೆದುಕೊಂಡು ಕಂಪ್ಲೀಟ್ ಸ್ಕ್ರಿಪ್ಟ್ ಅನ್ನು ಶಿವಣ್ಣನಿಗೆ ಹೇಳಿದ್ರು. ಈ ಸಂದರ್ಭದಲ್ಲಿ ಸ್ವತಃ ಶಿವಣ್ಣ ಈ ಸಿನಿಮಾವನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಅನೌನ್ಸ್ ಮಾಡಿ ಅಂತಾ ಗ್ರೀನ್ ಸಿಗ್ನಲ್ ಕೊಟ್ಟರು. ಪ್ರಸೆಂಟ್ ಒಂದು ಸಿನಿಮಾ ರನ್ನಿಂಗಲ್ಲಿ ಇರೋದರಿಂದ, ಇದು ಮುಗಿಯುತ್ತಿದ್ದಂತೇ ಅದನ್ನು ಶುರು ಮಾಡೋಣ ಅಂತಾ ಇದ್ದೀವಿ. ಶಿವಣ್ಣನ ನೂರಿಪ್ಪತ್ತೈದು ಸಿನಿಮಾಗಳಲ್ಲಿ ಏನಿಲ್ಲ ಅನ್ನೋದನ್ನು ಗುರುತಿಸಿ ಬೈರಾಗಿ ಮಾಡ್ತಿರೋದು. ಈಗ ಅದನ್ನೂ ಹೊರತುಪಡಿಸಿ ಮತ್ತೊಂದು ಹೊಸತನ್ನು ಸೃಷ್ಟಿ ಮಾಡಬೇಕು ಅಂತಾ ಅಂದುಕೊಂಡಾಗ ಜೀವ ಪಡೆದದ್ದು ʻಸತ್ಯಮಂಗಳʼ. ತುಂಬಾ ವೇಗವಾದ ಸ್ಕ್ರೀನ್ ಪ್ಲೇ ಈ ಸಿನಿಮಾದಲ್ಲಿ ಇದೆ. ಅತ್ಯದ್ಭುತ ಎನ್ನುವಂತಾ ಆಕ್ಷನ್, ಮನಮಿಡಿಯುವ ಸೆಂಟಿಮೆಂಟ್ ಎಲ್ಲವನ್ನೂ ಸೇರಿಸಿ ಹೆಣೆದಿರುವ ಕಥೆ ʻಸತ್ಯಮಂಗಳʼದಲ್ಲಿದೆ. ಇಂತಾ ತೂಕದ ಕತೆಯ ಸಿನಿಮಾವನ್ನು ನಿರ್ಮಿಸಲು ನಿಜಕ್ಕೂ ಖುಷಿ ಅನ್ನಿಸುತ್ತೆ.ʼʼ
– ಇದು ನಿರ್ಮಾಪಕ ಕೃಷ್ಣ ಸಾರ್ಥಕ್ ಮಾತುಗಳು. ಈ ಹಿಂದೆ ದಯವಿಟ್ಟು ಗಮನಿಸಿ ಎನ್ನುವ ಚೆಂದದ ಸಿನಿಮಾ ನಿರ್ಮಿಸಿದ್ದವರೂ ಇವರೇ. ಈಗ ಬೈರಾಗಿ ಮೇಲೆ ಹಣ ಹೂಡಿರುವ ಕೃಷ್ಣ ಸಾರ್ಥಕ್ ʻಸತ್ಯಮಂಗಳʼಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜಿಸಲಿದ್ದಾರೆ.
ಹೆಸರೇ ಸೂಚಿಸುವಂತೆ ಕಾಡು ಈ ಚಿತ್ರದಲ್ಲಿ ಪ್ರಧಾನ ಪಾತ್ರ ವಹಿಸಲಿದೆ. ಈಗಷ್ಟೇ ಚಿತ್ರದ ಟೈಟಲ್ ಪೋಸ್ಟರ್ ಕೂಡಾ ಅನಾವರಣಗೊಂಡಿದೆ. ದಟ್ಟ ಅಡವಿಯ ನಡುವಿನಿಂದ ನಡೆದು ಬರುತ್ತಿರುವ ಪ್ಯಾಂಥರ್. ಹಸಿರಿನ ನಡುವೆ ಶೀರ್ಷಿಕೆಯ ವಿನ್ಯಾಸವೇ ವಂಡರ್ ಸೃಷ್ಟಿಸಿದೆ. ಇನ್ನು ಈ ಸಿನಿಮಾದ ಕುರಿತಾಗಿ ಹಂತಹಂತವಾಗಿ ಕೌತುಕದ ವಿಚಾರಗಳು ಹೊರಬರಲಿದೆ….