ಕಾವೇರಿ ವಿವಾದ ತಾರಕಕ್ಕೇರಿದ್ದ ಸಂದರ್ಭದಲ್ಲಿ ಉಗ್ರ ತಮಿಳನಂತೆ ಕನ್ನಡಿಗರ ವಿರುದ್ಧ ಕೆಂಡ ಕಾರಿದ್ದವರು ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್. ಕನ್ನಡಿಗರ ವಿರುದ್ಧ ಈತ ಮಾತಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕನ್ನಡಿಗರೆಲ್ಲ ಈತನಿಗೆ ಉಗಿದಿದ್ದರು. ಆದರೆ ಉಗ್ರ ತಮಿಳು ಭಾಷಾಭಿಮಾನ ಹೊಂದಿರೋ ಕಟ್ಟಪ್ಪ ಈಗ ಭಾರತವನ್ನು ಕೊರೆದು ತಿನ್ನುತ್ತಿರೋ ಜಾತಿವಾದದ ಬಗ್ಗೆ ಸ್ಪಷ್ಟವಾದ ಮಾತಾಡಿದ್ದಾರೆ. ಜಾತಿ ವ್ಯವಸ್ಥೆಯ ಬಗೆಗಿನ ಸೂಕ್ಷ್ಮ ಒಳನೋಟಗಳಿರೋ ಸತ್ಯರಾಜ್ ಅವರ ಮಾತಿನ ವೀಡಿಯೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಕನ್ನಡ ವಿರೋಧಿಯೆಂದು ಬ್ರ್ಯಾಂಡ್ ಆಗಿದ್ದ ಸತ್ಯರಾಜ್ ಅವರ ಪ್ರೌಢಿಮೆಯ ಬಗೆಗೆ ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
ಶೃತಿ ಟಿವಿ ಪ್ರಸಾರ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿದೆ. ಜಾತಿ ವ್ಯವಸ್ಥೆಯ ಕರಾಳತೆಯ ಬಗ್ಗೆ ಸತ್ಯರಾಜ್ ತಮ್ಮ ಮಾತುಗಳಲ್ಲಿ ಬಿಚ್ಚಿಟ್ಟಿದ್ದಾರೆ. `ಇಂಡಿಯಾ ದೇಶದಲ್ಲಿ ಜಾತಿ ಎನ್ನುವುದು ಇನ್ನೂ ಇದೆಯೇ ಎಂದು ಹಲವಾರು ಜನರು ಕೇಳುತ್ತಾರೆ. ಇವರಿಗೆ ನಾನು ಒಂದೇ ಒಂದು ಮಾತು ಹೇಳುತ್ತೇನೆ. ಲೈಲಾ-ಮಜ್ನು ಪ್ರೀತಿಯ ಕತೆ ಇದೆ, ಅದರಲ್ಲಿ ಲೈಲಾಳನ್ನು ಮಜ್ನು ಜೀವಕ್ಕಿಂತ ಪ್ರೀತಿಸುವ ದೃಶ್ಯ ಬರುತ್ತದೆ. ಅದಕ್ಕೆ ಹಲವಾರು ಬಿಲ್ಡಪ್ ಗಳನ್ನು ನೀಡಲಾಗುತ್ತದೆ. ಇದನ್ನು ನೋಡಿದವರು ಹೇಳುತ್ತಾರೆ, ಮಜ್ನು ಹೇಳಿದಷ್ಟು ಲೈಲಾ ಚೆನ್ನಾಗಿಲ್ವಲ್ಲಾ ಎಂದು. ನೀವು ಲೈಲಾಳ ಚಂದವನ್ನು ಮಜ್ನು ಕಣ್ಣಲ್ಲಿ ನೋಡಿದರೆ ಮಾತ್ರ ನಿಮಗೆ ಲೈಲಾಳ ಚಂದ ಕಾಣಿಸಲು ಸಾಧ್ಯ. ಹಾಗೆಯೇ ಇಂಡಿಯಾದಲ್ಲಿನ ಜಾತಿ ವ್ಯವಸ್ಥೆಯನ್ನು ತಿಳಿದುಕೊಳ್ಳುವುದಕ್ಕೆ, ಅನುಭವಿಸುವುದಕ್ಕೆ ನಿಮಗೆ ಅಂಬೇಡ್ಕರ್ ಅವರ ಕಣ್ಣಿನಿಂದ ನೋಡಿದರೆ ಮಾತ್ರ ಸಾಧ್ಯ. ನೀವು ನಿಮ್ಮ ಕಣ್ಣಿನಿಂದ ನೋಡಿದರೆ ನಿಮಗೆ ತಿಳಿಯಲು ಸಾಧ್ಯವಿಲ್ಲ. ಯಾಕೆಂದರೆ, ನೀವು ಆರಾಮದಲ್ಲಿರುತ್ತೀರಿ, ಇಂತಹದ್ದನ್ನು ನೀವು ಅನುಭವಿಸಿರುವುದಿಲ್ಲವಲ್ಲ’.
ನಾವು ಮಲ ಪರೀಕ್ಷೆಯನ್ನು ಮಾಡಬೇಕಾದರೆ, ಡಾಕ್ಟರ್ ಗೆ ಅದನ್ನು ಹೇಗೆ ನೀಡುವುದು ಎಂದು ಹಿಂದಿನ ದಿನವೇ ಬಹಳಷ್ಟು ಯೋಚನೆ ಮಾಡುತ್ತೇವೆ. ಹಾಗಿದ್ದರೆ, ಇನ್ನೊಬ್ಬರ ಮಲವನ್ನು ಹೊರಬೇಕಾದರೆ, ಅದು ಎಷ್ಟೊಂದು ಕಷ್ಟದ ಕೆಲಸ ಎನ್ನುವುದನ್ನು ನೀವೇ ಯೋಚಿಸಿ. ಶೌಚವನ್ನು ಕ್ಲೀನ್ ಮಾಡಲು ಮೆಶಿನ್ ಕಂಡು ಹಿಡಿಯ ಬೇಕು ಎಂದು ಹೇಳುತ್ತಲೇ ಇರುತ್ತಾರೆ. ಈ ಮೆಶಿನ್ ಸುಲಭವಾಗಿ ಕಂಡು ಹಿಡಿಯ ಬಹುದು. ಇದು ಯಾವಾಗ ಸಾಧ್ಯ ಎಂದರೆ, ಇದಕ್ಕೆ ಒಂದು ಕಾನೂನನ್ನು ತರಬೇಕು. ಒಂದೊಂದು ವಾರ, ಒಂದೊಂದು ಜಾತಿಯವರು ಮಲದ ಗುಂಡಿಗೆ ಇಳಿದು ಕ್ಲೀನ್ ಮಾಡಬೇಕು. ಇಂತಹದ್ದು ನಡೆದರೆ, ಆಗಲೇ ಸಾವಿರ ವಿಧದ ಮೆಶಿನನ್ನು ಕಂಡು ಹಿಡಿಯಬಹುದು’.
ಬೇರೆ ಗ್ರಹದಲ್ಲಿ ನೀರು ಇದೆಯೇ? ಮುಂದಿನ ದಿನಗಳಲ್ಲಿ ಅಲ್ಲಿಯೂ ಹೋಗಿ ಮನುಷ್ಯ ಬದುಕ ಬಹುದೇ? ಎನ್ನುವ ಕಾರಣಕ್ಕಾಗಿ ಅಲ್ಲಿನ ವಾತಾವರಣ ಸರಿ ಇದೆಯೇ ಎನ್ನುವುದನ್ನು ನೋಡಲು ವಿಜ್ಞಾನಿಗಳು ಹಲವು ಉಪಗ್ರಹಗಳನ್ನು ಕಳುಹಿಸಿದ್ದಾರೆ. ಆದರೆ, ಅದೇ ಸ್ಯಾಟ್ ಲೈಟ್ ಗಳನ್ನು ಭೂಮಿಯಲ್ಲಿಯೇ ಸಂಚರಿಸಲು ಬಿಟ್ಟು ಇಲ್ಲಿ ಮನುಷ್ಯ ಬದುಕುವ ವಾತಾವರಣ ಇದೆಯೇ ಎನ್ನುವುದನ್ನು ಮೊದಲು ನೋಡಿ, ಇಂಡಿಯಾದಲ್ಲಿ ಮನುಷ್ಯ ಬದುಕಲು ಸಾಧ್ಯ ಇದೆಯೇ ಎನ್ನುವುದನ್ನು ಮೊದಲು ನೋಡಿ. ಒಂದು ವೇಳೆ ಹಾಗೂ ಬೇರೆ ಗ್ರಹಕ್ಕೆ ಮನುಷ್ಯರನ್ನು ಕೊಂಡು ಹೋಗಿ ಬಿಟ್ಟರೂ, ನಮ್ಮವರನ್ನು ಮಾತ್ರ ಅಲ್ಲಿ ಬಿಡಬೇಡಿ. ಅಲ್ಲಿಯೂ ಈ ಜಾತಿಯನ್ನು ಕೊಂಡು ಹೋಗಿ ಬಿತ್ತುತ್ತಾರೆ. ಈ ಮೂಲಕ ದೇಶವನ್ನು ಕೆಡಿಸಿದ್ದೇ ಅಲ್ಲದೇ, ಯಾವೆಲ್ಲ ಗ್ರಹಗಳಿವೆಯೋ ಅವೆಲ್ಲವನ್ನೂ ಕೆಡಿಸಿಬಿಡುತ್ತಾರೆ’ ಎಂಬುದು ಸತ್ಯರಾಜ್ ಮಾತಿನ ಸಂಪೂರ್ಣ ಸಾರಾಂಶ!
ದೇಶದಲ್ಲಿ ಬಡತನವೇ ಇಲ್ಲ ಎಂಬಂಥಾ ಭ್ರಮೆ ಬಿತ್ತುವ ಡಿಜಿಟಲ್ ದೌಲಿನ ಕಣ್ಣುಗಳೇ ದೇಶದ ತುಂಬಾ ತುಂಬಿವೆ. ಇಂಥವರ ಪಾಲಿಗೆ ಜಾತಿ ವ್ಯವಸ್ಥೆ, ಆ ಅವಮಾನಗಳೆಲ್ಲ ಎಂದೋ ನಡೆದಿದ್ದವುಗಳು. ಈಗ ಜಾತಿ ವ್ಯವಸ್ಥೆ ಎಲ್ಲಿದೆ ಎಂಬ ಸಿನಿಕ ಎಲಿಮೆಂಟುಗಳಿಗೆ ಸತ್ಯರಾಜ್ ಅವರ ಸ್ಪಷ್ಟ ಮಾತುಗಳು ಸತ್ಯದರ್ಶನ ಮಾಡಿಸುವಂತಿವೆ.
ಅನುವಾದ ಭಾಗ : ಪಿ. ಆರಡಿಮಲ್ಲಯ್ಯ ಕಟ್ಟೇರ
#
No Comment! Be the first one.