—————
ಕನ್ನಡ ವಾಕ್ಚಿತ್ರ ಪರಂಪರೆ ಆರಂಭವಾಗಿ ಮಾರ್ಚ್ 3, 2019ಕ್ಕೆ ಎಂಬತ್ತೈದು ವರ್ಷ ತುಂಬಿದವು. ಪ್ರಸ್ತುತ ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ.
—————
– ಶಶಿಧರ ಚಿತ್ರದುರ್ಗ
ಕನ್ನಡ ವಾಕ್ಚಿತ್ರಕ್ಕೀಗ 85ರ ಹರೆಯ. ಇಂದಿಗೆ ಸರಿಯಾಗಿ ಎಂ¨ತ್ತೈದು ವರ್ಷಗಳ ಹಿಂದೆ (ಮಾರ್ಚ್ 3, 1934) ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನ’ ತೆರೆಕಂಡಿತ್ತು. ಮೊದಲು ಚಿತ್ರೀಕರಣ ಆರಂಭಿಸಿದ್ದು “ಭಕ್ತಧ್ರುವ’ ಆದರೂ ಬೆಳ್ಳಿತೆರೆಯಲ್ಲಿ ಮೊಟ್ಟ ಮೊದಲಿಗೆ ಕಾಣಿಸಿಕೊಳ್ಳುವ ಅದೃಷ್ಟ ಸಿಕ್ಕಿದ್ದು “ಸತಿ ಸುಲೋಚನಾ’ ಚಿತ್ರಕ್ಕೆ. ವೈ.ವಿ.ರಾವ್ ನಿರ್ದೇಶನದ ಇದು ಕನ್ನಡದ ಮೊದಲ ವಾಕ್ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯ್ತು. “ಸತಿ ಸುಲೋಚನಾ’ ತೆರೆಕಾಣುವ ಮೊದಲು ಬೆಂಗಳೂರಿನಲ್ಲಿ 175 ಮೂಕಿ ಚಿತ್ರಗಳು ತಯಾರಾಗಿದ್ದವು. ಅಚ್ಚರಿಯ ಸಂಗತಿಯೆಂದರೆ ದಕ್ಷಿಣ ಭಾರತದ ಸಿನಿಮಾ ಚಟುವಟಿಕೆಗಳು ಮೊದಲು ಆರಂಭಗೊಂಡಿದ್ದು ಬೆಂಗಳೂರಿನಲ್ಲಿ! ಸಿನಿಮಾ ನಿರ್ಮಾಣದ ಚಟುವಟಿಕೆಗಳು ಇಲ್ಲದಿದ್ದರೂ ಚಲನಚಿತ್ರ ವಿತರಣಾ ಕೇಂದ್ರವಾಗಿ ಬೆಂಗಳೂರು ಪ್ರಸಿದ್ಧವಾಗಿತ್ತು. ಮದರಾಸು, ವಿಜಯವಾಡ, ತಿರುಚನಾಪಳ್ಳಿ ಮುಂತಾದ ಪ್ರದೇಶಗಳ ಜತೆಗೆ ಸಿಲೋನ್ಗೂ ಬೆಂಗಳೂರಿನಿಂದ ಚಲನಚಿತ್ರಗಳು ಪೂರೈಕೆಯಾಗುತ್ತಿದ್ದವು.
ಕನ್ನಡ ವೃತ್ತಿ ರಂಗಭೂಮಿಯ ಆದ್ಯ ಪ್ರವರ್ತಕರಲ್ಲೊಬ್ಬರಾದ ಗುಬ್ಬಿ ವೀರಣ್ಣನವರು “ಕರ್ನಾಟಕ ಪಿಕ್ಚರ್ಸ್ ಕಾರ್ಪೊರೇಷನ್’ ಹೆಸರಿನಲ್ಲಿ ಮೂಕಿ ಸಿನಿಮಾಗಳನ್ನು ನಿರ್ಮಿಸಿದರು. “ಸಾಂಗ್ ಆಫ್ ಲೈಫ್’ (1930), “ಹಿಸ್ ಲವ್ ಅಫೇರ್’ (1931) ಮತ್ತು “ಹರಿಮಾಯ’ (1932) ಅವರು ನಿರ್ಮಿಸಿದ ಚಿತ್ರಗಳು. “ಹಿಸ್ ಲವ್ ಅಫೇರ್’ ಚಿತ್ರದ ಸುಬ್ಬಯ್ಯನಾಯ್ಡು ಅವರೇ “ಸತಿ ಸುಲೋಚನಾ’ ಚಿತ್ರದ ನಾಯಕನಟ.
ಬೆಂಗಳೂರಿಗೆ ವ್ಯಾಪಾರ ನಿಮಿತ್ತ ವಲಸೆ ಬಂದ (1903) ಷಾ ಚಮನ್ಲಾಲ್ ಡುಂಗಾಜಿ “ಸತಿ ಸುಲೋಚನಾ’ ನಿರ್ಮಾಪಕರು. ಒಳ್ಳೆಯ ಚಿತ್ರತಂಡವನ್ನು ಕಟ್ಟಿಕೊಂಡ ಡುಂಗಾಜಿ ಈ ಚಿತ್ರದ ಮೂಲಕ ಕನ್ನಡದಲ್ಲಿ ವಾಕ್ಚಿತ್ರ ಪರಂಪರೆ ಆರಂಭಿಸಿದರು. ಇನ್ನು ಈ ಚಿತ್ರದ ರೂವಾರಿಗಳ ಪಟ್ಟಿಯಲ್ಲಿ ಮೊದಲಿಗೆ ನೆನಪಿಸಿಕೊಳ್ಳಬೇಕಾದ ಹೆಸರು ಆರ್.ನಾಗೇಂದ್ರರಾವ್ ಅವರದು. ಈ ಚಿತ್ರ ಆರಂಭಗೊಳ್ಳಲು ಕಾರಣರಾವುದರ ಜತೆಗೆ, ಪ್ರಮುಖ ಪಾತ್ರದಲ್ಲಿ ನಟಿಸಿದ ಹಾಗೂ ಸಂಗೀತ ಸಂಯೋಜಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲಬೇಕು.
“ಸತಿ ಸುಲೋಚನಾ’ ಚಿತ್ರದ ನಿರ್ದೇಶಿಸಿದವರು ವೈ.ವಿ.ರಾವ್. ಆ ವೇಳೆಗಾಗಲೇ ನಾಟಕಗಳು ಮತ್ತು ಮೂಕಿ ಸಿನಿಮಾಗಳಲ್ಲಿ ನಟಿಸಿದ್ದ ರಾವ್ ಅವರು ಸಿನಿಮಾ ನಿರ್ದೇಶನದೆಡೆ ಅಪಾರ ಆಸಕ್ತಿ ಹೊಂದಿದ್ದರು. ಇನ್ನು ಚಿತ್ರದ ಪ್ರಮುಖ ಪಾತ್ರ “ಇಂದ್ರಜಿತು’ ಆಗಿ ಆಯ್ಕೆಯಾಗಿದ್ದು ಎಂ.ವಿ.ಸುಬ್ಬಯ್ಯನಾಯ್ಡು. ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದ ನಾಯ್ಡು ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಆರಂಭಿಕ ಕಾಲದಲ್ಲಿ ಭದ್ರ ಬುನಾದಿ ಹಾಕಲು ಪ್ರಯತ್ನಿಸಿದವರು. ಚಿತ್ರದ ರಾವಣನ ಪಾತ್ರದಲ್ಲಿ ಆರ್.ನಾಗೇಂದ್ರರಾವ್ ನಟಿಸಿದರೆ ಮತ್ತೊಂದು ಪ್ರಮುಖ ಪಾತ್ರ ಲಕ್ಷ್ಮಣನಾಗಿ ನಿರ್ದೇಶಕ ವೈ.ವಿ.ರಾವ್ ಅವರೇ ನಟಿಸಿದರು. ಅವರ ಪತ್ನಿ ರಾಜಮ್ಮ ಕೂಡ ತಾರಾಗಣದಲ್ಲಿದ್ದರು. ರಾಮನಾಗಿ ಡಿ.ಎನ್.ಮೂರ್ತಿರಾವ್, ನಾರದನ ಪಾತ್ರದಲ್ಲಿ ಶೇಷಾಚಲಂ, ಸುಲೋಚನಾ ಪಾತ್ರದಲ್ಲಿ ತ್ರಿಪುರಾಂಬ ಹಾಗೂ ಮಂಡೋದರಿಯ ಪಾತ್ರದಲ್ಲಿ ಲಕ್ಷ್ಮೀಬಾಯಿ ನಟಿಸಿದರು.
ಚಿತ್ರದ ಶೀರ್ಷಿಕೆ ಪಾತ್ರಧಾರಿ “ಸುಲೋಚನಾ’ ಆಗಿ ನಟಿಸುವುದರ ಮೂಲಕ ತ್ರಿಪುರಾಂಬ ಕನ್ನಡ ಚಿತ್ರರಂಗದ ಮೊದಲ ನಾಯಕಿ ಎನ್ನುವ ಗೌರವಕ್ಕೆ ಪಾತ್ರರಾದರು. ಚಿತ್ರದ ಸಂಭಾಷಣೆ, ಹಾಡುಗಳ ಜವಾಬ್ದಾರಿಯನ್ನು ನರಹರಿ ಶಾಸ್ತ್ರಿಗಳಿಗೆ ವಹಿಸಲಾಯಿತು. ಹೀಗಾಗಿ ನರಹರಿ ಶಾಸ್ತ್ರಿಗಳು ಕನ್ನಡ ಚಿತ್ರರಂಗದ ಮೊದಲ ಕತೆಗಾರ, ಸಂಭಾಷಣೆ ರಚನೆಕಾರ, ಗೀತರಚನೆಕಾರರೂ ಆದರು. ಹದಿನಾರು ಹಾಡುಗಳಿದ್ದ “ಸತಿ ಸುಲೋಚನಾ’ 16 ಸಾವಿರ ಅಡಿ ಉದ್ದದ ಸಿನಿಮಾ. ಇದರ ನಿರ್ಮಾಣಕ್ಕೆ ತಗುಲಿದ ಮೊತ್ತ ಅಂದಾಜು 40 ಸಾವಿರ ರೂಪಾಯಿ ಎನ್ನಲಾಗಿದೆ. ಆಗಿನ ಕಾಲಕ್ಕೆ ಇದು ಬಹುದೊಡ್ಡ ಮೊತ್ತವೇ ಹೌದು! ಕಲಾಸಿಪಾಳ್ಯದಲ್ಲಿದ್ದ “ಪ್ಯಾರಾಮೌಂಟ್’ ಚಿತ್ರಮಂದಿರದಲ್ಲಿ 1934ರ ಮಾರ್ಚ್ 3ರಂದು ಸಿನಿಮಾ ತೆರೆಕಂಡಿತು.